ಇರಾನ್-ಇಸ್ರೇಲ್ ಸಂಘರ್ಷ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಸ್ವದೇಶಕ್ಕೆ ಕರೆತರುವ ಕೆಲಸವನ್ನು ಭಾರತ ಆರಂಭಿಸಿದೆ.
ನವದೆಹಲಿ (ಜೂ.19): ಇರಾನ್-ಇಸ್ರೇಲ್ ಸಂಘರ್ಷ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಸ್ವದೇಶಕ್ಕೆ ಕರೆತರುವ ಕೆಲಸವನ್ನು ಭಾರತ ಆರಂಭಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧು’ ಎಂದು ಹೆಸರಿಟ್ಟಿದೆ. ಇರಾನ್‌ನ ಉರ್ಮೇನಿಯಾ ವೈದ್ಯಕೀಯ ವಿವಿಯಲ್ಲಿ ಓದುತ್ತಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬುಧವಾರ ತಡರಾತ್ರಿ ದೆಹಲಿಗೆ ಬಂದಿಳಿದಿದೆ.
ಇರಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ತುರ್ಕ್‌ಮೆನಿಸ್ತಾನ ಹಾಗೂ ಅಜೆರ್‌ಬೈಜಾನ್ ಜತೆಗೂ ಭಾರತ ಮಾತುಕತೆ ನಡೆಸುತ್ತಿದ್ದು, ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಪ್ರಯತ್ನ ನಡೆಸುತ್ತಿದೆ. ಇಸ್ರೇಲ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಜರ್‌ಬೈಜಾನ್ ಭಾರತದ ಕಾರ್ಯಾಚರಣೆಗೆ ಸಂಪೂರ್ಣ ನೆರವು ನೀಡುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಅಜರ್‌ಬೈಜಾನ್ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತ್ತು. ಈಗ ಭಾರತಕ್ಕೆ ನೆರವು ನೀಡುವುದಾಗಿ ತಿಳಿಸಿದೆ.
ಇಸ್ರೇಲ್-ಇರಾನ್ ಕಾದಾಟ: ಇಸ್ರೇಲ್- ಇರಾನ್‌ನ ನಡುವೆ ಸಮರ 6ನೇ ದಿನಕ್ಕೆ ಕಾಲಿಟ್ಟಿದ್ದು ಘನಘೋರ ಯುದ್ಧ ನಡೆದಿದೆ. ಇಸ್ರೇಲಿ ಯುದ್ಧ ವಿಮಾನಗಳಿಂದ ಇರಾನ್ ರಾಜಧಾನಿಯ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದ್ದು, ಅಣು ಹಾಗೂ ಕ್ಷಿಪಣಿ ಘಟಕಗಳನ್ನು ನಾಶ ಮಾಡಲಾಗಿದೆ. ಇರಾನ್ ಆಂತರಿಕ ಭದ್ರತಾ ಸಂಸ್ಥೆ ಕಚೇರಿ ಕೂಡ ಧ್ವಂಸಗೊಂಡಿದೆ. ಇನ್ನೊಂದೆಡೆ ಇರಾನ್ ಕೂಡ ಪ್ರತೀಕಾರದ ದಾಳಿ ನಡೆಸಿದ್ದು, ಶಕ್ತಿಶಾಲಿ ಫಟಾಹ್-1 ಸೇರಿದಂತೆ ಸುಮಾರು 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಬಳಸಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೆ ದಾಳಿ ಮಾಡಿದೆ.
ಒಟ್ಟಾರೆ ದಾಳಿಯಲ್ಲಿ ಇರಾನ್ ಹೆಚ್ಚು ಸಾವು-ನೋವು ಅನುಭವಿಸಿದೆ. ವಾಷಿಂಗ್ಟನ್ ಮೂಲದ ಇರಾನಿನ ಮಾನವ ಹಕ್ಕುಗಳ ಗುಂಪಿನ ಪ್ರಕಾರ ಇರಾನ್‌ನಲ್ಲಿ 239 ನಾಗರಿಕರು ಸೇರಿದಂತೆ ಕನಿಷ್ಠ 585 ಜನರು ಸಾವನ್ನಪ್ಪಿದ್ದಾರೆ ಮತ್ತು 1,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 24 ಎಂದಷ್ಟೇ ಹೇಳಲಾಗಿದೆ.
ಫಟಾಹ್ ಕ್ಷಿಪಣಿ ಬಳಸಿ ಇರಾನ್ ದಾಳಿ: ಇರಾನ್ ಬುಧವಾರ ರಾತ್ರಿಯಿಡೀ ಇಸ್ರೇಲ್ ಮೇಲೆ ಫಟಾಹ್-1 ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿದೆ. ಇದು ಶಕ್ತಿಶಾಲಿ ಕ್ಷಿಪಣಿ ಆಗಿದ್ದು ವಾಯುರಕ್ಷಣಾ ವ್ಯವಸ್ಥೆಯನ್ನೂ ಮೀರಿ ದಾಳಿ ಮಾಡುವ ಶಕ್ತಿ ಹೊಂದಿದೆ. ಒಟ್ಟಾರೆ ಇರಾನ್ 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಫಟಾಹ್-1 ಅನ್ನು ಇರಾನ್ ಬಳಸಿದ್ದು ಮೊದಲೇನಲ್ಲ. ಅಕ್ಟೋಬರ್ 1, 2024ರಂದು ಜೆರುಸಲೆಂ ವಿರುದ್ಧದ ಆಪರೇಷನ್ ಟ್ರೂ ಪ್ರಾಮಿಸ್ ವೇಳೆಯೂ ಇದನ್ನು ಬಳಸಿತ್ತು.
