ಮಸೀದಿಗಳಲ್ಲಿ ಅಡಗಿಕೊಂಡ ಹಮಾಸ್ ಉಗ್ರರ ಮೇಲೆ ಬಾಂಬ್, ಸೋಮವಾರ ಒಂದೇ ದಿನ 1149 ಏರ್‌ಸ್ಟ್ರೈಕ್!
ತನ್ನನ್ನು ಕೆಣಕಿ ಹಮಾಸ್ ಉಗ್ರರು ತಪ್ಪು ಮಾಡಿದ್ದಾರೆ ಎನ್ನುವ ಸಂದೇಶವನ್ನು ಇಡೀ ವಿಶ್ವಕ್ಕೆ ಅದರಲ್ಲೂ ತನ್ನ ಅಕ್ಕಪಕ್ಕದ ಮುಸ್ಲಿಂ ದೇಶಗಳಿಗೆ ತಿಳಿಸುವ ದೃಷ್ಟಿಯಲ್ಲಿ ಭಾರೀ ದಾಳಿ ನಡೆಸುತ್ತಿರುವ ಇಸ್ರೇಲ್, ಸೋಮವಾರ ಈವರೆಗೂ 1149 ಏರ್‌ಸ್ಟ್ರೈಕ್‌ಗಳನ್ನು ಮಾಡಿದೆ.
ನವದೆಹಲಿ (ಅ.9): ಸುಮ್ಮನಿದ್ದ ತನ್ನ ಮೇಲೆ 5 ಸಾವಿರ ರಾಕೆಟ್‌ಗಳನ್ನು ಉಡಾಯಿಸಿ, ತನ್ನ ಸೈನಿಕರು ಹಾಗೂ ಪ್ರಜೆಗಳನ್ನು ಅಮಾನವೀಯವಾಗಿ ಹತ್ಯೆ, ಕಿಡ್ನಾಪ್ ಮಾಡಿದ ಹಮಾಸ್ ಉಗ್ರರ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಇಡೀ ಗಾಜಾ ಪ್ರದೇಶವನ್ನು ಧ್ವಂಸ ಮಾಡಿದೆ. ಸೋಮವಾರ ಮುಂಜಾನೆ ಶಟ್ಟಿ ನಿರಾಶ್ರಿತರ ಶಿಬಿರದಲ್ಲಿ ಮಸೀದಿಯ ಒಳಗೆ ಅಡಗಿಕೊಂಡಿದ್ದ ಹಮಾಸ್ ಉಗ್ರರ ಮೇಲೆ ಬಾಂಬ್ ದಾಳಿ ಮಾಡಿದೆ. ಇದರ ವಿಡಿಯೋವನ್ನು ಇಸ್ರೇಲ್‌ನ ಚಾನೆಲ್ 12 ತನ್ನ ಎಕ್ಸ್‌ಪೋಸ್ಟ್‌ನಲ್ಲಿ ಪ್ರಕಟ ಮಾಡಿದೆ. ಇಸ್ರೇಲ್ ಸೇನೆಯ ಏರ್‌ಸ್ಟ್ರೈಕ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಮಾಸ್ ಉಗ್ರರು ಜನವಸತಿ ಪ್ರದೇಶಗಳಲ್ಲಿ ಅಡಗಿಕೊಳ್ಳಲು ಆರಂಭಿಸಿದ್ದಾರೆ. ಆದರೆ, ಜನವಸತಿ ಪ್ರದೇಶಗಳಲ್ಲಿರುವ ಉಗ್ರರ ಟಾರ್ಗೆಟ್‌ಗಳಿಗೆ ನೇರ ಎಚ್ಚರಿಕೆ ನೀಡಿ, ಇಸ್ರೇಲ್ ಏರ್‌ಸ್ಟೈಕ್ ಆರಂಭಿಸಿದೆ. ಎಂಟು ಹಮಾಸ್ ಮತ್ತು ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ವಾರ್ ರೂಮ್‌ಗಳನ್ನು ಒಳಗೊಂಡಂತೆ ಭಾನುವಾರ ಹಾಗೂ ಸೋಮವಾರ ಮುಂಜಾನೆಯ ಏರ್‌ಸ್ಟ್ರೈಕ್‌ಗಳಲ್ಲಿ 500 ಕ್ಕೂ ಹೆಚ್ಚು ಟಾರ್ಗೆಟ್‌ಗಳನ್ನು ಉದಾಯಿಸಿದೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ತಿಳಿಸಿದೆ. ಹಮಾಸ್ ಆಸ್ತಿಗಳನ್ನು ಹೊಂದಿರುವ ಹಲವಾರು ಎತ್ತರದ ಬಿಲ್ಡಿಂಗ್‌ಗಳು, ಹಮಾಸ್ ಆಸ್ತಿಗಳನ್ನು ಹೊಂದಿರುವ ಮಸೀದಿ, ಮತ್ತು ಉತ್ತರ ಗಾಜಾದ ಬೀಟ್ ಹನೌನ್ ಪ್ರದೇಶದಲ್ಲಿ ಮೂರು ಸುರಂಗಗಳನ್ನು ಉಡಾಯಿಸಲಾಗಿದೆ.
ಇನ್ನು ಸೋಮವಾರ ಮುಂಜಾನೆಯ ವೇಳೆಗೆ ಒಟ್ಟು 1149 ಏರ್‌ಸ್ಟ್ರೈಕ್‌ಗಳು ಇಸ್ರೇಲ್‌ನ ಏರ್‌ಫೋರ್ಸ್ ಮಾಡಿದೆ. ಭಾನುವಾರಕ್ಕೆ ಹೋಲಿಸಿದರೆ, 800 ಏರ್‌ಸ್ಟ್ರೈಕ್‌ಗಳನ್ನು ಹೆಚ್ಚುವರಿಯಾಗಿ ಮಾಡಲಾಗಿದೆ. ಇನ್ನು ಗಾಜಾ ಕಾರಿಡಾರ್‌ನಲ್ಲಿರುವ ಇಸ್ರೇಲ್‌ನ ಹಳ್ಳಿಗಳಲ್ಲಿ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆಯ ನಡುವೆ 6 ಕಡೆಗಳಲ್ಲಿ ಫೈಟ್ ನಡೆಯುತ್ತಿದೆ ಎಂದು ಐಡಿಎಫ್ ಮಾಹಿತಿ ನೀಡಿದೆ. ಇನ್ನು ಸ್ಡೆರೋಟ್ ಬಳಿಯ ಇಂಟರ್‌ಸೆಕ್ಷನ್‌ನಲ್ಲಿ ಭಯೋತ್ಪಾದಕರೊಂದಿಗೆ ಭಾರೀ ಪ್ರಮಾಣದ ಎನ್‌ಕೌಂಟರ್ ನಡೆಯುತ್ತಿದೆ ಎಂದು ತಿಳಿಸಿದೆ.
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ಹಮಾಸ್ ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ ನಂತರ 100 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಉಗ್ರಗಾಮಿ ಗುಂಪಿನ ಹಿರಿಯ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಇನ್ನು ಪ್ಯಾಲೆಸ್ತೇನಿಯನ್ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಸಂಘಟನೆ 30 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಹೇಳಿದೆ. ಇನ್ನೊಂದೆಡೆ ಇಸ್ರೇಲ್ ಏರ್‌ಸ್ಟ್ರೈಕ್‌ನಲ್ಲಿ ಒಂದೇ ಕುಟುಂಬದ 19 ಮಂದಿ ಸಾವು ಕಂಡಿದ್ದಾರೆ ಎಂದು ಪ್ಯಾಲಿಸ್ತೇನಿಯನ್ ಆರೋಗ್ಯ ಇಲಾಖೆ ತಿಳಿಸಿದೆ.