Louvre Heist 8 French Crown Jewels Stolen in 8 Minutes ಫ್ರಾನ್ಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಕಟ್ಟಡ ಕಾರ್ಮಿಕರ ವೇಷದಲ್ಲಿ ಬಂದ ದರೋಡೆಕೋರರು ಕೇವಲ 8 ನಿಮಿಷಗಳಲ್ಲಿ ಭಾರೀ ದರೋಡೆ ನಡೆಸಿದ್ದಾರೆ. ಅಪೊಲೋ ಗ್ಯಾಲರಿಯಲ್ಲಿದ್ದ ಸುಮಾರು 896 ಕೋಟಿ ರೂಪಾಯಿ ಮೌಲ್ಯದ ಆಭರಣ ಕದ್ದಿದ್ದಾರೆ. 

ಧೂಮ್‌ ಚಿತ್ರದಲ್ಲಿ ಹೃತಿಕ್‌ ರೋಷನ್‌ ಮ್ಯೂಸಿಯಂನಿಂದ ವಜ್ರ ಕದಿಯುವ ಸೀನ್‌ ನೆನಪಿದ್ಯಲ್ಲ. ಅಂಥದ್ದೇ ಒಂದು ಭಾರೀ ಪ್ರಮಾಣದ ದರೋಡೆ ಕೇಸ್‌ ರಿಯಲ್‌ ಆಗಿ ಫ್ರಾನ್ಸ್‌ನಲ್ಲಿ ನಡೆದಿದೆ.ವಿಶ್ವದ ಅತ್ಯಂತ ಪ್ರಸಿದ್ಧ ಮ್ಯೂಸಿಯಂಗಳಲ್ಲಿ ಒಂದಾದ ಫ್ರಾನ್ಸ್‌ನ ಲೌವ್ರೆ ಮ್ಯೂಸಿಯಂನಿಂದ ಕಳೆದ ಅಕ್ಟೋಬರ್‌ 19 ರಂದು ಭಾರೀ ಪ್ರಮಾಣದಲ್ಲಿ ದರೋಡೆಯಾಗಿದೆ. ಕಟ್ಟಡ ಕಾರ್ಮಿಕರ ರೂಪದಲ್ಲಿ ಬಂದಿದ್ದ ಖದೀಮರು ಲೌವ್ರೆ ಮ್ಯೂಸಿಯಂನ ಅಪೊಲೋ ಗ್ಯಾಲರಿಯಲ್ಲಿದ್ದ ಬರೋಬ್ಬರಿ ಎಂಟಿ ಪೀಸ್‌ ಫ್ರೆಂಚ್‌ ಕ್ರೌನ್‌ ಜ್ಯುವೆಲ್ಸ್‌ಅನ್ನು ಕದ್ದಿದ್ದಾರೆ.

ಇಡೀ ದರೋಡೆಗೆ ಖದೀಮರು ತೆಗೆದುಕೊಂಡ ಸಮಯ ಕೇವಲ 8 ನಿಮಿಷ ಅನ್ನೋದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಲ್ಲದೆ, ಮ್ಯೂಸಿಯಂನಲ್ಲಿ ದರೋಡೆಕೋರರು ಕಳೆದಿದ್ದು 4 ನಿಮಿಷ ಮಾತ್ರ ಎನ್ನಲಾಗಿದೆ. 1998ರ ಬಳಿಕ ಲೌವ್ರೆ ಮ್ಯೂಸಿಯಂನಲ್ಲಿ ನಡೆದ ಅತಿದೊಡ್ಡ ದರೋಡೆ ಪ್ರಕರಣ ಇದಾಗಿದೆ.

ಅಕ್ಟೋಬರ್‌ 19 ರಂದು ಸ್ಥಳೀಯ ಕಾಲಮಾನ ಬೆಳಗ್ಗೆ 9.30ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 1ಕ್ಕೆ) ಈ ಘಟನೆ ನಡೆದಿದೆ. ಪ್ರೇಕ್ಷಕರಿಗೆ ಮ್ಯೂಸಿಯಂ ತೆರೆದ ಅರ್ಧಗಂಟೆಯಲ್ಲಿ ಈ ಘಟನೆ ನಡೆದಿದ್ದು, ಹಳದಿ ಹಾಗೂ ಕಿತ್ತಳೆ ಬಣ್ಣದ ವೆಸ್ಟ್‌ ಧರಿಸಿ ಮ್ಯೂಸಿಯಂನ ಸಿಯಾನ್‌ ನದಿಯ ಗೇಟ್‌ನಿಂದ ಒಳಹೊಕ್ಕಿದ್ದರು.

ಕಳ್ಳರು ಕದ್ದಿದ್ದೇನು?

ಫ್ರಾನ್ಸ್‌ನ ಸಂಸ್ಕೃತಿ ಇಲಾಖೆ ಖಚಿತಪಡಿಸಿರುವ ಪ್ರಕಾರ, ರಾಣಿ ಮೇರಿ-ಅಮಾಲಿ ಮತ್ತು ರಾಣಿ ಹಾರ್ಟೆನ್ಸ್ ಅವರ ನೀಲಮಣಿ ಸೆಟ್‌ನಿಂದ ಕಿರೀಟ, ಹಾರ ಮತ್ತು ಕಿವಿಯೋಲೆ, ರಾಜಮಾತೆ ಮೇರಿ ಲೂಯಿಸ್ ಸೆಟ್‌ನಿಂದ ಪಚ್ಚೆ ಹಾರ ಮತ್ತು ಒಂದು ಜೋಡಿ ಪಚ್ಚೆ ಕಿವಿಯೋಲೆಗಳು, ರಿಲಿಕ್ವರಿ ಬ್ರೂಚ್, ದೊಡ್ಡ ಕಾರ್ಸೇಜ್ ಬಿಲ್ಲು ಬ್ರೂಚ್ ಮತ್ತು ರಾಜಮಾತೆ ಯುಜೀನಿ ಡಿ ಮಾಂಟಿಜೊ ಅವರ ಕಿರೀಟವನ್ನು ಕದಿಯಲಾಗಿದೆ. ಆದರೆ, ರಾಜಮಾತೆ ಯುಜೀನಿ ಅವರ ಕ್ರೌನ್‌ಅನ್ನು ಕದಿಯಲು ಪ್ರಯತ್ನಿಸಿದರೂ, ಎಸ್ಕೇಪ್‌ ಆಗುವ ಸಮಯದಲ್ಲಿ ಅದನ್ನು ಅಲ್ಲಿಯೇ ಬಿಟ್ಟುಹೋಗಿದ್ದಾರೆ.

ಗ್ಯಾಲರಿಯಲ್ಲಿ ಹಲವಾರು ಮಹತ್ವದ ವಜ್ರಗಳನ್ನು ಕಳ್ಳರು ಗುರಿಯಾಗಿಸಿಕೊಂಡಂತೆ ಕಂಡಿಲ್ಲ ಎಂದು ಮಾಧ್ಯಮಗಳು ವರದಿಮಾಡಿದೆ. ಬರೋಬ್ಬರಿ 51 ಮಿಲಿಯನ್‌ ಯುರೋ ಮೌಲ್ಯದ ರೀಜೆಂಟ್‌ ವಜ್ರ, ಸ್ಯಾನ್ಸಿ ಹಾಗೂ ಹಾರ್ಟೆನ್ಸಿಯಾ ವಜ್ರಗಳನ್ನು ಅವರು ಟಾರ್ಗೆಟ್‌ ಮಾಡಿಲ್ಲ.

ಕಳ್ಳರು ಕದ್ದಿರುವ ಆಭರಣಗಳು..

ಕದ್ದ ವಸ್ತುಗಳ ಮೌಲ್ಯ

ಕೆಲವು ಅಂದಾಜುಗಳ ಪ್ರಕಾರ, ಕದ್ದ ವಸ್ತುಗಳ ಮೌಲ್ಯ ಬರೋಬ್ಬರಿ 102 ಮಿಲಿಯನ್‌ ಯುಎಸ್‌ ಡಾಲರ್‌. ಅಂದರೆ, ಭಾರತೀಯ ರೂಪಾಯಿಯಲ್ಲಿ 896 ಕೋಟಿ ರೂಪಾಯಿಯದ್ದಾಗಿದೆ.

ಬ್ಯಾಂಕ್‌ ಆಫ್‌ ಫ್ರಾನ್ಸ್‌ಗೆ ಆಭರಣ ಶಿಫ್ಟ್‌ ಮಾಡಿದ ಲೌವ್ರೆ

ಕಳೆದ ವಾರ ಹಗಲು ಹೊತ್ತಿನಲ್ಲೇ ನಡೆದ ದರೋಡೆಯ ನಂತರ, ಲೌವ್ರೆ ತನ್ನ ಕೆಲವು ಅಮೂಲ್ಯ ಆಭರಣಗಳನ್ನು ಬ್ಯಾಂಕ್ ಆಫ್ ಫ್ರಾನ್ಸ್‌ಗೆ ವರ್ಗಾಯಿಸಿದೆ ಎಂದು ಫ್ರೆಂಚ್ ರೇಡಿಯೋ ಆರ್‌ಟಿಎಲ್ ವರದಿ ಮಾಡಿದೆ. ಫ್ರೆಂಚ್ ಕಿರೀಟ ಆಭರಣಗಳ ನೆಲೆಯಾಗಿರುವ ವಸ್ತುಸಂಗ್ರಹಾಲಯದ ಅಪೊಲೊ ಗ್ಯಾಲರಿಯಿಂದ ಕೆಲವು ಅಮೂಲ್ಯ ವಸ್ತುಗಳ ವರ್ಗಾವಣೆಯನ್ನು ಶುಕ್ರವಾರ ರಹಸ್ಯ ಪೊಲೀಸ್ ಬೆಂಗಾವಲಿನಡಿಯಲ್ಲಿ ನಡೆಸಲಾಯಿತು ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಆರ್‌ಟಿಎಲ್ ತಿಳಿಸಿದೆ. ದೇಶದ ಚಿನ್ನದ ನಿಕ್ಷೇಪಗಳನ್ನು ನೆಲದ ಕೆಳಗೆ 27 ಮೀಟರ್ (88 ಅಡಿ) ಬೃಹತ್ ಕಮಾನುಗಳಲ್ಲಿ ಸಂಗ್ರಹಿಸುವ ಬ್ಯಾಂಕ್ ಆಫ್ ಫ್ರಾನ್ಸ್, ಲೌವ್ರೆಯಿಂದ ಕೇವಲ 500 ಮೀಟರ್ ದೂರದಲ್ಲಿ, ಸೀನ್ ನದಿಯ ಬಲದಂಡೆಯಲ್ಲಿದೆ.