ಇಮ್ರಾನ್ ಖಾನ್ ಬಂಧನದಿಂದ ಪಾಕಿಸ್ತಾನದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನೆ, ಗಲಭೆ ಜೋರಾಗಿದೆ. ಇದರ ನಡುವೆ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ 60 ನಿಮಿಷದಲ್ಲಿ ಇಮ್ರಾನ್ ಖಾನ್ ಕೋರ್ಟ್ ಮುಂದೆ ಹಾಜರು ಪಡಿಸಲು ಖಡಕ್ ವಾರ್ನಿಂಗ್ ನೀಡಿದೆ.
ಲಾಹೋರ್(ಮೇ.11): ಅಲ್ ಖಾದಿರ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಪಾಕಿಸ್ತಾನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಪ್ರತಿಭಟನೆ, ಹಿಂಸಾಚಾರ, ಗಲಭೆ ತೀವ್ರಗೊಂಡಿದೆ. ಇದರ ನಡುವೆ ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 60 ನಿಮಿಷದಲ್ಲಿ ಇಮ್ರಾನ್ ಖಾನ್‌ನನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಪಾಕಿಸ್ತಾನ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.
ಪಾಕಿಸ್ತಾನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ಜಸ್ಟೀಸ್ ಮೊಹಮ್ಮದ್ ಅಲಿ ಮಜಾರ್, ಜಸ್ಚೀಸ್ ಅಥರ್ ಮಿನಾಲ್ಲಾ ನೇತೃತ್ವದ ಪೀಠ ಮಹತ್ವದ ಆದೇಶ ನೀಡಿದೆ. ಇಮ್ರಾನ್ ಖಾನ್ ಪಕ್ಷ ಪಿಟಿಐ ಬಂಧನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಛೀಮಾರಿ ಹಾಕಿದೆ.
ನನಗೆ ಟಾಯ್ಲೆಟ್‌ಗೆ ಹೋಗಲೂ ಬಿಡ್ತಿಲ್ಲ; ತೀವ್ರ ಚಿತ್ರಹಿಂಸೆ ನೀಡ್ತಿದ್ದಾರೆ: ಇಮ್ರಾನ್ ಖಾನ್
ಅಲ್ ಖಾದಿರ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸೂಕ್ತವಾಗಿದೆ ಎಂದು ಹೇಳಿದ್ದ ಇಸ್ಲಾಮಾಬಾದ್ ಹೈಕೋರ್ಚ್ ಆದೇಶ ವಿರುದ್ಧ ತೆಹ್ರೀಕ್ ಎ ಪಾಕಿಸ್ತಾನ್ ಪಕ್ಷ ಸುಪ್ರೀಂ ಕೋರ್ಚ್ ಮೆಟ್ಟಿಲೇರಿದೆ. ಮಂಗಳವಾರ ಪ್ರಕರಣವೊಂದರ ವಿಚಾರಣೆಗೆ ಇಸ್ಲಾಮಾಬಾದ್ ಹೈಕೋರ್ಚ್‌ಗೆ ಆಗಮಿಸಿದ್ದ ವೇಳೆಯೇ ಅರೆಸೇನಾ ಪಡೆ ಸಿಬ್ಬಂದಿ, ಇಮ್ರಾನ್‌ರನ್ನು ಬಲವಂತವಾಗಿ ಕರೆದೊಯ್ದು ಬಂಧಿಸಿದ್ದರು. ಈ ಘಟನೆ ಕುರಿತು ಹೈಕೋರ್ಚ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತಾದರೂ, ಬಳಿಕ ಹೈಕೋರ್ಚ್‌ನ 7 ಜನರ ಸಮಿತಿ ತುರ್ತು ಸಭೆ ನಡೆಸಿತ್ತು. ಬಳಿಕ ಅದು ಇಮ್ರಾನ್ ಬಂಧನ ಸೂಕ್ತವಾಗಿದೆ ಎಂದು ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ವ್ಯತಿರಿಕ್ತ ಆದೇಶ ನೀಡಿದೆ.
ಇತ್ತ ಇಮ್ರಾನ್ ಖಾನ್ ಬಂಧನ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಭಾರಿ ಹಿಂಸಾಚಾರಕ್ಕೆ ತಿರುಗಿದೆ. ಈ ಪೈಕಿ ರಾವಲ್ಪಿಂಡಿ ಸೇನಾ ಕಚೇರಿ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದು, ಬಡಿಗೆಗಳನ್ನು ಹಿಡಿದು ಗೇಟು ಹಾಗೂ ಕಾಂಪೌಂಡ್‌ಗೆ ಹೊಡೆದಿದ್ದಾರೆ. ಸರ್ಗೋಢಾ ಎಂಬಲ್ಲಿ ವಾಯುಪಡೆ ಸ್ಮಾರಕ ಧ್ವಂಸಗೊಳಿಸಿದ್ದಾರೆ. ಲಾಹೋರ್‌ನಲ್ಲಿ ಸೇನಾಧಿಕಾರಿಗಳ ಮನೆಗೆ ಹಾಗೂ ಕಂಡ ಕಂಡಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸೇನಾಧಿಕಾರಿಗಳ ಮನೆ ಲೂಟಿ ಮಾಡಲಾಗಿದೆ. ಪೊಲೀಸರು ಅನೇಕ ಕಡೆ ಗುಂಡು ಹಾರಿಸಿದ್ದಾರೆ. ಟ್ವೀಟರ್, ಇಂಟರ್ನೆಟ್ ಬ್ಲಾಕ್: ದೇಶಾದ್ಯಂತ ನಿಷೇಧಾಜ್ಞೆ ಜಾರಿ ಆಗಿದ್ದು, ಮೊಬೈಲ್ ಇಂಟರ್ನೆಟ್, ಟ್ವೀಟರ್, ಫೇಸ್‌ಬುಕ್, ಯೂಟ್ಯೂಬ್‌ಗಳನ್ನು ವದಂತಿಗಳನ್ನು ತಡೆಯಲು ಬ್ಲಾಕ್ ಮಾಡಲಾಗಿದೆ. ಹಿಂಸೆಯ ಕಾರಣ ಚೀನಾ, ಸೌದಿ ಸೇರಿ ಕೆಲವು ದೇಶಗಳು ತಮ್ಮ ದೂತಾವಾಸ ಬಂದ್ ಮಾಡಿವೆ.
ಪಾಕಿಸ್ತಾನದಲ್ಲಿ ಹಿಂಸಾಚಾರ: ಬ್ರಿಡ್ಜ್ ಟೂರ್ನಮೆಂಟ್‌ಗೆ ತೆರಳಿದ್ದ ತಂಡಕ್ಕೆ ವಾಪಾಸ್ ಬರುವಂತೆ ಸೂಚಿಸಿದ ಭಾರತ!
ದೇಶಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ, ಅದನ್ನು ಲೆಕ್ಕಿಸದ ಕಾರ್ಯಕರ್ತರು ದೇಶವ್ಯಾಪಿ ಹಿಂಸಾಚಾರ ನಡೆಸಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಸತತ 2ನೇ ದಿನವೂ ಉದ್ವಿಗ್ನ ವಾತಾವರಣ ಮುಂದುವರೆದಿದೆ. ಹೀಗಾಗಿ 1000 ಇಮ್ರಾನ್ ಬೆಂಬಲಿಗರನ್ನು ಬಂಧಿಸಲಾಗಿದೆ. ಪಂಜಾಬ್, ಬಲೂಚಿಸ್ತಾನ್, ಪೇಶಾವರ, ಲಾಹೋರ್, ಕ್ವೆಟ್ಟಾ, ಕರಾಚಿ, ರಾವಲ್ಪಿಂಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬುಧವಾರ ಭಾರೀ ಹಿಂಸಾಚಾರ ನಡೆದಿದೆ. ಅತ್ಯಂತ ಹೆಚ್ಚಿನ ಹಿಂಸೆ ಕಂಡುಬಂದ ಪಂಜಾಬ್ ಪ್ರಾಂತ್ಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೇನೆಯನ್ನು ನಿಯೋಜಿಸಲಾಗಿದೆ. ಈ ನಡುವೆ ದೇಶಾದ್ಯಂತ ಲೂಟಿ, ಹಿಂಸಾಚಾರದಲ್ಲಿ ತೊಡಗಿದ್ದ 1000ಕ್ಕೂ ಹೆಚ್ಚು ಪಿಟಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
