ವಿಶ್ವಸಂಸ್ಥೆ(ಜೂ.19): ವಿಶ್ವಸಂಸ್ಥೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪರಮೋಚ್ಚ ವಿಭಾಗವಾದ ಭದ್ರತಾ ಮಂಡಳಿಗೆ ಭಾರತ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿದೆ. ಇದು 2 ವರ್ಷದ ಅವಧಿಯ ಶಾಶ್ವತವಲ್ಲದ ಸದಸ್ಯತ್ವವಾಗಿದ್ದು, ಭಾರತ 8ನೇ ಬಾರಿಗೆ ಈ ಮಂಡಳಿಯನ್ನು ಪ್ರವೇಶಿಸುತ್ತಿದೆ.

ಏಷ್ಯಾ ಪೆಸಿಫಿಕ್‌ ಪ್ರದೇಶದಿಂದ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಆಯ್ಕೆಯಾಗಿದೆ. ರಹಸ್ಯ ಮತದಾನದಲ್ಲಿ 192ರ ಪೈಕಿ 184 ಮತಗಳು ಭಾರತದ ಪರ ಚಲಾವಣೆಯಾಗಿವೆ. ಪಾಕಿಸ್ತಾನ ಹಾಗೂ ಚೀನಾ ಕೂಡ ಭಾರತದ ಪರ ಮತ ಚಲಾವಣೆ ಮಾಡಿದ್ದು ವಿಶೇಷ. ಲಡಾಖ್‌ನಲ್ಲಿ ಚೀನಾದ ಜೊತೆಗೆ ಭಾರಿ ಸಂಘರ್ಷ ನಡೆಯುತ್ತಿರುವ ವೇಳೆಯಲ್ಲೇ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಆಯ್ಕೆಯಾಗಿದ್ದು, ಮುಂಬರುವ ಜನವರಿಯಿಂದ ಈ ಸದಸ್ಯತ್ವದ ಅವಧಿ ಆರಂಭವಾಗುತ್ತದೆ. ಇಷ್ಟುದಿನ ಇಂಡೋನೇಷ್ಯಾ ಹೊಂದಿದ್ದ ಸ್ಥಾನವನ್ನು ಭಾರತ ಅಲಂಕರಿಸಲಿದೆ.

ಇನ್ಮುಂದೆ ಫೀವರ್‌ ಕ್ಲಿನಿಕ್‌ಗಳಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹ

ಭದ್ರತಾ ಮಂಡಳಿಗೆ ಭಾರತ ಆಯ್ಕೆಯಾದ ನಂತರ ವಿಡಿಯೋ ಸಂವಾದದ ಮೂಲಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ, ಕೊರೋನಾ ಅವಧಿಯಲ್ಲಿ ಹಾಗೂ ಕೊರೋನಾ ನಂತರದ ಅವಧಿಯಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಲಿದೆ. ಭದ್ರತಾ ಮಂಡಳಿಗೆ ನಮ್ಮ ಆಯ್ಕೆಯು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಹಾಗೂ ಸ್ಫೂರ್ತಿದಾಯಕ ಜಾಗತಿಕ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ವಸುಧೈವ ಕುಟುಂಬಕಂ ಎಂಬ ಮೌಲ್ಯವನ್ನು ಭಾರತವು ಎತ್ತಿಹಿಡಿಯಲಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೂ ಭಾರತ ಪ್ರಯತ್ನಿಸುತ್ತಿದ್ದು, ಸದ್ಯ ವಿಟೋ ಅಧಿಕಾರವಿಲ್ಲದ ಅಶಾಶ್ವತ ಸದಸ್ಯನಾಗಿ 2 ವರ್ಷ ಕಾರ್ಯನಿರ್ವಹಿಸಲಿದೆ.

ಕ್ವಾರಂಟೈನ್‌ನಲ್ಲಿ ಇರುವವರ ಕಣ್ಗಾವಲಿಗೆ ತಂಡ: ನಿಯಮ ಉಲ್ಲಂಘಿಸಿದ್ರೆ FIR

ಭಾರತದ ಜೊತೆಗೆ ಮೆಕ್ಸಿಕೋ, ಐರ್ಲೆಂಡ್‌, ನಾರ್ವೆ ಕೂಡ ಭದ್ರತಾ ಮಂಡಳಿಗೆ ಆಯ್ಕೆಯಾಗಿವೆ. ಕೆನಡಾ, ಆಸ್ಪ್ರೇಲಿಯಾ, ಕೆನ್ಯಾ, ಜಿಬೋತಿ ಮುಂತಾದವು ಚುನಾವಣೆಯಲ್ಲಿ ಸೋಲನುಭವಿಸಿವೆ. ಈ ಹಿಂದೆ ಭದ್ರತಾ ಮಂಡಳಿಯ ಸದಸ್ಯನಾಗಿ ಭಾರತ 2011-12ರ ಅವಧಿಯಲ್ಲಿ ಕಾರ್ಯನಿರ್ವಹಿಸಿತ್ತು.

ವಿಶ್ವಸಂಸ್ಥೆಯಲ್ಲಿ ಭಾರತವು 5ಎಸ್‌ ಸೂತ್ರದೊಂದಿಗೆ ಕಾರ್ಯನಿರ್ವಹಿಸಲಿದೆ. ಅವು: ಸಮ್ಮಾನ, ಸಂವಾದ, ಸಹಯೋಗ, ಶಾಂತಿ ಮತ್ತು ಸಮೃದ್ಧಿ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿಳಿಸಿದ್ದಾರೆ.