ಏಷ್ಯಾ ಮತ್ತು ಮಿಡಲ್ ಈಸ್ಟ್ ಬ್ರಿಡ್ಜ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿರುವ ಭಾರತ ತಂಡ ತಕ್ಷಣವೇ ಪಾಕಿಸ್ತಾನವನ್ನು ತೊರೆಯುವಂತೆ ಹೇಳಲಾಗಿದೆ.
ನವದೆಹಲಿ (ಮೇ. 10): ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಬುಧವಾರ ಏಷ್ಯಾ ಮತ್ತು ಮಿಡಲ್ ಈಸ್ಟ್ ಬ್ರಿಡ್ಜ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬಂದಿರುವ ಭಾರತೀಯ ತಂಡಕ್ಕೆ ತಕ್ಷಣವೇ ಪಾಕಿಸ್ತಾನವನ್ನು ತೊರೆಯುವಂತೆ ಹೇಳಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 30 ಸದಸ್ಯರ ಭಾರತ ತಂಡವು ಕಳೆದ ವಾರ ವಾಘಾ ಬಾರ್ಡರ್ ಮೂಲಕ ಲಾಹೋರ್ ತಲುಪಿತ್ತು. ಈವೆಂಟ್‌ಗಳಲ್ಲಿ ಭಾರತ ಮಾತ್ರವಲ್ಲದೆ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಮತ್ತು ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ ತಂಡಗಳು ಭಾಗವಹಿಸಬೇಕಿದ್ದವು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಭಾರತೀಯ ಪ್ರಜೆಗಳಿಗೆ ಈ ನಿರ್ದೇಶನಗಳನ್ನು ನೀಡಲಾಗಿದೆ. ಇಮ್ರಾನ್ ಖಾನ್ ಬಂಧನದಿಂದ ಪಾಕಿಸ್ತಾನದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು, ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಭದ್ರತಾ ಪರಿಸ್ಥಿತಿಯು ಉದ್ವಿಗ್ನವಾಗಿದೆ. ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (NAB) ಬಂಧಿಸಿದ ನಂತರ ಪಾಕಿಸ್ತಾನದಲ್ಲಿ ರಾಜಕೀಯ ಅಶಾಂತಿಯಿಂದಾಗಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾ ಸಹ ತಮ್ಮ ನಾಗರಿಕರಿಗೆ ಪ್ರಯಾಣ ಸಲಹೆಗಳನ್ನು ನೀಡಿವೆ.
ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯ ವರದಿಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅಮೆರಿಕ ರಾಯಭಾರ ಕಚೇರಿ ಪ್ರಯಾಣದ ಎಚ್ಚರಿಕೆಯನ್ನು ನೀಡಿದೆ.
"ಯುಎಸ್ ರಾಯಭಾರ ಕಚೇರಿಯು ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಗಳ ಹಿಂದಿನ ವರದಿಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಈ ಪ್ರತಿಭಟನೆಗಳು ಪಾಕಿಸ್ತಾನದಲ್ಲಿಯೇ ನಡೆದಿರುವುದೋ ಅಥವಾ ಇದರ ಹಿಂದೆ ಬೇರೆ ದೇಶದ ಕೈವಾಡವಿದೆಯೇ ಎನ್ನುವುದನ್ನು ತನಿಖೆ ಮಾಡುತ್ತಿದೆ' ಎಂದು ಯುಎಸ್ ರಾಯಭಾರ ಕಚೇರಿ ತಿಳಿಸಿದೆ.
"ರಾಜಕೀಯ ಸಂಚಾರ ಅಡೆತಡೆಗಳು ಮತ್ತು ನಿರ್ಬಂಧಗಳ" ಕಾರಣದಿಂದಾಗಿ, ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಮೇ 10 ರಂದು ಎಲ್ಲಾ ಕಾನ್ಸುಲರ್ ನೇಮಕಾತಿಗಳನ್ನು ರದ್ದುಗೊಳಿಸಿದೆ ಮತ್ತು ಅಮೆರಿಕ ನಾಗರಿಕರು ಹೆಚ್ಚಿನ ಜಾಗರೂಕರಾಗಿರಲು ಮತ್ತು ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳನ್ನು ತಪ್ಪಿಸುವಂತೆ ಸೂಚಿಸಲಾಗಿದೆ.
ಇಂಗ್ಲೆಎಂಡ್ ಫಾರಿನ್ ಕಾಮನ್‌ವೆಲ್ತ್ ಮತ್ತು ಡೆವಲಪ್‌ಮೆಂಟ್ ಆಫೀಸ್ (FCDO) ಪ್ರಕಾರ, ಯಾವುದೇ ರಾಜಕೀಯ ಪ್ರತಿಭಟನೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಲು ಬ್ರಿಟಿಷ್ ನಾಗರಿಕರಿಗೆ ಸಲಹೆ ನೀಡಲಾಗುತ್ತದೆ ಮತ್ತು ಅಗತ್ಯವಿರುವಂತೆ ತಮ್ಮ ಯೋಜನೆಗಳನ್ನು ಬದಲಾಯಿಸಲು ಸಿದ್ಧರಾಗಿರಬೇಕು ಎಂದಿದೆ.
ವಿಭಜಿತ, ಅಸ್ಥಿರ ಪಾಕಿಸ್ತಾನ.. ಭಾರತದ ಮೇಲೆ ಇದರ ಪರಿಣಾಮವೇನು?
ತಮ್ಮ ಹೇಳಿಕೆಯಲ್ಲಿ, ಯುಕೆ ಎಫ್‌ಸಿಡಿಒ ಪಾಕಿಸ್ತಾನದಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತವೆ ಮತ್ತು ಪೂರ್ವ ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಸಂಭವಿಸಬಹುದು ಎಂದು ಎಚ್ಚರಿಸಿದೆ. ಹೆಚ್ಚಿನ ಪ್ರತಿಭಟನೆಗಳು ಶಾಂತಿಯುತವಾಗಿಯೇ ಉಳಿದಿದ್ದರೂ, ಅವು ಹಿಂಸಾತ್ಮಕ ಸನ್ನಿವೇಶಗಳಿಗೆ ವೇಗವಾಗಿ ಉಲ್ಬಣಗೊಳ್ಳಬಹುದು ಎಂದು ತಿಳಿಸಿದೆ.
Breaking: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಪಾಕಿಸ್ತಾನದಲ್ಲಿ ಜಾಗರೂಕರಾಗಿರಲು ಕೆನಡಾ ಸರ್ಕಾರ ತನ್ನ ನಾಗರಿಕರು ಮತ್ತು ರಾಜತಾಂತ್ರಿಕ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ. ಸಲಹೆಯು ಭಯೋತ್ಪಾದನೆ, ನಾಗರಿಕ ಅಶಾಂತಿ, ಪಂಥೀಯ ಹಿಂಸಾಚಾರ ಮತ್ತು ಅಪಹರಣದಂತಹ ವಿವಿಧ ಭದ್ರತಾ ಬೆದರಿಕೆಗಳ ಉಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
