ತನ್ನ ಪತ್ನಿಯನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಅವರು ಪತ್ನಿಯ ಆಗಲಿಕೆಯ ನಂತರ ಅವರ ಕೊನೆಯಾಸೆಯನ್ನು ಈಡೇರಿಸುವುದಕ್ಕಾಗಿಯೇ ಸುಮಾರು 40 ವರ್ಷಗಳನ್ನು ಕಳೆದಿದ್ದಾರೆ. ಅವರ ಪ್ರೀತಿಯ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಹುತೇಕ ಹೆಣ್ಣು ಮಕ್ಕಳು ತಮ್ಮನ್ನು ತಮ್ಮ ಪತಿ ಬಹಳ ಪ್ರೀತಿಸಬೇಕು ಎಂದು ಬಯಸುತ್ತಾರೆ. ತಾವು ಹೋದ ನಂತರವೂ ತಮ್ಮ ನೆನಪು ಮಾಡಿಕೊಳ್ಳಬೇಕು ಗಂಡ ಸದಾ ನಮ್ಮ ಗುಂಗಿನಲ್ಲೇ ಇರಬೇಕು ಅಂತ ಬಯಸುತ್ತಾರೆ. ಆದರೆ ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ತಮ್ಮನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವವರು ಸಿಗುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆಗೆ ಅಂತಹ ಪತಿ ಸಿಕ್ಕಿದ್ದಾರೆ. ತನ್ನ ಪತ್ನಿಯನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಅವರು ಪತ್ನಿಯ ಆಗಲಿಕೆಯ ನಂತರ ಅವರ ಕೊನೆಯಾಸೆಯನ್ನು ಈಡೇರಿಸುವುದಕ್ಕಾಗಿಯೇ ಸುಮಾರು 40 ವರ್ಷಗಳನ್ನು ಕಳೆದಿದ್ದಾರೆ. ಅವರ ಪ್ರೀತಿಯ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಿದ್ದರೆ ಅವರ ಪತ್ನಿಯ ಕೊನೆಯಾಸೆ ಏನಾಗಿತ್ತು ಎಂಬುದನ್ನು ಈಗ ನೋಡೋಣ.

ತನ್ನ ಆಸೆಯನ್ನು ಪತಿಯೊಂದಿಗೆ ಹಂಚಿಕೊಂಡಿದ್ದ ಪತ್ನಿ

ಗಂಡ ಹೆಂಡತಿ ತಮ್ಮ ಕನಸುಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಮನೆ ಕಟ್ಟಬೇಕು, ಮುದ್ದಾದ ಮಕ್ಕಳಿರಬೇಕು, ಕಾರು ಬಂಗಲೆ ಬರಬೇಕು ಹೀಗೆ ಮಿತಿ ಇಲ್ಲದಂತೆ ಕನಸು ಕಾಣುತ್ತಾರೆ ಹಾಗೆಯೇ ಅರ್ಜೆಂಟೈನಾದ ಪಂಪಾ ಪ್ರದೇಶದ ದಂಪತಿಗಳಾದ ಪೆಡ್ರೊ ಮಾರ್ಟಿನ್ ಉರೆಟಾ ಹಾಗೂ ಗ್ರೇಸಿಯೆಲಾ ಯ್ರೈಜೋಜ್ ಅವರು ಕೂಡ ಹೀಗೆ ತಮ್ಮ ಬದುಕಿನ ಬಗ್ಗೆ ಕನಸು ಕಂಡಿದ್ದರು. ಪೆಡ್ರೊ ಮಾರ್ಟಿನ್ ಉರೆಟಾ ಅವರ ಪತ್ನಿ ಗ್ರೇಸಿಯೆಲಾ ಯ್ರೈಜೋಜ್ ಅವರು ಯಾವಾಗಲೂ ತಮ್ಮ ಪತಿ ಉರೆಟಾ ಅವರ ಬಳಿ ತಮ್ಮ ಕೃಷಿ ಭೂಮಿಯನ್ನು ಗಿಟಾರ್ ಆಕಾರಕ್ಕೆ ಪರಿವರ್ತಿಸುವ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಕಲೆ ಮತ್ತು ಸಂಗೀತದ ಮೇಲೆ ಅಪಾರ ಪ್ರೀತಿಯಿದ್ದ ಗ್ರೇಸಿಯೆಲಾ ಅವರಿಗೆ ತಮ್ಮ ಜಮೀನು ಗಿಟಾರ್ ರೀತಿ ಕಾಣಬೇಕು ಎಂಬ ಆಸೆ ಇತ್ತು. ಅದನ್ನು ಅವರು ತಮ್ಮ ಪತಿಯ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದರು.

1977ರಲ್ಲಿ ಹಠಾತ್ ನಿಧನರಾದ ಪತ್ನಿ

ಆದರೆ ದುರಾದೃಷ್ಟವಶಾತ್ ಅವರು 1977 ರಲ್ಲಿ ಅಂದರೆ ತಮ್ಮ 25 ನೇ ವಯಸ್ಸಿನಲ್ಲಿಯೇ ತಮ್ಮ ಕನಸು ನನಸಾಗುವುದನ್ನು ನೋಡುವ ಮೊದಲೇ ಹಠಾತ್ತನೆ ನಿಧನರಾದರು. ಪತ್ನಿಯ ಅಗಲಿಕೆಯಿಂದ ದುಃಖಿತರಾದ ಉರೆಟಾ ಅವರು ಆಕೆಯ ಈ ಆಸೆಯನ್ನು ಈಡೇರಿಸುವುದಕ್ಕಾಗಿ ಶಪಥ ಮಾಡಿದರು. ಜೊತೆಗೆ ಅದನ್ನು ಪತ್ನಿಯ ಶಾಶ್ವತ ಸ್ಮಾರಕವಾಗಿಸುವ ತಮ್ಮ ಕನಸನ್ನು ಈಡೇರಿಸಲು ಪಣ ತೊಟ್ಟರು. ಅದರ ಪರಿಣಾಮವಾಗಿ ರೂಪುಗೊಂಡಿದ್ದೆ ಅರ್ಜೈಂಟೈನಾದ ಪಂಪಾ ಪ್ರದೇಶದಲ್ಲಿರುವ ಗಿಟಾರ್ ಆಕಾರದ ಕಾಡು.

ಅರ್ಜೆಂಟೀನಾದ ಪಂಪಾ ಪ್ರದೇಶದಲ್ಲಿದೆ ಈ ಗಿಟಾರ್ ರೂಪದ ಕಾಡು

ವಿಶಾಲವಾದ ಅರ್ಜೆಂಟೀನಾದ ಪಂಪಾದ ಆಗಸದಲ್ಲಿ ಸಾಗುವಾಗ ಪೆಡ್ರೊ ಮಾರ್ಟಿನ್ ಉರೆಟಾ ಅವರ ಪತ್ನಿ ಗ್ರೇಸಿಯೆಲಾ ಯ್ರೈಜೋಜ್ ಅವರ ಕನಸು ರೂಪು ತಳೆದು ನಿಂತಿರುವುದನ್ನು ಕಾಣಬಹುದಾಗಿದೆ. ಇಲ್ಲಿ ಕಾಡೊಂದು ಗಿಟಾರ್ ರೂಪದಲ್ಲಿ ಮೈದಳೆದು ನಿಂತಿದೆ. ಈ ಅಪರೂಪದ ನಿರ್ಮಾಣವನ್ನು ಬಾಹ್ಯಾಕಾಶದಿಂದಲೂ ನೋಡಬಹುದಾಗಿದೆ. ರೈತ ಪೆಡ್ರೊ ಮಾರ್ಟಿನ್ ಉರೆಟಾ ಅವರ ದೃಷ್ಟಿಕೋನದಲ್ಲಿ ಇದು ರೂಪುಗೊಂಡಿದ್ದು, ಅವರು ಇದನ್ನು ತಮ್ಮ ದಿವಂಗತ ಪತ್ನಿ ಗ್ರೇಸಿಯೆಲಾ ಯ್ರೈಜೋಜ್ ಅವರ ಗೌರವಾರ್ಥ ವಿನ್ಯಾಸಗೊಳಿಸಿದ್ದಾರೆ.

ಮಕ್ಕಳ ಸಹಾಯದಿಂದ ಪತ್ನಿಆಸೆ ಈಡೇರಿಸಿದ ಪತಿ:

1979 ರಲ್ಲಿ ಪತಿ ಉರೆಟಾ ಅವರು ತಮ್ಮ ನಾಲ್ಕು ಮಕ್ಕಳ ಸಹಾಯದಿಂದ ತನ್ನ ಪತ್ನಿಯ ಕನಸಾದ ಗಿಟಾರ್ ಅನ್ನು ಸೃಷ್ಟಿಸುವುದಕ್ಕಾಗಿ ತಮ್ಮ ಜಮೀನಿನಲ್ಲಿ ಸಾವಿರಾರು ಮರಗಳನ್ನು ನೆಡಲು ಪ್ರಾರಂಭಿಸಿದರು. ಗಿಟಾರ್‌ನ ಬಾಹ್ಯರೇಖೆ ಮತ್ತು ಅದರ ಗಮನಾರ್ಹ ನಕ್ಷತ್ರಾಕಾರದ ಧ್ವನಿ ರಂಧ್ರವನ್ನು ರೂಪಿಸುವುದಕ್ಕೆ ಸುಮಾರು 7,000 ಕ್ಕೂ ಹೆಚ್ಚು ಸೈಪ್ರೆಸ್ ಮರಗಳನ್ನು ನೆಡಲಾಯಿತು, ನಂತರ ನೀಲಗಿರಿ ಮರಗಳನ್ನು ನೆಟ್ಟು ಗಿಟಾರ್‌ನ ತಂತಿಗಳ ಸೂಕ್ಷ್ಮ ರೇಖೆಗಳನ್ನು ಸೃಷ್ಟಿಸಲಾಯ್ತು. ಹೀಗೆ ಗಿಟಾರ್ ರೂಪದ ಕಾಡು ರೂಪುಗೊಂಡಿತ್ತು. ಇಂದು ಈ ದೈತ್ಯ ಗಿಟಾರ್ ಬಯಲು ಪ್ರದೇಶದಾದ್ಯಂತ ಮೂರನೇ ಎರಡರಷ್ಟು ಮೈಲಿಗಿಂತ ಹೆಚ್ಚು ದೂರ ವ್ಯಾಪಿಸಿದೆ. ಇದು ಪ್ರೀತಿ, ಭಕ್ತಿ ಮತ್ತು ಸೃಜನಶೀಲತೆಯ ಪ್ರಬಲ ಸಂಕೇತವಾಗಿ ಉಳಿದಿದೆ. ಕಷ್ಟ ನಷ್ಟದಲ್ಲಿಯೂ ಸಹ ಸೌಂದರ್ಯ ಹುಟ್ಟಬಹುದು ಎಂಬುದಕ್ಕೆ ಪುರಾವೆಯಾಗಿದೆ.

View post on Instagram

ಇದನ್ನೂ ಓದಿ: ಫ್ಯಾಮಿಲಿ ಫಂಕ್ಷನ್‌ನಲ್ಲಿ ಮುಕ್ಕಾಬಲ ಹಾಡಿಗೆ ಬಿಂದಾಸ್ ಡಾನ್ಸ್ ಮಾಡಿದ ದಂಪತಿ : ವೀಡಿಯೋ ಭಾರಿ ವೈರಲ್

ಇದನ್ನೂ ಓದಿ: ಗಂಡನಿಗೆ ಲಿವರ್ ನೀಡಿದ ಹೆಂಡತಿ: ಅಂಗಾಂಗ ಕಸಿ ಬಳಿಕ ಇಬ್ಬರೂ ಸಾವು: ಆಸ್ಪತ್ರೆಗೆ ನೊಟೀಸ್