ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡಿದವರಿಗೆ 563 ಕೋಟಿ ರೂಪಾಯಿ ಬಹುಮಾನ ನೀಡಲು ಇರಾನ್ ಮಸೂದೆಯೊಂದನ್ನು ಸಿದ್ಧಪಡಿಸುತ್ತಿದೆ. ತಮ್ಮ ಸರ್ವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಹ೧ತ್ಯೆಗೆ ಪ್ರತೀಕಾರವಾಗಿ ಈ 'ಕಿಲ್ ಟ್ರಂಪ್' ಯೋಜನೆ.

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹ೧ತ್ಯೆ ಮಾಡಿದರೆ 563 ಕೋಟಿ ರು. ಬಹುಮಾನ ನೀಡುವ ಬಗ್ಗೆ ಖುದ್ದು ಇರಾನ್ ಸರ್ಕಾರ ಚರ್ಚಿಸುತ್ತಿದೆ ಹಾಗೂ ‘ಕಿಲ್ ಟ್ರಂಪ್‌’ ಯೋಜನೆಯಡಿ ಮಸೂದೆ ಸಿದ್ಧಪಡಿಸುತ್ತಿದೆ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಸರ್ವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಈ ಪ್ಲಾನ್‌ ನಡೆದಿದೆ.

Add Asianetnews Kannada as a Preferred SourcegooglePreferred

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ ಮಾತನಾಡಿ, ‘ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಭದ್ರತಾ ಪಡೆಗಳಿಂದ ಪ್ರತೀಕಾರ’ ಎಂಬ ಶೀರ್ಷಿಕೆಯ ಮಸೂದೆಯನ್ನು ಸಿದ್ಧಪಡಿಸಲಾಗುತ್ತಿದೆ. ಇದು ಅಮೆರಿಕ ಹಾಗೂ ಇಸ್ರೇಲ್‌ ಮುಖ್ಯಸ್ಥರನ್ನು ಹತ್ಯೆ ಮಾಡುವ ಯಾವುದೇ ವ್ಯಕ್ತಿ ಅಥವಾ ಘಟಕಕ್ಕೆ 50 ಮಿಲಿಯನ್ ಯುರೋ (ಸುಮಾರು $58.23 ಮಿಲಿಯನ್- 563 ಕೋಟಿ ರು.) ಪಾವತಿಸುವುದನ್ನು ಅಧಿಕೃತಗೊಳಿಸುತ್ತದೆ ಎಂದಿದ್ದಾರೆ ಎಂದು ‘ಇರಾನ್ ವೈರ್’ ಮತ್ತು ‘ದಿ ಟೆಲಿಗ್ರಾಫ್ ಯುಕೆ’ ಪತ್ರಿಕಾ ವರದಿಗಳು ಹೇಳಿವೆ.

ಫೆ.28ರಂದು ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ್ದ ಜಂಟಿ ದಾಳಿಯಲ್ಲಿ ಅಂದಿನ ಸರ್ವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ ಇದರ ಪ್ರತೀಕಾರವಾಗಿ ಸೇಡಿಗೆ ಇರಾನ್ ಸಂಸತ್ತು ಮತ ಚಲಾಯಿಸಲು ನಿರ್ಧರಿಸಿದೆ.

ಟ್ರಂಪ್, ನೆತನ್ಯಾಹು ಅಲ್ಲದೆ, ‘ಖಮೇನಿ ಹತ್ಯೆಯಲ್ಲಿ ಪಾತ್ರ ವಹಿಸಿದ್ದಾರೆ’ ಎಂನ್ನಲಾದ ಅಮೆರಿಕ ಸೆಂಟ್ರಲ್ ಕಮಾಂಡ್ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರನ್ನೂ ಪ್ರತೀಕಾರ ಕ್ರಮಕ್ಕೆ ಗುರಿಪಡಿಸಬೇಕು ಎಂದು ಅಜೀಜಿ ಹೇಳಿರುವುದಾಗಿ ಇರಾನ್ ವೈರ್ ವರದಿ ಮಾಡಿದೆ.

ಈ ನಡುವೆ, ಇರಾನ್‌ ರಾಷ್ಟ್ರೀಯ ಭದ್ರತಾ ಆಯೋಗದ ಮತ್ತೊಬ್ಬ ಸದಸ್ಯ ಮಹಮೂದ್ ನಬಾವಿಯನ್ ಮಾತನಾಡಿ, ‘ಇವರನ್ನೆಲ್ಲ ನರಕಕ್ಕೆ ಕಳುಹಿಸುವವರಿಗೆ ಬಹುಮಾನ ನಿಗದಿಪಡಿಸುವ ಕುರಿತು ದೇಶದ ಸಂಸತ್ತು ಶೀಘ್ರದಲ್ಲೇ ಮತ ಚಲಾಯಿಸಲಿದೆ’ ಎಂದಿದ್ದಾರೆ.

‘ಕಿಲ್ ಟ್ರಂಪ್’ ಎಂಬ ಅಭಿಯಾನಕ್ಕಾಗಿ ಇರಾನ್‌, 500 ಕೋಟಿ ರು.ನಷ್ಟು ಆರ್ಥಿಕ ಸಂಪನ್ಮೂಲ ಪಡೆದುಕೊಂಡಿದೆ ಎಂದು ಸರ್ಕಾರದ ಪರ ಮಾಧ್ಯಮ ಸಂಸ್ಥೆ ಮಸಾಫ್ ಮೊದಲು ವರದಿ ಮಾಡಿತ್ತು. ಅದರ ಬೆನ್ನಲ್ಲೇ ಈ ಬಗ್ಗೆ ದೃಢೀಕರಣ ಹೊರಬಿದ್ದಿದೆ.

ಏನಿದು ಪ್ಲಾನ್‌?

- ಫೆ.28ರಂದು ಇರಾನ್‌ ಮೇಲೆ ದಾಳಿ ನಡೆಸಿ ಪರಮೋಚ್ಚ ನಾಯಕ ಖಮೇನಿ ಹತ್ಯೆಗೈದಿದ್ದ ಅಮೆರಿಕ, ಇಸ್ರೇಲ್‌

- ಅಮೆರಿಕ ಅಧ್ಯಕ್ಷ ಟ್ರಂಪ್‌, ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಪ್ರತೀಕಾರ ಕೈಗೊಳ್ಳಲು ಇರಾನ್‌ನಲ್ಲಿ ಚರ್ಚೆ

- ಇವರಿಬ್ಬರನ್ನೂ ಕೊಲ್ಲುವವರಿಗೆ 563 ಕೋಟಿ ರು. ಹಣ ಪಾವತಿಸುವ ಸಂಬಂಧ ಮಸೂದೆ ತಯಾರಿ ಪ್ರಾರಂಭ

- ಟ್ರಂಪ್‌, ನೆತನ್ಯಾಹು ಅವರನ್ನು ನರಕಕ್ಕೆ ಕಳುಹಿಸಿದವರಿಗೆ ಬಹುಮಾನ ಕೊಡುವ ಬಗ್ಗೆ ಶೀಘ್ರ ಸಂಸತ್ತಲ್ಲಿ ಚರ್ಚೆ

- ಇರಾನ್‌ ರಾಜಕಾರಣಿಗಳ ಹೇಳಿಕೆಗಳನ್ನು ಆಧರಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಸ್ಫೋಟಕ ವರದಿ