ಲಂಡನ್‌ನಲ್ಲಿ ಗೋ ಪೂಜೆ ಮಾಡಿ ಭಾರತೀಯರ ಹೃದಯ ಗೆದ್ದ Rishi Sunak
Rishi Sunak Viral Gau Pooja: ಇಂಗ್ಲೆಂಡ್ ಪ್ರಧಾನಿ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್ ಲಂಡನ್‌ನಲ್ಲಿ ಗೋ ಪೂಜೆ ಮಾಡಿದ್ದಾರೆ. ಈ ಮೂಲಕ ಅನಿವಾಸಿ ಭಾರತೀಯರ ಹೃದಯ ಗೆದ್ದಿದ್ದಾರೆ.
ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ರಿಷಿ ಸುನಕ್ ಲಂಡನ್‌ನಲ್ಲಿ ಗೋ ಪೂಜೆ ಮಾಡುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿಯವರ ಮಗಳು ಮತ್ತು ಸುನಕ್ ಹೆಂಡತಿ ಅಕ್ಷತಾ ಮೂರ್ತಿಯವರ ಜೊತೆಗೂಡಿ ಗೋಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಗ್ಲೆಂಡಿನಲ್ಲಿ ವಾಸಿಸುತ್ತಿರುವ ಭಾರತೀಯರು ಸುನಕ್‌ರ ಈ ಪೂಜೆಯಿಂದ ಮರುಳಾಗಿದ್ದಾರೆ.
ದಂಪತಿ ಗೋವೊಂದಕ್ಕೆ ಪೂಜೆ ಮಾಡಿ ಆರತಿ ಎತ್ತುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶ್ರೀ ಕೃಷ್ಣ ಜನ್ಮಾಶ್ಟಮಿ ದಿನದಂದು ಭಕ್ತಿವೇದಾಂತ ಮ್ಯಾನರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕಳೆದ ವರ್ಷ ಮೊದಲ ಬಾರಿ ಇಂಗ್ಲೆಂಡ್‌ನಲ್ಲಿರುವ ಅನಿವಾಸಿ ಭಾರತೀಯರ ಮನಸ್ಸನ್ನು ದೀಪಾವಳಿ ಆಚರಿಸಿಕೊಳ್ಳುವ ಮೂಲಕ ರಿಷಿ ಸುನಕ್ ಗೆದ್ದಿದ್ದರು. ರಿಷಿ ಸುನಕ್ ತಮ್ಮ ಅಧಿಕೃತ ನಿವಾಸದಲ್ಲಿ ದೀಪಗಳನ್ನು ಬೆಳಗುವ ಮೂಲಕ ಭಾರತೀಯ ಸಂಪ್ರದಾಯವನ್ನು ಪಾಲಿಸಿದ್ದು ವ್ಯಾಪಕ ಸಂತಸಕ್ಕೆ ಕಾರಣವಾಗಿತ್ತು.
ಪ್ರಧಾನಿ ರೇಸ್‌ನಲ್ಲಿ ರಿಷಿ ಸುನಕ್‌ರ ನಿಕಟ ಪ್ರತಿಸ್ಪರ್ಧಿ ಲಿಜ್ ಟ್ರಸ್ ಅವರು ಮೇಲುಗೈ ಸಾಧಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಾಗ, ಅನಿವಾಸಿ ಭಾರತೀಯ ಹೋಮ ಹವನಗಳನ್ನು ರಿಷಿ ಸುನಕ್‌ರ ಗೆಲುವಿಗಾಗಿ ಮಾಡಿಸಿದ್ದರು. ಇಂಗ್ಲೆಂಡ್‌ನ ಒಟ್ಟೂ ಜನಸಂಖ್ಯೆಯಲ್ಲಿ 15 ಲಕ್ಷದಷ್ಟು ಅನಿವಾಸಿ ಭಾರತೀಯರ ಓಟುಗಳಿದ್ದು ಒಟ್ಟಾರೆ ಜನಸಂಖ್ಯೆಯ ಶೇಕಡ 2.5ರಷ್ಟಿದೆ. ದೇಶದ ಜಿಡಿಪಿ 2.5ರಷ್ಟಿರುವ ಅನಿವಾಸಿ ಭಾರತೀಯರು ಶೇಕಡ 6ರಷ್ಟು ಕೊಡುಗೆ ನೀಡುತ್ತಾರೆ. ಒಂದರ್ಥದಲ್ಲಿ ಭಾರತೀಯರ ಮತಗಳು ಪ್ರಧಾನಿ ಹುದ್ದೆ ರೇಸಿಗೆ ಅತ್ಯಮೂಲ್ಯವಾಗಿವೆ.
ದಿ ಗ್ರಾಂಟ್ ತಾರ್ನ್ಟಾನ್ ವಾರ್ಷಿಕ ಲೆಕ್ಕಾಚಾರದ ಪ್ರಕಾರ 2021ರ ನಂತರ ಇಂಗ್ಲೆಂಡಿನಲ್ಲಿ ಭಾರತೀಯರ ಮಾಲೀಕತ್ವದ ಸಂಸ್ಥೆಗಳು 805ರಿಂದ 900ಕ್ಕೆ ಏರಿಕೆಯಾಗಿವೆ. ಜತೆಗೆ 50.8 ಬಿಲಿಯನ್ ಪೌಂಡ್‌ನಿಂದ 54.4 ಬಿಲಿಯನ್ ಪೌಂಡ್‌ನಷ್ಟು ಆದಾಯ ಹೆಚ್ಚಳವಾಗಿದೆ ಎಂದು ವರದಿ ಮಾಡಿತ್ತು. ರಿಷಿ ಸುನಕ್ ಭಾರತೀಯರ ಪ್ರತಿನಿಧಿಯಾಗಿದ್ದು, ಇದೀಗ ಅನಿವಾಸಿ ಭಾರತೀಯರ ಮತ ಕ್ರೋಢೀಕರಣಕ್ಕಿಳಿದಂತೆ ಭಾಸವಾಗುತ್ತಿದೆ. ಇನ್ನೂ ಕೆಲ ವಾರಗಳಲ್ಲಿ ಪ್ರಧಾನಿ ಚುನಾವಣೆ ಅಂತಿಮ ಘಟ್ಟಕ್ಕೆ ಕಾಲಿಡಲಿದ್ದು ಮುಂದಿನ ಪ್ರಧಾನಿಯಾಗಿ ರಿಷಿ ಸುನಕ್ ಅಥವಾ ಲಿಜ್ ಟ್ರಸ್ ಆಯ್ಕೆಯಾಗಲಿದ್ದಾರೆ.
ಯಾರಿವರು ರಿಷಿ ಸುನಾಕ್: ವೆಸ್ಟ್ ಮಿನಿಸ್ಟರ್‌ನ ಅತ್ಯಂತ ಪ್ರಬಲ ನಾಯಕ ರಿಷಿ ಸುನಾಕ್. ಇಂಗ್ಲೆಂಡ್ ಕೋವಿಡ್ ಬೆಂಬಲಿತ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟದ ಬೆಂಬಲಿಗರಾಗಿದ್ದರು. ಬೊರಿಸ್ ಜಾನ್ಸನ್ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಇವರ ಹೆಸರು ಪೇ ಗೇಟ್ ಹಗರಣದಲ್ಲಿ ಜಾನ್ಸನ್ ಅವರೊಂದಿಗೆ ಕೇಳಿ ಬಂದಿತ್ತು. ಇದರ ಬೆನ್ನಲ್ಲಿಯೇ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು.
42 ವರ್ಷದ ರಿಷಿ ಸುನಕ್ ಅವರನ್ನು ಬೋರಿಸ್ ಜಾನ್ಸನ್ 2020ರ ಫೆಬ್ರವರಿಯಲ್ಲಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದರು. ಖಜಾನೆಯ ಚಾನ್ಸಲರ್ ಆಗಿ ನೇಮಕವಾಗಿದ್ದ ಇವರು ಮೊದಲ ಬಾರಿಗೆ ಪೂರ್ಣ ಕ್ಯಾಬಿನೆಟ್ ಸ್ಥಾನವನ್ನು ಪಡೆದಿದ್ದರು.
ಇದನ್ನೂ ಓದಿ: ಬ್ರಿಟನ್ ಸಚಿವ, ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ
ಮಾಜಿ ರಕ್ಷಣಾ ಕಾರ್ಯದರ್ಶಿ ಪೆನ್ನಿ ಮೊರ್ಡಾಂಟ್ ಜೊತೆಗೆ ಮುಂದಿನ ಪ್ರಧಾನಿಯಾಗಿ ರಿಷಿ ಅನರನ್ನು ನೆಚ್ಚಿನವರಾಗಿ ಗಮನಿಸಿದ್ದಾರೆ. ವ್ಯಾಪಾರಗಳು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹತ್ತಾರು ಶತಕೋಟಿ ಪೌಂಡ್‌ಗಳ ಬೃಹತ್ ಪ್ಯಾಕೇಜ್ ಅನ್ನು ರೂಪಿಸಿದ ನಂತರ ಅವರು ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಜನಪ್ರಿಯರಾದರು. "ಡಿಶಿ" ರಿಷಿ ಎಂಬ ಅಡ್ಡಹೆಸರನ್ನು ಇವರು ಹೊಂದಿದ್ದು, ಪತ್ನಿ ಅಕ್ಷತಾ ಮೂರ್ತಿ ವಿಚಾರವಾಗಿ ಎದುರಾದ ತೆರಿಗೆ ಸಂಬಂಧಿತ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂಜರಿದಿದ್ದರು. ಕೋವಿಡ್ ಲಾಕ್‌ಡೌನ್ ಅನ್ನು ಧಿಕ್ಕರಿಸಿ ಡೌನಿಂಗ್ ಸ್ಟ್ರೀಟ್ ಕೂಟದಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ದಂಡವನ್ನೂ ವಿಧಿಸಲಾಗಿತ್ತು.
ಇದನ್ನೂ ಓದಿ: ಅಕ್ಷತಾ ಮೂರ್ತಿ ತೆರಿಗೆ ವಿನಾಯಿತಿ ವಿವಾದ: ಸ್ವತಂತ್ರ ತನಿಖೆ ನಡೆಸಲು ಪತಿ ರಿಷಿ ಆಗ್ರಹ
ಪಂಜಾಬ್ ಮೂಲದ ರಿಷಿ ಸುನಾಕ್: ರಿಷಿ ಸುನಾಕ್ ಅವರ ಕುಟುಂಬ ಪಂಜಾಬ್ ಮೂಲದವರು. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು.