ಜಮೈಕಾದಲ್ಲಿ ವ್ಯಕ್ತಿಯೊಬ್ಬ 158 ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದಾನೆ. ಆದರೆ, ತನ್ನ ಕುಟುಂಬ ಮತ್ತು ಇತರರಿಂದ ತನ್ನನ್ನು ರಕ್ಷಿಸಿಕೊಳ್ಳಲು, ಗುರುತು ಸಿಗದಂತೆ ಭಯಾನಕ ಮುಖವಾಡ ಧರಿಸಿ ಹಣವನ್ನು ಸ್ವೀಕರಿಸಿದ್ದಾನೆ. ಆತನ ಈ ಬುದ್ಧಿವಂತಿಕೆಯ ನಡೆ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಹಣ ಕಂಡರೆ ಹೆಣನೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಕೆಲವರು ನಿಮ್ಮ ಕೈಯಲ್ಲಿ ಓಡಾಡುವ ಹಣ ನೋಡಿ ನಿಮಗೆ ಗೌರವ ನೀಡುತ್ತಾರೆ. ಮತ್ತೆ ಕೆಲವರು ನಿಮ್ಮ ಬಳಿ ಹಣ ಇದೆ ಎಂದು ಗೊತ್ತಾದರೆ ಇಲ್ಲದ ಕಷ್ಟ ಹೇಳಿ ಹಣ ಪೀಕಿಸುವುದಕ್ಕೆ ಬರುತ್ತಾರೆ. ಹಾಗೆಯೇ ಭಾರಿ ಮೊತ್ತದ ಹಣ ನಿಮ್ಮ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ. ಯಾರಾದರೂ ನಿಮ್ಮನ್ನು ಸಾಯಿಸಲು ಬಿಡಬಹುದು. ಅದರಲ್ಲೂ ಲಾಟರಿ ಹಣ ಗೆದ್ದವರ ಮೇಲೆ ಮನೆಯವರು ಊರವರು ಎಲ್ಲರ ಕಣ್ಣು ಇರುತ್ತದೆ. ಹೀಗಾಗಿ ಇಲ್ಲೊಬ್ಬ ಬುದ್ಧಿವಂತ ಏನು ಮಾಡಿದ್ದಾನೆ ನೋಡಿ. ತಾನು ಲಾಟರಿ ಹಣ ಗೆದ್ದಿರುವ ವಿಚಾರ ಸ್ವತಃ ತನ್ನ ಮನೆಯವರಿಗೂ ಗೊತ್ತಾಗಬಾರದು ಎಂದು ಹೇಳಿ ಸ್ವತಃ ಮಾಸ್ಕ್ ಧರಿಸಿ ಈ ಲಾಟರಿ ಹಣದ ಮೊತ್ತವನ್ನು ಆಯೋಜಕರಿಂದ ಪಡೆದಿದ್ದಾನೆ. ಈ ವಿಚಾರ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಅಮೆರಿಕಾದ ರಾಷ್ಟ್ರ ಜಮೈಕಾದಲ್ಲಿ. ಸಾಮಾನ್ಯವಾಗಿ ಲಾಟರಿ ಗೆದ್ದರೆ ಬಹುತೇಕರು ತನ್ನ ಕುಟುಂಬದವರಿಗೆ ಮಡದಿ ಮಕ್ಕಳಿಗೆ ಮೊದಲ ಆದ್ಯತೆ ನೀಡಿ ಹಣ ನೀಡುವುದು ಉಳಿದ ಹಣದಲ್ಲಿ ಏನಾದರೂ ದಾನ ಧರ್ಮ ಸಾಮಾಜಿಕ ಕಾರ್ಯ ಮೊದಲಾದ ಚಾರಿಟಿ ಕೆಲಸ ಮಾಡುವುದಕ್ಕೆ ಬಯಸುತ್ತಾರೆ. ಆದರೆ ಇಲ್ಲಿ ಈತ ಮಾತ್ರ ಸ್ವಂತ ಮನೆಯವರಿಗೂ ತಾನು ಲಾಟರಿ ಗೆದ್ದಿರುವ ವಿಚಾರ ತಿಳಿಯಬಾರದು ಎಂದು ಬಯಸಿದ್ದ. ಹೀಗಾಗಿಯೇ ಆತ, ಪಿಶಾಚಿಯಂತೆ ನೋಡಿದರೆ ಭಯಪಡುವ ಮುಖವಾಡ ಧರಿಸಿ ಈ ಲಾಟರಿ ಹಣವನ್ನು ಆಯೋಜಕರಿಂದ ಪಡೆದಿದ್ದಾನೆ.

ಅಂದಹಾಗೆ ಹೀಗೆ ಲಾಟರಿ ಹಣವನ್ನು ಮನೆಯವರಿಂದಲೂ ರಹಸ್ಯವಾಗಿ ಇಟ್ಟ ವ್ಯಕ್ತಿಯ ಹೆಸರು ಕ್ಯಾಂಪೆಬೆಲ್, ಈತ 158 ಮಿಲಿಯನ್ ಡಾಲರ್ ಮೊತ್ತದ ಲಾಟರಿ ಹಣವನ್ನು ತನ್ನದಾಗಿಸಿಕೊಂಡಿದ್ದಾನೆ. 158 ಮಿಲಿಯನ್ ಡಾಲರ್ ಎಂದರೆ ಸುಮಾರು 14,19,06,98,900 ಭಾರತೀಯ ರೂಪಾಯಿಗಳು, ಇಷ್ಟು ಮೊತ್ತದ ಹಣವನ್ನು ಗೆದ್ದರೂ ಆತ ಯಾರಿಗೂ ಸುಳಿವು ಬಿಟ್ಟು ಕೊಡಲು ಇಷ್ಟಪಡಲಿಲ್ಲ. ಹಾಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಗುರುತು ಸಿಗದಂತೆ ಮುಖವಾಡ ಧರಿಸಿ ಬಂದು ಈ ಮೊತ್ತವನ್ನು ಪಡೆದಿದ್ದಾನೆ.

ಇದನ್ನೂ ಓದಿ: ಕಣ್ಣಿಲ್ಲದ ತಾಯಿಗೆ ಕರುಳಬಳ್ಳಿಯ ಕಾವಲು: ಕಣ್ಣು ಕಾಣದೇ ಹೋದರು ತನ್ನ ಹೆಣ್ಣು ಮಕ್ಕಳ ಆರೈಕೆಯಿಂದ ಐದು ವರ್ಷಗಳ ಕಾಲ ಬದುಕಿದ ಸಿಂಹಿಣಿ

ಈ ಬಗ್ಗೆ ಮಾತನಾಡಿದ ಆತ ತಾನು ಸ್ಪೇನಿಷ್ ಕೋರ್ಟ್‌ ಹೊಟೇಲ್‌ನಲ್ಲಿ 54 ವಾರಗಳ ಕಾಯುವಿಕೆಯ ನಂತರ ಈ ಲಾಟರಿ ಮೊತ್ತವನ್ನು ಪಡೆದಿದ್ದೇನೆ. ಈ ವೇಳೆ ಎಲ್ಲಿ ಅಪರಾಧ ನಡೆಯುವುದೋ ಎಂದು ನಾನು ಭಯ, ಒತ್ತಡದಿಂದ ಬಳಲುತ್ತಿದ್ದೆ ಎಂದು ಆತ ಹೇಳಿದ್ದಾನೆ. ಜಮೈಕಾದಲ್ಲಿ ಹೀಗೆ ದುಬಾರಿ ಮೊತ್ತದ ಲಾಟರಿ ಹಣವನ್ನು ಗೆಲ್ಲುವವರು ಮುಖವಾಡದ ಮೂಲಕ ತಮ್ಮ ಗುರುತನ್ನು ಮರೆ ಮಾಚುವುದು ಸಾಮಾನ್ಯವಾಗಿದೆ. ಈ ವಿಚಾರ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಆತನ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತನ ಸ್ಥಿತಿ ಏನೆಂದು ನನಗೆ ಅರ್ಥವಾಗುತ್ತಿದೆ. ನಾನು ಲಾಟರಿ ಗೆದ್ದರೆ ಹಾಗೆಯೇ ಮಾಡುವೆ. ಇದು ಲಾಟರಿ ಗೆದ್ದವನೋರ್ವ ಮಾಡಿದ ಅತ್ಯಂತ ಬುದ್ಧಿವಂತಿಕೆಯ ನಡೆ ಎಂದು ನನಗೆ ಅನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಬರೀ ಕುಟುಂಬದವರು ಮಾತ್ರವಲ್ಲ, ತನ್ನ ಸ್ನೇಹಿತರಿಂದ ಪಾರಾಗುವುದಕ್ಕೂ ಇರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ದಿನವೇ ವರನಿಗೆ ಮುತ್ತು ಕೊಡಲು ಬಂದ ಮಾಜಿ ಗೆಳತಿ: ನೆಲಕ್ಕೆ ಕೆಡವಿ ಬಾರಿಸಿದ ವಧು: ವೀಡಿಯೋ