Asianet Suvarna News Asianet Suvarna News

ಹಮಾಸ್ ವಿರುದ್ಧ ‘ಹತ್ಯೆ ಯಂತ್ರ’ ಅಖಾಡಕ್ಕಿಳಿಸಿದ ಇಸ್ರೇಲ್: ಕಿಡಾನ್ ಪಡೆಗಿದೆ ವಿಶೇಷ ಬಲ

ಗಾಜಾ ಪಟ್ಟಿಯಿಂದ ಹೊರಗಿರುವ, ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಹಮಾಸ್ ನಾಯಕರನ್ನು ಹೆಡೆಮುರಿ ಕಟ್ಟಿ ಬಗ್ಗುಬಡಿಯಬಲ್ಲವರಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕಾಗಿಯೇ ಇಸ್ರೇಲ್​​ ಸಾಂಪ್ರದಾಯಿಕ ಕಿಡಾನ್ ಪಡೆಯನ್ನು ಹಮಾಸ್ ವಿರುದ್ಧ ಕಾರ್ಯಾಚರಣೆಗೆ ಇಳಿಸಿದೆ ಎಂಬ ವದಂತಿ ದಟ್ಟವಾಗಿದೆ. ಮೊಸಾದ್​​ನ ಒಂದು ಅಂಗವಾಗಿರುವ ಕಿಡಾನ್ ಪಡೆ ಅತ್ಯುತ್ಕೃಷ್ಟ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವುಳ್ಳದ್ದು. 

israel deploys killing machine against hamas kidon gets special force ash
Author
First Published Dec 8, 2023, 2:25 PM IST

ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಡಿಸೆಂಬರ್ 8, 2023): ಹಮಾಸ್ ಸಂಘಟನೆ 3000 ಯೋಧರೊಂದಿಗೆ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಾಗ ಇಡೀ ಜಗತ್ತೇ ಅಚ್ಚರಿಪಟ್ಟಿತ್ತು. ಹಮಾಸ್ ಹೋರಾಟಗಾರರಲ್ಲಿ ಬಹುಭಾಗ ಹಂತಕರೇ ಆಗಿದ್ದರು. ವಯಸ್ಸು, ಲಿಂಗ, ಜನ ಧರಿಸಿದ್ದ ಸಮವಸ್ತ್ರವನ್ನು ಲೆಕ್ಕಿಸದೇ ಸಾಧ್ಯವಾದಷ್ಟು ಕ್ರೂರ ರೀತಿಯಲ್ಲಿ ಹೆಚ್ಚಿನ ನಾಗರಿಕರನ್ನು ಕೊಲ್ಲುವುದಷ್ಟೇ ಅವರ ಗುರಿಯಾಗಿತ್ತು. ಅಕ್ಟೋಬರ್ 7 ರವರೆಗೆ, ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯಾ ನಡುವಣ ಸಂಘರ್ಷದಲ್ಲಿ ವಿಭಿನ್ನವಾದ ಘಟನೆಯೊಂದು ಜರುಗಲಿದೆ ಮತ್ತು ಹಮಾಸ್ ಅದನ್ನು ಮಾಡಲಿದೆ ಎಂಬುದನ್ನು ಜಗತ್ತು ಊಹಿಸಿರಲಿಲ್ಲ.

ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಇಸ್ರೇಲ್ ಭರವಸೆ ನೀಡಿದೆ. ಆದರೆ, ಹಮಾಸ್ ಗಾಜಾ ಪಟ್ಟಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ಹಮಾಸ್ ನಾಯಕರು ಎಲ್ಲೇ ನೆಲೆಸಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೊಸಾದ್​ಗೆ (ಇಸ್ರೇಲ್ ಗುಪ್ತಚರ ಮತ್ತು ಸೇನೆಯ ವಿಶೇಷ ಕಾರ್ಯಾಚರಣೆ ಘಟಕ) ಸೂಚಿಸಿದ್ದಾಗಿ ನವೆಂಬರ್ 22ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. 

ಇದರ ಬೆನ್ನಲ್ಲೇ, ಹಮಾಸ್‌ ನಾಯಕರ ಜೀವನ ಇನ್ನು ಕೆಲವೇ ದಿನ ಎಂಬರ್ಥದ ಹೇಳಿಕೆಯನ್ನು ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ನೀಡಿದ್ದರು. ಅಂದರೆ, ‘‘ಎರವಲು ಪಡೆದ ದಿನ’’ಗಳಲ್ಲಿ ಹಮಾಸ್ ನಾಯಕರು ಜೀವನ ಮಾಡುತ್ತಿದ್ದಾರೆ ಎಂದು ವ್ಯಂಗ್ಯಭರಿತ ಹೇಳಿಕೆಯನ್ನು ಯೋವ್ ಗ್ಯಾಲಂಟ್ ನೀಡಿದ್ದರು. ಗಾಜಾದಲ್ಲಿರುವ ಭಯೋತ್ಪಾದಕರು ಹಾಗೂ ಐಷಾರಾಮಿ ವಿಮಾನಗಳಲ್ಲಿ ಹಾರಾಡುವವರು ಸೇರಿದಂತೆ ವಿಶ್ವದಾದ್ಯಂತ ಹೋರಾಟ ನಡೆಯಲಿದೆ ಎಂದು ಗ್ಯಾಲಂಟ್ ಹೇಳಿದ್ದನ್ನು ಗಮನಿಸಬೇಕಿದೆ.

ಇಸ್ರೇಲಿ ಪಡೆಗಳು ಈಗ ಲೆಬನಾನ್, ಟರ್ಕಿ, ಕತಾರ್ ಮತ್ತು ಇತರೆಡೆಗಳಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ಹಮಾಸ್ ನಾಯಕರ ಮೇಲೂ ಕಣ್ಣಿಟ್ಟಿವೆ. ಉದಾಹರಣೆಗೆ; ಪ್ಯಾಲೆಸ್ತೀನಿಯನ್‌
ಗುಂಪಿನ ಹಮಾಸ್‌ನ ನಾಯಕರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟ ಇಸ್ಮಾಯಿಲ್ ಹನಿಯೆಹ್ ನಿಕಟವರ್ತಿಗಳೊಂದಿಗೆ ಅಕ್ಟೋಬರ್‌ನಲ್ಲಿ ಟರ್ಕಿಯಿಂದ ನಿರ್ಗಮಿಸಿದ್ದ. ದಾಳಿಯ ವೇಳೆ ಇಸ್ಮಾಯಿಲ್ ಹನಿಯಾ ಇಸ್ತಾಂಬುಲ್‌ನಲ್ಲಿದ್ದ. ದಾಳಿಯ ಸುದ್ದಿ ಬಿತ್ತರವಾದಾಗ ಆತ ಮತ್ತು ಆತನ ಸಹಚರರು ಅದಕ್ಕಾಗಿ ‘ಕೃತಜ್ಞತೆಯ ಪ್ರಾರ್ಥನೆ’ ಸಲ್ಲಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. 

ನಿಯಮಗಳನ್ನು ಅನುಸರಿಸುವಂತೆ ಆ ದೇಶದ ಅಧಿಕಾರಿಗಳು ಆತನ ತಂಡದ ಬಳಿ ಮನವಿ ಮಾಡಿದ್ದ ಬಗ್ಗೆಯೂ ಕೆಲವು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ವಿಶೇಷ ಸೇವೆಗಳು ತಮ್ಮನ್ನು ರಕ್ಷಿಸವು ಎಂಬುದು ಗೊತ್ತಾದ ಬೆನ್ನಲ್ಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರು.

ಇದನ್ನು ಓದಿ: ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಹಾಗಾದರೆ, ಗಾಜಾ ಪಟ್ಟಿಯಿಂದ ಹೊರಗಿರುವ, ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಹಮಾಸ್ ನಾಯಕರನ್ನು ಹೆಡೆಮುರಿ ಕಟ್ಟಿ ಬಗ್ಗುಬಡಿಯಬಲ್ಲವರಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕಾಗಿಯೇ ಇಸ್ರೇಲ್​​ ಸಾಂಪ್ರದಾಯಿಕ ಕಿಡಾನ್ ಪಡೆಯನ್ನು ಹಮಾಸ್ ವಿರುದ್ಧ ಕಾರ್ಯಾಚರಣೆಗೆ ಇಳಿಸಿದೆ ಎಂಬ ವದಂತಿ ದಟ್ಟವಾಗಿದೆ. ಮೊಸಾದ್​​ನ ಒಂದು ಅಂಗವಾಗಿರುವ ಕಿಡಾನ್ ಪಡೆ ಅತ್ಯುತ್ಕೃಷ್ಟ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವುಳ್ಳದ್ದು. 

ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿರುವ ಭಯೋತ್ಪಾದಕನ್ನು ನುಗ್ಗಿ ಬಗ್ಗುಬಡಿಯುವ ಸಾಮರ್ಥ್ಯವುಳ್ಳದ್ದು. ಈ ಕಿಡಾನ್ ಪಡೆ ಸೃಷ್ಟಿಯಾಗಿದ್ದು ಹೇಗೆ? ಅದರಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ತರಬೇತಿ ಹೇಗಿರುತ್ತದೆ? ಅದಕ್ಕೆ ಜಗತ್ತಿನ ಪ್ರಮುಖ ‘ಹತ್ಯೆ ಯಂತ್ರ’ಗಳಲ್ಲಿ ಒಂದು ಎಂಬ ಹಣೆಪಟ್ಟಿ ಬಂದಿದ್ದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.

ಇದನ್ನು ಓದಿ: ‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!

ಹಮಾಸ್ ವಿರುದ್ಧ ಅಖಾಡಕ್ಕಿಳಿದ ಕಿಡಾನ್ ಪಡೆ

ಸರಳವಾಗಿ ಹೇಳುವುದಾದರೆ, ಕಿಡಾನ್ ಎಂಬುದು 1972 ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಇಸ್ರೇಲಿ ಕ್ರೀಡಾಪಟುಗಳ ಮೇಲೆ ನಡೆಸಿದ ಭಯೋತ್ಪಾದಕ ದಾಳಿಗಳಿಗೆ ಪ್ರತಿ ದಾಳಿಗೆ ಸ್ಥಾಪಿಸಲಾದ ಒಂದು ಪಡೆಯಾಗಿದೆ. ಇಸ್ರೇಲಿ ಸೇನೆಯ ವ್ಯಾಪ್ತಿ ಮೀರಿದ ಪ್ರದೇಶಗಳಲ್ಲಿ ಕೂಡ ಕಿಡಾನ್ ಘಟಕ ಕಾರ್ಯಾಚರಣೆ ನಡೆಸಬಲ್ಲದ್ದಾಗಿದೆ ಮತ್ತು ಭಯೋತ್ಪಾದಕರನ್ನು ಮಟ್ಟ ಹಾಕುವ ಸಲುವಾಗಿಯೇ ಇದನ್ನು ರಚಿಸಲಾಗಿದೆ. ಅಂದರೆ, ವಿಶ್ವದ ಯಾವುದೋ ಮೂಲೆಯಲ್ಲಿ ಶತ್ರು ಅಡಗಿದ್ದರೂ ಆತನನ್ನು ಪತ್ತೆಹಚ್ಚಿ ಅಪಹರಿಸಿ ಕರೆತರುವ ಅಥವಾ ಅಲ್ಲಿಗೇ ನುಗ್ಗಿ ಹತ್ಯೆ ಮಾಡಿ ಬರುವ ತಾಕತ್ತು ಕಿಡಾನ್​ಗಿದೆ.

ವಿಶೇಷ ಕಾರ್ಯಾಚರಣೆ ಪಡೆ ಕಿಡಾನ್

ಕಿಡಾನ್ (ಜಾವೆಲಿನ್) ಎಂಬುದು ಇಸ್ರೇಲಿ ಮೊಸಾದ್‌ನೊಳಗಿನ ಒಂದು ವಿಭಾಗದ ಹೆಸರು. ಅದು ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳ ಹತ್ಯೆ ಅಥವಾ ಅಪಹರಿಸಿ ಕರೆತರಲು ಕಾರ್ಯಾಚರಣೆ ನಡೆಸುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ, ಇರಾನಿನ ಪರಮಾಣು ವಿಜ್ಞಾನಿಗಳ ಹತ್ಯೆಯ ಆರೋಪ ಅವರ ಮೇಲಿರುವುದರಿಂದ ಮೇಲಿನ ವ್ಯಾಖ್ಯಾನವು ಸಂಪೂರ್ಣವಾಗಿ ನಿಖರವೆಂದು ಹೇಳಲಾಗದು.

ಇದನ್ನು ಓದಿ: ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಶಸ್ವಿಯಾದ ಹಲವಾರು ಕಾರ್ಯಾಚರಣೆಗಳ ಮಾಸ್ಟರ್ ಮೈಂಡ್ ಎಂದು ಕಿಡಾನ್ ಅನ್ನು ಹೆಸರಿಸಲಾಗಿದೆ. ಅಂಥ ಕಾರ್ಯಾಚರಣೆಗಳಲ್ಲಿ ‘‘ಆಪರೇಷನ್ ವ್ರಾತ್ ಆಫ್ ಗಾಡ್’’ ಕೂಡ ಒಂದಾಗಿದೆ. ಕಿಡಾನ್ ಬಗ್ಗೆ ಇಸ್ರೇಲ್ ಉನ್ನತ ಮಟ್ಟದ ಗೋಪ್ಯತೆ ಕಾಯ್ದುಕೊಂಡಿರುವುದರಿಂದ ಲಭ್ಯವಿರುವ ಯಾವುದೇ ಮಾಹಿತಿಯನ್ನು ಹೆಚ್ಚು ವಿಶ್ವಾಸಾರ್ಹವೆಂದು ಹೇಳಲಾಗದು ಎಂಬುದೂ ಸತ್ಯ.

‘ಹತ್ಯೆ ಯಂತ್ರ’ವೆಂದೇ ಪರಿಗಣಿಸಲ್ಪಟ್ಟಿರುವ ಕಿಡಾನ್
ಕಿಡಾನ್ ಯೋಧರು ಅತಿ ವೇಗದಲ್ಲಿ ಗುಂಡು ಹಾರಿಸುವುದು, ನಿಖರವಾಗಿ ಗುರಿಯತ್ತ ಶೂಟ್ ಮಾಡುವುದು ಮತ್ತು ಜಿಗುಟಾದ ಸ್ಫೋಟಕಗಳನ್ನು ನಿರ್ವಹಿಸುವಲ್ಲಿ ಸಿದ್ಧಹಸ್ತರು. ಈ ಶೂಟಿಂಗ್ ಶೈಲಿಯು ಅವರ ಪ್ರಮುಖ ಲಕ್ಷಣವಾಗಿದೆ ಎಂದು ಲೇಖಕರಾದ ಡಾನ್ ರವಿವ್ ಮತ್ತು ಯೋಸ್ಸಿ ಮೆಲ್ಮನ್, ತಮ್ಮ ಪುಸ್ತಕ ‘ಸ್ಪೈಸ್ ಎಗೇನ್‌ಸ್ ಆರ್ಮಗೆಡ್ಡೋನ್: ಇನ್‌ಸೈಡ್ ಇಸ್ರೇಲ್‌ ಸೀಕ್ರೆಟ್ ವಾರ್ಸ್​​ (2012)’ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ವಿಶ್ವದ ಅತ್ಯಂತ ಪರಿಣಾಮಕಾರಿ ‘ಹತ್ಯೆ ಯಂತ್ರ’ಗಳಲ್ಲಿ ಒಂದೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಕಿಡಾನ್ ಅನ್ನು ತಾಂತ್ರಿಕವಾಗಿ ಮೊಸಾದ್‌ನೊಳಗಿನ ಚಿಕಣಿ ಮೊಸಾದ್ ಎಂದೇ ಕರೆಯಲಾಗುತ್ತದೆ. ಪ್ರಪಂಚದಾದ್ಯಂತ ರಹಸ್ಯ ಕಾರ್ಯಾಚರಣೆಗಳು ಮತ್ತು ವಿವಿಧ ದೇಶಗಳಲ್ಲಿ ಗಣನೀಯ ಸಂಖ್ಯೆಯ ಕಪ್ಪು ಕಾರ್ಯಾಚರಣೆಗಳು ಮತ್ತು ಹತ್ಯೆಗಳನ್ನು ಮಾಡುವ ಹೊಣೆಯನ್ನು ಕಿಡಾನ್‌ಗೆ ವಹಿಸಲಾಗಿದೆ.

ಕಿಡಾನ್ ಪರವಾಗಿ ಹತ್ಯೆಗಳನ್ನು ನಡೆಸುವ ವ್ಯಕ್ತಿಗಳನ್ನು ಮೊಸಾದ್​ನ ಬೇಹುಗಾರಿಕೆ ಸಂಸ್ಥೆಯಿಂದ ಅಥವಾ ಕೊಲೆ ಕೃತ್ಯ ಎಸಗಬೇಕಿರುವ ದೇಶಗಳ ನಿವಾಸಿಗಳಲ್ಲೇ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಅಷ್ಟರಮಟ್ಟಿಗೆ ವ್ಯವಸ್ಥಿತವಾಗಿ ಕಾರ್ಯಾಚರಣೆಗಳನ್ನು ಕಿಡಾನ್ ನಡೆಸುತ್ತದೆ.  

ಇದನ್ನೂ ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ಅಗಾಧ ಅನುಭವ ಹೊಂದಿರುವ ಹಂತಕರ ತಂಡ!

ಕಿಡಾನ್​​ನ ಹಂತಕರ ತಂಡವು ಅಗಾಧ ಅನುಭವವನ್ನು ಹೊಂದಿರುವ ನಾಲ್ಕು ಜನರನ್ನು ಒಳಗೊಂಡಿದೆ ಎಂದು ಪುಸ್ತಕವು ಉಲ್ಲೇಖಿಸಿದೆ. ಆ ನಾಲ್ಕು ಜನರೆಂದರೆ; 1. ಟ್ರೇಸರ್ (ಗುರಿ ಪತ್ತೆಹಚ್ಚುವವ) 2. ಟ್ರಾನ್ಸ್‌ಪೋರ್ಟರ್ (ಹಂತಕನನ್ನು ಕರೆದೊಯ್ಯುವವ) 3. ಸಹಾಯಕ 4. ಕೊಲೆಗಾರ. ಟ್ರೇಸರ್ ಗುರಿಯನ್ನು ಪತ್ತೆಹಚ್ಚಲು ನೆರವಾಗುತ್ತಾನೆ. ಹತ್ಯೆಯ ಸಿಬ್ಬಂದಿ ಗುರಿಯನ್ನು ತಲುಪಿದಾಗ, ಟ್ರಾನ್ಸ್‌ಪೋರ್ಟರ್ ಅವರನ್ನು ಅಲ್ಲಿಗೆ ಕರೆದೊಯ್ಯುತ್ತಾನೆ. ಮೂಲಭೂತವಾಗಿ, ಸಹಾಯಕನು ಕೊಲೆಗಾರನಿಗೆ ಸಹಾಯ ಮಾಡುವ ಮೋಟಾರ್‌ಬೈಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಾನೆ ಮತ್ತು ಕೊಲೆಗಾರನು ಗುರಿಯನ್ನು ಶೂಟ್ ಮಾಡುವ ಅಥವಾ ಬಲಿಪಶು ಚಾಲನೆ ಮಾಡುತ್ತಿರುವ ವಾಹನಕ್ಕೆ ಮ್ಯಾಗ್ನೆಟಿಕ್ ಬಾಂಬ್ ಜೋಡಿಸುವ ಕಾರ್ಯವನ್ನು ನಿರ್ವಹಿಸುತ್ತಾನೆ.

ಸಾರ್ವಜನಿಕವಾಗಿ ಲಭ್ಯವಿರುವ ಐತಿಹಾಸಿಕ ಮಾಹಿತಿಯ ಆಧಾರದ ಮೇಲೆ, ಕಿಡಾನ್ ಘಟಕವು 42 ಪುರುಷ ಮತ್ತು 6 ಸ್ತ್ರೀಯರನ್ನು ಒಳಗೊಂಡಿದೆ. ಈ ಸಂಯೋಜನೆಯು ಇತ್ತೀಚಿನ ವರ್ಷಗಳಲ್ಲಿ ಬದಲಾಗಿರಬಹುದು. ಪ್ರತಿಯೊಬ್ಬರೂ ತಮ್ಮ ಇಪ್ಪತ್ತರ ದಶಕದ ಉತ್ತರಾರ್ಧದಲ್ಲಿದ್ದಾರೆ ಮತ್ತು ಮರುಭೂಮಿಯಲ್ಲಿ ನೆಲೆಗೊಂಡಿರುವ ಬೀರ್ಶೆಬಾಕ್ಕೆ ಸಮೀಪವಿರುವ ನಿರ್ಬಂಧಿತ ಮಿಲಿಟರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಅರಬ್ ಕುಗ್ರಾಮದಲ್ಲಿ ಕಿಡಾನ್ ತಂಡಗಳು ತಮ್ಮ ಮಾರಕ ಕಾರ್ಯಾಚರಣೆಯನ್ನು ಅಭ್ಯಾಸ ಮಾಡುತ್ತಿದ್ದು, ಅದಕ್ಕೆ ಪೂರಕವಾದ ಸಂರಚನೆಗಳನ್ನು ಆ ಸ್ಥಳವು ಒಳಗೊಂಡಿದೆ. ವೈವಿಧ್ಯಮಯ ಕೈಬಂದೂಕುಗಳು ಮತ್ತು ಚಾಕುಗಳ ಬಳಕೆ ತರಬೇತಿಯ ಜತೆಗೆ ಅವರು ದೊಡ್ಡ ಗುಂಪಿನ ಜನರಿಗೆ ಮಾರಕ ಚುಚ್ಚುಮದ್ದನ್ನು ನೀಡಲು ಅಗತ್ಯವಾದ ಕೌಶಲ್ಯಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ, ಅವರು ಕಾರ್ಯಾಚರಣೆಯ ವೈಫಲ್ಯದ ಸಾಧ್ಯತೆಯನ್ನೂ ವಿಶ್ಲೇಷಿಸುತ್ತಾರೆ.

ಅರಬ್ಬರು, ಪ್ಯಾಲೆಸ್ತೀನಿಯನ್ನರು ಮತ್ತು ಇರಾನಿಯನ್ನರ, ಅದರಲ್ಲೂ ಪ್ರಮುಖವಾಗಿ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ನಡೆದ ಇಸ್ರೇಲಿ ಕ್ರೀಡಾಪಟುಗಳ ಹತ್ಯಾಕಾಂಡಕ್ಕೆ ಕಾರಣರಾದವರ ಹತ್ಯೆಗಳಿಗೆ ಕಿಡಾನ್ ಪಡೆಗಳ ಯೋಧರು ಕಾರಣವೆಂಬುದು ಇತ್ತೀಚಿನ ವರ್ಷಗಳಿಂದ ತಿಳಿದುಬಂದಿದೆ. ಒಲಿಂಪಿಕ್ ಅಥ್ಲೀಟ್‌ಗಳ ಸಾವಿಗೆ ಕಾರಣರಾದ ಭಯೋತ್ಪಾದಕ ಸಂಘಟನೆಯ ಪ್ರತಿಯೊಬ್ಬ ಸದಸ್ಯರನ್ನು ಪತ್ತೆಹಚ್ಚಲು ಮತ್ತು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕೊಲ್ಲಲು ಕಿಡಾನ್​ನಿಂದ ಸಾಧ್ಯವಾಗಿದೆ. ಇದೀಗ ಇಂಥ ಕಿಡಾನ್ ಪಡೆ ಹಮಾಸ್ ವಿರುದ್ಧ ಕಾರ್ಯಾಚರಣೆಗೆ ಇಳಿದಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

Follow Us:
Download App:
  • android
  • ios