ಇರಾಕ್‌ನ ಬಸ್ರಾ ಬಳಿ ಅಮೆರಿಕ ಸ್ವಾಮ್ಯದ 'ಸೇಫ್‌ಸೀ ವಿಷ್ಣು' ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ, ಇರಾನ್ ಕೊಲ್ಲಿ ರಾಷ್ಟ್ರಗಳಾದ ಒಮಾನ್, ಯುಎಇ, ಕುವೈತ್ ಮತ್ತು ಬಹ್ರೈನ್‌ನ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳ ಮೇಲೆ ದಾಳಿಯನ್ನು ಮುಂದುವರಿಸಿದೆ.

ನವದೆಹಲಿ/ನ್ಯೂಯಾರ್ಕ್‌ (ಮಾ.13) ಇರಾಕ್‌ನ ಬಸ್ರಾ ಬಳಿಯ ಸಮುದ್ರದಲ್ಲಿ ಅಮೆರಿಕ ಸ್ವಾಮ್ಯದ ‘ಸೇಫ್‌ಸೀ ವಿಷ್ಣು’ ಹೆಸರಿನ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದ್ದು, ಹಡಗಿನ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಇದು ‘ಆತ್ಮಾಹುತಿ ಬೋಟ್’ ದಾಳಿಯಾಗಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾವನ್ನು ದೃಢಪಡಿಸಿದ್ದು, ಹಡಗಿನಲ್ಲಿರುವ ಇತರ 15 ಭಾರತೀಯ ಸಿಬ್ಬಂದಿಯನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ.

‘ಮಾರ್ಚ್ 11ರಂದು ಮಾರ್ಷಲ್ ದ್ವೀಪಗಳ ಧ್ವಜದ ಅಡಿ ಪ್ರಯಾಣಿಸುತ್ತಿದ್ದ ಅಮೆರಿಕ ಒಡೆತನದ ಕಚ್ಚಾ ತೈಲ ಟ್ಯಾಂಕರ್, ‘ಸೇಫ್‌ಸೀ ವಿಷ್ಣು’ ಮೇಲೆ ಇರಾಕ್‌ನ ಬಸ್ರಾ ಬಳಿ ದಾಳಿ ನಡೆಸಲಾಯಿತು. ಇದರಲ್ಲಿ ಒಬ್ಬ ಭಾರತೀಯ ಸಿಬ್ಬಂದಿ ಪ್ರಾಣ ಕಳೆದುಕೊಂಡರು. ಉಳಿದ 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಪರ್ಷಿಯನ್ ಕೊಲ್ಲಿಯಲ್ಲಿರುವ ವಾಣಿಜ್ಯ ಹಡಗುಗಳ ಮೇಲೆ ಇರಾನಿನ ಸೇನೆ ದಾಳಿ ನಡೆಸುತ್ತಿದೆ.