ಅಲ್ ಖೈದಾ ಉಗ್ರರ ಮಿತ್ರ ಸಂಘಟನೆಯಿಂದ ದಾಳಿ, ಮಾಲಿ ರಕ್ಷಣಾ ಸಚಿವ ಸೇರಿ ಕುಟುಂಬದ ಹತ್ಯೆ, ಮತ್ತೆ ಭಯೋತ್ಪಾದಕರು ಬಾಲ ಬಿಚ್ಚಿದ್ದಾರೆ. ಈ ಬಾರಿ ರಕ್ಷಣಾ ಸಚಿವನನ್ನೇ ಬಲಿ ಪಡೆದ ಘಟನೆ ನಡೆದಿದೆ.

ಮಾಲಿ (ಏ.26) ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಅಲ್ ಖೈದಾ ಉಗ್ರ ಸಂಘಟನೆಯ ಮಿತ್ರ ಸಂಘಟನೆ ತೌರೆಗ್ ರೆಬೆಲ್ಸ್ ದಾಳಿ ಮಾಡಿದೆ. ಮಾಲಿ ದೇಶದ ಭದ್ರತಾ ನೆಲೆಗಳ ಮೇಲೆ ಸಂಘಟಿತ ದಾಳಿ ನಡೆಸಲಾಗಿದೆ. ಮಾಲಿ ದೇಶದ ರಕ್ಷಣಾ ಸಚಿವ ಸದಿಯೋ ಕಮಾರ ಮನೆ ಮೇಲೂ ದಾಳಿಯಾಗಿದೆ. ಈ ದಾಳಿಯಲ್ಲಿ ಸದಿಯೋ ಕಮರಾ ಸೇರಿದಂತೆ ಅವರ ಕುಟುಂಬವೂ ಹತ್ಯೆಯಾಗಿದೆ ಎಂದು ಅಲ್ ಝಜೀರಾ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದಿಯೋ ಸೇರಿ ಇಡೀ ಕುಟುಂಬ ಹತ್ಯೆ

ಮಾಲಿ ಮಿಲಿಟರಿ ಕ್ಷೇತ್ರದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಸದಿಯೋ ಕಮಾರ, ಭಾರಿ ಜನಪ್ರಿಯತೆಯನ್ನೂ ಪಡೆದಿದ್ದರು. ಮಾಲಿ ದೇಶದ ಪ್ರಭಾವಿ ನಾಯಕನಾಗಿ ಬೆಳೆದಿದ್ದ ಸದಿಯೋ ಹಾಗೂ ಅವರ ಕುಟುಂಬ ಈ ದಾಳಿಯಲ್ಲಿ ನಾಶವಾಗಿದೆ. ಮಾಲಿಯಾ ರಾಜಧಾನಿ ಬಮಾಕೋದ ಹೊರವಲಯದಲ್ಲಿರುವ ಕಟಿ ಪ್ರದೇಶದ ಮೇಲೆ ದಾಳಿಯಾಗಿದೆ. ಇದು ಮಾಲಿಯ ಮಿಲಿಟರಿ ನೆಲೆಯಾಗಿದೆ. ಈ ಮಿಲಿಟರಿ ನೆಲೆಯ ಪಕ್ಕದಲ್ಲೇ ಸದಿಯೋ ಕಮಾರ ನಿವಾಸವಿದೆ. ಭಾರಿ ಭದ್ರತೆಯನ್ನೂ ಒದಗಿಸಲಾಗಿದೆ. ಮನೆಯಲ್ಲಿ ಸದಿಯೋ ಕಮಾರ, ಅವರ ಎರಡನೇ ಪತ್ನಿ ಹಾಗೂ ಇಬ್ಬರು ಮೊಮ್ಮಕ್ಕಳು ಈ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಉಗ್ರರ ವಿರುದ್ಧ ಕಾರ್ಯಾಚರಣೆ

ಅಲ್ ಖೈದಾ ಉಗ್ರರು, ತೌರೆಗ್ ರೆಬೆಲ್ಸ್ ಬಂಡುಕೋರರ ಗುಂಪು ಈ ದಾಳಿ ನಡೆಸಿದೆ ಎಂದು ಹೊಣೆ ಹೊತ್ತುಕೊಂಡಿದೆ. ಕಾರು ಬಾಂಬ್ ಹಾಗೂ ಗುಂಡಿನ ಮೂಲಕ ದಾಳಿ ಮಾಡಲಾಗಿದೆ. ಮಾಲಿಯಲ್ಲಿ ಉಗ್ರರು, ಬಂಡುಕೋರರ ಉಪಟಳ ತೀವ್ರವಾಗಿದೆ. ಹೀಗಾಗಿ 2020ರಿಂದ ಮಾಲಿಯಲ್ಲಿ ಸದಿಯೋ ಕಮಾರ ಇದರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರತಿ ವರ್ಷ ಹಲವು ಬಂಡುಕೋರರು ಹಾಗೂ ಉಗ್ರ ಸಂಘಟನೆಗಳ ಸದಸ್ಯರ ಮೇಲೆ ಭೀಕರ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಹಲವು ಬಾರಿ ಉಗ್ರರು ಸದಿಯೋ ಕಮಾರಗೆ ಬೆದರಿಕೆ ಹಾಕಿದ್ದರು. ಆದರೆ ಉಗ್ರರ ವಿರುದ್ಧದ ಕಾರ್ಯಾಚರಣೆಯಿಂದ ಸದಿಯೋ ಕಮಾರ ಹಿಂದೆ ಸರಿದಿರಲಿಲ್ಲ.

ಸದಿಯೋ ಕಮಾರ ಇದೇ ಕಾರಣದಿಂದ ಮಾಲಿಯಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದರು. ಸದಿೋ ಕಮಾರ ಶೀಘ್ರದಲ್ಲೇ ಮಾಲಿಯ ಪ್ರಮುಖ ನಾಯಕನಾಗಿ ದೇಶವನ್ನೇ ಮುನ್ನಡೆಸುವ ಸಾಧ್ಯತೆಯನ್ನು ಅಂತಾರಾಷ್ಟ್ರೀಯ ಪ್ರಮುಖ ನಾಯಕರು ಸೂಚಿಸಿದ್ದರು.

ಮಾಲಿಯ ಹಲವು ನಗರಗಳ ಮೇಲೆ ಸಂಘಟಿತ ದಾಳಿ ನಡೆದಿದೆ. ಮಾಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಾಲಿ ಸೈನ್ಯ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದೆ. ಇತ್ತ ಯೂರೋಪಿಯನ್ ಒಕ್ಕೂಟ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದೆ.