‘ಭಾರತ-ಪಾಕಿಸ್ತಾನ ಕದನವಿರಾಮ ಮಾಡಿಸಿದ್ದೇ ನಾನು’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಸುಳ್ಳೆಂದು ಸಾಬೀತುಪಡಿಸುವ ಹೇಳಿಕೆ ಪಾಕಿಸ್ತಾನದಿಂದಲೇ ಬಂದಿದೆ.

ಇಸ್ಲಾಮಾಬಾದ್‌: ‘ಭಾರತ-ಪಾಕಿಸ್ತಾನ ಕದನವಿರಾಮ ಮಾಡಿಸಿದ್ದೇ ನಾನು’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಸುಳ್ಳೆಂದು ಸಾಬೀತುಪಡಿಸುವ ಹೇಳಿಕೆ ಪಾಕಿಸ್ತಾನದಿಂದಲೇ ಬಂದಿದೆ. ‘ಕದನವಿರಾಮಕ್ಕೆ ಕಾರಣವಾಗಿದ್ದು ಸೌದಿ ರಾಜಕುವರ ಫೈಸಲ್. ಕದನವಿರಾಮವನ್ನು ಮೊದಲು ಕೋರಿದ್ದೇ ನಾವು’ ಎಂಬ ಕುತೂಹಲದ ವಿಷಯವನ್ನು ಪಾಕ್ ಉಪಪ್ರಧಾನಿ ಇಶಾಕ್ ದಾರ್ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ಖಾಸಗಿ ಟೀವಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ, ‘ಮೇ 9ರಂದು ಭಾರತ ಮುಂಜಾನೆ 2.30ರ ಹೊತ್ತಿಗೆ ಮತ್ತೆ ದಾಳಿ ನಡೆಸಿತು. ಈ ಬಾರಿ ರಾವಲ್ಪಿಂಡಿಯ ನೂರ್‌ಖಾನ್‌ ಮತ್ತು ಶೋರ್‌ಕೋಟ್‌ ವಾಯು ನೆಲೆಗಳು ಅದರ ಗುರಿಯಾಗಿದ್ದವು.

ಇದಾದ 45 ನಿಮಿಷಗಳ ಬಳಿಕ ಸೌದಿ ರಾಜಕುವರ ಫೈಸಲ್‌ ಅವರು ಕರೆ ಮಾಡಿದರು. ‘ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿನೋ ಜತೆಗೆ ನೀವು ಕರೆಮಾಡಿ ಮಾತನಾಡಿದ್ದು ತಿಳಿಯಿತು. ಕದನ ವಿರಾಮಕ್ಕೆ ನೀವು ಸಿದ್ಧವಾಗಿದ್ದರೆ ನಾನೇ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಜತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಅವರು ತಿಳಿಸಿದರು.

ಆಗ ನಾನು, ‘ಖಂಡಿತಾ ಬ್ರದರ್‌... ನೀವು ಮುಂದುವರಿಯಿರಿ..’ ಎಂದು ತಿಳಿಸಿದೆ. ಕೆಲ ಸಮಯದ ತರುವಾಯ ಅವರಿಂದ ಮತ್ತೆ ಕರೆ ಬಂತು. ‘ಜೈಶಂಕರ್‌ ಅವರಿಗೆ ವಿಚಾರ ತಿಳಿಸಿದ್ದೇನೆ’ ಎಂದು ಹೇಳಿದರು. ಬಳಿಕ ಕದನವಿರಾಮ ಪ್ರಸ್ತಾಪವನ್ನು ಪಾಕ್‌ ಭಾರತದ ಮುಂದೆ ಇರಿಸಿತು’ ಎಂದು ಹೇಳಿಕೊಂಡಿದ್ದಾರೆ.

‘ಆಪರೇಷನ್‌ ಸಿಂದೂರಕ್ಕೆ ಪ್ರತಿಯಾಗಿ ಪಾಕಿಸ್ತಾನವು ಪ್ರತಿದಾಳಿಗೆ ಸಿದ್ಧತೆ ನಡೆಸುತ್ತಿದ್ದ ಹೊತ್ತಿಗೇ ಭಾರತ ಅಚ್ಚರಿಯ ದಾಳಿ ನಡೆಸಿತು. ಇದರಿಂದಾಗಿಯೂ ನಾವು ಕದನ ವಿರಾಮದ ಮೊರೆ ಹೋಗಬೇಕಾಯಿತು’ ಎಂದೂ ದಾರ್‌ ತಿಳಿಸಿದ್ದಾರೆ.

ಅಂದು ಏನಾಗಿತ್ತು?

- ಮೇ 9ರ ಮುಂಜಾನೆ 2.30ರ ಹೊತ್ತಿಗೆ ಭಾರತ ನಮ್ಮ ಎರಡು ವಾಯುನೆಲೆಗಳ ಮೇಲೆ ದಾಳಿ ಮಾಡಿತು- ಇದಾದ 45 ನಿಮಿಷಗಳಲ್ಲೇ ಸೌದಿ ರಾಜಕುವರ ಫೈಸಲ್‌ ಅವರು ನಮಗೆ ಕರೆ ಮಾಡಿ ಮಾತಾಡಿದರು- ಅಮೆರಿಕದ ಜತೆಗೆ ನೀವು ಮಾತಾಡುತ್ತಿದ್ದೀರಿ. ಕದನ ವಿರಾಮಕ್ಕೆ ಸಿದ್ಧರಿದ್ದರೆ ಭಾರತಕ್ಕೆ ಹೇಳುವೆ ಎಂದರು- ಖಂಡಿತಾ, ಬ್ರದರ್‌... ಮುಂದುವರಿಯಿರಿ ಎಂದು ನಾನು ತಿಳಿಸಿದೆ. ಕೆಲ ಹೊತ್ತಿನ ಬಳಿಕ ಮತ್ತೆ ಕರೆ ಬಂತು- ಜೈಶಂಕರ್‌ ಅವರಿಗೆ ವಿಚಾರ ತಿಳಿಸಿದ್ದೇನೆ ಎಂದು ಫೈಸಲ್‌ ಹೇಳಿದರು. ಬಳಿಕ ಕದನ ವಿರಾಮ ಸೂಚಿಸಿದೆವು