ಅಮೆರಿಕ ಸುಪ್ರೀಂ ಕೋರ್ಟ್‌ ಹಿಂದಿನ ತೆರಿಗೆಗಳನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದ ನಂತರ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ಕಾನೂನಿನಡಿ ಭಾರತ ಸೇರಿದಂತೆ ಎಲ್ಲಾ ದೇಶಗಳ ಮೇಲೆ ಶೇ.15ರಷ್ಟು ತಾತ್ಕಾಲಿಕ ಸುಂಕ ವಿಧಿಸಲು ನಿರ್ಧರಿಸಿದ್ದಾರೆ. 

ವಾಷಿಂಗ್ಟನ್‌: ವಿದೇಶಗಳ ಮೇಲೆ ಡೊನಾಲ್ಡ್‌ ಟ್ರಂಪ್‌ ಪ್ರಯೋಗಿಸಿದ್ದ ಬೇಕಾಬಿಟ್ಟಿತೆರಿಗೆ ಅಸ್ತ್ರವನ್ನು ಅಸಾಂವಿಧಾನಿಕ ಎಂದು ಅಮೆರಿಕ ಸುಪ್ರೀಂ ಕೋರ್ಟ್‌ ರದ್ದು ಮಾಡಿದ ಬೆನ್ನಲ್ಲೇ, ಟ್ರಂಪ್‌ ಭಾರತ ಸೇರಿ ಎಲ್ಲ ದೇಶ​ಗಳ ಮೇಲೆ ಹೊಸದಾಗಿ ಶೇ.15ರಷ್ಟುತಾತ್ಕಾಲಿಕ ಸುಂಕ ವಿಧಿಸಲು ತೀರ್ಮಾನಿಸಿದ್ದಾರೆ. ಹೊಸ ಪ್ರತಿ ಸುಂಕ ಫೆ.24ರಿಂದಲೇ ಜಾರಿಗೆ ಬರಲಿದೆ. ಈ ಮೂಲಕ ಭಾರತದ ಮೇಲೆ ಅಮೆರಿಕ ವಿಧಿಸಲುದ್ದೇಶಿಸಿದ್ದ ಶೇ.18ರಷ್ಟುತೆರಿಗೆ ತಾತ್ಕಾ​ಲಿಕವಾಗಿ ಶೇ.15ಕ್ಕೆ ಇಳಿಕೆಯಾದಂತಾಗಲಿದೆ.

Add Asianetnews Kannada as a Preferred SourcegooglePreferred

ಅಮೆರಿಕದ ಸುಪ್ರೀಂ ಕೋರ್ಚ್‌ ಶುಕ್ರವಾರವಷ್ಟೇ ಭಾರತವೂ ಸೇರಿ ವಿಶ್ವದ ಹಲವು ದೇಶಗಳ ಮೇಲೆ ಟ್ರಂಪ್‌ ವಿಧಿಸಿದ್ದ ಪ್ರತಿ ತೆರಿಗೆಯನ್ನು ಅಕ್ರಮ ಎಂದಿತ್ತು. ಇದರ ಬೆನ್ನಲ್ಲೇ ಅವರು ಶೇ.10ರಷ್ಟು

ತೆರಿಗೆ ಹೇರುವುದಾಗಿ ಹೊಸ ನಿಯಮದಡಿ ಪ್ರಕಟಿಸಿದ್ದರು. ಆದರೆ ಶನಿವಾರ ರಾತ್ರಿ ತಮಗೆ ಕಾನೂನುಬದ್ಧವಾಗಿ ಗರಿಷ್ಠ ಶೇ.15ರಷ್ಟುತೆರಿಗೆ ಹೇರಲು ಅವಕಾಶವಿದ್ದು. ಪೂರ್ಣ ಪ್ರಮಾಣದ ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ.

ಹೀಗಾಗಿ ಇತ್ತೀಚಿನ ಒಪ್ಪಂದದಂತೆ ಭಾರತದ ಮೇಲೆ ಟ್ರಂಪ್‌ ಹಾಕಿದ್ದ ಶೇ.18 ತೆರಿಗೆ ರದ್ದಾಗಿದೆ. ಇದೀಗ ತೀರ್ಪಿನ ಬಳಿಕ ಟ್ರಂಪ್‌ ಹೊಸದಾಗಿ ಹೊರಡಿಸಿದ ಆದೇಶದಿಂದಾಗಿ ಭಾರತದಿಂದ ಆಮದಾಗುವ ವಸ್ತು ಮೇಲೆ ಶೇ.15 ತೆರಿಗೆಯಷ್ಟೇ ಬೀಳಲಿದೆ.

ಹೊಸ ನಿಯಮದಡಿ 5 ತಿಂಗಳವರೆಗೆ ತೆರಿಗೆ​- ಶೇ.15 ತೆರಿಗೆ ಹಾಕಲು ಅವಕಾಶ: 

ಕಳೆದ ವರ್ಷ ಟ್ರಂಪ್‌ ಅವರು ಅಂತಾರಾಷ್ಟ್ರೀಯ ತುರ್ತುಪರಿಸ್ಥಿತಿಯ ಆರ್ಥಿಕ ಶಕ್ತಿಗಳ ಕಾಯ್ದೆ (ಐಇಇಪಿಎ) ಅಡಿ ವಿದೇಶಗಳ ಮೇಲೆ ಶೇ.10ರಿಂದ ಶೇ.50ರ ವರೆಗೆ ತೆರಿಗೆ ಹಾಕಿ ಆರ್ಥಿಕ ಯುದ್ಧ ಸಾರಿದ್ದರು. ಆದರೆ, ‘ಇದು ಅಕ್ರಮ. ಇದನ್ನು ವಿಧಿಸಲು ಸಂಸತ್ತಿಗೆ ಮಾತ್ರ ಅಧಿಕಾರ’ ಎಂದು ಸುಪ್ರೀಂ ಕೋರ್ಚ್‌ ಹೇಳಿದೆ. ಹೀಗಾಗಿ ಟ್ರಂಪ್‌ ಈಗ ಅಪರೂಪಕ್ಕೆ ಬಳಸುವ ಕಾನೂನಾದ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್‌ 122 ಬಳಸಿ ಈಗ ವಿದೇಶಿ ವಸ್ತುಗಳ ಮೇಲೆ ಶೇ.15 ಆಮದು ಸುಂಕ ಘೋಷಿಸಿದ್ದಾರೆ. ಯಾವುದೇ ದೇಶದೊಂದಿಗೆ ವ್ಯಾಪಾರ ಅಸಮತೋಲನ ಪರಿಹರಿಸಲು 150 ದಿನಗಳವರೆಗೆ ಗರಿಷ್ಠ ಶೇ.15ರಷ್ಟುಸುಂಕವನ್ನು ವಿಧಿಸುವ ಅಧಿಕಾರವನ್ನು ಇದು ಅಮೆರಿಕ ಅಧ್ಯಕ್ಷರಿಗೆ ನೀಡುತ್ತದೆ. ನಂತರ ಅದಕ್ಕೆ ಸಂಸತ್ತಿನ ಅನುಮೋದನೆ ಬೇಕಾಗುತ್ತದೆ.

ಅಮೆರಿಕ ಸುಂಕದ ಬಗ್ಗೆ ಅಧ್ಯಯನ: ಭಾರತ ಮೊದಲ ಪ್ರತಿಕ್ರಿಯೆ

ನವದೆಹಲಿ: ಅಮೆರಿಕ ಸುಪ್ರೀಂ ಕೋರ್ಟು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇರಿದ್ದ ಪ್ರತಿತೆರಿಗೆಗಳನ್ನು ಅಕ್ರಮ ಎಂದು ತೀರ್ಪು ನೀಡಿದ ಬೆನ್ನಲ್ಲೇ, ‘ಅಮೆರಿಕದ ಸುಂಕದ ವಿದ್ಯಮಾನಗಳು ಮತ್ತು ಅವುಗಳ ಪರಿಣಾಮಗಳನ್ನು ಭಾರತ ಸರ್ಕಾರ ಅಧ್ಯಯನ ಮಾಡುತ್ತಿದೆ’ ಎಂದು ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದು, ‘ಶುಕ್ರವಾರ ಸುಂಕಗಳ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಗಮನಿಸಿದ್ದೇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅಮೆರಿಕ ಆಡಳಿತವು ಕೆಲವು ಕ್ರಮಗಳನ್ನು (ಶೇ.10 ಸುಂಕ) ಘೋಷಿಸಿದೆ. ಈ ಎಲ್ಲಾ ಬೆಳವಣಿಗೆಗಳ ಪರಿಣಾಮಗಳ ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ’ ಎಂದಿದೆ.