ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ಎಫೆಕ್ಟ್: ಬೆಳ್ಳಂಬೆಳಗ್ಗೆ ಹೂಡಿಕೆದಾರರ 4 ಲಕ್ಷ ಕೋಟಿ ನಷ್ಟ: ಪ್ರಮುಖ 5 ಕಾರಣ ಹೀಗಿದೆ..
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧದ ಪರಿಣಾಮ ಭಾರತದಲ್ಲೂ ಉಂಟಾಗ್ತಿದೆ. ಚಿನ್ನದ ದರ ಏರಿಕೆಯಾಗಿದ್ದರೆ, ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ 3ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಈ ಎರಡು ದೇಶಗಳ ನಡುವೆ ಆದ್ರೂ ಇದರಿಂದ ಜಾಗತಿಕವಾಗಿ ನಾನಾ ಪರಿಣಾಮಗಳನ್ನು ಉಂಟು ಮಾಡ್ತಿದ್ದು, ಇನ್ನೂ ನಾನಾ ಬೆಳವಣಿಗೆಗಳಾಗಬಹುದು. ಈ ಯುದ್ಧದ ಪರಿಣಾಮ ಭಾರತದಲ್ಲೂ ಉಂಟಾಗ್ತಿದೆ. ಚಿನ್ನದ ದರ ಏರಿಕೆಯಾಗಿದ್ದರೆ, ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.
ನಿಫ್ಟಿ 50, ಸೆನ್ಸೆಕ್ಸ್‌ನಲ್ಲಿ ತೀವ್ರ ನಷ್ಟವಾಗಿದ್ದು, ಷೇರು ಸೂಚ್ಯಂಕಗಳು ಕುಸಿತ ಕಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಬೆಳಗ್ಗೆ ಕ್ರಮವಾಗಿ ಶೇಕಡಾ 1.5 ಮತ್ತು ಶೇಕಡಾ 2 ರಷ್ಟು ಕುಸಿತ ಕಂಡಿತ್ತು. ಬಳಿಕ ಕೊಂಚ ಚೇತರಿಕೆ ಕಂಡಿತಾದ್ರೂ ಲಕ್ಷ ಲಕ್ಷ ಕೋಟಿ ನಷ್ಟವಾಗಿದೆ. ಷೇರು ಮಾರುಕಟ್ಟೆ ಇಂದಿನ ಅಂತ್ಯದ ಬಳಿಕ ಒಟ್ಟಾರೆ ಅಂದಾಜು ಸಿಗಲಿದೆ.
BSE ಯಲ್ಲಿನ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ಅಧಿವೇಶನದಲ್ಲಿ ಸುಮಾರು 320 ಲಕ್ಷ ಕೋಟಿ ರೂ. ನಿಂದ ಸುಮಾರು 316 ಲಕ್ಷ ಕೋಟಿ ರೂ. ಗೆ ಇಳಿದಿದೆ. ಅಂದರೆ, ಹೂಡಿಕೆದಾರರು ಸುಮಾರು 4 ಲಕ್ಷ ಕೋಟಿ ರೂ. ಗಳಷ್ಟು ಬಡವಾಗಿದ್ದಾರೆ. ಬಳಿಕ ಮಾರುಕಟ್ಟೆಯ ಚೇತರಿಕೆಯೊಂದಿಗೆ, ಬಿಎಸ್‌ಇ ಎಂಕ್ಯಾಪ್ ಕೂಡ ಸುಮಾರು 317 ಲಕ್ಷ ಕೋಟಿ ರೂ. ಗೆ ಏರಿತು.
ಮಾರುಕಟ್ಟೆಯ ಭಾವನೆಯ ಮೇಲೆ ಪ್ರಭಾವ ಬೀರುವ ಐದು ನಿರ್ಣಾಯಕ ಅಂಶಗಳನ್ನು ನಾವು ಪರಿಶೀಲಿಸೋಣ:
1. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧವು ಷೇರು ಮಾರುಕಟ್ಟೆಗಳಿಗೆ ಹೊಸ ಆತಂಕವಾಗಿದೆ. ಶನಿವಾರದಂದು ಹಮಾಸ್‌ನ ಹೋರಾಟಗಾರರು ಗಾಜಾದಿಂದ ಗಡಿಯನ್ನು ಭೇದಿಸಿದ ನಂತರ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಿಸಿತು. ಇದರಿಂದ 1,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಮಂದಿ ಗಾಯಗೊಂಡರು. ರಾಕೆಟ್ ದಾಳಿಯ ನಂತರ ಹಲವಾರು ಇಸ್ರೇಲಿಗಳನ್ನು ಗಾಜಾದಲ್ಲಿ ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿದೆ.
ಇಲ್ಲಿಯವರೆಗಿನ ಯುದ್ಧವು ಇಸ್ರೇಲ್-ಪ್ಯಾಲೆಸ್ತೀನ್‌ಗೆ ಸೀಮಿತವಾಗಿದೆ. ಆದರೆ ಏರಿಳಿತದ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯಕ್ಕೆ ಗಾಬರಿಯಾಗುವ ಅಗತ್ಯವಿಲ್ಲದಿದ್ದರೂ ಕ್ರಮೇಣ ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ನೋಡುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು.
ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧವು ಭೌಗೋಳಿಕತೆ, ಆರ್ಥಿಕತೆಗಳು ಮತ್ತು ವಲಯಗಳಾದ್ಯಂತ ವ್ಯಾಪಕವಾದ ಶಾಖೆಗಳನ್ನು ಮತ್ತು ಪರಿಣಾಮಗಳನ್ನು ಹೊಂದಿರುತ್ತದೆ ಎಂದೂ ಊಹಿಸುತ್ತಾರೆ. ಇದರಿಂದ ಕಚ್ಚಾ ತೈಲ ದರ, ಚಿನ್ನದ ದರ ಹೆಚ್ಚಾಗಬಹುದು ಎಂದೂ ಹೇಳಲಾಗಿದೆ.
2. ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಜಿಗಿತ
ವಾರಾಂತ್ಯದಲ್ಲಿ ಇಸ್ರೇಲಿ ಮತ್ತು ಪ್ಯಾಲೆಸ್ತೀನ್‌ನ ಹಮಾಸ್ ಪಡೆಗಳ ನಡುವಿನ ಯುದ್ಧವು ಪಶ್ಚಿಮ ಏಷ್ಯಾದ್ಯಂತ ರಾಜಕೀಯ ಅನಿಶ್ಚಿತತೆಯನ್ನು ಆಳಗೊಳಿಸಿದ ನಂತರ ಪೂರೈಕೆ ಅಡ್ಡಿ ಆತಂಕದ ಮೇಲೆ ಕಚ್ಚಾ ತೈಲ ಬೆಲೆಗಳು ಶೇಕಡಾ 4 ಕ್ಕಿಂತ ಹೆಚ್ಚಿವೆ.
ಇರಾನ್ ಈ ಸಂಘರ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ, ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂಘರ್ಷವು ತೈಲ ಬೆಲೆಗಳನ್ನು ಹೆಚ್ಚಿಸಬಹುದು. ತೈಲ ಬೆಲೆಗಳು ಏರಿದರೆ, ಅದು ಭಾರತದ ವ್ಯಾಪಾರ ಕೊರತೆ, ಚಾಲ್ತಿ ಖಾತೆ ಕೊರತೆ ಮತ್ತು ಸೀಮಿತ ಪ್ರಮಾಣದಲ್ಲಿ ವಿತ್ತೀಯ ಕೊರತೆಯ ಮೇಲೆ ಪರಿಣಾಮ ಬೀರುತ್ತದೆ.
3. Q2 ಗಳಿಕೆ ಬಗ್ಗೆ ಎಚ್ಚರಿಕೆ
ಇಂಡಿಯಾ ಇಂಕ್‌ನ ಸೆಪ್ಟೆಂಬರ್ ತ್ರೈಮಾಸಿಕ ಗಳಿಕೆ ವರದಿ ಬರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಸ್ವಲ್ಪ ಎಚ್ಚರಿಕೆಯಿರುವಂತೆ ಕಂಡುಬರುತ್ತಿದೆ. ಕೆಲವು ಕ್ಷೇತ್ರಗಳ ಗಳಿಕೆಯು ವರ್ಷದಿಂದ ವರ್ಷಕ್ಕೆ ಯೋಗ್ಯವಾದ ಬೆಳವಣಿಗೆಯನ್ನು ತೋರಿಸಬಹುದು. ಅದರೂ, ತೀವ್ರ ಪ್ರಮಾಣದಲ್ಲಿ ಹೆಚ್ಚಾಗಲ್ಲ.
4. ಬಡ್ಡಿದರಗಳ ಮೇಲಿನ ನಿರಂತರ ಕಾಳಜಿ, ಜಾಗತಿಕ ಆರ್ಥಿಕ ಕುಸಿತ
ಹೆಚ್ಚಿನ ಬಡ್ಡಿದರದ ನಿರೀಕ್ಷೆ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಅವುಗಳ ಪ್ರಭಾವದ ಮೇಲಿನ ಕಳವಳಗಳು ಇನ್ನೂ ಮರೆಯಾಗಿಲ್ಲ. ಅಮೆರಿಕ ಫೆಡ್ ಬಡ್ಡಿದರಗಳಲ್ಲಿ ಹೆಚ್ಚಳವನ್ನು ಸ್ಪಷ್ಟವಾಗಿ ಸೂಚಿಸುವುದರೊಂದಿಗೆ ಕೇಂದ್ರ ಬ್ಯಾಂಕ್‌ಗಳು ದರ ಕಡಿತದ ಬಗ್ಗೆ ಯೋಚಿಸಲು ಪ್ರಾರಂಭಿಸಬಹುದು ಎಂಬ ಹೂಡಿಕೆದಾರರ ಭರವಸೆಗೆ ಹೊಡೆತ ನೀಡಿದೆ.
ಕಳೆದ ವಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿ (MPC) ರೆಪೋ ದರವನ್ನು 6.5 ಪ್ರತಿಶತದಲ್ಲಿ ಬದಲಾಯಿಸದೆ ಇರಿಸಲು ನಿರ್ಧರಿಸಿತು. ಆದರೂ, “ನಮ್ಮ ಹಣದುಬ್ಬರದ ಗುರಿಯು ಶೇಕಡಾ 4 ಎಂದು ನಾನು ಒತ್ತಿಹೇಳಲು ಬಯಸುತ್ತೇನೆ ಎಂದು ಶಕ್ತಿಕಾಂತ ದಾಸ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
5. ಷೇರುಗಳ ಮಾರಾಟ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಇತ್ತೀಚಿನ ಲಾಭಗಳ ನಂತರ ಹೆಚ್ಚುತ್ತಿರುವ ಬಾಂಡ್ ಇಳುವರಿ ಮತ್ತು ಡಾಲರ್ ಸೂಚ್ಯಂಕದಿಂದಾಗಿ ಭಾರತೀಯ ಷೇರುಗಳನ್ನು ಆಫ್‌ಲೋಡ್ ಮಾಡುತ್ತಿದ್ದಾರೆ ಅಂದರೆ ಹೂಡಿಕೆ ಮಾಡಿರುವುದನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ₹ 14,768 ಕೋಟಿ ಮತ್ತು ಅಕ್ಟೋಬರ್‌ನಲ್ಲಿ ₹ 7,998 ಕೋಟಿ ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಎನ್‌ಎಸ್‌ಡಿಎಲ್ ಡೇಟಾ ತೋರಿಸುತ್ತದೆ.