NRIಗಳಿಂದ ಪಡೆದ ಉಡುಗೊರೆಗಳಿಗೂ ಬೀಳುತ್ತೆ ತೆರಿಗೆ: ITRನಲ್ಲಿ ಉಲ್ಲೇಖಿಸಲು ಮರೆಯಬೇಡಿ!
ವಿದೇಶದಲ್ಲಿರುವ ಸ್ನೇಹಿತರು,ಬಂಧುಗಳು ಉಡುಗೊರೆ ನೀಡಿದಾಗ ಖುಷಿಯಾಗೋದು ಸಹಜ. ಆದರೆ, ಈ ಉಡುಗೊರೆ ನಿಮ್ಮ ತೆರಿಗೆ ಭಾರವನ್ನು ಕೂಡ ಹೆಚ್ಚಿಸಬಲ್ಲದು ಎಂಬುದು ತಿಳಿದಿದೆಯಾ? ಎನ್ ಆರ್ ಐಗಳಿಂದ ಪಡೆದ ಉಡುಗೊರೆಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಎಲ್ಲ ಉಡುಗೊರೆಗಳಿಗೂ ಇದು ಅನ್ವಯಿಸೋದಿಲ್ಲ. ಹಾಗಾದ್ರೆ ದಾಯ ತೆರಿಗೆ ಕಾಯ್ದೆ ಅನ್ವಯ ಎನ್ ಆರ್ ಐಗಳಿಂದ ಪಡೆದ ಯಾವೆಲ್ಲ ಉಡುಗೊರೆಗಳು ತೆರಿಗೆ ವ್ಯಾಪ್ತಿಗೊಳಪಡುತ್ತವೆ? ಇಲ್ಲಿದೆ ಮಾಹಿತಿ.
Business Desk: ಪ್ರೀತಿಪಾತ್ರರು ಉಡುಗೊರೆ ನೀಡಿದಾಗ ಖುಷಿಯಾಗೋದು ಸಹಜ. ಆದರೆ, ಕೆಲವೊಮ್ಮೆ ಈ ಉಡುಗೊರೆಗಳು ನಮ್ಮ ಮೇಲಿನ ತೆರಿಗೆ ಹೊರೆಯನ್ನು ಹೆಚ್ಚಿಸಬಲ್ಲವು. ಹೌದು, ಅನಿವಾಸಿ ಭಾರತೀಯರಿಂದ (ಎನ್ ಆರ್ ಐ) ನೀವು ಸ್ವೀಕರಿಸಿದ ಉಡುಗೊರೆಗಳಿಗೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ. ಭಾರತೀಯ ತೆರಿಗೆದಾರನಿಗೆ ಎನ್ ಆರ್ ಐಗಳಿಂದ ಸ್ವೀಕರಿಸುವ ಉಡುಗೊರೆಗಳ ಮೇಲೆ ತೆರಿಗೆ ಅನ್ವಯಿಸುತ್ತದೆ. ತೆರಿಗೆ ಕಾನೂನುಗಳ ಅನ್ವಯ ಎನ್ ಆರ್ ಐಗಳಿಂದ ಪಡೆದ ಉಡುಗೊರೆಗಳು ತೆರಿಗೆ ವ್ಯಾಪ್ತಿಗೊಳಪಡುತ್ತವೆ. ಹಾಗಂತ ಎಲ್ಲ ಉಡುಗೊರೆಗಳಿಗೂ ತೆರಿಗೆ ಅನ್ವಯಿಸೋದಿಲ್ಲ. ಆಯಾ ಸಂದರ್ಭ, ಉಡುಗೊರೆ ಮೌಲ್ಯ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಆ ಉಡುಗೊರೆ ತೆರಿಗೆ ವ್ಯಾಪ್ತಿಗೊಳಪಡುತ್ತದೋ ಇಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಹೀಗಾಗ ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಇದರಿಂದ ತೆರಿಗೆ ಪಾವತಿ ಸಂದರ್ಭದಲ್ಲಿ ಗೊಂದಲಗಳು ಉಂಟಾಗೋದಿಲ್ಲ. ಹಾಗಾದ್ರೆ ಆದಾಯ ತೆರಿಗೆ ಕಾಯ್ದೆ ಅನ್ವಯ ಎನ್ ಆರ್ ಐಗಳಿಂದ ಪಡೆದ ಯಾವೆಲ್ಲ ಉಡುಗೊರೆಗಳು ತೆರಿಗೆ ವ್ಯಾಪ್ತಿಗೊಳಪಡುತ್ತವೆ. ಅದನ್ನು ನಿರ್ಧರಿಸೋದು ಹೇಗೆ? ಇಲ್ಲಿದೆ ಮಾಹಿತಿ.
ಎನ್ ಆರ್ ಐ ಅಂದ್ರೆ ಯಾರು?: ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಭಾರತದ ನಿವಾಸಿಯಾಗಿ ಅರ್ಹತೆ ಪಡೆದಿರುವ, ಆದರೆ ವಿದೇಶದಲ್ಲಿ ವಾಸಿಸುವ ವ್ಯಕ್ತಿಯನ್ನು ಎನ್ ಆರ್ ಐ ಎಂದು ಕರೆಯಲಾಗುತ್ತದೆ. ಎನ್ ಆರ್ ಐಗಳಿಗೆ ಕೆಲವು ಷರತ್ತುಗಳು ಕೂಡ ಇವೆ. ಈ ಷರತ್ತುಗಳಲ್ಲಿ ಉದ್ಯೋಗ ಅಥವಾ ಉದ್ಯಮ ಉದ್ದೇಶಗಳಿಗಾಗಿ ಭಾರತದಿಂದ ಹೊರಗೆ ವಾಸಿಸುವುದು ಅಥವಾ ಸಂಬಂಧಿತ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿ 182 ದಿನಗಳಿಗಿಂತ ಕಡಿಮೆ ಅವಧಿಗೆ ನೆಲೆಸಿರೋದು ಕೂಡ ಸೇರಿದೆ.
ಹೊಸ ತೆರಿಗೆ ವ್ಯವಸ್ಥೆ ಪ್ರಭಾವ, ಜನಪ್ರಿಯತೆ ಕಳೆದುಕೊಂಡ 5 ಉಳಿತಾಯ ಯೋಜನೆಗಳು!
ಯಾವುದಕ್ಕೆಲ್ಲ ತೆರಿಗೆ ಇದೆ?: ಭಾರತದಲ್ಲಿ ಉಡುಗೊರೆ ತೆರಿಗೆಯನ್ನು 1998ರಲ್ಲಿ ರದ್ದುಗೊಳಿಸಲಾಗಿತ್ತು. ಆದರೂ ಎನ್ ಆರ್ ಐಗಳಿಂದ ಸ್ವೀಕರಿಸಿದ ಉಡುಗೊರೆಗಳಿಗೆ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದರೆ, ಆರ್ಥಿಕ ಸಾಲಿನಲ್ಲಿ ಸ್ವೀಕರಿಸಿದ ಉಡುಗೊರೆಗಳ ಒಟ್ಟು ಮೌಲ್ಯ 50 ಸಾವಿರ ರೂ. ಮೀರಿದರೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇನ್ನು ಉಡುಗೊರೆಗಳ ಮೇಲಿನ ತೆರಿಗೆ ಅವುಗಳ ಸ್ವರೂಪ ಹಾಗೂ ಮೌಲ್ಯವನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಎನ್ ಆರ್ ಐ ಭಾರತೀಯ ನಿವಾಸಿಗೆ ನಗದು ಉಡುಗೊರೆ ನೀಡಿದರೆ ಸಂಪೂರ್ಣ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 56(2)(x) ಅಡಿಯಲ್ಲಿ 'ಇತರ ಮೂಲಗಳಿಂದ ಆದಾಯ' ಎಂಬ ಶೀರ್ಷಿಕೆಯಡಿ ತೆರಿಗೆ ವಿಧಿಸಲಾಗುತ್ತದೆ. ಉಡುಗೊರೆ ಸ್ವೀಕರಿಸಿದ ವ್ಯಕ್ತಿ ಉಡುಗೊರೆಯ ಮೊತ್ತವನ್ನು ಆತ ಅಥವಾ ಆಕೆಯ ಒಟ್ಟು ಆದಾಯದಲ್ಲಿ ಸೇರಿಸಬೇಕು ಹಾಗೂ ಅವರಿಗೆ ಅನ್ವಯಿಸುವ ಸ್ಲ್ಯಾಬ್ ದರದ ಆಧಾರದಲ್ಲಿ ತೆರಿಗೆ ಪಾವತಿಸಬೇಕು.
ಇನ್ನು ಆಭರಣಗಳು, ಕಲಾಕೃತಿಗಳು ಇತ್ಯಾದಿ ಸೇರಿದಂತೆ ಚರ ಹಾಗೂ ಸ್ಥಿರ ಆಸ್ತಿಗಳು ನಗದುರಹಿತ ಉಡುಗೊರೆಗಳಾಗಿದ್ದು, ಇವುಗಳಿಗೆ ಬೇರೆಯದ್ದೇ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇನ್ನು ಉಡುಗೊರೆ ಸ್ವೀಕರಿಸಿದ ವ್ಯಕ್ತಿ ಉಡುಗೊರೆಯ ನ್ಯಾಯಯುತ ಮಾರುಕಟ್ಟೆ ಮೌಲ್ಯ (FMV) ನಿರ್ಧರಿಸಬೇಕು. ಒಂದು ವೇಳೆ ಆರ್ಥಿಕ ಸಾಲಿನಲ್ಲಿ ಸ್ವೀಕರಿಸಿದ ಎಲ್ಲ ಉಡುಗೊರೆಗಳ ಎಫ್ ಎಂವಿ 50,000ರೂ. ಮೀರಿದ್ದರೆ, ಹೆಚ್ಚುವರಿ ಮೊತ್ತಕ್ಕೆ 'ಇತರ ಮೂಲಗಳಿಂದ ಆದಾಯ' ಶೀರ್ಷಿಕೆಯಡಿ ತೆರಿಗೆ ವಿಧಿಸಲಾಗುತ್ತದೆ.
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ: ಆನ್‌ಲೈನ್ ಮೂಲಕವೇ ಹೀಗೆ ಸಲ್ಲಿಸಿ..
ಯಾವುದಕ್ಕೆ ತೆರಿಗೆ ಇಲ್ಲ?: ಕೆಲವೊಂದು ಉಡುಗೊರೆಗಳು ಅವುಗಳ ಮೌಲ್ಯದ ಹೊರತಾಗಿ ಕೂಡ ತೆರಿಗೆಯಿಂದ ವಿನಾಯ್ತಿ ಪಡೆದಿವೆ. ಉದಾಹರಣೆಗೆ ಮದುವೆ ಸಂದರ್ಭದಲ್ಲಿ ಸ್ವೀಕರಿಸಿದ ಉಡುಗೊರೆ, ವಂಶಪಾರಂಪಾರ್ಯವಾಗಿ ಬಂದಂತಹ ಉಡುಗೊರೆ ಅಥವಾ ವಿಲ್ ಮೂಲಕ ದೊರೆತ ಉಡುಗೊರೆ. ಇವೆಲ್ಲವೂ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಇನ್ನು ಪೋಷಕರು, ಸಹೋದರ/ಸಹೋದರಿಯರು ಹಾಗೂ ಸಂಗಾತಿಯಿಂದ ಪಡೆದ ಉಡುಗೊರೆಗಳಿಗೆ ಅವುಗಳ ಮೌಲ್ಯದ ಹೊರತಾಗಿ ಕೂಡ ತೆರಿಗೆ ವಿಧಿಸಲಾಗುವುದಿಲ್ಲ. ಭಾರತದಲ್ಲಿ ತೆರಿಗೆದಾರ ಎನ್ ಆರ್ ಐಗಳಿಂದ 50,000ರೂ. ಮೌಲ್ಯ ಮೀರಿದ ಉಡುಗೊರೆಗಳನ್ನು ಸ್ವೀಕರಿಸಿದರೆ ಅದರ ಮಾಹಿತಿಯನ್ನು ಐಟಿಆರ್ ನಲ್ಲಿ ನಮೂದಿಸೋದು ಅಗತ್ಯ.