ಏರ್‌ಸ್ಟ್ರೈಕ್ ಬೆನ್ನಲ್ಲೇ ಇರಾನ್-ಪಾಕ್ ನಡುವೆ ಶುರುವಾಗುತ್ತಾ ಯುದ್ಧ? ಯಾವ ದೇಶದ ಸೇನೆ ಬಲಿಷ್ಠ, ಇಲ್ಲಿದೆ ಡೀಟೇಲ್ಸ್!
Iran and Pakistan Airstrike ಪಾಕಿಸ್ತಾನದ ಒಳಗಿರುವ ಭಯೋತ್ಪಾದಕ ತಾಣಗಳ ಮೇಲೆ ಇರಾನ್ ಏರ್‌ಸ್ಟ್ರೈಕ್ ಮಾಡಿದ ಬೆನ್ನಲ್ಲಿಯೇ, ಪಾಕಿಸ್ತಾನ ಕೂಡ ಇರಾನ್‌ನ ದೇಶದ ಮೇಲೆ ಏರ್‌ಸ್ಟ್ರೈಕ್ ಮಾಡಿದ್ದಾಗಿ ಹೇಳಿಕೊಂಡಿದೆ. ಇದರ ಬೆನ್ನಲ್ಲಿಯೇ ಪಾಕಿಸ್ತಾನ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗಲಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ನವದೆಹಲಿ (ಜ.18): ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ. ಇದಾದ ನಂತರ ಇರಾನ್‌ನಲ್ಲಿರುವ ಬಲೂಚ್ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದಾಗಿ ಪಾಕಿಸ್ತಾನ ಗುರುವಾರ ಹೇಳಿಕೊಂಡಿದೆ. ಫೈಟರ್ ಜೆಟ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಪಾಕಿಸ್ತಾನವು ಬಲೂಚ್ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿರುವ ಫೋಟೋಗಳು ಕೂಡ ಬಹಿರಂಗವಾಗಿದೆ. ಇದರ ಬೆನ್ನಲ್ಲಿಯೇ ಇರಾನ್ ತನ್ನ ಸೇನಾಪಡೆಗಳು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಗಡಿಭಾಗದಲ್ಲಿ ಕಳಿಸಲು ಆರಂಭಿಸಿದ್ದು, ಪಾಕಿಸ್ತಾನ ಕೂಡ ಇದೇ ರೀತಿಯ ಸಿದ್ಧತೆ ಆರಂಭಿಸಿದೆ. ಇದರ ನಡುವೆ ಎರಡೂ ದೇಶಗಳ ನಡುವೆ ಯುದ್ಧ ಆರಂಭವಾಗಬಹುದು ಎನ್ನುವ ಆತಂಕ ವಿಶ್ವದಲ್ಲಿ ಮನೆ ಮಾಡಿದೆ. ಈ ನಡುವೆ ಎರಡೂ ದೇಶಗಳ ಸೇನೆಗಳ ಪೈಕಿ ಯಾವ ಸೇನೆ ಬಲಿಷ್ಠ ಎನ್ನುವುದರ ವಿವರ ಇಲ್ಲಿದೆ. ಗ್ಲೋಬಲ್ ಫೈರ್‌ಪವರ್ಸ್ ಮಿಲಿಟರಿ ಸ್ಟ್ರೆಂತ್ ಇಂಡೆಕ್ಸ್‌ನ ಹೊಸ ಪಟ್ಟಿಯ ಪ್ರಕಾರ, ಪಾಕಿಸ್ತಾನವು ವಿಶ್ವದ ಹತ್ತು ಅತ್ಯಂತ ಶಕ್ತಿಶಾಲಿ ಮಿಲಿಟರಿ ದೇಶಗಳಲ್ಲಿ 9 ನೇ ಸ್ಥಾನದಲ್ಲಿದೆ. ಇರಾನ್ 14 ನೇ ಸ್ಥಾನದಲ್ಲಿದೆ.
ಪಾಕಿಸ್ತಾನ ವರ್ಸಸ್ ಇರಾನ್: ಯಾವ ದೇಶದ ಸೇನಾಪಡೆ ಬಲಿಷ್ಠ
ಸೈನಿಕರು: ಸೈನಿಕರ ವಿಚಾರದಲ್ಲಿ ಮೀಸಲು ಹಾಗೂ ಅರೇಸೇನಾ ಪಡೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಪಾಕಿಸ್ತಾನದ ಸೇನೆ ಇರಾನ್‌ಗಿಂತ ಬಲಿಷ್ಠವಾಗಿದೆ. ಪಾಕಿಸ್ತಾನದಲ್ಲಿರುವ ಜನಸಂಖ್ಯೆ 10.64 ಕೋಟಿ. ಆದರೆ, ಇರಾನ್ ಜನಸಂಖ್ಯೆ 4.90 ಕೋಟಿ. ಪಾಕಿಸ್ತಾನದಲ್ಲಿ 8.42 ಕೋಟಿ ಸೈನಿಕರು ಯುದ್ಧಕಾಲದಲ್ಲಿನ ಸೇವೆಗೆ ಫಿಟ್ ಆಗಿದ್ದರೆ, ಇರಾನ್‌ನಲ್ಲಿ 4.11 ಕೋಟಿ ಸೈನಿಕರು ಫಿಟ್ ಆಗಿದ್ದಾರೆ. ಪ್ರಸ್ತುತ ಪಾಕಿಸ್ತಾನ ತನ್ನ ಸೇನೆಯಲ್ಲಿ 6.64 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿಯನ್ನು ಹೊಂದಿದ್ದರೆ, ಇರಾನ್‌ನಲ್ಲಿ 6.10 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಇದ್ದಾರೆ. ಪಾಕಿಸ್ತಾನದಲ್ಲಿ ಮೀಸಲು ಸೈನಿಕರ ಸಂಖ್ಯೆ 5.50 ಲಕ್ಷ. ಇರಾನ್‌ನಲ್ಲಿ ಈ ಸಂಖ್ಯೆ 3.50 ಲಕ್ಷ. ಪಾಕಿಸ್ತಾನದ ಪ್ಯಾರಾಮಿಲಿಟರಿ ಫೋರ್ಸ್ ಬಲ 5 ಲಕ್ಷವಾಗಿದ್ದರೆ, ಇರಾನ್ 2.20 ಲಕ್ಷದ ಪ್ಯಾರಾಮಿಲಿಟರಿ ಬಲ ಹೊಂದಿದೆ.
ವಾಯುಸೇನೆಯಲ್ಲೂ ಪಾಕ್ ಬಲಿಷ್ಠ: ಪಾಕಿಸ್ತಾನವು ಒಟ್ಟು 1434 ಸೇನಾ ವಿಮಾನಗಳನ್ನು ಹೊಂದಿದ್ದರೆ, ಇರಾನ್ 551 ಸೇನಾವಿಮಾನ ಹೊಂದಿದೆ.. ಪಾಕಿಸ್ತಾನವು 387 ಯುದ್ಧ ವಿಮಾನಗಳನ್ನು ಹೊಂದಿದ್ದರೆ, ಇರಾನ್ 186 ಯುದ್ಧವಿಮಾನ ಹೊಂದಿದೆ. ಅಟಾಕ್ ಏರ್‌ಕ್ರಾಫ್ಟ್ ಬಗ್ಗೆ ಮಾತನಾಡುವುದಾದರೆ, ಪಾಕಿಸ್ತಾನದಲ್ಲಿ ಇದರ ಸಂಖ್ಯೆ 90 ಇದ್ದರೆ, ಇರಾನ್‌ನಲ್ಲಿ 23 ಇದೆ.ಪಾಕಿಸ್ತಾನ 60 ಸಾರಿಗೆ ಸೇನಾ ವಿಮಾನ ಹೊಂದಿದ್ದರೆ, ಇರಾನ್‌ನಲ್ಲಿ 86 ಸಾರಿಗೆ ಸೇನಾ ವಿಮಾನಗಳಿವೆ. ಪಾಕಿಸ್ತಾನ 549 ಟ್ರೇನಿಂಗ್ ಏರ್‌ಕ್ರಾಫ್ಟ್‌ಗಳಿದ್ದರೆ, ಇರಾನ್ 102 ವಿಮಾನ ಹೊಂದಿದೆ. ಇವುಗಳನ್ನು ಯುದ್ಧದ ಸಮಯದಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸಬಹುದು.
ವಿಶೇಷ ಕಾರ್ಯಾಚರಣೆಗಳಿಗಾಗಿ ಬಳಸುವ 25 ಯುದ್ಧವಿಮಾನ ಪಾಕಿಸ್ತಾನದ ಬಳಿ ಇದ್ದರೆ, ಇರಾನ್‌ನಲ್ಲಿ ಇದರ ಸಂಖ್ಯೆ ಕೇವಲ 10. 4 ಏರಿಯಲ್ ಟ್ಯಾಂಕರ್ ಪ್ಲೇನ್‌ಗಳನ್ನು ಪಾಕ್ ಹೊಂದಿದ್ದರೆ, ಇರಾನ್ ಇಂಥ 7 ವಿಮಾನಗಳನ್ನು ಹೊಂದಿದೆ. ಪಾಕಿಸ್ತಾನದಲ್ಲಿ 352 ಹೆಲಿಕಾಪ್ಟರ್‌ಗಳಿದ್ದು, ಇರಾನ್‌ನಲ್ಲಿ 129 ಹೆಲಿಕಾಪ್ಟರ್‌ಗಳಿವೆ. ದಾಳಿ ಹೆಲಿಕಾಪ್ಟರ್ ಲೆಕ್ಕ ಹಾಕುವುದಾದರೆ, ಪಾಕಿಸ್ತಾನದಲ್ಲಿ 57 ಅಟಾಕ್ ಹೆಲಿಕಾಪ್ಟರ್‌ಗಳಿದ್ದು, ಇರಾನ್‌ನಲ್ಲಿ 13 ದಾಳಿ ಹೆಲಿಕಾಪ್ಟರ್‌ಗಳಿದೆ.
ಗನ್-ಆರ್ಟಿಲರಿಯಲ್ಲೂ ಪಾಕ್ ಮುಂದು: ಪಾಕಿಸ್ತಾನವು ಹೆಚ್ಚು ಟ್ಯಾಂಕ್‌ಗಳನ್ನು ಹೊಂದಿದೆ. ಪಾಕಿಸ್ತಾನವು 3742 ಟ್ಯಾಂಕ್‌ಗಳನ್ನು ಹೊಂದಿದೆ, ಇರಾನ್ 1996 ಅನ್ನು ಹೊಂದಿದೆ. ಆದರೆ ಪಾಕಿಸ್ತಾನವು 50,523 ಶಸ್ತ್ರಸಜ್ಜಿತ ವಾಹನಗಳನ್ನು ಹೊಂದಿದ್ದರೆ, ಇರಾನ್ 65,765 ವಾಹನ ಹೊಂದಿದೆ. ಪಾಕಿಸ್ತಾನವು 752 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದೆ, ಆದರೆ ಇರಾನ್ 580 ಫಿರಂಗಿ ಹೊಂದಿದೆ. ಹೊತ್ತೊಯ್ಯಬಹುದಾದ ಆರ್ಟಿಲರಿ ಬಗ್ಗೆ ಮಾತನಾಡುವುದಾದರೆ, ಪಾಕಿಸ್ತಾನದಲ್ಲಿ ಇದರ ಸಂಖ್ಯೆ 3238 ಇದ್ದು, ಇರಾನ್‌ನಲ್ಲಿ 2050 ಇದೆ. ಪಾಕಿಸ್ತಾನ 9 ಮೊಬೈಲ್ ರಾಕೆಟ್ ಲಾಂಚರ್‌ಗಳನ್ನು ಹೊಂದಿದ್ದರೆ, ಇರಾನ್ 5 ಹೊಂದಿದೆ.
ಪಾಕಿಸ್ತಾನಕ್ಕಿಂತ ಇರಾನ್ ಹೆಚ್ಚು ಸಬ್‌ಮರೀನ್: ಪಾಕಿಸ್ತಾನದ ನೌಕಾಪಡೆಯು 114 ವಾಹನಗಳನ್ನು ಹೊಂದಿದ್ದರೆ, ಆದರೆ ಇರಾನ್‌ನ 101 ಹೊಂದಿದೆ. ಅಂದರೆ ಇದು ಎಲ್ಲಾ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಒಳಗೊಂಡಿದೆ. ಪಾಕಿಸ್ತಾನವು 8 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದ್ದರೆ, ಇರಾನ್ 19 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಪಾಕಿಸ್ತಾನವು 2 ಡಿಸ್ಟ್ರಾಯರ್‌ಗಳನ್ನು ಹೊಂದಿದೆ, ಆದರೆ ಇರಾನ್ ಯಾವುದೂ ಹೊಂದಿಲ್ಲ. ಪಾಕಿಸ್ತಾನವು 9 ಯುದ್ಧನೌಕೆಗಳನ್ನು ಹೊಂದಿದೆ, ಇರಾನ್ ಇಳಿ ಇಂಥ 7 ಯುದ್ಧ ನೌಕೆಗಳಿವೆ. ಪಾಕಿಸ್ತಾನವು 7 ಕಾರ್ವೆಟ್ಗಳನ್ನು ಹೊಂದಿದೆ, ಆದರೆ ಇರಾನ್ 3. ಪಾಕಿಸ್ತಾನವು 69 ಗಸ್ತು ಹಡಗುಗಳನ್ನು ಹೊಂದಿದೆ, ಇರಾನ್ ಕೇವಲ 21 ಅನ್ನು ಹೊಂದಿದೆ.
ಇರಾನ್ ವಿರುದ್ಧ ತಿರುಗಿಬಿದ್ದ ಪಾಕಿಸ್ತಾನ: ಪ್ರತ್ಯೇಕತಾವಾದಿ ಗುಂಪುಗಳ ಮೇಲೆ ಪ್ರತೀಕಾರ ದಾಳಿ
ಇರಾನ್‌ನಲ್ಲಿ ಹೆಚ್ಚಿನ ವಿಮಾನ ನಿಲ್ದಾಣ: ಲಾಜಿಸ್ಟಿಕ್ಸ್ ಬೆಂಬಲಕ್ಕಾಗಿ ಪಾಕಿಸ್ತಾನವು 151 ವಿಮಾನ ನಿಲ್ದಾಣಗಳನ್ನು ಹೊಂದಿದೆ. ಆದರೆ ಇರಾನ್ ಎರಡು ಪಟ್ಟು ಹೆಚ್ಚು ಹೊಂದಿದೆ. ಅಂದರೆ 319. ಪಾಕಿಸ್ತಾನವು 58 ವ್ಯಾಪಾರಿ ಹಡಗುಗಳನ್ನು ಹೊಂದಿದೆ, ಆದರೆ ಇರಾನ್ ಹಲವು ಪಟ್ಟು ಹೆಚ್ಚು, 942. ಪಾಕಿಸ್ತಾನವು ಎರಡು ಬಂದರುಗಳನ್ನು ಹೊಂದಿದ್ದರೆ, ಇರಾನ್ 4 ಬಂದರುಗಳನ್ನು ಹೊಂದಿದೆ. ಈ ವಿಷಯಗಳು ಯುದ್ಧದ ಸಮಯದಲ್ಲಿ ಬ್ಯಾಕಪ್ ಬೆಂಬಲವಾಗಿ ಕಾರ್ಯನಿರ್ವಹಿಸುತ್ತವೆ.
ಕ್ಷಿಪಣಿ ದಾಳಿ ಬಳಿಕ ಪಾಕ್ ಇರಾನ್ ರಾಜತಾಂತ್ರಿಕ ಸಂಘರ್ಷ: ಪಾಕ್‌ನ ಉಗ್ರ ನೆಲೆ ಮೇಲೆ ದಾಳಿ ನಡೆಸಿದ್ದ ಇರಾನಿ ಸೇನೆ