ಇರಾನ್ ಮೇಲೆ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ನಡುವೆ ಭಿನ್ನಮತ ಉಂಟಾಗಿದೆ. ಯುದ್ಧಕ್ಕೆ ನೆತನ್ಯಾಹು ಪಟ್ಟು ಹಿಡಿದರೆ, ಟ್ರಂಪ್ ಮಾತುಕತೆಗೆ ಒಲವು ತೋರಿದ್ದಾರೆ.
ವಾಷಿಂಗ್ಟನ್ (ಮೇ.22): ಇರಾನ್ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಭಿನ್ನಮತ ಸೃಷ್ಟಿಯಾಗಿದೆ. ಯುದ್ಧದ ವಿಚಾರವಾಗಿ ಉಭಯ ನಾಯಕರು ಪರಸ್ಪರ ಒಂದೂವರೆ ಗಂಟೆ ಕಾಲ ದೂರವಾಣಿ ಮೂಲಕ ಮಾತನಾಡಿದ್ದು, ಈ ವೇಳೆ ತೀವ್ರವಾಗಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ.

‘ಇರಾನ್ ಮೇಲೆ ವಾಯ ದಾಳಿ ಪುನರ್ ಆರಂಭಿಸಬೇಕು. ಹೇರ್ ಇಸ್ ಆನ್ ಫೈರ್ (ಯುದ್ಧ ತುರ್ತು ಅಗತ್ಯ)’ ಎಮದು ನೆತನ್ಯಾಹು ಆಗ್ರಹಿಸಿದರು. ಇದನ್ನು ತಳ್ಳಿಹಾಕಿದ ಟ್ರಂಪ್, ‘ಮೊದಲು ಸಂಧಾನ ಮಾತುಕತೆಗೆ ಅವಕಾಶ ನೀಡೋಣ’ ಎಂದರು. ಇದೇ ಉಭಯ ನಾಯಕರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇರಾನ್ ಜತೆಗಿನ ಶಾಂತಿ ಮಾತುಕತೆಯ ಯಶಸ್ಸಿನ ಬಗ್ಗೆ ನೆತನ್ಯಾಹು ಅನುಮಾನ ಇದೆ. ಏಕೆಂದರೆ ಪಾಕಿಸ್ತಾನ ತನ್ನ ಸ್ವಾರ್ಥ ಸಾಧನೆಗೆ ಶಾಂತಿ ಬಯಸುತ್ತಿದೆ ಎಂಬದು ಅವರ ಅನಿಸಿಕೆ. ಈ ಹಿನ್ನೆಲೆಯಲ್ಲಿ ಯುದ್ಧ ಪುನರ್ ಆರಂಭಿಸಿ ಇರಾನ್‌ನ ಮಿಲಿಟರಿ, ಸೂಕ್ಷ್ಮ ಮೂಲಸೌಲಭ್ಯಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದಾರೆ.
‘ಆದರೆ, ಟ್ರಂಪ್ ಇದಕ್ಕೂ ಮೊದಲು ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸೋಣ. ಒಂದು ವೇಳೆ ಮಾತುಕತೆ ವಿಫಲವಾದರೆ ಯುದ್ಧಕ್ಕೆ ಸಿದ್ಧ’ ಎಂದೂ ತಿಳಿಸಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ.
ಭಾನುವಾರವಷ್ಟೇ ಟ್ರಂಪ್ ಅವರು ಕತಾರ್ ಮತ್ತು ಯುಎಇಯ ಮನವಿ ಮೇರೆಗೆ ಇರಾನ್ ಮೇಲಿನ ದಾಳಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಸ್ಥಾಪನೆಗೆ ಕತಾರ್ ಮತ್ತು ಪಾಕಿಸ್ತಾನ ಸೇರಿಕೊಂಡು ಶಾಂತಿ ಒಪ್ಪಂದದ ಕರಡೊಂದನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.
ಯುರೇನಿಯಂ ಹಸ್ತಾಂತರ: ಟ್ರಂಪ್ ಕೋರಿಕೆಗೆ ಇರಾನ್ ತಿರಸ್ಕಾರ
ಟೆಹ್ರಾನ್: ‘ಅಂತಿಮ ಶಾಂತಿ ಒಪ್ಪಂದ ಈಡೇರಬೇಕಾದರೆ ಇರಾನ್ ತನ್ನ ಸಂಸ್ಕರಿತ ಯುರೇನಿಯಂ ಅನ್ನು ಹಸ್ತಾಂತರಿಸಬೇಕು’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರಿಕೆಯನ್ನು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತಿರಸ್ಕರಿಸಿದ್ದಾರೆ. ‘ನಾವು ದೇಶದ ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂ ಅನ್ನು ವಿದೇಶಕ್ಕೆ ಕಳಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕವು ಟೆಹ್ರಾನ್‌ಗೆ, ‘400 ಕೇಜಿ ಸಂವರ್ಧಿತ ಯುರೇನಿಯಂ ಅನ್ನು ಹಸ್ತಾಂತರಿಸಬೇಕು, ಕಾರ್ಯಾಚರಣೆಗಳನ್ನು ಒಂದೇ ಪರಮಾಣು ಘಟಕಕ್ಕೆ ಸೀಮಿತಗೊಳಿಸಬೇಕು ಮತ್ತು ಯುದ್ಧ-ಸಂಬಂಧಿತ ಹಾನಿಗೆ ವಾಷಿಂಗ್ಟನ್ ಪರಿಹಾರವನ್ನು ಪಾವತಿಸುವುದಿಲ್ಲ ಎಂದು ಒಪ್ಪಿಕೊಳ್ಳಬೇಕು’ ಎಂದು ಒತ್ತಾಯಿಸಿತ್ತು. ಈ ಪೈಕಿ ಒಂದು ಬೇಡಿಕೆಗೆ ಈಗ ಇರಾನ್ ತಿರಸ್ಕರಿಸಿದೆ. ಇದು ಯುದ್ಧ ಸಂಧಾನಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ.


