ರಷ್ಯಾ-ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ, ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ 21 ಅಪಾಯಕಾರಿ ದೇಶಗಳಿಗೆ ಪ್ರಯಾಣಿಸದಂತೆ ಕಟ್ಟುನಿಟ್ಟಿನ 'ಹಂತ 4' ಪ್ರಯಾಣ ಸಲಹೆಯನ್ನು ನೀಡಿದೆ. ರಷ್ಯಾದ ಪರಮಾಣು ಬೆದರಿಕೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಪಟ್ಟಿಯಲ್ಲಿನ ದೇಶಗಳು ಹೀಗಿವೆ.

ಗುರುವಾರ (ಜನವರಿ 8, 2026) ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ಅತ್ಯಂತ ಕಟ್ಟುನಿಟ್ಟಿನ 'ಪ್ರಯಾಣ ಸಲಹೆ'ಯನ್ನು (Travel Advisory) ಬಿಡುಗಡೆ ಮಾಡುವ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸಿದೆ. ರಷ್ಯಾ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಅಪಾಯಕಾರಿ ಎಂದು ಗುರುತಿಸಲಾದ 21 ದೇಶಗಳಿಗೆ ಭೇಟಿ ನೀಡದಂತೆ ಟ್ರಂಪ್ ಆಡಳಿತವು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಅಮೆರಿಕ ವಿದೇಶಾಂಗ ಇಲಾಖೆಯಿಂದ 1-4 ಹಂತದ ಎಚ್ಚರಿಕೆ

ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯು ತನ್ನ ಸಾಮಾಜಿಕ ಜಾಲತಾಣ 'X' ನಲ್ಲಿ ಈ ಶಾಕಿಂಗ್ ಸುದ್ದಿಯನ್ನು ಹಂಚಿಕೊಂಡಿದೆ. 'ನಾವು ಅಮೆರಿಕದ ನಾಗರಿಕರಿಗೆ 1 ರಿಂದ 4 ನೇ ಹಂತದವರೆಗೆ ಪ್ರಯಾಣ ಸಲಹೆಯನ್ನು ನೀಡುತ್ತಿದ್ದೇವೆ. ಇದರಲ್ಲಿ 'ಹಂತ 4' ಎಂದರೆ ಆ ದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರಯಾಣಿಸಬೇಡಿ ಎಂದರ್ಥ' ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಹಂತದಲ್ಲಿರುವ ದೇಶಗಳು ಅತ್ಯಂತ ಅಪಾಯಕಾರಿ ಎಂದು ಘೋಷಿಸಲಾಗಿದೆ.

ಜೀವಕ್ಕೆ ಗ್ಯಾರಂಟಿ ಇಲ್ಲ: ಅಪಾಯಕಾರಿ ದೇಶಗಳ ಪಟ್ಟಿ ಇಲ್ಲಿದೆ

ಸ್ಥಳೀಯವಾಗಿ ಹದಗೆಟ್ಟಿರುವ ಪರಿಸ್ಥಿತಿಗಳು ಮತ್ತು ಒಂದು ವೇಳೆ ಅನಾಹುತ ಸಂಭವಿಸಿದರೆ ಅಮೆರಿಕನ್ ನಾಗರಿಕರಿಗೆ ನೆರವು ನೀಡಲು ಸಾಧ್ಯವಾಗದ ಅಸಹಾಯಕತೆಯನ್ನು ಉಲ್ಲೇಖಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 'ಈ ಸ್ಥಳಗಳು ಮಾರಣಾಂತಿಕ ಅಪಾಯದಿಂದ ಕೂಡಿವೆ. ದಯವಿಟ್ಟು ಅಲ್ಲಿಗೆ ಪ್ರಯಾಣಿಸಿ ನಿಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬೇಡಿ' ಎಂದು ಪೋಸ್ಟ್‌ನಲ್ಲಿ ಎಚ್ಚರಿಸಲಾಗಿದೆ. ಈ ಪಟ್ಟಿಯಲ್ಲಿ ರಷ್ಯಾ, ಉಕ್ರೇನ್, ಲಿಬಿಯಾ ಮತ್ತು ಬುರ್ಕಿನಾ ಫಾಸೊ ಸೇರಿದಂತೆ 21 ದೇಶಗಳಿವೆ.

ಭಾರತ ಮತ್ತು ಪಾಕಿಸ್ತಾನ ಕೂಡ ಇದರಲ್ಲಿ ಸೇರಿವೆಯೇ?

ಈ ಆತಂಕಕಾರಿ ಪಟ್ಟಿಯಲ್ಲಿ ನೆರೆಯ ಪಾಕಿಸ್ತಾನ ಅಥವಾ ಭಾರತದ ಹೆಸರಿದೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಆದರೆ, ಸದ್ಯಕ್ಕೆ ಅಮೆರಿಕ ಬಿಡುಗಡೆ ಮಾಡಿರುವ ಈ ಅತ್ಯಂತ ಅಪಾಯಕಾರಿ (ಹಂತ 4) 21 ದೇಶಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಸ್ಥಾನ ನೀಡಿಲ್ಲ. ಇದು ಈ ಭಾಗದ ಪ್ರವಾಸಿಗರಿಗೆ ಸದ್ಯದ ಮಟ್ಟಿಗೆ ಸಮಾಧಾನ ತರುವ ವಿಚಾರವಾಗಿದೆ.

ಪುಟಿನ್ ಪರಮಾಣು ಬೆದರಿಕೆ: ಬೆಚ್ಚಿಬಿದ್ದ ಅಮೆರಿಕ!

ಟ್ರಂಪ್ ಆಡಳಿತವು ಇಷ್ಟು ಕಠಿಣ ಕ್ರಮ ಕೈಗೊಳ್ಳಲು ರಷ್ಯಾದಿಂದ ಬಂದ 'ಪರಮಾಣು ಬಾಂಬ್' ಬೆದರಿಕೆಯೇ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಅಟ್ಲಾಂಟಿಕ್ ಸಾಗರದಲ್ಲಿ ರಷ್ಯಾದ ಧ್ವಜ ಹೊತ್ತ 'ಮರಿನೆರಾ' ಎಂಬ ತೈಲ ಟ್ಯಾಂಕರ್ ಅನ್ನು ಅಮೆರಿಕ ಸೇನೆ ವಶಪಡಿಸಿಕೊಂಡಿತ್ತು. ಇದನ್ನು ರಷ್ಯಾ 'ಕಡಲ್ಗಳ್ಳತನ' ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿತ್ತು.

ಯುದ್ಧದ ಭೀತಿಯಲ್ಲಿ ಜಗತ್ತು?

ಈ ಘರ್ಷಣೆಯ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ಅಲೆಕ್ಸಿ ಜುರಾವ್ಲೆವ್, ಅಮೆರಿಕದ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ರಷ್ಯಾ ಮತ್ತು ಅಮೆರಿಕ ನಡುವೆ ನೇರ ಯುದ್ಧದ ಕಾರ್ಮೋಡ ಕವಿದಿದ್ದು, ಅಮೆರಿಕ ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಲು ಈ ತುರ್ತು ಕ್ರಮಕ್ಕೆ ಮುಂದಾಗಿದೆ.