ಪಾಕಿಸ್ತಾನಕ್ಕೆ ಸಿಕ್ಕಿದ್ದು ಯಾರ ಕಣ್ಣೀರ ಶಾಪ ಎನ್ನುವುದು ಗೊತ್ತಿಲ್ಲ. ಆದರೆ, ಈ ವರ್ಷ ಆಗಸ್ಟ್ ನಲ್ಲಿ ಸ್ವಾತಂತ್ರ್ಯ ಪಡೆದು 75 ವರ್ಷ ಪೂರ್ಣಗೊಳಿಸಲಿದೆ ಪಾಕಿಸ್ತಾನ. ಆದರೆ, ರಾಷ್ಟ್ರ ಹುಟ್ಟಿದಾಗಲಿಂದಲೂ ಆಂತರಿಕ ಕಲಹ, ರಾಜಕೀಯ ಅಸ್ತಿರತೆಯೇ ಇದರ ಭಾಗವಾಗಿ ಹೋಗಿದೆ. ಇಮ್ರಾನ್ ಖಾನ್ ಸರ್ಕಾರ ಉರುಳುವುದರೊಂದಿಗೆ ಈವರೆಗೂ ಪಾಕಿಸ್ತಾನದಲ್ಲಿ ಪೂರ್ಣ ಐದು ವರ್ಷ ಪ್ರಧಾನಿಯಾದ ಉದಾಹರಣೆ ಇಲ್ಲ. 

ಬೆಂಗಳೂರು (ಏ.3): ಭಾರತದಂತೆಯೇ ಪಾಕಿಸ್ತಾನ ಕೂಡ ಈ ಬಾರಿಯ ಆಗಸ್ಟ್ ನಲ್ಲಿ ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲಿದೆ. ಆದರೆ, ಸ್ವಾತಂತ್ರ್ಯ ಪಡೆದ ದಿನದಿಂದಲೂ ಆಂತರಿಕ ಕಲಹ, ರಾಜಕೀಯ ಅಸ್ತಿರತೆಯೇ ಶಾಪಗ್ರಸ್ತ ನಾಡಿನ ಭಾಗವಾಗಿ ಹೋಗಿದೆ. ಒಂದೆಡೆ ಭಾರತಕ್ಕೆ ನರೇಂದ್ರ ಮೋದಿ ದೇಶದ 14ನೇ ಪ್ರಧಾನಿಯಾಗಿದ್ದರೆ, ಭಾರತದ ಜೊತೆಯಲ್ಲೇ ಸ್ವಾತಂತ್ರ್ಯ ಪಡೆದ ದೇಶವಾಗಿದ್ದರೂ ಪಾಕಿಸ್ತಾನ ಈವರೆಗೂ 22 ಪ್ರಧಾನಿಗಳನ್ನು ಕಂಡಿದೆ ಎಂದರೆ ಅಚ್ಚರಿಯಾಗದೇ ಇರದು.

1947 ರಿಂದ ಪ್ರತಿಯೊಬ್ಬ ಪ್ರಧಾನಿಯೂ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಅನುಮತಿ ಸಿಕ್ಕಿದ್ದರೆ, ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ 15 ನೇ ಪ್ರಧಾನ ಮಂತ್ರಿ ಆಗಿರುತ್ತಿದ್ದರೆ, ಆದರೆ, ಪಾಕಿಸ್ತಾನದ ಹಣೆಬರಹ ಏನೆಂದರೆ, ಇಮ್ರಾನ್ ಖಾನ್ ದೇಶದ 22 ನೇ ಪ್ರಧಾನಿಯಾಗಿದ್ದಾರೆ. ಶೀಘ್ರದಲ್ಲೇ 23ನೇ ಪ್ರಧಾನಿಯೂ ಪಾಕಿಸ್ತಾನಕ್ಕೆ ಸಿಗಲಿದ್ದಾರೆ. ದೇಶದ ಇತಿಹಾಸದಲ್ಲಿ ಯಾವೊಬ್ಬ ಪ್ರಧಾನಿಯೂ ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿಲ್ಲ. ಪಾಕಿಸ್ತಾನದಲ್ಲಿ ಸರ್ಕಾರದ ಹಿಂದಿನ ಎಲ್ಲಾ ಮುಖ್ಯಸ್ಥರನ್ನು ಹೇಗೆ ಅಧಿಕಾರದಿಂದ ಹೊರಹಾಕಲಾಯಿತು ಎನ್ನುವುದರ ನೋಟ.

ಲಿಯಾಖತ್ ಅಲಿ ಖಾನ್ (4 ವರ್ಷ): ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ (Liaquat Ali Khan)ಅವರು ಆಗಸ್ಟ್ 15, 1947 ರಂದು ಚುನಾಯಿತರಾದರು. ಅವರು ರಾವಲ್ಪಿಂಡಿಯಲ್ಲಿ ಅಕ್ಟೋಬರ್ 16, 1951 ರಂದು ಹತ್ಯೆಯಾಗುವ ಮೊದಲು ಕೇವಲ ನಾಲ್ಕು ವರ್ಷ ಪ್ರಧಾನಿಯಾಗಿದ್ದರು.

ಖವಾಜಾ ನಜಿಮುದ್ದೀನ್ (2ಕ್ಕಿಂತ ಕಡಿಮೆ ವರ್ಷ): ಲಿಯಾಖತ್ ಖಾನ್ ಹತ್ಯೆ ಆದ ಒಂದು ದಿನದ ನಂತರ 1951ರ ಅಕ್ಟೋಬರ್ 17 ರಂದು ಖವಾಜಾ ನಾಜಿಮುದ್ದೀನ್ (Khawaja Nazimuddin) ಅಧಿಕಾರ ವಹಿಸಿಕೊಂಡರು. ಧರ್ಮದ ಕುರಿತಾಗಿ ರಾಜಕೀಯ ಪಕ್ಷಗಳ ಗಲಭೆಯಿಂದಾಗಿ, ಆಗಿನ ಗವರ್ನರ್ ಜನರಲ್ ಗುಲಾಮ್ ಮುಹಮ್ಮದ್ ಅವರು ನಾಜಿಮುದ್ದೀನ್ ಅವರನ್ನು ಕೆಳಗಿಳಿಯುವಂತೆ ಹೇಳಿದರೆ ಇದಕ್ಕೆ ಖವಾಜಾ ನಿರಾಕರಿಸಿದ್ದರು. 1953ರ ಏಪ್ರಿಲ್ 17 ರಂದು ಗವರ್ನರ್ ಜನರಲ್ ಖವಾಜ ಅವರನ್ನು ಹುದ್ದೆಯಿಂದ ಕಿತ್ತುಹಾಕಿದರು.

ಮುಹಮ್ಮದ್ ಅಲಿ ಬೋಗ್ರಾ (2 ವರ್ಷ): ಮುಹಮ್ಮದ್ ಅಲಿ ಬೋಗ್ರಾ (Muhammad Ali Bogra ) ಅವರನ್ನು 1953 ಏಪ್ರಿಲ್ 17 ರಂದು ಗವರ್ನರ್-ಜನರಲ್ ಅವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಪ್ರಾದೇಶಿಕ ಸಮಸ್ಯೆಗಳ ಸಂಘರ್ಷ ಮತ್ತು ಬಹುಮತದ ಕೊರತೆಯಿಂದಾಗಿ ಅವರನ್ನು ಹಂಗಾಮಿ ಗವರ್ನರ್-ಜನರಲ್ ಇಸ್ಕಂದರ್ ಮಿರ್ಜಾ ಅವರು 1955ರ ಆಗಸ್ಟ್ 12 ರಂದು ಕಿತ್ತುಹಾಕಿದರು.

ಚೌಧರಿ ಮುಹಮ್ಮದ್ ಅಲಿ (1 ವರ್ಷ): ಚೌಧರಿ ಮುಹಮ್ಮದ್ ಅಲಿ (Chaudhry Muhammad Ali ) ಅವರನ್ನು 1955 ಆಗಸ್ಟ್ 12 ರಂದು ಮಿರ್ಜಾ ಅವರು ಪಾಕಿಸ್ತಾನದ 4 ನೇ ಪ್ರಧಾನ ಮಂತ್ರಿಯಾಗಿ ಘೋಷಿಸಲಾಯಿತು. 1956 ರ ಸಂವಿಧಾನದ ಪ್ರವರ್ತಕರಾಗಿ ಅಲಿ ಇಂದಿಗೂ ಪ್ರಸಿದ್ಧರಾಗಿದ್ದಾರೆ. 1956 ಸೆಪ್ಟೆಂಬರ್ 12 ರಂದು, ಅಲಿ ತಮ್ಮ ಪಕ್ಷದ ಸದಸ್ಯರೊಂದಿಗಿನ ಘರ್ಷಣೆಯಿಂದಾಗಿ ಮತ್ತು ಅಯೂಬ್ ಖಾನ್ ಅವರ ಸರ್ವಾಧಿಕಾರದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರಿಂದ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿದರು.

ಹುಸೇನ್ ಶಹೀದ್ ಸುಹ್ರವರ್ದಿ (1 ವರ್ಷ): ಪ್ರಗತಿಪರ ಹುಸೇನ್ ಶಹೀದ್ ಸುಹ್ರವರ್ದಿ (Hussain Shaheed Suhrawardy) ಅವರು 1956 ಸೆಪ್ಟೆಂಬರ್ 12 ರಂದು ಪ್ರಧಾನಿಯಾದರು. ಅವರ ಪಕ್ಷ ಅವಾಮಿ ಲೀಗ್ 1954 ರ ಸಂವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಜಯ ಕಂಡಿತ್ತು. ಆದರೆ ಇಸ್ಕಂದರ್ ಮಿರ್ಜಾ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು 1957 ಅಕ್ಟೋಬರ್ 17 ರಂದು ಹುದ್ದೆಯಿಂದ ಕೆಳಗಿಳಿದರು.

ಇಬ್ರಾಹಿಂ ಇಸ್ಮಾಯಿಲ್ ಚುಂದ್ರಿಗಾರ್ (2 ತಿಂಗಳು): ಇಬ್ರಾಹಿಂ ಇಸ್ಮಾಯಿಲ್ ಚುಂಡ್ರಿಗಾರ್ (Ibrahim Ismail Chundrigar) ಅವರನ್ನು 1957 ಅಕ್ಟೋಬರ್ 17 ರಂದು 6 ನೇ ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತು. ಅವರ ಆಳ್ವಿಕೆಯು ಕೇವಲ ಎರಡು ತಿಂಗಳು ಕಾಲ ನಡೆಯಿತು.

ಫಿರೋಜ್ ಖಾನ್ ನೂನ್ ( ಒಂದು ವರ್ಷಕ್ಕಿಂತ ಕಡಿಮೆ): ಫಿರೋಜ್ ಖಾನ್ ನೂನ್ (Feroz Khan Noon) ಅವರನ್ನು 1957 ಡಿಸೆಂಬರ್ 17 ರಂದು ಇಸ್ಕಂದರ್ ಮಿರ್ಜಾ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿಯಾದರು. 1958 ಅಕ್ಟೋಬರ್ 7ರಂದು ಜನರಲ್ ಅಯೂಬ್ ಖಾನ್ ಸಮರ ಕಾನೂನನ್ನು ಜಾರಿಗೊಳಿಸಿದಾಗ ನೂನ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಯಿತು.

ನೂರುಲ್ ಅಮೀನ್ ( 13 ದಿನಗಳು): 13 ವರ್ಷಗಳ ಸಮರ ಕಾನೂನಿನ ನಂತರ, ಸರ್ವಾಧಿಕಾರಿ ಯಾಹ್ಯಾ ಖಾನ್ ಅವರ ಆಡಳಿತದಲ್ಲಿ ನೂರುಲ್ ಅಮೀನ್ (Nurul Amin) ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲಾಯಿತು. ಅಧಿಕಾರದಲ್ಲಿದ್ದ 13 ದಿನಗಳಲ್ಲಿ, 1971 ಡಿಸೆಂಬರ್ 20ರಂದು, ಅಮೀನ್ ಅವರನ್ನು ಪದಚ್ಯುತ ಮಾಡಲಾಯಿತು.

ಜುಲ್ಫಿಕರ್ ಅಲಿ ಭುಟ್ಟೋ: ಜುಲ್ಫಿಕರ್ ಅಲಿ ಭುಟ್ಟೊ (Zulfiqar Ali Bhutto ) ಅವರು 1973 ಆಗಸ್ಟ್ 14 ರಂದು ಪ್ರಧಾನ ಮಂತ್ರಿಯಾದರು. 1977 ರಲ್ಲಿ ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು, ಆದರೆ ಮಿಲಿಟರಿ ಸರ್ವಾಧಿಕಾರಿ ಜನರಲ್ ಮುಹಮ್ಮದ್ ಜಿಯಾ ಉಲ್ ಹಕ್ ಅವರಿಂದ ಜೈಲುವಾಸ ಕಂಡಿದ್ದ ಭುಟ್ಟೋ ಅವರನ್ನು 1979 ರಲ್ಲಿ ಗಲ್ಲಿಗೇರಿಸಲಾಯಿತು.

ಮುಹಮ್ಮದ್ ಖಾನ್ ಜುನೆಜೊ (3 ವರ್ಷ): ಮುಹಮ್ಮದ್ ಖಾನ್ ಜುನೆಜೊ (Muhammad Khan Junejo ) 1985 ಮಾರ್ಚ್ 23 ರಂದು ಮಿಲಿಟರಿ ಸರ್ವಾಧಿಕಾರದ ಆಡಳಿತದಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಆದಾಗ್ಯೂ, 1988 ಮೇ 29 ರಂದು ಜುನೆಜೊ ಸರ್ಕಾರವನ್ನು ವಜಾಗೊಳಿಸಲಾಯಿತು.

ಬೆನಜೀರ್ ಭುಟ್ಟೊ (2 ವರ್ಷ): ಜನರಲ್ ಜಿಯಾ-ಉಲ್-ಹಕ್ ಅವರ ವರ್ಷಗಳ ಮಿಲಿಟರಿ ಆಡಳಿತದ ನಂತರ ಬೆನಜೀರ್ ಭುಟ್ಟೊ(Benazir Bhutto) ಅವರು 1988 ರಲ್ಲಿ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಆಕೆಯ ಪಕ್ಷವು 1989 ರಲ್ಲಿ ಇಂಪೀಚ್ ಮೆಂಟ್ ನಿಂದಲೂ ಬಚಾವ್ ಆಗಿತ್ತು. ಆದಾಗ್ಯೂ, ಆಕೆಯ ಸರ್ಕಾರವು ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು 1990 ಆಗಸ್ಟ್ 6 ರಂದು ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ಇವರನ್ನು ವಜಾ ಮಾಡಿದರು.

ನವಾಜ್ ಷರೀಫ್ (3 ವರ್ಷಕ್ಕಿಂತ ಕಡಿಮೆ): ನವಾಜ್ ಷರೀಫ್ (Nawaz Sharif) 1990 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು, ಆದರೆ ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ಮತ್ತೆ 1993 ರಲ್ಲಿ ಚುನಾಯಿತ ಸರ್ಕಾರವನ್ನು ವಜಾ ಮಾಡಿದರು. ನಂತರ ಸುಪ್ರೀಂ ಕೋರ್ಟ್ ಷರೀಫ್ ಅವರ ಸರ್ಕಾರವನ್ನು ಪುನಃಸ್ಥಾಪಿಸಿತು, ಆದಾಗ್ಯೂ, ಸೇನೆಯ ಆಗಿನ ಮುಖ್ಯಸ್ಥ ವಹೀದ್ ಕಾಕರ್ ಅವರು 1993 ಜುಲೈ 18 ರಂದು ನವಾಜ್ ಷರೀಫ್ ಮತ್ತು ಗುಲಾಮ್ ಇಶಾಕ್ ಖಾನ್ ಅವರಿಗೆ ರಾಜೀನಾಮೆ ನೀಡುವಂತರ ಒತ್ತಾಯಿಸಿತು.

ಬೆನಜೀರ್ ಭುಟ್ಟೊ (3 ವರ್ಷ): 1993 ರಲ್ಲಿ ಬೇನಜೀರ್ ಭುಟ್ಟೊ ಮತ್ತೊಮ್ಮೆ ಪ್ರಧಾನಿಯಾದರು ಆದರೆ ಅಧ್ಯಕ್ಷ ಫಾರೂಕ್ ಲೆಘರಿ ನವೆಂಬರ್ 1996 ರಲ್ಲಿ ಅವರ ಸರ್ಕಾರವನ್ನು ವಜಾಗೊಳಿಸಿದ್ದರಿಂದ ಅವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ನವಾಜ್ ಷರೀಫ್ (2 ವರ್ಷ ): ನವಾಜ್ ಷರೀಫ್ 1997 ರ ಚುನಾವಣೆಯ ನಂತರ ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿದರು ಆದರೆ ಅವರ ಹಿಂದಿನ ನಾಯಕರಂತೆ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 1999 ಅಕ್ಟೋಬರ್ 12 ರಂದು, ಜನರಲ್ ಪರ್ವೇಜ್ ಮುಷರಫ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ತೆಗೆದುಹಾಕಿದರು.

ಮೀರ್ ಜಫರುಲ್ಲಾ ಖಾನ್ ಜಮಾಲಿ (19 ತಿಂಗಳು): ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೇತೃತ್ವದಲ್ಲಿ ಜಫರುಲ್ಲಾ ಖಾನ್ ಜಮಾಲಿ (Zafarullah Khan Jamali) ಮೊದಲ ಪ್ರಧಾನಿಯಾಗಿದ್ದರು. ಆದರೆ ಮುಷರಫ್ ಅವರನ್ನು ವಜಾಗೊಳಿಸುವ ಮೊದಲು ಅವರು ಕೇವಲ 19 ತಿಂಗಳು ಮಾತ್ರ ಸೇವೆ ಸಲ್ಲಿಸಿದರು.

ಚೌಧರಿ ಶುಜಾತ್ (2 ತಿಂಗಳು): ಚೌಧರಿ ಶುಜಾತ್ ( Chaudhry Shujaat) ಅವರು 2004 ಜೂನ್ 30 ರಂದು ಸಂಸತ್ತಿನ ಚುನಾವಣೆಯ ಮೂಲಕ ಪ್ರಧಾನಿಯಾದರು. ಶೌಕತ್ ಅಜೀಜ್ ಪ್ರಧಾನಿಯಾಗಿ ಆಯ್ಕೆಯಾಗುವವರೆಗೆ ಮಾತ್ರ ಶುಜಾತ್ ಸೇವೆ ಸಲ್ಲಿಸಿದರು.

ಶೌಕತ್ ಅಜೀಜ್ (3 ವರ್ಷ): ಶೌಕತ್ ಅಜೀಜ್ (Shaukat Aziz) ಅವರನ್ನು 2004 ಆಗಸ್ಟ್ 28 ರಂದು ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತು. ಅವರು 2007 ನವೆಂಬರ್ 15 ರಂದು ತಮ್ಮ ಸಂಸತ್ತಿನ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅಧಿಕಾರವನ್ನು ತೊರೆದರು.

ಯೂಸುಫ್ ರಾಜಾ ಗಿಲಾನಿ (4 ವರ್ಷ): 2008 ರ ಸಾರ್ವತ್ರಿಕ ಚುನಾವಣೆಯ ನಂತರ ಯೂಸುಫ್ ರಜಾ ಗಿಲಾನಿ (Yusuf Raza Gilani ) ದೇಶದ 18 ನೇ ಪ್ರಧಾನ ಮಂತ್ರಿಯಾದರು, ಇದರಲ್ಲಿ ಅವರ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP), ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಪಾಲು ಸ್ಥಾನಗಳನ್ನು ಪಡೆದುಕೊಂಡಿತು. 2012 ರಲ್ಲಿ ಸುಪ್ರೀಂ ಕೋರ್ಟ್ ನಿಂದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದಾಗ ಅವರನ್ನು ಅಧಿಕಾರದಿಂದ ಹೊರಹಾಕಲಾಯಿತು.

Pakistan ರಾಷ್ಟ್ರೀಯ ಅಸ್ಲೆಂಬ್ಲಿ ವಿಸರ್ಜನೆ, ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಪಾಕ್ ಸುಪ್ರೀಂ ಕೋರ್ಟ್!

ರಾಜಾ ಪರ್ವೈಜ್ ಅಶ್ರಫ್ (1 ವರ್ಷಕ್ಕಿಂತ ಕಡಿಮೆ): ಪಿಪಿಪಿ ಸರ್ಕಾರದ ಉಳಿದ ಅವಧಿಯನ್ನು ಪೂರ್ಣಗೊಳಿಸಲು ರಾಜಾ ಪರ್ವೈಜ್ ಅಶ್ರಫ್ (Raja Pervaiz Ashraf) ಅವರು ಗಿಲಾನಿಯಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು 2012 ಜೂನ್ 22 ರಿಂದ 2013 ಮಾರ್ಚ್ 24 ರವರೆಗೆ ಅಧಿಕಾರದಲ್ಲಿದ್ದರು.

ನವಾಜ್ ಷರೀಫ್ (4 ವರ್ಷ): ಜೂನ್ 2013 ರಲ್ಲಿ ನವಾಜ್ ಷರೀಫ್ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪಾಕಿಸ್ತಾನದ ಎಲ್ಲಾ ಹಿಂದಿನ ಪ್ರಧಾನ ಮಂತ್ರಿಗಳಿಗೆ ಹೋಲಿಸಿದರೆ ಅವರು ಇಲ್ಲಿಯವರೆಗೆ ಸುದೀರ್ಘ ಅವಧಿಯ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ. 2017ರ ಜುಲೈ 28 ರಂದು ಸುಪ್ರೀಂ ಕೋರ್ಟ್‌ನಿಂದ ಇಂಪೀಚ್ ಮೆಂಟ್ ಗೆ ಒಳಗಾಗುವ ಮೊದಲು ಅವರು ನಾಲ್ಕು ವರ್ಷ ಮತ್ತು 53 ದಿನಗಳ ಕಾಲ ಅಧಿಕಾರದಲ್ಲಿದ್ದರು.

Pakistan ಗೂಗ್ಲಿ ಎಸೆದ ಇಮ್ರಾನ್ ಖಾನ್? ಮನವಿ ಮಾಡಿದ ಅರ್ಧಗಂಟೆಯಲ್ಲೇ ಪಾಕ್ ಶಾಸನಸಭೆ ವಿಸರ್ಜನೆ!

ಶಾಹಿದ್ ಖಾಕನ್ ಅಬ್ಬಾಸಿ (ಒಂದು ವರ್ಷಕ್ಕಿಂತ ಕಡಿಮೆ): ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ವಜಾಗೊಳಿಸಿದ ನಂತರ ಶಾಹಿದ್ ಖಾಕನ್ ಅಬ್ಬಾಸಿ (Shahid Khaqan Abbasi) ಅವರನ್ನು 21 ನೇ ಪ್ರಧಾನಿಯಾಗಿ ಏರಿಸಲಾಯಿತು. ಅವರು ಆಗಸ್ಟ್ 2017 ರಲ್ಲಿ ಪದವಿಗೆ ಏರಿದ್ದರು. ಹೊಸ ಚುನಾವಣೆಗಳನ್ನು ನಡೆಸಲು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದರಿಂದ ಅವರ ಅವಧಿಯು 2018ರ ಮೇ 31 ರಂದು ಮುಕ್ತಾಯಗೊಂಡಿತು.

ಇಮ್ರಾನ್ ಖಾನ್ (3 ವರ್ಷ 228 ದಿನ): ಪ್ರಧಾನಿ ಇಮ್ರಾನ್ ಖಾನ್ ( Imran Khan) ಅವರು 2018ರ ಆಗಸ್ಟ್ 18 ರಂದು ಆಯ್ಕೆಯಾಗಿದ್ದರು. 3 ವರ್ಷ 228 ದಿನಗಳ ಕಾಲ ಪ್ರಧಾನಿಯಾಗಿದ್ದ ಇವರ ಅವಧಿ 2023 ರಲ್ಲಿ ಕೊನೆಗೊಳ್ಳಬೇಕಿತ್ತು.