ಗಾಜಾ ನಾಗರೀಕರಿಗೆ ನೀಡಿದ್ದ ಗಡುವು ಅಂತ್ಯ, ಗಡಿಯತ್ತ ನುಗ್ಗಿದ ಇಸ್ರೇಲ್ ಟ್ಯಾಂಕರ್!
ಗಾಜಾ ಮೇಲೆ ಇಸ್ರೇಲ್ ಭೂ ಸೇನೆ ದಾಳಿ ಆರಂಭಿಸುವುದಕ್ಕೂ ಮುನ್ನ 3 ಗಂಟೆಗಳ ಡೆಡ್‌ಲೈನ್ ನೀಡಲಾಗಿತ್ತು. ನಾಗರೀಕರ ಸಾವು ನೋವು ತಪ್ಪಿಸಲು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಸೂಚನೆ ನೀಡಲಾಗಿತ್ತು. ಇದೀಗ ಗಡುವು ಅಂತ್ಯಗೊಂಡ ಬೆನ್ನಲ್ಲೇ ಇಸ್ರೇಲ್ ಭೂಸೇನೆ ಗಾಜಾ ಗಡಿಯತ್ತ ನುಗ್ಗಿದೆ.
ಇಸ್ರೇಲ್(ಅ.15) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ನರಮೇಧದ ಭೀಕರತೆ ಅಮಾಯಕ ಜೀವಗಳು ಬಲಿಯಾಗಿದೆ. ಮಕ್ಕಳ ಶಿರಚ್ಛೇಧ, ಜೀವಂತ ಭಸ್ಮ, ಒತ್ತೆಯಾಳಾಗಿಟ್ಟುಕೊಂಡ ಪೈಶಾಚಿಕ ಕೃತ್ಯಗಳಿಗೆ ಲೆಕ್ಕವಿಲ್ಲ. ಈ ದಾಳಿಗೆ ಪ್ರತಿಯಾಗಿ ಇಸ್ರೇಲ ಆರಂಭಿಸಿದ ಪ್ರತಿದಾಳಿ ಇಂದಿಗೆ 9ನೇ ದಿನಕ್ಕೆ ಕಾಲಿಟ್ಟಿದೆ. ಸತತ 8 ದಿನ ಹಮಾಸ್ ಉಗ್ರರ ತಾಣ ಗಾಜಾ ಪಟ್ಟಿ ಮೇಲೆ ಏರ್‌ಸ್ಟ್ರೈಕ್ ನಡೆಸಿದ ಇಸ್ರೇಲ್ ಇಂದಿನಿಂದ ಭೂಸೇನೆ ದಾಳಿ ಆರಂಭಿಸಿದೆ. ಉತ್ತರ ಗಾಜಾದಲ್ಲಿನ ನಾಗರೀಕರ ಸಾವು ನೋವು ತಪ್ಪಿಸಲು ಸುುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು 3 ಗಂಟೆಗಳ ಗಡವು ನೀಡಲಾಗಿತ್ತು. ಈ ಗಡುವು ಅಂತ್ಯಗೊಂಡ ಬೆನ್ನಲ್ಲೇ ಇಸ್ರೇಲ್ ಟ್ಯಾಂಕರ್‌ಗಳು ಗಾಜಾ ಗಡಿಯತ್ತ ನುಗ್ಗಿದೆ.
ಇಸ್ರೇಲ್ ಭೂಸೇನೆ ದಾಳಿಯಿಂದ ನಾಗರೀಕರ ಸಾವು ನೋವು ಹೆಚ್ಚಾಗಲಿದೆ ಅನ್ನೋ ಆತಂಕ ಇದೀಗ ಅರಬ್ ರಾಷ್ಟ್ರಗಳಿಗೆ ಎದುರಾಗಿದೆ. ಈ ಕುರಿತು ಸೌದಿ ಅರೆಬಿಯಾ ತುರ್ತು ಸಭೆ ನಡೆಸಿದೆ. ಮಾತುಕತೆ ಮೂಲಕ ಯುದ್ಧಕ್ಕೆ ಅಂತ್ಯಹಾಡುವ ಪ್ರಯತ್ನ ಮಾಡುತ್ತಿದೆ. ಆದರೆ ಇಸ್ರೇಲ್ ಮೇಲೆ ನಡೆದ ನರಮೇಧದಿಂದ ಆಕ್ರೋಶಗೊಂಡಿರುವ ಇಸ್ರೇಲ್ ಯಾವುದೇ ಮಾತುಕತೆಗೂ ಬಗ್ಗುತ್ತಿಲ್ಲ. ಇದು ಉಗ್ರರ ವಿರುದ್ಧದ ಹೋರಾಟ. ಇಲ್ಲಿ ಉಗ್ರರೇ ಟಾರ್ಗೆಟ್. ನಾಗರೀಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಅವಕಾಶ ನೀಡಲಾಗಿದೆ ಎಂದು ತಿರುಗೇಟು ನೀಡಿದೆ.
ಇಸ್ರೇಲ್ ಯುದ್ಧಭೂಮಿಯಿಂದ ವರದಿಗಾರಿಕೆ ನಡುವೆ ತೂರಿ ಬಂತು ಹಮಾಸ್ ಉಗ್ರರ ರಾಕೆಟ್!
ಇಸ್ರೇಲ್‌ಗೆ ಬೆಂಬಲ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಾಗರೀಕರ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ನಾಗರೀಕರ ಸ್ಥಳಾಂತರಕ್ಕೆ ಡೆಡ್‌ಲೈನ್ ನೀಡಲಾಗಿತ್ತು. ಇಸ್ರೇಲ್ ಟ್ಯಾಂಕರ್ ಹಾಗೂ ವಾಯುಸೇನೆ ಜಂಟಿಯಾಗಿ ಇದೀಗ ಅಳಿದು ಉಳಿದಿರುವ ಹಮಾಸ್ ಉಗ್ರರನ್ನು ಹತ್ಯೆ ಮಾಡಲು ಅಖಾಡಕ್ಕಿಳಿದಿದೆ.
ಗಾಜಾ ಗಡಿ ಹಾಗೂ ಸಿರಿಯಾ ಗಡಿಗಳಿಂದಲೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಯುತ್ತಿದೆ. ದಕ್ಷಿಣ ಇಸ್ರೇಲ್‌ನ ಒಫಾಕಿನ್ ಪಟ್ಟಣದೊಳಕ್ಕೆ ಹಮಾಸ್ ಉಗ್ರರು ನುಗ್ಗಿದ್ದಾರೆ ಎಂದು ಇಸ್ರೇಲ್ ಸೇನೆ ಸೂಚನೆ ನೀಡಿದೆ. ಹೀಗಾಗಿ ಒಫಾಕಿಮ್ ನಾಗರೀಕರಿಗೆ ಬಾಂಬ್ ಶೆಲ್ಟರ್, ಬಂಕರ್ ಒಳಗಿರಲು ಸೂಚನೆ ನೀಡಲಾಗಿದೆ. ಮನೆಗೆ ಬೀಗ ಹಾಕಿ ಮುಂದಿನ ಸೂಚನೆವರೆಗೆ ಬಂಕರ್‌ನಲ್ಲೇ ಇರಲು ಸೂಚಿಸಲಾಗಿದೆ.
ಗಾಜಾ ಗಡಿಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್, ಇಸ್ರೇಲ್ ಸದ್ಯದ ಪರಿಸ್ಥಿತಿಯ ಗ್ರೌಂಡ್ ರಿಪೋರ್ಟ್!
ಗಾಜಾದ ಗಡಿಯಲ್ಲಿರುವ ಇಸ್ರೇಲ್ ಪಟ್ಟಣಗಳ ನಾಗರೀಕರನ್ನು ಇಸ್ರೇಲ್ ಸ್ಥಳಾಂತರಿಸುತ್ತಿದೆ. ಇಸ್ರೇಲ್ ದಾಳಿ ವೇಳೆ ಪ್ರತಿದಾಳಿಗಳಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇಸ್ರೇಲ್ ಸೇನೆ ಮುನ್ನೆಚ್ಚರಿಕೆ ಕ್ರಮವಾಗಿ ನಾಗರೀಕರನ್ನು ಸ್ಥಳಾಂತರಿಸುತ್ತಿದೆ.