ಬೇಸಿಗೆಯಲ್ಲಿ ಹೊಳೆಯಲ್ಲಿ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬ ಮರಿ ಮೊಸಳೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೇನು ಬೇಸಿಗೆ ಬಂದೇ ಬಿಡ್ತು, ಜೊತೆಗೆ ಶಾಲಾ ಮಕ್ಕಳಿಗೆ ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿದು ಬೇಸಿಗೆಯ ರಜೆ ಸಿಗುವ ಸಮಯ ಈ ಸಂದರ್ಭದಲ್ಲಿ ಬೇಸಿಗೆಯ ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮಕ್ಕಳು ದೊಡ್ಡವರೆನ್ನದೇ ಎಲ್ಲರೂ ಕೆರೆ ಹೊಳೆಗಳಲ್ಲಿ ಈಜಾಡಲು ಬಯಸುತ್ತಾರೆ. ಹಳ್ಳಿಯಲ್ಲಂತೂ ಮಕ್ಕಳು ಬೇಸಿಗೆ ರಜೆ ಸಿಗೋದೆ ತಡ ಸ್ನೇಹಿತರ ತಂಡ ಕಟ್ಟಿಕೊಂಡು ಹಳ್ಳ ಕೊಳ್ಳಗಳ ಬಳಿ ಈಜಾಡಲು ಹೋಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಹೊಳೆಯೊಂದರಲ್ಲಿ ಸ್ನಾನ ಮಾಡಲು ಹೋಗಿದ್ದು, ಈ ವೇಳೆ ಮರಿ ಮೊಸಳೆಯೊಂದರ ಬಾಯಿಯಿಂದ ಈತ ಕೂದಲೆಳೆ ಅಂತರದಿಂದ ಎಸ್ಕೇಪ್ ಆಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲೇನಿದೆ?
ಬಹುಶಃ ಆ ನೀರಿನಲ್ಲಿ ಮೊಸಳೆಯೊಂದು ಇರಬಹುದು ಎಂಬ ಊಹೆಯೂ ನೀರಿಗಿಳಿದ ವ್ಯಕ್ತಿಗೆ ಇದ್ದಂತಿಲ್ಲ, ಮಾಮೂಲಿಯಂತೆ ಆತ ನೀರಿಗೆ ಇಳಿದಿದ್ದು, ಮೈಮೇಲೆ ನೀರನ್ನು ಹಾರಿಸಿಕೊಳ್ಳುತ್ತಾ ಖುಷಿಪಡುತ್ತಿರುವಾಗಲೇ ನೀರಿನಲ್ಲೇ ಇದ್ದ ಮರಿ ಮೊಸಳೆಯೊಂದು ಆತನ ಬಳಿ ಬಂದಿದ್ದು, ಆತನ ಕೈಗೆ ಸಿಕ್ಕಿದೆ. ಇದರಿಂದ ಒಮ್ಮೆಲೇ ಭಯಗೊಂಡ ಆತ ನೀರಿನಿಂದ ಎದ್ನೋ ಬಿಡ್ನೋ ಅಂತ ಓಡಿ ಬರುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಆತನ ಅದೃಷ್ಟಕ್ಕೆ ಮರಿ ಮೊಸಳೆ ಆತನ ಮೇಲೆ ದಾಳಿ ಮಾಡಿಲ್ಲ. ಆಕಸ್ಮಿಕವಾಗಿ ಧುತ್ತನೇ ಪ್ರತ್ಯಕ್ಷವಾದ ಮರಿ ಮೊಸಳೆಯನ್ನು ನೋಡಿ ಆತ ಜೀವಭಯದಿಂದ ನೀರಿನಿಂದ ಮೇಲೆದ್ದು ಓಡಿ ಬರುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
700 ಕೆ.ಜಿಯ ಈ ಹೆನ್ರಿಗೆ 6 ಪತ್ನಿಯರು, 10 ಸಾವಿರ ಮಕ್ಕಳು: ಜಗತ್ತಿನ ಹಿರಿಯನ ರೋಚಕ ಸ್ಟೋರಿ ಕೇಳಿ...
ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಸಖತ್ ವೈರಲ್ ಆಗಿದೆ. ಆತ ಖುಷಿಯಿಂದ ನೀರಿಗಿಳಿದಿದ್ದು, ಆತನ ಸ್ನೇಹಿತ ಈ ದೃಶ್ಯವನ್ನು ಬೋಟ್‌ನಲ್ಲಿ ಕುಳಿತು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಆದರ ನೀರಿಗಿಳಿದ ಕೆಲ ಕ್ಷಣಗಳಲ್ಲಿ ಏನೋ ಆತನಿಗೆ ಸಿಕ್ಕಂತಾಗಿದೆ. ಕೈಯಲ್ಲಿ ಹಿಡಿದು ನೋಡಿದರೆ ಅದು ಮೊಸಳೆ, ಕೂಡಲೇ ಅದನ್ನು ದೂರ ಎಸೆದ ಆತ ಓಡುತ್ತಾ ಬಂದು ಬೋಟನ್ನು ಏರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಮೊಸಳೆಯನ್ನೇ ಹುರಿದು ಮುಕ್ಕಿದ ಶಾರ್ಕ್: ಅತೀ ಅಪರೂಪದ ವೀಡಿಯೋ ವೈರಲ್
ಘಟನೆ ನಡೆದಿದ್ದೆಲ್ಲಿ?
ಕ್ಯೂಬಾದಲ್ಲಿನ ಮೀಡಿಯಾ ಲೂನಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದು ನಿರ್ದಿಷ್ಟವಾಗಿ ಗ್ರಾನ್ಮಾ ಪ್ರಾಂತ್ಯದಲ್ಲಿರುವ ಒಂದು ಪಟ್ಟಣವಾಗಿದ್ದು, ಇಲ್ಲಿರುವ ಮೀಡಿಯಾ ಲೂನಾ ಬೀಚ್ ಬಳಿ ಘಟನೆ ನಡೆದಿದೆ. 'ಮೀಡಿಯಾ ಲೂನಾದ ಕಡಲತೀರದಲ್ಲಿ ಸ್ನಾನ ಮಾಡುತ್ತಿದ್ದ ಮನುಷ್ಯ ಮೊಸಳೆಯನ್ನು ಎದುರಿಸುತ್ತಾನೆ. ಮೀಡಿಯಾ ಲೂನಾದ ಕಡಲತೀರದಲ್ಲಿದ್ದ ಮನುಷ್ಯನಿಗೆ ಪ್ರಕೃತಿಯ ಆನಂದದ ಕ್ಷಣವಾಗಿ ಬಹುತೇಕ ದುರಂತದಲ್ಲಿ ಕೊನೆಗೊಂಡಿತು. ಭೂದೃಶ್ಯದ ಸೌಂದರ್ಯ ಮತ್ತು ನೀರಿನ ಶಾಂತತೆಯನ್ನು ಸವಿಯಲು ದೋಣಿಯಿಂದ ಇಳಿದ ಆ ವ್ಯಕ್ತಿ, ಅನಿರೀಕ್ಷಿತವಾಗಿ, ಅವನನ್ನು ಕಚ್ಚಲು ಹೊರಟಿದ್ದ ಮೊಸಳೆಗೆ ಸಿಕ್ಕಾಗ ಕೆಲ ಕ್ಷಣ ಭಯಗೊಂಡನು' ಎಂದು ಈ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಮಗೆ ಬದುಕಲು ಇನ್ನೊಂದು ಅವಕಾಶ ಸಿಕ್ಕಿದೆ ಶುಭ ಹಾರೈಕೆಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೃಷ್ಟವಶಾತ್ ಅದು ಮರಿ ಆಗಿತ್ತು ಆದ್ದರಿಂದ ಆತನಿಗೆ ಏನು ಅನಾಹುತವಾಗಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
