ಜೈಷ್-ಎ-ಮೊಹಮ್ಮದ್ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್, ಭಾರತದ ಮೇಲೆ 1000ಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ದಾಳಿಗೆ ಸಿದ್ಧರಿದ್ದಾರೆ ಎಂದು ಎಚ್ಚರಿಸಿರುವ ಆಡಿಯೋ ಬಹಿರಂಗವಾಗಿದೆ. ಆಪರೇಷನ್ ಸಿಂದೂರದ ನಂತರ ಈ ಬೆದರಿಕೆ ಬಂದಿದ್ದು, ಗಡಿಯಲ್ಲಿ ಡ್ರೋನ್‌ಗಳ ಹಾರಾಟವೂ ಕಂಡುಬಂದಿದೆ.
ಇಸ್ಲಾಮಾಬಾದ್: ‘ಭಾರತದ ವಿರುದ್ಧ ಒಬ್ಬರಲ್ಲ, ನೂರಲ್ಲ 1000ಕ್ಕೂ ಹೆಚ್ಚು ಸಂಖ್ಯೆಯ ಆತ್ಮಾಹುತಿ ದಾಳಿಕೋರರು ಸಿದ್ಧರಿದ್ದಾರೆ’ ಎಂದು ಪಾಕ್‌ನ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಎಚ್ಚರಿಕೆ ನೀಡಿದ್ದಾನೆ. ಈ ಎಚ್ಚರಿಕೆ ಕುರಿತ ಆತನ ಆಡಿಯೋವೊಂದು ಬಹಿರಂಗವಾಗಿದ್ದು, ಸಂಚಲನ ಮೂಡಿಸಿದೆ. ‘ದಾಳಿಕೋರರು ನನ್ನ ಅನುಮತಿಗಾಗಿ ಕಾಯುತ್ತಿದ್ದಾರೆ’ ಎಂದೂ ಹೇಳಿದ್ದಾನೆ.
ಆದರೆ ಜೈಷ್ ಎ ಮೊಹಮ್ಮದ್ ಉಗ್ರನ ವಿಡಿಯೋವಿನ ಸಮಯ ಮತ್ತು ಸನ್ನಿವೇಶದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
100 ಅಲ್ಲ, 1000ಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು
‘ಭಾರತದ ವಿರುದ್ಧ ದಾಳಿಗೆ ಒಂದಲ್ಲ, ಎರಡಲ್ಲ, 100 ಅಲ್ಲ, 1000ಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ಸಿದ್ಧರಿದ್ದಾರೆ. ನಿಜವಾದ ಸಂಖ್ಯೆಯನ್ನು ಹೇಳಿದರೆ, ನಾಳೆ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ’ ಎಂದಿದ್ದಾನೆ.
ಮಸೂದ್ ಅಜರ್ ಭಾರತಕ್ಕೆ ಬೇಕಿರುವ ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಕಳೆದ ವರ್ಷ ಭಾರತ ನಡೆಸಿದ ಆಪರೇಷನ್ ಸಿಂದೂರದ ವೇಳೆ ಜೈಷ್ ಸಂಘಟನೆಯ ಕೇಂದ್ರ ಕಚೇರಿ ಬಹಾವಲ್ಪುರದ ಮೇಲೆ ಭಾರತ ದಾಳಿ ಮಾಡಿತ್ತು. ಈ ವೇಳೆ ಮಸೂದ್‌ನ ಆಪ್ತ ವಲಯವೆಲ್ಲವೂ ಬಲಿಯಾಗಿತ್ತು. ಆದರೆ ಮಸೂದ್ ಮಾತ್ರ ಬಚಾವ್ ಆಗಿದ್ದ. ಈತ 2001ರ ಸಂಸತ್ ದಾಳಿ, 2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಕೂಡ ಹೌದು.
ಎಲ್‌ಒಸಿ ಬಳಿ ಪಾಕ್ ಡ್ರೋನ್‌ಗಳು ಪತ್ತೆ: ಭದ್ರತೆ ಬಿಗಿ, ಶೋಧ
ಭಾನುವಾರ ಸಂಜೆ ಅಂತಾರಾಷ್ಟ್ರೀಯ ಸರಹದ್ದನ್ನು ದಾಟಿ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಬಳಿ ಕೆಲ ಡ್ರೋನ್‌ಗಳು ಹಾರಾಟ ನಡೆಸಿದ್ದು ಪತ್ತೆಯಾಗಿದೆ. ಸಾಂಬಾ, ರಜೌರಿ, ಪೂಂಚ್ ಜಿಲ್ಲೆಗಳಲ್ಲಿ 5 ಡ್ರೋನ್‌ಗಳು ಕಂಡುಬಂದಿದ್ದು, ಬಳಿಕ ಪಾಕಿಸ್ತಾನದತ್ತ ಮರಳಿವೆ.
ಈ ಬೆಳವಣಿಗೆ ಬೆನ್ನಲ್ಲೇ ಗಡಿಯಲ್ಲಿ ಕಟ್ಟೆಚ್ಚರ ಸಾರಲಾಗಿದೆ. ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಡ್ರೋನ್‌ಗಳು ಪತ್ತೆಯಾಗುತ್ತಿದ್ದಂತೆ ಅವುಗಳತ್ತ ಮೀಡಿಯಂ ಮತ್ತು ಲೈಟ್ ಮಷಿನ್ ಗನ್‌ಗಳನ್ನು ಬಳಸಿ ಗುಂಡನ್ನೂ ಹಾರಿಸಲಾಯಿತು. ಡ್ರೋನ್‌ಗಳು ಭಾರತದ ಗಡಿಯೊಳಗೆ ಶಸ್ತ್ರಾಸ್ತ್ರ, ಮಾದಕ ವಸ್ತುಗಳಂತಹ ನಿಷಿದ್ಧ ಪದಾರ್ಥಗಳನ್ನು ಹಾಕಿ ಹೋಗಿರುವ ಸಂಭವವಿರುವುದರಿಂದ ಶೋಧ ನಡೆಸಲಾಗುತ್ತಿದೆ.


