ಉಕ್ರೇನ್‌ಗೆ ನೆರವು ನೀಡುತ್ತಿರುವ ಉಪಗ್ರಹವನ್ನು ರಷ್ಯಾದ ಸೇನಾ ಉಪಗ್ರಹವೊಂದು ಬಾಹ್ಯಾಕಾಶದಲ್ಲಿ ಹಿಂಬಾಲಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಉಕ್ರೇನ್ ಯುದ್ಧ ಅಂತ್ಯಗೊಳಿಸಲು ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಚರ್ಚಿಸಲು ಪುಟಿನ್ ಮುಂದಾಗಿದ್ದಾರೆ.

ವಾಷಿಂಗ್ಟನ್‌: ರಷ್ಯಾದ ಸೇನಾ ಉಪಗ್ರಹವೊಂದು ಬಾಹ್ಯಾಕಾಶದಲ್ಲಿ ಉಕ್ರೇನ್‌ನ ಸೇನಾ ಕಾರ್ಯಾಚರಣೆಗೆ ನೆರವು ನೀಡುವ ಉಪಗ್ರಹವೊಂದನ್ನು ಹಿಂಬಾಲಿಸಿ ಅದರ ಸನಿಹಕ್ಕೆ ಬಂದ ಘಟನೆ ನಡೆದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದೆ. ರಷ್ಯಾದ ಕಾಸ್ಮೋಸ್‌-2612 ಉಪಗ್ರಹ ತನ್ನ ಕಕ್ಷೆಯನ್ನೇ ಬದಲಿಸಿ ಉಕ್ರೇನ್‌ ಸೇನೆಗೆ ನೆರವು ನೀಡುತ್ತಿರುವ ಫಿನ್ಲೆಂಡ್‌ ಮೂಲದ ಖಾಸಗಿ ಐಸಿಇವೈಇ ಉಪಗ್ರಹದ ಸಮೀಪ ತೆರಳಿದೆ. ಒಂದು ಹಂತದಲ್ಲಿ ಕಾಸ್ಮೋಸ್‌-2612 ಉಪಗ್ರಹವು ಫಿನ್ಲೆಂಡ್‌ ಉಪಗ್ರಹದಿಂದ ಕೇವಲ 26 ಮೀ. ಸಮೀಪಕ್ಕೆ ಬಂದಿತ್ತು. ಈ ಬಗ್ಗೆ ಉಪಗ್ರಹಗಳ ಮೇಲೆ ಕಣ್ಗಾವಲು ಇಡುವ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿದೆ.

ರಷ್ಯಾದ ಉಪಗ್ರಹದ ಈ ಕಕ್ಷೆ ಬದಲಾವಣೆಯ ಉದ್ದೇಶ ಖಚಿತವಾಗಿಲ್ಲದಿದ್ದರೂ ಬಾಹ್ಯಾಕಾಶ ಸುರಕ್ಷತಾ ವಿಶೇಷಜ್ಞರು ಮಾತ್ರ ತೀವ್ರ ಆತಂಕ ಹೊರಹಾಕಿದ್ದಾರೆ. ಆಧುನಿಕ ಯುದ್ಧಗಳಲ್ಲಿ ಉಪಗ್ರಹ ಮುಖ್ಯ ಪಾತ್ರವಹಿಸುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಯುದ್ಧದ ವೇಳೆ ವಾಣಿಜ್ಯ ಸೇವೆ ಒದಗಿಸುವ ಉಪಗ್ರಹ ಸುರಕ್ಷತೆ ಪ್ರಶ್ನಿಸುವಂತೆ ಮಾಡಿದೆ.

ಯುದ್ಧ ಅಂತ್ಯಕ್ಕೆ ಉಕ್ರೇನ್‌ ಬಿಟ್ಟು ಟ್ರಂಪ್‌, ಕ್ಸಿ ಜತೆ ಪುಟಿನ್‌ ಚರ್ಚೆ!

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಉಕ್ರೇನ್‌ ಯುದ್ಧವನ್ನು ಮುಕ್ತಾಯಗೊಳಿಸುವ ಕುರಿತು ಚರ್ಚಿಸಲು ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ಸಭೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಉಕ್ರೇನ್‌ ಹೊರಗಿಟ್ಟು ನಡೆವೆ ಈ ಮಾತುಕತೆ ರಷ್ಯಾಗೆ ಅನುಕೂಲಕರವಾಗಬಹುದೆಂಬ ವಿಷಯ ಉಕ್ರೇನ್‌ ಹಾಗೂ ಉರೋಪಿಯನ್‌ ರಾಷ್ಟ್ರಗಳಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.

4 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ರಷ್ಯಾಗೆ ಲಾಭವಾಗುವ ಷರತ್ತುಗಳ ಆಧಾರದ ಮೇಲೆ ಕೊನೆಗೊಳಿಸುವುದು ಈ ಸಭೆಯ ಉದ್ದೇಶ. ಅ.9ರಂದು ಟ್ರಂಪ್ ಜತೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಪುಟಿನ್ ಈ ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಅಮೆರಿಕವು ರಷ್ಯಾದಿಂದ ಡೀಸೆಲ್ ಖರೀದಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅದರ ಮಾರಾಟಕ್ಕೆ ನೆರವಾಗಲು ಒಪ್ಪಂದ ಮಾಡಿಕೊಂಡಿದೆ. ನ.18 ಮತ್ತು 19ರಂದು ಚೀನಾದಲ್ಲಿ ನಡೆಯಲಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ನಡುವೆ ಈ ತ್ರಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.