ಕ್ವಾರಂಟೈನ್‌ನಲ್ಲಿ ಇರುವವರ ಕಣ್ಗಾವಲಿಗೆ ತಂಡ: ನಿಯಮ ಉಲ್ಲಂಘಿಸಿದ್ರೆ FIR
ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ತಂಡ ರಚನೆ| ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ತಂಡ ರಚನೆ| ಹೋಂ ಕ್ವಾರಂಟೈನ್‌ನಲ್ಲಿರುವವರು ನಿಯಮ ಉಲ್ಲಂಘನೆ ಮಾಡಿದರೆ ಮೊದಲ ಬಾರಿ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್| ಅಲ್ಲದೆ, ಈ ರೀತಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಎಫ್‌ಐಆರ್ ದಾಖಲು|
ಬೆಂಗಳೂರು(ಜೂ.19): ವಿದೇಶ ಮತ್ತು ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿ ‘ಹೋಂ ಕ್ವಾರಂಟೈನ್’ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ವಿಧಾನಸಭಾ ಕ್ಷೇತ್ರವಾರು ತಲಾ ಒಂದು ಕಣ್ಗಾವಲು ತಂಡದಂತೆ 28 ತಂಡಗಳನ್ನು ಬಿಬಿಎಂಪಿ ರಚಿಸಿದೆ.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜಕುಮಾರ್ ಗಾಜಿನ ಮನೆಯ ಮುಂಭಾಗ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಕಣ್ಗಾವಲು ತಂಡಗಳಿಗೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್‌ಕುಮಾರ್, ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ತಂಡ ರಚನೆ ಮಾಡಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರು ನಿಯಮ ಉಲ್ಲಂಘನೆ ಮಾಡಿದರೆ ಮೊದಲ ಬಾರಿ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಿದ್ದಾರೆ. ಅಲ್ಲದೆ, ಈ ರೀತಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.
ಕೊರೋನಾ ವಿರುದ್ಧ ಹೋರಾಟ: ಮಾಸ್ಕ್ ಡೇಯಂದೇ ಮುಖಗವಸು ಧರಿಸದ 1113 ಮಂದಿಗೆ ದಂಡ
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ಸೋಂಕು ತಡೆ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ವಿವಿಧ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳನ್ನು ಒಳಗೊಂಡ 17 ಕಾರ್ಯಪಡೆಗಳನ್ನು ರಚನೆ ಮಾಡಿದೆ.
ಕೊರೋನಾ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ವಿದೇಶ, ಹೊರರಾಜ್ಯದಿಂದ ಆಗಮಿಸಿದವರನ್ನು ಹೋಂ ಕ್ವಾರಂಟೈನ್ ಮಾಡುವುದರ ಜತೆಗೆ ಅವರ ಮೇಲೆ ನಿಗಾ ವಹಿಸುವ ಜವಾಬ್ದಾರಿ ನೀಡಲಾಗಿದ್ದು, ಅದಕ್ಕಾಗಿ 28 ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ.
ಈ ವೇಳೆ ಉಪಮೇಯರ್ ರಾಮಮೋಹನ್‌ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು, ಪಶುಪಾಲನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್, ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಹಾಗೂ ಮಂಜುನಾಥ್, ಅಪರ ಪೊಲೀಸ್ ಆಯುಕ್ತ ಮುರುಗನ್ ಸೇರಿದಂತೆ ಮೊದಲಾದವರು ಇದ್ದರು.
ಹೋಂ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿ ನಿಯಮ ಪಾಲಿಸದೆ ಹೊರಗಡೆ ಬಂದರೆ ಆರೋಗ್ಯ ಇಲಾಖೆಗೆ ಸಂದೇಶ ರವಾನೆಯಾಗಲಿದೆ. ಆಗ ಅಂತಹ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಆರೋಗ್ಯ ಇಲಾಖೆ ವತಿಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಲಿದೆ. ಅಲ್ಲದೆ ಕಣ್ಗಾವಲು ತಂಡ ಮನೆಗೆ ಭೇಟಿ ಎಚ್ಚರಿಕೆ ನೀಡಲಿದ್ದಾರೆ. ಅದನ್ನೂ ಮೀರಿ ಹೊರಗೆ ಬಂದಂತಹವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವ ಜೊತೆಗೆ ಎಫ್‌ಐಆರ್ ದಾಖಲಿಸಲಾಗುತ್ತದೆ.