ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಹ*ತ್ಯೆಗೆ 500 ಕೋಟಿ ಬಹುಮಾನ ಘೋಷಿಸುವ ವಿಧೇಯಕವನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿದೆ. ಈ ನಡುವೆ, ಅಮೆರಿಕ ಇರಾನ್ ಮೇಲಿನ ದಾಳಿಯನ್ನು ಮುಂದೂಡಿದೆ.

ಟೆಹ್ರಾನ್ / ವಾಷಿಂಗ್ಟನ್ (ಮೇ.19): ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ಬಂದು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹ*ತ್ಯೆ ಮಾಡುವವರಿಗೆ ಬರೋಬ್ಬರಿ 500 ಕೋಟಿ ರೂಪಾಯಿಗಿಂತಲೂ (50 ಮಿಲಿಯನ್ ಯುರೋ) ಅಧಿಕ ಮೊತ್ತದ ಬಂಪರ್ ಇನಾಮು ಘೋಷಿಸುವ ವಿವಾದಾತ್ಮಕ ವಿಧೇಯಕವನ್ನು (Bill) ತರಲು ಇರಾನ್ ಸಂಸತ್ತು ಭಾರಿ ಸಿದ್ಧತೆ ನಡೆಸುತ್ತಿದೆ. ಬ್ರಿಟನ್‌ನ 'ದ ಟೆಲಿಗ್ರಾಫ್' ವರದಿಯ ಪ್ರಕಾರ, ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯು ಈ ವಿಧೇಯಕದ ಕರಡು ಸಿದ್ಧಪಡಿಸುತ್ತಿದೆ. ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಮಾತನಾಡಿ, ಈ ವಿಧೇಯಕಕ್ಕೆ ‘ಇಸ್ಲಾಮಿಕ್ ರಿಪಬ್ಲಿಕ್‌ನ ಮಿಲಿಟರಿ ಮತ್ತು ಭದ್ರತಾ ಪಡೆಗಳ ಪ್ರತೀಕಾರದ ಕ್ರಮ’ ಎಂದು ಹೆಸರಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಇರಾನ್ ಸಂಸದ ಮಹಮೂದ್ ನಬಾವಿಯನ್ ಈ ಕುರಿತು ಮಾಹಿತಿ ನೀಡಿ, "ಟ್ರಂಪ್ ಮತ್ತು ನೆತನ್ಯಾಹು ಅವರನ್ನು ನರಕಕ್ಕೆ ಕಳುಹಿಸುವವರಿಗೆ ಭಾರಿ ನಗದು ಬಹುಮಾನ ನೀಡುವ ಈ ಮಸೂದೆಯ ಮೇಲೆ ಸಂಸತ್ತು ಶೀಘ್ರದಲ್ಲೇ ಮತದಾನ ನಡೆಸಲಿದೆ" ಎಂದು ಹೇಳಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ದೇಶದ ಪ್ರಮುಖ ಸೇನಾ ಮತ್ತು ರಾಜಕೀಯ ನಾಯಕರ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಕಾರಣ ಎಂದು ಆರೋಪಿಸಿ ಇರಾನ್ ಈ ತೀವ್ರ ಸ್ವರೂಪದ ನಿರ್ಧಾರಕ್ಕೆ ಬಂದಿದೆ. ಇರಾನ್ ಪ್ರಕಾರ, ಕಳೆದ ಫೆಬ್ರವರಿಯಲ್ಲಿ ನಡೆದ ಜಂಟಿ ದಾಳಿಗೆ ಟ್ರಂಪ್, ನೆತನ್ಯಾಹು ಮತ್ತು ಯುಎಸ್ ಸೆಂಟ್ರಲ್ ಕಮಾಂಡ್‌ನ ಅಡ್ಮಿರಲ್ ಬ್ರಾಡ್ ಕೂಪರ್ ಅವರೇ ನೇರ ಹೊಣೆಗಾರರಾಗಿದ್ದಾರೆ.

ಮಂಗಳವಾರದ ಭೀಕರ ದಾಳಿ ಮುಂದೂಡಿದ ಟ್ರಂಪ್

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಇರಾನ್ ಮೇಲೆ ಮಂಗಳವಾರ ನಡೆಸಲು ಯೋಜಿಸಲಾಗಿದ್ದ ಬೃಹತ್ ಮಿಲಿಟರಿ ದಾಳಿಯನ್ನು ಸದ್ಯಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಗಲ್ಫ್ ದೇಶಗಳ ನಾಯಕರು ಮಧ್ಯಸ್ಥಿಕೆ ವಹಿಸಿ, ಶಾಂತಿ ಮಾತುಕತೆಗೆ ಮತ್ತೊಂದು ಅವಕಾಶ ನೀಡುವಂತೆ ಕೆಲವು ದಿನಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ರಣರಂಗದ ಇಂದಿನ 5 ಪ್ರಮುಖ ಅಪ್‌ಡೇಟ್‌ಗಳು

ಟ್ರಂಪ್ ಖಡಕ್ ವಾರ್ನಿಂಗ್: 'ಬೇಗ ಒಪ್ಪಂದ ಮಾಡಿಕೊಳ್ಳಿ, ಇಲ್ಲದಿದ್ದರೆ ಏನೂ ಉಳಿಯಲ್ಲ': ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಟು ಶಬ್ದಗಳಲ್ಲಿ ಧಮ್ಕಿ ಹಾಕಿದ್ದು, "ಸಮಯದ ಅತ್ಯಂತ ವೇಗವಾಗಿ ಓಡುತ್ತಿದೆ. ಇರಾನ್ ತಕ್ಷಣವೇ ಶರಣಾಗಿ ಒಪ್ಪಂದಕ್ಕೆ ಬಾರದಿದ್ದರೆ, ಮುಂದಿನ ದಿನಗಳಲ್ಲಿ ಇರಾನ್ ದೇಶದಲ್ಲಿ ಏನೂ ಉಳಿಯದಂತೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದಿದ್ದಾರೆ.

ಇರಾನ್ ಮೇಲೆ ಮುಗಿಬೀಳಲು ಅಮೆರಿಕ-ಇಸ್ರೇಲ್ ಜಂಟಿ ಸಿದ್ಧತೆ: ಜರ್ಮನಿಯ ಅಮೆರಿಕನ್ ಮಿಲಿಟರಿ ಬೇಸ್‌ಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತ ನೂರಾರು ಕಾರ್ಗೋ ಯುದ್ಧ ವಿಮಾನಗಳು ಇಸ್ರೇಲ್ ತಲುಪಿವೆ ಎಂದು ವರದಿಯಾಗಿದೆ. ಬೆಂಜಮಿನ್ ನೆತನ್ಯಾಹು ಮತ್ತು ಟ್ರಂಪ್ ಇರಾನ್ ಮೇಲಿನ ಮುಂದಿನ ಸಂಭಾವ್ಯ ಜಂಟಿ ದಾಳಿಯ ಬ್ಲೂಪ್ರಿಂಟ್ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಬಿಕ್ಕಟ್ಟು; 1,500 ವಾಣಿಜ್ಯ ಹಡಗುಗಳು ಬಂಧಿ: ಅಮೆರಿಕ-ಇರಾನ್ ನಡುವಿನ ಕಡಲ ದಿಗ್ಬಂಧನದಿಂದಾಗಿ ವಿಶ್ವ ವ್ಯಾಪಾರದ ಜೀವನಾಡಿಯಾಗಿರುವ 'ಸ್ಟ್ರೇಟ್ ಆಫ್ ಹೋರ್ಮುಜ್'ನಲ್ಲಿ ಬರೋಬ್ಬರಿ 1,500 ಕ್ಕೂ ಹೆಚ್ಚು ಸರಕು ಸಾಗಣೆ ಹಡಗುಗಳು ಸಿಲುಕಿಕೊಂಡಿವೆ. ಇವುಗಳಲ್ಲಿ 20 ಸಾವಿರಕ್ಕೂ ಹೆಚ್ಚು ನಾವಿಕರಿದ್ದು, ಯಾವುದೇ ಕ್ಷಣದಲ್ಲೂ ಇವುಗಳ ಮೇಲೆ ಇರಾನ್‌ನಿಂದ ಡ್ರೋನ್ ಅಥವಾ ಮಿಸೈಲ್ ದಾಳಿಯಾಗುವ ಭೀತಿ ಎದುರಾಗಿದೆ.

ಸೌದಿ ಅರೇಬಿಯಾ ಮೇಲೆ ಡ್ರೋನ್ ಅಟ್ಯಾಕ್; ಕತಾರ್-ಕುವೈತ್ ಆಕ್ರೋಶ: ಇರಾಕ್ ದಿಕ್ಕಿನಿಂದ ಸೌದಿ ಅರೇಬಿಯಾದತ್ತ ನುಗ್ಗಿ ಬಂದ 3 ಅಪಾಯಕಾರಿ ಡ್ರೋನ್‌ಗಳನ್ನು ತನ್ನ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಹೊಡೆದು ಉರುಳಿಸಿರುವುದಾಗಿ ಸೌದಿ ಅರೇಬಿಯಾ ಸೇನೆ ಘೋಷಿಸಿದೆ. ಕುವೈತ್ ಮತ್ತು ಕತಾರ್ ದೇಶಗಳು ಇದನ್ನು ಸೌದಿಯ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದು ತೀವ್ರವಾಗಿ ಖಂಡಿಸಿವೆ.

ಇರಾನ್‌ನಲ್ಲಿ ಹೆಣ್ಣುಮಕ್ಕಳಿಗೆ ಎಕೆ-47 ರೈಫಲ್ ತರಬೇತಿ: ಅಮೆರಿಕದೊಂದಿಗಿನ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ, ಇರಾನ್ ತನ್ನ ದೇಶದ ಸಾಮಾನ್ಯ ನಾಗರಿಕರಿಗೆ ಸೇನಾ ತರಬೇತಿ ನೀಡಲು ಆರಂಭಿಸಿದೆ. ಅಲ್ಲಿನ ಮುಸ್ಲಿಂ ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಅತ್ಯಂತ ವೇಗವಾಗಿ ಎಕೆ-47 (AK-47) ಅಸಾಲ್ಟ್ ರೈಫಲ್‌ಗಳನ್ನು ಅಸೆಂಬಲ್ ಮತ್ತು ಡಿಸಅಸೆಂಬಲ್ ಮಾಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.