- Home
- Karnataka Districts
- ಈದ್ಗಾ ಜಮೀನಲ್ಲಿ ಕಲ್ಲು ಬ್ಲಾಸ್ಟ್; ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಬಿತ್ತೆಂದು ಮನೆಯಿಂದ ಓಡಿಬಂದ ಮಹಿಳೆಯರು!
ಈದ್ಗಾ ಜಮೀನಲ್ಲಿ ಕಲ್ಲು ಬ್ಲಾಸ್ಟ್; ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಬಿತ್ತೆಂದು ಮನೆಯಿಂದ ಓಡಿಬಂದ ಮಹಿಳೆಯರು!
ಹರಪನಹಳ್ಳಿಯ ಜನವಸತಿ ಪ್ರದೇಶದಲ್ಲಿ ನಡೆದ ಅಕ್ರಮ ಕಲ್ಲು ಬ್ಲಾಸ್ಟಿಂಗ್‌ನಿಂದಾಗಿ ಭೀಕರ ಸ್ಫೋಟ ಸಂಭವಿಸಿದೆ. ಈ ಶಬ್ದದಿಂದ ಭಯಭೀತರಾದ ಜನರು, ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಎಂದು ಭಾವಿಸಿ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯನಗರ (ಮಾ.11): ಶಾಂತವಾಗಿದ್ದ ಹರಪನಹಳ್ಳಿ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಕೇಳಿಬಂದ ಭೀಕರ ಸ್ಫೋಟದ ಶಬ್ದ ಜನರನ್ನು ಬೆಚ್ಚಿಬೀಳಿಸಿದೆ. ಹರಪನಹಳ್ಳಿಯ ಹೊಸಪೇಟೆ ರಸ್ತೆಯ ವಾರ್ಡ್ ಸಂಖ್ಯೆ 1 ರಲ್ಲಿರುವ ಈದ್ಗಾ ಜಮೀನಿನಲ್ಲಿ ಹಾಡಹಗಲೇ ಯಾವುದೇ ಅನುಮತಿ ಪಡೆಯದೆ ಸ್ಪೋಟಕಗಳನ್ನು ಬಳಸಿ ಕಲ್ಲು ಬ್ಲಾಸ್ಟಿಂಗ್ ಮಾಡಲಾಗಿದ್ದು, ಸ್ಥಳೀಯರು ಇರಾನ್-ಇಸ್ರೇಲ್ ಯುದ್ಧದ ಬಾಂಬ್ ನಮ್ಮ ಮೇಲೆ ಬಿತ್ತೆಂದು ಭಯಭೀತರಾಗಿ ಎದ್ನೋ ಬಿದ್ನೋ ಅಂತಾ ರಸ್ತೆಗೆ ಓಡಿಬಂದ ಘಟನೆ ನಡೆದಿದೆ.
ಈದ್ಗಾ ಜಮೀನಿನಲ್ಲಿ ನಡೆದ ಕಲ್ಲು ಬ್ಲಾಸ್ಟಿಂಗ್ ಎಷ್ಟು ಭೀಕರವಾಗಿತ್ತೆಂದರೆ, ಅದರ ಶಬ್ದಕ್ಕೆ ಇಡೀ ವಾರ್ಡ್ ನಲುಗಿ ಹೋಗಿದೆ. ಸದ್ಯ ವಿಶ್ವಮಟ್ಟದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವುದರಿಂದ, ಜನರು ಆ ಯುದ್ಧದ ಬಾಂಬ್ ಏನಾದರೂ ಅಪ್ಪಿತಪ್ಪಿ ಭಾರತಕ್ಕೆ ಬಂದು ಬಿತ್ತಾ? ಎಂದು ಗಾಬರಿಗೊಂಡು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ. ಅಕ್ಕಪಕ್ಕದ ಮನೆಗಳ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿದೆ.
ಜನವಸತಿ ಪ್ರದೇಶದ ನಡುವೆ ಯಾವುದೇ ಮುನ್ನೆಚ್ಚರಿಕೆ ಅಥವಾ ಮಾಹಿತಿ ನೀಡದೆ ಸ್ಪೋಟಕಗಳನ್ನು ಬಳಸಿರುವುದು ದೊಡ್ಡ ಅಪಾಯಕ್ಕೆ ನಾಂದಿ ಹಾಡಿತ್ತು. ಸ್ಫೋಟದ ತೀವ್ರತೆಗೆ ಸಮೀಪದ ಕೆಲ ಮನೆಗಳ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. 'ಒಮ್ಮೆಲೇ ದೊಡ್ಡ ಪ್ರಮಾಣದ ಶಬ್ದ ಕೇಳಿ ನಮಗೆ ಏನಾಗುತ್ತಿದೆ ಎಂದು ತಿಳಿಯಲೇ ಇಲ್ಲ, ಮಕ್ಕಳು-ವೃದ್ಧರು ಭಯದಿಂದ ನಡುಗುತ್ತಿದ್ದರು' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಗಂಭೀರತೆಯನ್ನು ಅರಿತು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್. ಜಾಹ್ನವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮವಾಗಿ ಬ್ಲಾಸ್ಟಿಂಗ್ ನಡೆಸಿದ ಜಾಗವನ್ನು ಪರಿಶೀಲಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಹರಪನಹಳ್ಳಿ ತಾಲೂಕು ಕಂದಾಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಶಹಬಾಜ್ ಅಕ್ರಂ ಭಾಷಾ, ಶಮೀವುಲ್ಲಾ, ಗಂಗಾಧರ ಹಾಗೂ ನಾಗರಾಜ್ ಎಂಬುವವರ ಮೇಲೆ ಅಕ್ರಮವಾಗಿ ಸ್ಪೋಟಕ ಬಳಕೆ ಮತ್ತು ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.
ಕಾನೂನುಬಾಹಿರವಾಗಿ ಜನವಸತಿ ಪ್ರದೇಶದಲ್ಲಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸದ್ಯ ಹರಪನಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಆ ಸ್ಫೋಟದ ಶಬ್ದದಿಂದ ಜನರಿಗಿನ್ನೂ ಆತಂಕ ದೂರವಾಗಿಲ್ಲ.

