ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದೆ. ದುಬೈನ ಬುರ್ಜ್ ಖಲೀಫಾದಿಂದ ಕೇವಲ 4 ಕಿ.ಮೀ. ದೂರದಲ್ಲಿ ದಾಳಿ ನಡೆದಿದ್ದು, ಯುಎಇ, ಒಮಾನ್, ಕುವೈತ್ ಮತ್ತು ಬಹ್ರೈನ್‌ನ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳನ್ನು ಗುರಿಯಾಗಿಸಲಾಗಿದೆ.

ದುಬೈ (ಮಾ.13): ಅಮೆರಿಕ ಸ್ನೇಹಿ ದೇಶಗಳಾಗಿರುವ ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡುಯುದ್ಧದ 13ನೇ ದಿನವಾದ ಗುರುವಾರವೂಇರಾನ್ ದಾಳಿ ಮುಂದುವರಿಸಿದ್ದು, ಅನೇಕ ಕಡೆ ಡ್ರೋನ್‌ ಹಾಗೂ ಕ್ಷಿಪಣಿಗಳ ಮಳೆಗರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಮಾನ್‌ನ ಸಲಾಲಾ ಬಂದರಿನಲ್ಲಿ ಡ್ರೋನ್‌ ದಾಳಿ ಮಾಡಿರುವ ಅದು, ಯುಎಇಯ ಜೆಬೆಲ್‌ ಅಲಿ ಬಳಿ ಕಟೇನರ್‌ ಹಡಗು ಹಾಗೂ ಇರಾಕ್‌ನ ಹಲವು ಹಡಗುಗಳ ಮೇಲೂ ದಾಳಿ ನಡೆಸಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್‌ ಖಲೀಫಾದಿಂದ ಕೇವಲ 4 ಕಿ.ಮೀ. ದೂರದಲ್ಲೂ ಡ್ರೋನ್‌ ದಾಳಿ ನಡೆದಿದೆ. ದುಬೈ, ಕುವೈತ್‌ ಮತ್ತು ಬಹ್ರೈನ್‌ ಏರ್ಪೋರ್ಟ್‌ ಬಳಿಯೂ ದಾಳಿ ವರದಿಯಾಗಿದೆ.

ಬುರ್ಜ್‌ ಖಲೀಫಾ ಬಳಿ ದಾಳಿ:

ಬುರ್ಜ್ ಖಲೀಫಾದಿಂದ ಕೇವಲ 4 ಕಿ.ಮೀ. ಅಥವಾ 15 ನಿಮಿಷಗಳ ದೂರದಲ್ಲಿರುವ ಅಲ್ ಬದಾದಲ್ಲಿ ಸಣ್ಣ ಡ್ರೋನ್ ದಾಳಿ ನಡೆದಿದೆ. ಪ್ರತ್ಯೇಕವಾಗಿ, ದುಬೈ ಡೌನ್‌ಟೌನ್‌ನಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಟಲಿ ಸೇನಾ ನೆಲೆ ಗುರಿ:

ಇರಾಕ್‌ನ ಕುರ್ದಿಸ್ತಾನದಲ್ಲಿರುವ ಇಟಾಲಿಯನ್ ಸೇನಾ ನೆಲೆಯ ಮೇಲೆ ದಾಳಿ ನಡೆದಿದೆ. ಅದೃಷ್ಟವಶಾತ್ ಎಲ್ಲ ಸೈನಿಕರು ಬಂಕರ್‌ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ತಿಳಿಸಿದ್ದಾರೆ.

ಬಹ್ರೈನ್ ಏರ್ಪೋರ್ಟ್‌ ಬಳಿ ಬೆಂಕಿ:

ಬಹ್ರೈನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಒಮಾನ್‌ನಲ್ಲಿರುವ ತೈಲ ಬಂದರು ಮತ್ತು ಇರಾಕಿನ ಜಲಪ್ರದೇಶದಲ್ಲಿರುವ 2 ಹಡಗುಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಮಾನ್‌ನ ಮಿನಾ ಅಲ್ ಫಹಲ್ ತೈಲ ಬಂದರನ್ನು ಸ್ಥಳಾಂತರಿಸಲಾಗಿದೆ. ದುಬೈ ಏರ್‌ಪೋರ್ಟ್‌ ಸನಿಹ 2 ಡ್ರೋನ್‌ ಬಿದ್ದಿವೆ.

ಕುವೈತ್ ಏರ್ಪೋರ್ಟ್‌ಗೆ ಡ್ರೋನ್‌ ದಾಳಿ:

ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಲವಾರು ಡ್ರೋನ್‌ಗಳು ದಾಳಿ ಮಾಡಿವೆ. ದಾಳಿಯಿಂದ ಕಟ್ಟಡಕ್ಕೆ ಮಾತ್ರ ಹಾನಿಯಾಗಿದೆ ಎಂದು ದೇಶದ ರಾಷ್ಟ್ರೀಯ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಅಲ್‌ ಜಜೀರಾ ವರದಿ ಮಾಡಿದೆ.