ಪ್ರಧಾನಿ ಮೋದಿಯ ಇಟಲಿ ಪ್ರವಾಸ, ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕ್ಲೇಟ್ ನೀಡಿರುವುದಕ್ಕೆ ವಿಪಕ್ಷ ಟೀಕಿಸಿದೆ. ಇದರ ಬೆನ್ನಲ್ಲೇ ಮೋದಿ ಹೊಸ ರೀಲ್ ಹಂಚಿಕೊಂಡಿದ್ದಾರೆ. ಈ ರೀಲ್ ವೈರಲ್ ಆಗಿದೆ.

ದೆಹಲಿ (ಮೇ.21) : ಪ್ರಧಾನಿ ಮೋದಿಯ ಪಂಚ ದೇಶಗಳ ಪ್ರವಾಸದಲ್ಲಿ ಇಟಲಿ ಪ್ರವಾಸ ಭಾರಿ ಕೋಲಾಹಲ ಸೃಷ್ಟಿಸಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಕೊಲೊಸಿಯಂ ಭೇಟಿ ಫೋಟೋಗಳು ಭಾರಿ ಚರ್ಚೆಯಾಗುತ್ತಿದ್ದಂತೆ ಮೆಲೋಡಿ ಚಾಕ್ಲೇಟ್ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ಜಾರ್ಜಿಯಾ ಮೆಲೋನಿಗೆ ಪ್ರಧಾನಿ ಮೋದಿ ಪಾರ್ಲೆಯ ಮೆಲೋಡಿ ಚಾಕ್ಲೇಟ್ ಗಿಫ್ಟ್ ನೀಡಿದ್ದರು. ಈ ವಿಡಿಯೋ ವಿಪಕ್ಷಗಳ ಟೀಕೆಗೆ ಕಾರಣವಾಗಿತ್ತು. ವಿಡಿಯೋ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗಿನ ಮತ್ತೊಂದು ರೀಲ್ ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ವಿಪಕ್ಷಗಳ ಟೀಕೆ, ವಿವಾದದ ಬೆನ್ನಲ್ಲೇ ರೀಲ್ ಹಂಚಿಕೊಂಡ ಮೋದಿ

ಮೆಲೋಡಿ ವಿವಾದಗಳಿಂದ ಪ್ರಧಾನಿ ಮೋದಿ ತಲೆಕೆಡಿಸಿಕೊಂಡಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಅವರು ಇಟಲಿ ಪ್ರಧಾನಿ ಜೋರ್ಜಿಯಾ ಮೆಲೋನಿಗೆ 'ಪಾರ್ಲೆ ಮೆಲೋಡಿ' ಚಾಕ್ಲೇಟ್ ಕೊಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡ ರಾಹುಲ್ ಗಾಂಧಿ, "ದೇಶದ ಆರ್ಥಿಕತೆ ಸಂಕಷ್ಟದಲ್ಲಿರುವಾಗ ಮೋದಿ ರೀಲ್ಸ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ," ಎಂದು ಟೀಕಿಸಿದ್ದರು. ಈ ಟೀಕೆ ರಾಜಕೀಯವಾಗಿಯೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಪ್ರಧಾನಿ ಮೋದಿ, ಇಂದು ಮತ್ತೆ ಮೆಲೋನಿ ತಮಗೆ ನೀಡಿದ ಸ್ವಾಗತ ಹಾಗೂ ಚಾಕ್ಲೇಟ್ ನೀಡಿದ ಕ್ಷಣಗಳ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇಟಲಿ ಪ್ರವಾಸವು ದೊಡ್ಡ ಯಶಸ್ಸು ಕಂಡಿದೆ ಎಂದು ಹೇಳುತ್ತಾ ಈ ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಮೊದಲ ಕೆಲವು ಗಂಟೆಗಳಲ್ಲೇ 1.5 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇಟಲಿ ಭಾರತದಲ್ಲಿ 1,80,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದೆ.

ಐದು ದೇಶಗಳ ಪ್ರವಾಸ ಮುಗಿಸಿ ನರೇಂದ್ರ ಮೋದಿ ದೆಹಲಿಗೆ ವಾಪಸ್ ಆಗಿದ್ದಾರೆ. ಈ ಮಧ್ಯೆ, "ಪ್ರಧಾನಿ ಮೋದಿ ದೇಶಕ್ಕೆ ದೊಡ್ಡ ಮಟ್ಟದ ಹೂಡಿಕೆ ತರುತ್ತಿರುವುದು ರಾಹುಲ್ ಗಾಂಧಿಗೆ ಕಾಣಿಸುತ್ತಿಲ್ಲವೇ?" ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಹೆಚ್ಚಿನ ಮಾತುಕತೆಗಾಗಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ನಾಡಿದ್ದು ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ.

ಇವತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. "ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಅದನ್ನು ಸರಿಪಡಿಸಲು ವಿದೇಶದಿಂದ ಹೆಚ್ಚು ಇಂಧನ ಆಮದು ಮಾಡಿಕೊಳ್ಳಲು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ನರೇಂದ್ರ ಮೋದಿ ಸಹಿ ಹಾಕಿದ ಒಪ್ಪಂದಗಳನ್ನು ನೋಡುತ್ತಿಲ್ಲವೇ?" ಎಂದು ಜೈಶಂಕರ್ ಕೇಳಿದ್ದಾರೆ. "ಇದನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ರಾಹುಲ್ ಗಾಂಧಿಗೆ ಇಲ್ಲವೇ?" ಅಂತಾನೂ ಜೈಶಂಕರ್ ಪ್ರಶ್ನಿಸಿದ್ದಾರೆ. ಆದರೆ, ಮೋದಿ ಆರ್ಥಿಕ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ವಾದವನ್ನು ಕಾಂಗ್ರೆಸ್ ಪುನರುಚ್ಚರಿಸುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ನಾಡಿದ್ದು ನಾಲ್ಕು ದಿನಗಳ ಭೇಟಿಗಾಗಿ ದೆಹಲಿಗೆ ಬರಲಿದ್ದಾರೆ. ಈ ವೇಳೆ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಮುಂದುವರಿಸುವ ಬಗ್ಗೆ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.

Scroll to load tweet…