ಜಗತ್ತಿನಾದ್ಯಂತ ಯುದ್ಧಾತಂಕ ಹೆಚ್ಚುತ್ತಿರುವ ನಡುವೆಯೇ ಭಾರತದ ಬಳಿ 180, ಪಾಕ್‌ ಬಳಿ 170 ಅಣು ಸಿಡಿತಲೆ (ಅಣುಬಾಂಬ್‌) ಇವೆ. ಚೀನಾ ಸದ್ದಿಲ್ಲದೇ ತನ್ನ ಅಣ್ವಸ್ತ್ರ ಬತ್ತಳಿಕೆಯನ್ನು ಒಂದೇ ವರ್ಷದಲ್ಲಿ ಸದ್ದಿಲ್ಲದೆ 500ರಿಂದ 600ಕ್ಕೆ ಹೆಚ್ಚಿಸಿಕೊಂಡಿದೆ

ನವದೆಹಲಿ: ಜಗತ್ತಿನಾದ್ಯಂತ ಯುದ್ಧಾತಂಕ ಹೆಚ್ಚುತ್ತಿರುವ ನಡುವೆಯೇ ಭಾರತದ ಬಳಿ 180, ಪಾಕ್‌ ಬಳಿ 170 ಅಣು ಸಿಡಿತಲೆ (ಅಣುಬಾಂಬ್‌) ಇವೆ. ಚೀನಾ ಸದ್ದಿಲ್ಲದೇ ತನ್ನ ಅಣ್ವಸ್ತ್ರ ಬತ್ತಳಿಕೆಯನ್ನು ಒಂದೇ ವರ್ಷದಲ್ಲಿ ಸದ್ದಿಲ್ಲದೆ 500ರಿಂದ 600ಕ್ಕೆ ಹೆಚ್ಚಿಸಿಕೊಂಡಿದೆ ಎಂದು ವರದಿಯೊಂದು ಹೇಳಿದೆ.

ಅಣ್ವಸ್ತ್ರ ಕಣ್ಗಾವಲು ಸಂಸ್ಥೆ ಸ್ಟಾಕ್‌ಹೋಂ ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆ (ಸಿಪ್ರಿ) ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಹೊರಬಂದಿದೆ.

ವಿಶ್ವದ ಅಣು ಬಾಂಬ್‌ ಲೆಕ್ಕಾಚಾರದಲ್ಲಿ ರಷ್ಯಾ ಮತ್ತು ಅಮೆರಿಕದ ಪಾಲು ಶೇ.90ರಷ್ಟಿದೆ. ರಷ್ಯಾ ಬಳಿ 4309, ಅಮೆರಿಕ 3700 ಅಣುಬಾಂಬ್‌ ಇವೆ. ಮಿಕ್ಕಂತೆ ಚೀನಾ 600, ಫ್ರಾನ್ಸ್‌ 290, ಬ್ರಿಟನ್‌ 225, ಭಾರತ 180, ಪಾಕಿಸ್ತಾನ 170, ಇಸ್ರೇಲ್‌ 90, ಉತ್ತರ ಕೊರಿಯಾ ಬಳಿ 50 ಅಣು ಸಿಡಿತಲೆ ಇವೆ ಎಂದು ವರದಿ ಹೇಳಿದೆ.

‘ಎಲ್ಲಾ ದೇಶಗಳಿಗೂ ಹೋಲಿಸಿದರೆ ಚೀನಾ ಅಣ್ವಸ್ತ್ರ ಬೆಳವಣಿಗೆ ಅತ್ಯಂತ ಹೆಚ್ಚಿದೆ. ಕಳೆದ ವರ್ಷ ಚೀನಾ ಬಳಿ 500 ಅಣು ಬಾಂಬ್‌ಗಳಿದ್ದವು. ಈ ವರ್ಷ ಅದು 600ಕ್ಕೆ ಏರಿಕೆಯಾಗಿವೆ. 2035ರ ವೇಳೆಗೆ ಇದು 1500ಕ್ಕೆ ಹೆಚ್ಚಲಿದೆ. ಭಾರತದ ಬತ್ತಳಿಕೆಗೆ 1 ವರ್ಷದಲ್ಲಿ 8 ಅಣ್ವಸ್ತ್ರ ಸೇರ್ಪಡೆ ಆಗಿವೆ’ ಎಂದೂ ಎಂದು ವರದಿ ಹೇಳಿದೆ.

ಆನ್ಲೈನ್ ಆಧಾರ್ ನವೀಕರಣ 2026ರ ಜೂ.14ರವರೆಗೆ ವಿಸ್ತರಣೆ

ನವದೆಹಲಿ: ನಾಗರಿಕರು ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಲು ಆನ್ಲೈನ್ ಸೌಲಭ್ಯವನ್ನು 2026ರ ಜೂ.14ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಘೋಷಿಸಿದೆ.‘ಉಚಿತ ಆಧಾರ್ ನವೀಕರಣ ಸೇವೆಯು #myAadhaar ಪೋರ್ಟಲ್‌ನಲ್ಲಿ ಲಭ್ಯವಿದೆ.

ಇದನ್ನು 2026ರ ಜೂ.14ರವರೆಗೆ ವಿಸ್ತರಿಸಲಾಗಿದೆ. ನಾಗರಿಕರು ತಮ್ಮ ಗುರುತು ಹಾಗೂ ವಿಳಾಸದ ದಾಖಲೆಯನ್ನು ಅಂತರ್ಜಾಲದ ಮೂಲಕವೇ ಅಪ್‌ಲೋಡ್ ಮಾಡಿ, ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು’ ಎಂದು ಯುಐಡಿಎಐ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ. ಆಧಾರ್‌ ಪ್ರಾಧಿಕಾರದ ಈ ನಡೆ ತಿದ್ದುಪಡಿಗೆ ಕಾದಿರುವ ಲಕ್ಷಾಂತರ ಜನರಿಗೆ ನೆರವಾಗಲಿದೆ.

ಮೋದಿಗೆ ಕಾಂಗ್ರೆಸ್ ನಾಯಕ ಸಿಂಘ್ವಿ ಹೊಗಳಿಕೆ ಮಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಆಪರೇಷ್‌ ಸಿಂದೂರವನ್ನು ಕಾಂಗ್ರೆಸ್‌ ನಾಯಕರಾದ ಶಶಿ ತರೂರ್‌ ಹಾಗೂ ಸಲ್ಮಾನ್‌ ಖುರ್ಷಿದ್‌ ಇತ್ತೀಚೆಗೆ ಹೊಗಳಿದ್ದರು. ಇದರ ಬೆನ್ನಲ್ಲೇ ಮೋದಿ ಅವರ ಸೈಪ್ರಸ್‌ ಭೇಟಿಯನ್ನು ಇನ್ನೋರ್ವ ಕಾಂಗ್ರೆಸ್‌ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಅಭಿಷೇಕ್‌ ಸಿಂಘ್ವಿ ಹೊಗಳಿದ್ದಾರೆ.

‘ಟರ್ಕಿ ಅಕ್ರಮವಾಗಿ ಸೈಪ್ರಸ್ ಭೂಮಿಯನ್ನು ಆಕ್ರಮಿಸಿದೆ. ಈ ವಿಸ್ತರಣಾವಾದವನ್ನು ಮೋದಿ ವಿರೋಧಿಸಿದ್ದು ಸ್ವಾಗತಾರ್ಹ’ ಎಂದಿದ್ದಾರೆ. ಇದಲ್ಲದೆ, ಪಾಕಿಸ್ತಾನವನ್ನು ಆಪರೇಷನ್‌ ಸಿಂದೂರ ವೇಳೆ ಬೆಂಬಲಿಸಿದ್ದ ಟರ್ಕಿಗೆ ಇದು ಸಂದೇಶ ಎಂದೂ ಅವರು ಶ್ಲಾಘಿಸಿದ್ದಾರೆ.

‘ಎಕ್ಸ್‌ಎಐ’ನಿಂದ ವಿಷಾನಿಲ ಬಿಡುಗಡೆ: ಮಸ್ಕ್ ಕಂಪನಿ ವಿರುದ್ಧ ಕೇಸ್

ಮೆಂಫಿಸ್ (ಅಮೆರಿಕ): ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ವಿಶ್ವದ ನಂ.1 ಶ್ರೀಮಂತ ಎನಾಲ್ ಮಸ್ಕ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ ನಂತರದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮಸ್ಕ್ ಮಾಲೀಕತ್ವದ ಎಕ್ಸ್‌ಎಐ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.

‘ಮಸ್ಕ್ ಪರವಾನಗಿ ಅರ್ಜಿ ಸಲ್ಲಿಸದೆ, ಕಪ್ಪು ಸಮುದಾಯದವರ ಸಂಖ್ಯೆ ಹೆಚ್ಚಾಗಿರುವ ಪ್ರದೇಶದಲ್ಲಿ ಎಕ್ಸ್‌ಎಐನ ದತ್ತಾಂಶ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇದು ವಿಷಾನಿಲವನ್ನು ಹೊರಸೂಸುತ್ತಿದ್ದು, ವಾಯುಮಾಲಿನ್ಯ ಉಂಟುಮಾಡುತ್ತಿದೆ. ಇದು ಕ್ಲೀನ್ ಏರ್‌ ಆ್ಯಕ್ಟ್‌ನ (ಶುದ್ಧ ವಾಯು ಕಾಯ್ದೆ)ಯ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿ ಅಮೆರಿಕದ ನಾಗರಿಕ ಹಕ್ಕುಗಳ ಸಂಘಟನೆ ‘ಎನ್‌ಎಎಸಿಪಿ’ ಎಕ್ಸ್‌ಎಐ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದೆ.