ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಯ್ತುಂಬ ಹೊಗಳಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಇದೀಗ ಭಾರತೀಯರು ‘ತುಂಬಾ ಬುದ್ಧಿವಂತರು’ ಹಾಗೂ ‘ಪ್ರಯತ್ನಶೀಲರು’ ಎಂದು ಶ್ಲಾಘಿಸಿದ್ದಾರೆ.

ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಯ್ತುಂಬ ಹೊಗಳಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಇದೀಗ ಭಾರತೀಯರು ‘ತುಂಬಾ ಬುದ್ಧಿವಂತರು’ ಹಾಗೂ ‘ಪ್ರಯತ್ನಶೀಲರು’ ಎಂದು ಶ್ಲಾಘಿಸಿದ್ದಾರೆ. ಒಂದೇ ವಾರದಲ್ಲಿ ಎರಡನೇ ಬಾರಿ ಅವರು ಭಾರತವನ್ನು ಹೊಗಳಿರುವುದು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ. ನ.7 ಹಾಗೂ 8 ರಂದು ಎರಡು ದಿನಗಳ ಭೇಟಿಗಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ರಷ್ಯಾಕ್ಕೆ ತೆರಳಲಿದ್ದು, ಆ ಹಿನ್ನೆಲೆಯಲ್ಲೂ ಪುಟಿನ್‌ ಅವರ ಹೊಗಳಿಕೆಯನ್ನು ವಿಶ್ಲೇಷಿಸಲಾಗುತ್ತಿದೆ.

ಶುಕ್ರವಾರ ರಷ್ಯನ್‌ ಹಿಸ್ಟಾರಿಕಲ್‌ ಸೊಸೈಟಿಯ (Russian Historical Society) ದಶಮಾನೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ಏಕತಾ ದಿನದಂದು (National Unity Day) ಮಾತನಾಡಿದ ಪುಟಿನ್‌, ‘ಭಾರತದ ಕಡೆ ಒಮ್ಮೆ ನೋಡೋಣ. ಅಲ್ಲಿನ ಜನರು ತುಂಬಾ ಬುದ್ಧಿವಂತರು. ತುಂಬಾ ಪ್ರಯತ್ನಶೀಲರು. ಅಂಥವರ ಪ್ರಯತ್ನದಿಂದ ದೇಶ ಅದ್ಭುತ ಪ್ರಗತಿ ಸಾಧಿಸಲಿದೆ. ಅಭಿವೃದ್ಧಿಯ ವಿಷಯದಲ್ಲಿ ಭಾರತ ಅಸಾಧಾರಣ ಫಲಿತಾಂಶಗಳನ್ನು ನೀಡಲಿದೆ. ಭಾರತದ 150 ಕೋಟಿ ಜನರು ಆ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೇಳಿದರು.

ನರೇಂದ್ರ ಮೋದಿ ವಿದೇಶಾಂಗ ನೀತಿ ಹೊಗಳಿ, ಭವಿಷ್ಯದಲ್ಲಿ ಎಲ್ಲವೂ ಭಾರತ ಎಂದ ಪುಟಿನ್!

ಕಳೆದ ಗುರುವಾರವಷ್ಟೇ ಪುಟಿನ್‌ ರಷ್ಯಾ (Russia) ಹಾಗೂ ಭಾರತದ (India) ಸಂಬಂಧಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸಿರುವ ನರೇಂದ್ರ ಮೋದಿ ಭಾರತದ ಏಳ್ಗೆಗಾಗಿ ದುಡಿಯುತ್ತಿದ್ದಾರೆ ಎಂದು ಶ್ಲಾಘಿಸಿದ್ದರು. ಉಕ್ರೇನ್‌ (Ukraine) ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಹಲವಾರು ದೇಶಗಳು ನಿರ್ಬಂಧಗಳನ್ನು ಹೇರಿದ್ದರೂ ಭಾರತವು ಆ ದೇಶದ ಜೊತೆಗೆ ತೈಲ ವ್ಯಾಪಾರ ಸೇರಿದಂತೆ ತನ್ನ ಐತಿಹಾಸಿಕ ಸಂಬಂಧಗಳನ್ನು ಮುಂದುವರೆಸಿದೆ. ಸೆ.16ರಂದು ಪುಟಿನ್‌ರನ್ನು ಉಜ್ಬೆಕಿಸ್ತಾನದಲ್ಲಿ ಭೇಟಿಯಾಗಿದ್ದ ಮೋದಿ, ‘ಇದು ಯುದ್ಧದ ಯುಗವಲ್ಲ’ ಎಂದು ನೇರವಾಗಿ ಹೇಳಿದ್ದರು. ಆದರೂ ಭಾರತವು ತನ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರೆಸಿರುವುದು ರಷ್ಯಾಕ್ಕೆ ಸಂತಸ ತಂದಿದೆ ಎಂದು ಹೇಳಲಾಗಿದೆ.

Oil Import From Russia: ಭಾರತಕ್ಕೆ ತೈಲ ರಫ್ತು ಮಾಡೋದ್ರಲ್ಲಿ ರಷ್ಯಾನೇ ನಂ.1!