Asianet Suvarna News Asianet Suvarna News

ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘಕ್ಕೆ ಸುವರ್ಣ ಸಂಭ್ರಮ

'ಎಲ್ಲಾದರು ಇರು, ಎಂತಾದರು ಇರು, ‘ಎಂದೆಂದಿಗೂ ನೀ ಕನ್ನಡವಾಗಿರು’ ಎಂದ ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕನ್ನಡತನವನ್ನು ಎಲ್ಲೆಡೆ ಪಸರಿಸುತ್ತಿರುವ ಈ ಸಂಘಕ್ಕೆ ಸುವರ್ಣ ಮಹೋತ್ಸವ. 

Karnataka cultural association of south California celebrates golden jubilee
Author
First Published Jun 11, 2023, 12:28 PM IST

- ಬಿ.ಆರ್. ಲಕ್ಷ್ಮಣರಾವ್

ಎಂಬ ಕವಿನುಡಿಯನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿರುವ ಅಮೆರಿಕನ್ನಡಿಗರ ಕನ್ನಡ ಕೂಟಗಳಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘವೂ ಒಂದು. ಮೇ ತಿಂಗಳ 27-28ರಂದು ಎರಡು ದಿನಗಳ ಕಾಲ ಈ ಸಂಘವು ತನ್ನ ಐವತ್ತು ವರ್ಷಗಳ ಸಾರ್ಥಕ ಸೇವೆಯ 'ಸುವರ್ಣ ಸಂಭ್ರಮ'ವನ್ನು ಲಾಸ್ ಏಂಜಲೀಸ್ ಬಳಿಯ ಲಾಂಗ್ ಬೀಚ್ ನಗರದಲ್ಲಿ ಹಮ್ಮಿಕೊಂಡಿತ್ತು. ಇದರ ರೂವಾರಿಯಾದ ವಲ್ಲೀಶ್ ಶಾಸ್ತ್ರಿಯವರ ಆಹ್ವಾನದ ಮೇರೆಗೆ ಇದರ ಉದ್ಘಾಟಕರಲ್ಲಿ ಒಬ್ಬನಾಗಿ ಹಾಗೆಯೇ ಕವಿಗೋಷ್ಠಿಯ ಅಧ್ಯಕ್ಷನಾಗಿ ಭಾಗವಹಿಸುವ ಸುಯೋಗ ನನ್ನದಾಗಿತ್ತು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು ಪ್ರಧಾನವಾಗಿ ಈ ಪೀಳಿಗೆಯ ಅಮೆರಿಕದ ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ಉದ್ದೀಪಿಸುವ ಸದುದ್ದೇಶದಿಂದ ಏರ್ಪಡಿಸಿದ್ದ ಹಲವು ಸದಭಿರುಚಿಯ, ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುವ ಅವಕಾಶ ನನಗೆ ಒದಗಿಬಂದಿತು.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಲ್ಲಿ ಒಬ್ಬರೂ, ಅಪ್ಪಟ ಕನ್ನಡಿಗರೂ ಆದ ಜಸ್ಟಿಸ್ ಅರವಿಂದ ಕುಮಾರ್ ಭಾಗವಹಿಸಿದ್ದು ವಿಶೇಷವಾಗಿತ್ತು. ಅವರು ತಮ್ಮ ಚಿಕ್ಕಂದಿನಲ್ಲಿಯೇ ತಮ್ಮ ತಂದೆಯವರಿಂದ ಪಡೆದ ಕನ್ನಡ ದೀಕ್ಷೆಯನ್ನು ಸ್ಮರಿಸಿಕೊಂಡರು.‌ ಮತ್ತೊಬ್ಬ ಅತಿಥಿಯಾದ ಖ್ಯಾತ ಸಾಹಿತಿ, ಪತ್ರಕರ್ತ ವಿಶ್ವೇಶ್ವರ ಭಟ್ಟರು ಅಮೆರಿಕದ ಕನ್ನಡಿಗರನ್ನು ಕರ್ನಾಟಕದ ರಾಯಭಾರಿಗಳೆಂದು ಕರೆದು, ಸಂಘವನ್ನು ಕಟ್ಟಿ ಬೆಳೆಸಿದ ಮಾಜಿ ಅಧ್ಯಕ್ಷರನ್ನು ವೇದಿಕೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಸನ್ಮಾನಿಸಿದ್ದನ್ನು ಶ್ಲಾಘಿಸಿದರು. ‌‘ಜಗದ ಎಲ್ಲೆಡೆಗೂ ಹಬ್ಬಿದೆ ಇಂದು ಕನ್ನಡದ ಕರುಳಬಳ್ಳಿ’ ಎಂಬ ನನ್ನ ಕವನವೊಂದರ ಸಾಲನ್ನು ಉಲ್ಲೇಖಿಸಿ ಕನ್ನಡ ಎಂದೆಂದಿಗೂ ಉಳಿದು ಬೆಳೆಯುವ ಭಾಷೆಯೆಂಬ ನನ್ನ ಆಶಾವಾದವನ್ನು ನಾನು ವ್ಯಕ್ತಪಡಿಸಿದೆ.

​ನ​ಕಲಿ ಅಡ್ಮಿ​ಶ​ನ್‌: ಕೆನ​ಡಾ​ದಲ್ಲಿ 700 ಭಾರ​ತೀಯ ವಿದ್ಯಾ​ರ್ಥಿ​ಗಳು ಅತಂತ್ರ

ಖ್ಯಾತ ವೈಣಿಕರಾದ ಡಿ.ಬಾಲಕೃಷ್ಣ ಅವರ ವೀಣಾ ವಾದನ, ಮಕ್ಕಳು ಮತ್ತು ಯುವಜನರ ಗಾಯನ ಮತ್ತು ನರ್ತನ, ಇಂದಿಗೂ ಕುಗ್ಗದ ಪುರುಷಾಹಂಕಾರವನ್ನು ವಿಡಂಬಿಸುವ‌ ಅತ್ಯಂತ ಪ್ರಸ್ತುತವಾದ ‘ಪೂರ್ವಾಗ್ರಹ’ ಎಂಬ ನಾಟಕ - ಹೀಗೆ ಸೊಗಸಾದ ಹಲವಾರು ಕಾರ್ಯಕ್ರಮಗಳು‌ ಎರಡು ದಿನಗಳ ಕಾಲ ಎಡೆಬಿಡದೆ ಪ್ರೇಕ್ಷಕರನ್ನು ರಂಜಿಸಿದವು. ಆದರೆ ನನ್ನ ಮಟ್ಟಿಗೆ ಅತ್ಯಂತ ಅನನ್ಯ ಮತ್ತು ಸ್ಮರಣೀಯ ಕಾರ್ಯಕ್ರಮವೆಂದರೆ ಅದು 28ರ ಭಾನುವಾರ ಮಧ್ಯಾಹ್ನ ಹೊರಾಂಗಣ ವೇದಿಕೆಯಲ್ಲಿ ನಡೆದ ‘ಪರಂಪರೆಯ ಅರಿವು’ ಎಂಬ ವಿಶಿಷ್ಟ ಪ್ರಸ್ತುತಿ. ಕನ್ನಡ ನಾಡಿನ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಜನಪದ ನೃತ್ಯಗಳನ್ನು ಅಮೆರಿಕದ ಯುವ ಪೀಳಿಗೆಗೆ ಪರಿಚಯಿಸಲೆಂದು ಆಯೋಜಿಸಿದ್ದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಐತಿಹಾಸಿಕ ವ್ಯಕ್ತಿಗಳ ಮೆರವಣಿಗೆಯ ಜೊತೆಗೆ ವೀರಗಾಸೆ, ನಂದಿಕೋಲು, ಪೂಜಾ, ಹುಲಿವೇಷ, ಯಕ್ಷಗಾನ, ಗೊರವ‌ ಮುಂತಾದ ಜಾನಪದ ಕುಣಿತಗಳ ಪ್ರಾತ್ಯಕ್ಷಿಕೆ ನಡೆಸಿಕೊಡಲಾಯಿತು.‌ ವಿಶೇಷವೆಂದರೆ ಇವುಗಳನ್ನು ನಡೆಸಿಕೊಟ್ಟವರು ಕರ್ನಾಟಕದಿಂದ ಬಂದ ವೃತ್ತಿನಿರತ ತಂಡಗಳಲ್ಲ, ಸ್ವತಃ ಸ್ಥಳೀಯ ಅಮೆರಿಕನ್ನಡಿಗರು. ಈ ವಿಶಿಷ್ಟ ಕಾರ್ಯಕ್ರಮದ ಪರಿಕಲ್ಪನೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಸುಮಾರು ಎಪ್ಪತ್ತು ಮಂದಿ ಸ್ತ್ರೀ ಪುರುಷರಿಗೆ ತಿಂಗಳುಗಟ್ಟಲೆ ತರಬೇತಿ ಕೊಟ್ಟು, ಅತ್ಯಂತ ಯಶಸ್ವಿಯಾಗಿ ಇದನ್ನು ನಡೆಸಿಕೊಟ್ಟ ಶ್ರೇಯಸ್ಸು ಬಿ.ಎಲ್.ಮುರಳಿ, ಹೇಮಂತ ಕುಮಾರ್ ಮತ್ತು ಸುಷ್ಮಾ\I ಚಾರ್\I ತಂಡಕ್ಕೆ ಸಲ್ಲುತ್ತದೆ.

NRIಗಳಿಂದ ಪಡೆದ ಉಡುಗೊರೆಗಳಿಗೂ ಬೀಳುತ್ತೆ ತೆರಿಗೆ: ITRನಲ್ಲಿ ಉಲ್ಲೇಖಿಸಲು ಮರೆಯಬೇಡಿ!

ಕರ್ನಾಟಕದಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ ತಮ್ಮ ಕನ್ನಡತನದ ಬೇರಿಗೆ ಅರ್ಧ ಶತಕದಿಂದ ನಿರಂತರವಾಗಿ ನೀರೂಡಿಸಿ ಪೋಷಿಸಿಕೊಂಡು ಬರುತ್ತಿರುವ ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘದ ಈಗಿನ ಅಧ್ಯಕ್ಷರಾದ ಗುರುಪ್ರಸಾದ ರಾವ್ ಹಾಗೂ ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ಕನ್ನಡ ಪ್ರೀತಿ ಇದೇ ರೀತಿ ನಿತ್ಯ ಹರಿದ್ವರ್ಣವಾಗಿರಲಿ.

Follow Us:
Download App:
  • android
  • ios