ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಓಲೇಶ್ಕಿ ನಗರದಲ್ಲಿ ಸ್ಥಳೀಯ ಕದನ ವಿರಾಮ ಏರ್ಪಟ್ಟಿದೆ. ಮತ್ತೊಂದೆಡೆ, ಉಕ್ರೇನ್ ವಿರೋಧದ ನಡುವೆಯೂ ಟ್ರಂಪ್-ಪುಟಿನ್ ಒಪ್ಪಂದದಂತೆ ರಷ್ಯಾದಿಂದ ಅಮೆರಿಕಕ್ಕೆ ಡೀಸೆಲ್ ಟ್ಯಾಂಕರ್ ಪ್ರಯಾಣ ಬೆಳೆಸಿದೆ.

ವಾಷಿಂಗ್ಟನ್/ಮಾಸ್ಕೋ: ರಷ್ಯಾ ಆಕ್ರಮಿತ ಉಕ್ರೇನ್‌ನ ಓಲೇಶ್ಕಿ ನಗರದಲ್ಲಿ ಮಾನವೀಯ ನೆರವು ತಲುಪಿಸಲು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರಷ್ಯಾ ಹಾಗೂ ಉಕ್ರೇನ್ ನಡುವೆ ಸ್ಥಳೀಯ ಕದನ ವಿರಾಮ ಒಪ್ಪಂದ ಏರ್ಪಡಿಸುವಲ್ಲಿ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಯಶಸ್ವಿಯಾಗಿದ್ದಾರೆ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ.

ಈ ಕದನ ವಿರಾಮ ಅ.29ರಿಂದ ಜಾರಿಗೆ ಬರಲಿದೆ. ಮೆಲಾನಿಯಾ ಅವರೇ ಸ್ವತಃ ಈ ಕುರಿತು ಚರ್ಚೆಗಳನ್ನು ಆರಂಭಿಸಿದ್ದು, ರಷ್ಯಾ ಮತ್ತು ಉಕ್ರೇನ್ ನಾಯಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಒಪ್ಪಂದದ ನಿಯಮಗಳನ್ನು ರೂಪಿಸಿದ್ದಾರೆ. ಓಲೇಶ್ಕಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳ ತೀವ್ರ ಅಭಾವ ಉಂಟಾಗಿದ್ದು, ಈ ಕದನ ವಿರಾಮವು ಸಂಕಷ್ಟದಲ್ಲಿರುವ ನಾಗರಿಕರಿಗೆ ದೊಡ್ಡ ಮಟ್ಟದ ಆಸರೆಯಾಗಲಿದೆ.

ಅಮೆರಿಕಕ್ಕೆ ಹೊರಟ ರಷ್ಯಾ ಟ್ಯಾಂಕರ್:

ಮತ್ತೊಂದೆಡೆ, ಉಕ್ರೇನ್‌ನ ತೀವ್ರ ಆಕ್ಷೇಪದ ನಡುವೆಯೂ ರಷ್ಯಾದಿಂದ ಅಮೆರಿಕಕ್ಕೆ ಡೀಸೆಲ್ ಹೊತ್ತ ಮೊದಲ ಟ್ಯಾಂಕರ್ ಪಯಣ ಬೆಳೆಸಿದೆ ಎಂದು ಕ್ರೆಮ್ಲಿನ್ ಶುಕ್ರವಾರ ಸ್ಪಷ್ಟಪಡಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಹೊಸ ಆಮದು ಒಪ್ಪಂದದ ಭಾಗವಾಗಿ ಈ ಪೂರೈಕೆ ಆರಂಭವಾಗಿದೆ.

ಜೋರ್ಡಾನ್‌ ಚರ್ಚ್‌ನಲ್ಲಿ ಗುಂಡಿನ ದಾಳಿ: 7 ಸಾವು

ಜೆರುಸಲೆಂ: ಜೋರ್ಡಾನ್ ದೇಶದ ಕರಾಕ್ ಪ್ರಾಂತ್ಯದ ಹಮೌದ್ ಗ್ರಾಮದಲ್ಲಿರುವ ಗ್ರೀಕ್ ಚರ್ಚ್‌ನಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆಗ 7 ಜನರು ಸಾವನ್ನಪ್ಪಿದ್ದಾರೆ ಮತ್ತು 28 ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ.

ಚರ್ಚ್‌ನಲ್ಲಿ ಮೃತರೊಬ್ಬರ ಗೌರವಾರ್ಥ ಪ್ರಾರ್ಥನಾ ಸಭೆ ನಡೆಯುತ್ತಿತ್ತು. ಆಗ ಇಬ್ಬರು ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿವೆ ಮತ್ತು ತನಿಖೆ ಮುಂದುವರಿದಿದೆ.

ಹಮೌದ್‌ ಗ್ರಾಮವು ಅಲ್ಪಸಂಖ್ಯಾತ ಕ್ರೈಸ್ತರ ನಗರವಾಗಿದೆ. ಜೋರ್ಡಾನ್ ರಾಜಧಾನಿ ಅಮ್ಮಾನ್‌ನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ.