ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಸಾಧ್ಯತೆಗಳ ಬಗ್ಗೆ ವರದಿಗಳಿಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದನ್ನು 'ಒಳ್ಳೆಯ ಹೆಜ್ಜೆ' ಎಂದಿದ್ದಾರೆ. ಭಾರತ ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ವಾಷಿಂಗ್ಟನ್ (ಆಗಸ್ಟ್.2): ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಷೇಧಿಸುವ ಸಾಧ್ಯತೆಯ ವರದಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಆಗಸ್ಟ್ 1, 2025) ಪ್ರತಿಕ್ರಿಯಿಸಿ, ಇದನ್ನು 'ಒಳ್ಳೆಯ ಹೆಜ್ಜೆ' ಎಂದು ಕರೆದಿದ್ದಾರೆ. ಆದರೆ, ಈ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಖಚಿತತೆ ಇಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ANI ಸುದ್ದಿ ಸಂಸ್ಥೆಯ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಕೇಳಿದ್ದೇನೆ. ಅದು ನಿಜವೋ, ಅಲ್ಲವೋ ತಿಳಿದಿಲ್ಲ. ಆದರೆ ಇದು ಒಳ್ಳೆಯ ಹೆಜ್ಜೆ. ಏನಾಗುತ್ತದೆ ಎಂದು ನೋಡೋಣ ಎಂದು ಹೇಳಿದರು.

ಉಕ್ರೇನ್ ಯುದ್ಧದ ಮಧ್ಯೆ ರಷ್ಯಾದ ಆದಾಯವನ್ನು ಕಡಿಮೆ ಮಾಡಲು ಅಮೆರಿಕದ ನೇತೃತ್ವದ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತ, 2022ರಿಂದ ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರನಾಗಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ರಿಯಾಯಿತಿಗಳ ಕಡಿಮೆಯಾಗುವಿಕೆ ಮತ್ತು ಲಾಜಿಸ್ಟಿಕ್ ಸವಾಲುಗಳಿಂದಾಗಿ ಭಾರತೀಯ ಸರ್ಕಾರಿ ಸಂಸ್ಕರಣಾಗಾರಗಳು ರಷ್ಯಾದಿಂದ ತೈಲ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ. ಈ ಬಗ್ಗೆ ಭಾರತ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಅಮೆರಿಕ ಭಾರತದಿಂದ ರಫ್ತಾಗುವ ಎಲ್ಲಾ ಉತ್ಪನ್ನಗಳ ಮೇಲೆ 25% ಸುಂಕವನ್ನು ವಿಧಿಸಿದ್ದು, ರಷ್ಯಾದೊಂದಿಗಿನ ಇಂಧನ ವ್ಯಾಪಾರ ಮುಂದುವರಿದರೆ ದಂಡವನ್ನೂ ವಿಧಿಸುವುದಾಗಿ ಘೋಷಿಸಿದೆ. ಇತ್ತೀಚೆಗೆ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಭಾರತವು ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರ ಖರೀದಿಯನ್ನು ಮುಂದುವರಿಸಿರುವುದನ್ನು ಟೀಕಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಭಾರತ ಮತ್ತು ರಷ್ಯಾ 'Stable and time-tested' ಪಾಲುದಾರಿಕೆಯನ್ನು ಹೊಂದಿವೆ. ಭಾರತ-ಯುಎಸ್ ಸಂಬಂಧಗಳು ಹಂಚಿಕೆಯ ಹಿತಾಸಕ್ತಿಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜನರ-ಜನರ ಸಂಬಂಧಗಳನ್ನು ಆಧರಿಸಿವೆ. ಭಾರತ ಎರಡೂ ದೇಶಗಳೊಂದಿಗೆ ಸಮತೋಲಿತ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತದೆ ಮತ್ತು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳಲ್ಲಿ ರಾಜಿಯಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದರು.

ರಷ್ಯಾದಿಂದ ತೈಲ ಖರೀದಿ ಸಂಬಂಧಿಸಿದ ಭಾರತದ ನಿಲುವು ಮತ್ತು ಅಮೆರಿಕದ ಒತ್ತಡದಿಂದ ಉಂಟಾಗುವ ಭೌಗೋಳಿಕ ರಾಜಕೀಯ ಪರಿಣಾಮಗಳು ಜಾಗತಿಕ ಗಮನ ಸೆಳೆಯುತ್ತಿವೆ. ಮುಂದಿನ ಕೆಲವು ದಿನಗಳಲ್ಲಿ ಈ ಬೆಳವಣಿಗೆಯ ಬಗ್ಗೆ ಭಾರತದ ಅಧಿಕೃತ ನಿಲುವು ಸ್ಪಷ್ಟವಾಗಬಹುದು.