UK Prime Ministerial Elections 2022: ಇಂಗ್ಲೆಂಡಿನ ಮುಂದಿನ ಪ್ರಧಾನಿ ಚುನಾವಣೆ ಅಂತಿಮ ಹಂತಕ್ಕೆ ತಲುಪಿದ್ದು, ಸೋಮವಾರ ಫಲಿತಾಂಶ ಹೊರ ಬೀಳಲಿದೆ. ವರದಿಗಳ ಪ್ರಕಾರ ಭಾರತೀಯ ರಿಷಿ ಸುನಕ್‌ ಅವರಿಗಿಂತ ಹೆಚ್ಚು ಮತ ಪಡೆದು ಲಿಜ್‌ ಟ್ರಸ್‌ ಗೆಲುವು ಸಾಧಿಸಲಿದ್ದಾರೆ. 

ನವದೆಹಲಿ: ಕರ್ನಾಟಕದ ಉದ್ಯಮಿ ಇನ್ಫೋಸಿಸ್‌ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್‌ ಮತ್ತು ಲಿಜ್‌ ಟ್ರಸ್‌ ನಡುವೆ ಇಂಗ್ಲೆಂಡಿನ ಮುಂದಿನ ಪ್ರಧಾನಿ ಸ್ಥಾನಕ್ಕೆ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಲಿಜ್‌ ಟ್ರಸ್‌ ಅವರು ರಿಷಿ ಸುನಕ್‌ ಅವರನ್ನು ಹಿಂದೆ ಹಾಕಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಲಿಜ್‌ ಟ್ರಸ್‌ ಮತ್ತು ರಿಷಿ ಸುನಕ್‌ ನಡುವೆ ಆರಂಭದಿಂದಲೂ ಪೈಪೋಟಿ ಏರ್ಪಟ್ಟಿತ್ತು. ಚುನಾವಣೆಯ ಅಂತಿಮ ಹಂತದಲ್ಲಿ ಲಿಜ್‌ ಟ್ರಸ್‌ರಿಗೆ ಇಂಗ್ಲೆಂಡ್‌ ನಾಗರಿಕರು ಹೆಚ್ಚು ಮತ ಹಾಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮುಂದಿನ ಸೋಮವಾರ ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಇಂಗ್ಲೆಂಡ್‌ನ ನೂತನ ಪ್ರಧಾನಿ ಯಾರಾಗಲಿದ್ದಾರೆ ಎಂಬ ವಿಚಾರ ಅಧಿಕೃತವಾಗಲಿದೆ. ಸದ್ಯದ ಹಂತದಲ್ಲಂತೂ ಎಲ್ಲಾ ಸಮೀಕ್ಷೆಗಳೂ ಲಿಜ್‌ ಟ್ರಸ್‌ ಗೆಲುವಿಗೆ ಸನಿಹರಾಗಿದ್ದಾರೆ ಎನ್ನುತ್ತಿವೆ. 

ಕಳೆದೆರಡು ತಿಂಗಳುಗಳಿಂದ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಬೋರಿಸ್‌ ಜಾನ್ಸನ್‌ ರಾಜೀನಾಮೆಯ ನಂತರ ತೆರವಾದ ಸ್ಥಾನಕ್ಕೆ ಹಲವರು ಸ್ಪರ್ಧಿಸಿದ್ದರು. ಆದರೆ ಭಾರತ ಮೂಲದ ರಿಷಿ ಸುನಕ್‌ ಮತ್ತು ಲಿಜ್‌ ಟ್ರಸ್‌ ಅಂತಿಮ ಹಂತಕ್ಕೆ ತಲುಪಿದ್ದರು. ಚುನಾವಣೆಯ ಆರಂಭಿಕ ಹಂತದಲ್ಲಿ ರಿಷಿ ಸುನಕ್‌ ಮುಂದಿನ ಪ್ರಧಾನಿಯಾಗುವುದು ಖಚಿತ ಎಂದೇ ಬಿಂಬಿತವಾಗಿತ್ತು. ಆದರೆ ಸಮಯ ಕಳೆದಂತೆ ಲಿಜ್‌ ಟ್ರಸ್‌ ಒಂದೊಂದೇ ಮೆಟ್ಟಿಲು ರಿಷಿ ಸುನಕ್‌ರಿಗೆ ಪೈಪೋಟಿ ನೀಡುತ್ತಾ ಈಗ ಗೆಲ್ಲುವ ಫೇವರೆಟ್‌ ಅನಿಸಿಕೊಂಡಿದ್ದಾರೆ. 

ಪ್ರಧಾನಿಯಾಗಿ ಯಾರೇ ಆಯ್ಕೆಯಾದರೂ ಮುಂದಿನ ಹಾದಿ ಸುಗಮವಾಗಿಲ್ಲ. ಯಾಕೆಂದರೆ ಇಂಗ್ಲೆಂಡ್‌ನ ಆರ್ಥಿಕತೆ ಕುಸಿತ ಕಂಡಿದೆ. ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು ಅಕ್ಟೋಬರ್‌ ನಂತರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇಂಗ್ಲೆಂಡ್‌ ಹಿಂದೆಂದೂ ಕಂಡರಿಯದಷ್ಟು ಹಣದುಬ್ಬರ ಅನುಭವಿಸುತ್ತಿದೆ. ಪ್ರಧಾನಿಯಾಗಿ ಆಯ್ಕೆಯಾದವರು ಈ ಪರಿಸ್ಥಿತಿಯನ್ನು ನಿಭಾಯಿಸದಿದ್ದರೆ, ಸಾರ್ವಜನಿಕರ ಆಕ್ರೋಶ ಹೆಚ್ಚಲಿದೆ. ಈ ಕಾರಣಕ್ಕಾಗಿಯೇ ಯಾರೇ ಗೆದ್ದರೂ, ಯುದ್ಧ ಗೆದ್ದ ನಂತರವೇ ಆರಂಭವಾಗಲಿದೆ ಎನ್ನುತ್ತವೆ ವರದಿಗಳು. 

ಯಾರಿವರು ರಿಷಿ ಸುನಾಕ್‌:

ವೆಸ್ಟ್‌ ಮಿನಿಸ್ಟರ್‌ನ ಅತ್ಯಂತ ಪ್ರಬಲ ನಾಯಕ ರಿಷಿ ಸುನಾಕ್‌. ಇಂಗ್ಲೆಂಡ್‌ ಕೋವಿಡ್‌ ಬೆಂಬಲಿತ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟದ ಬೆಂಬಲಿಗರಾಗಿದ್ದರು. ಬೊರಿಸ್‌ ಜಾನ್ಸನ್‌ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಇವರ ಹೆಸರು ಪೇ ಗೇಟ್‌ ಹಗರಣದಲ್ಲಿ ಜಾನ್ಸನ್‌ ಅವರೊಂದಿಗೆ ಕೇಳಿ ಬಂದಿತ್ತು. ಇದರ ಬೆನ್ನಲ್ಲಿಯೇ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು.

42 ವರ್ಷದ ರಿಷಿ ಸುನಕ್ ಅವರನ್ನು ಬೋರಿಸ್ ಜಾನ್ಸನ್ 2020ರ ಫೆಬ್ರವರಿಯಲ್ಲಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದರು. ಖಜಾನೆಯ ಚಾನ್ಸಲರ್‌ ಆಗಿ ನೇಮಕವಾಗಿದ್ದ ಇವರು ಮೊದಲ ಬಾರಿಗೆ ಪೂರ್ಣ ಕ್ಯಾಬಿನೆಟ್‌ ಸ್ಥಾನವನ್ನು ಪಡೆದಿದ್ದರು.

ಇದನ್ನೂ ಓದಿ: ಲಂಡನ್‌ನಲ್ಲಿ ಗೋ ಪೂಜೆ ಮಾಡಿ ಭಾರತೀಯರ ಹೃದಯ ಗೆದ್ದ Rishi Sunak

ಮಾಜಿ ರಕ್ಷಣಾ ಕಾರ್ಯದರ್ಶಿ ಪೆನ್ನಿ ಮೊರ್ಡಾಂಟ್ ಜೊತೆಗೆ ಮುಂದಿನ ಪ್ರಧಾನಿಯಾಗಿ ರಿಷಿ ಅನರನ್ನು ನೆಚ್ಚಿನವರಾಗಿ ಗಮನಿಸಿದ್ದಾರೆ. ವ್ಯಾಪಾರಗಳು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹತ್ತಾರು ಶತಕೋಟಿ ಪೌಂಡ್‌ಗಳ ಬೃಹತ್ ಪ್ಯಾಕೇಜ್ ಅನ್ನು ರೂಪಿಸಿದ ನಂತರ ಅವರು ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಜನಪ್ರಿಯರಾದರು. "ಡಿಶಿ" ರಿಷಿ ಎಂಬ ಅಡ್ಡಹೆಸರನ್ನು ಇವರು ಹೊಂದಿದ್ದು, ಪತ್ನಿ ಅಕ್ಷತಾ ಮೂರ್ತಿ ವಿಚಾರವಾಗಿ ಎದುರಾದ ತೆರಿಗೆ ಸಂಬಂಧಿತ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂಜರಿದಿದ್ದರು. ಕೋವಿಡ್ ಲಾಕ್‌ಡೌನ್ ಅನ್ನು ಧಿಕ್ಕರಿಸಿ ಡೌನಿಂಗ್ ಸ್ಟ್ರೀಟ್ ಕೂಟದಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ದಂಡವನ್ನೂ ವಿಧಿಸಲಾಗಿತ್ತು.

ಇದನ್ನೂ ಓದಿ: ನಾನು ಪ್ರಧಾನಿಯಾದ ಮೊದಲ ದಿನದಿಂದಲೇ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್‌

ಪಂಜಾಬ್‌ ಮೂಲದ ರಿಷಿ ಸುನಾಕ್‌: ರಿಷಿ ಸುನಾಕ್‌ ಅವರ ಕುಟುಂಬ ಪಂಜಾಬ್‌ ಮೂಲದವರು. ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು.