ಪತ್ನಿಗೆ ವಶೀಕರಣ ಮಾಡಿ ವಿಚ್ಛೇದನಕ್ಕೆ ಕಾರಣನಾದ ಸ್ವಯಂಘೋಷಿತ ದೇವಮಾನವ ನರೇಶ್ ಪ್ರಜಾಪತಿಯನ್ನು ಪತಿ ಪ್ರವೀಣ್ ಶರ್ಮಾ ಹಾಗೂ ಸ್ನೇಹಿತರು ಕೊಲೆಗೈದಿದ್ದಾರೆ. ಆಗಸ್ಟ್ 2 ರಂದು ಕತ್ತು ಹಿಸುಕಿ, ಬುಲಂದ್‌ಶಹರ್‌ನ ಕಾಲುವೆಯಲ್ಲಿ ಶವ ಎಸೆದಿದ್ದರು. ಪೊಲೀಸರ ವಾಹನ ತಪಾಸಣೆ ವೇಳೆ ಆರೋಪಿಗಳ ಬಂಧನವಾಗಿದೆ.

ದೆಹಲಿ (ಆ.16):  ನನ್ನ ಹೆಂಡತಿಯನ್ನು ಈ ಸ್ವಾಮೀಜಿ ತನ್ನ ಕಡೆಗೆ ವಶೀಕರಣ ಮಾಡಿಕೊಂಡು, ನನಗೆ ಡಿವೋರ್ಸ್ ಕೊಡುವಂತೆ ಮಾಡಿದ್ದಾನೆ. ತನ್ನ ಕುಟುಂಬ ಹಾಳಾಗಲು ಈ ಸ್ವಯಂ ಘೋಷಿತ ದೇವಮಾನವನೇ ಕಾರಣವೆಂದು ಆತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.

ಈ ಘಟನೆ ನೋಯ್ಡಾದಲ್ಲಿ ನಡೆದಿದೆ. ಪೊಲೀಸರು ಹೆದ್ದಾರಿ ಬಳಿ ನಿಂತುಕೊಂಡಿದ್ದಾಗ ಅತಿವೇಗದಲ್ಲಿ ಬಂದ ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ನಿಲ್ಲಿಸಲು ಹೇಳಿದ್ದಾರೆ. ಆದರೆ, ತುಂಬಾ ವೇಗವಾಗಿ ಹೋಗುತ್ತಿದ್ದ ಕಾರನ್ನು ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿ ನಿಲ್ಲಿಸಿದ್ದಾರೆ. ನಂತರ ಕಾರನ್ನು ತೆಗೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಕೇಸರಿ ಬಟ್ಟೆ ಮತ್ತು ಆಯುಧಗಳು ಪತ್ತೆಯಾಗಿವೆ. ಇದನ್ನು ಆಧರಿಸಿ ಸ್ವಯಂಘೋಷಿತ ದೇವಮಾನವನ ಕೊಲೆ ಪ್ರಕರಣದಲ್ಲಿ ಕಾರಿನಲ್ಲಿದ್ದ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಇದೀಗ ಕೊಲೆಯಾಗಿರುವ ದೇವಮಾನವ ನರೇಶ್ ಪ್ರಜಾಪತಿ (40 ವರ್ಷ) ತನ್ನ ಹೆಂಡತಿಯನ್ನು ವಶೀಕರಣ ಮಾಡಿಕೊಂಡು (ಹಿಪ್ನೋಟೈಸ್) ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ಈ ಮಾಂತ್ರಿಕನೇ ವಿಚ್ಛೇದನಕ್ಕೆ ಕಾರಣ ಎಂದು ಆರೋಪಿಸಿ ಯುವಕ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಮಾಂತ್ರಿಕ ನರೇಶ್ ರೋಜಾ ಜಲಾಲ್ಪುರದ ನಿವಾಸಿ ಆಗಿದ್ದನು. ಈತನನ್ನು ನೀರಜ್, ಸುನಿಲ್, ಸೌರಭ್ ಕುಮಾರ್, ಪ್ರವೀಣ್ ಶರ್ಮಾ ಮತ್ತು ಪ್ರವೀಣ್ ಮಾವಿ ಎನ್ನುವವರು ಕೊಲೆ ಮಾಡಿದ್ದು, ಇದೀಗ ಪೊಲೀಸರ ಬಂಧನದಲ್ಲಿದ್ದಾರೆ. ಈ ಘಟನೆ ಆಗಸ್ಟ್ 2 ರಂದು ನಡೆದಿತ್ತು. ಸ್ವಾಮೀಜಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬುಲಂದ್‌ಶಹರ್‌ನ ಕಾಲುವೆಯೊಂದರಲ್ಲಿ ಶವವನ್ನು ಎಸೆಯಲಾಗಿತ್ತು. ಪ್ರವೀಣ್ ಶರ್ಮಾ ಪ್ರಮುಖ ಆರೋಪಿ. ಇವನೇ ತನ್ನ ಹೆಂಡತಿ ಡಿವೋರ್ಸ್ ನೀಡಿದ್ದಕ್ಕೆ ಸ್ವಾಮೀಜಿ ಕಾರಣವೆಂದು ಕೊಲೆಗೆ ಸಂಚು ರೂಪಿಸಿದ್ದನು.

ಪ್ರವೀಣನ ಹೆಂಡತಿ ನರೇಶ್ ಪ್ರಜಾಪತಿಯ ಬಳಿ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಲಹೆ ಪಡೆಯಲು ಆಗಿಂದಾಗ್ಗೆ ಹೋಗುತ್ತಿದ್ದಳು. ಇತ್ತೀಚೆಗೆ ಈ ಮಹಿಳೆ ಪ್ರವೀಣ್‌ನಿಂದ ವಿಚ್ಛೇದನ ಪಡೆದಿದ್ದಳು. ತನ್ನ ಕುಟುಂಬ ಒಡೆಯಲು ನರೇಶ್ ಪ್ರಜಾಪತಿಯೇ ಕಾರಣ ಎಂದು ಯುವಕ ತಿಳಿದುಕೊಂಡಿದ್ದನು. ತನ್ನ ಹೆಂಡತಿಯನ್ನು ನರೇಶ್ ಪ್ರಜಾಪತಿ ಸಂಮೋಹನಗೊಳಿಸಿ (ವಶೀಕರಣ) ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆಂದು ಆರೋಪಿಸಿದ್ದಾನೆ. ಇದರಿಂದಲೇ ತನ್ನ ಕುಟುಂಬ ಒಡೆದಿದೆ ಎಂದು ಪ್ರವೀಣ್ ತನ್ನ ಸ್ನೇಹಿತರಿಗೂ ಮನವರಿಕೆ ಮಾಡಿದ್ದನು.

ಇನ್ನು ಕಳೆದ ಗುರುವಾರ ಚಿಪಿಯಾನಾ ಬಜಾರ್ ಬಳಿ ನಡೆದ ವಾಹನ ತಪಾಸಣೆಯಲ್ಲಿ ಪೊಲೀಸರು ಈ ಗುಂಪು ಪ್ರಯಾಣಿಸುತ್ತಿದ್ದ ಕಾರನ್ನು ತಡೆದರು. ಕಾರು ಅತಿವೇಗದಲ್ಲಿ ಬರುತ್ತಿದ್ದರಿಂದ ತಡೆದಿದ್ದರು. ಆದರೆ ವಾಹನ ನಿಲ್ಲಿಸದೆ ಹೋದ ಗುಂಪನ್ನು ಪೊಲೀಸರು ಬೆನ್ನಟ್ಟಿದಾಗ ಪೊಲೀಸರ ಮೇಲೆ ಗುಂಡು ಹಾರಿಸಿದರು. ಬಳಿಕ ಪೊಲೀಸರು ಗುಂಪಿನಲ್ಲಿದ್ದವರನ್ನು ಬಂಧಿಸಿದರು. ಇವರ ವಾಹನದಿಂದ ಆಯುಧ ಪತ್ತೆಯಾದ ಬಳಿಕ ನಡೆಸಿದ ವಿಚಾರಣೆಯಲ್ಲಿ ಕೊಲೆ ಮಾಹಿತಿ ಹೊರಬಿದ್ದಿದೆ.

ಕಾರಿನ ಒಳಗಿನಿಂದ ನರೇಶ್ ಪ್ರಜಾಪತಿಯ ಬಟ್ಟೆಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಜ್ ಎಂಬ ಹೆಸರಿನ ಖಾನ್ ಎಂಬಾತ ಇಬ್ಬರು ಆರೋಪಿಗಳನ್ನು ಪ್ರವೀಣ್‌ಗೆ ಪರಿಚಯಿಸಿದ್ದನು. ನರೇಶ್ ಪ್ರಜಾಪತಿಯನ್ನು ಕೊಲ್ಲಲು ಸಹಾಯ ಮಾಡಿದರೆ ಭೂಮಿ ಮತ್ತು ಐಷಾರಾಮಿ ಕಾರುಗಳನ್ನು ನೀಡುವುದಾಗಿ ಪ್ರವೀಣ್ ಭರವಸೆ ನೀಡಿದ್ದನು. ಬಳಿಕ ಈ ಗುಂಪು ಕೆಲವು ಪೂಜಾ ವಿಧಿಗಳನ್ನು ಮಾಡುವ ನೆಪದಲ್ಲಿ ನರೇಶ್ ಪ್ರಜಾಪತಿಯನ್ನು ಸಂಪರ್ಕಿಸಿದೆ. ಆಗಸ್ಟ್ 2 ರಂದು ಸ್ವಯಂಘೋಷಿತ ದೇವಮಾನವನನ್ನು ವಾಹನದಲ್ಲಿ ಕರೆತಂದು ಜನಸಂಚಾರವಿಲ್ಲದ ಸ್ಥಳದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಕಾಲುವೆಯಲ್ಲಿ ಎಸೆದಿದ್ದೆರು.