ಆಯಸ್ಸು ಗಟ್ಟಿಯಿದ್ದರೆ ಸಾವೂ ಹತ್ತಿರ ಸುಳಿಯುವುದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ. ಏಳು ಬಾರಿ ಭೀಕರ ಅಪಘಾತದಲ್ಲಿ ಇವರೊಬ್ಬರೇ ಬದುಕಿ ಬರುವ ಮೂಲಕ ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಇವರ ಸ್ಟೋರಿ ಇಲ್ಲಿದೆ! 

ಆಯಸ್ಸು ಗಟ್ಟಿಯಿದ್ದರೆ ಏನೇ ಬಂದರೂ ಸಾವು ನಮ್ಮ ಹತ್ತಿರ ಸುಳಿಯುವುದಿಲ್ಲ. ವಿಧಿಯಾಟದ ಮುಂದೆ ಎಲ್ಲವೂ ಗೌಣವೇ. ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಆಮೇಲೆ ಸಲಹೆ ಕೊಟ್ಟರೂ, ಏನಾಗಬೇಕೋ ಅದು ಆಗಿಯೇ ತೀರುತ್ತದೆ. ಕಾಲನ ಕರೆ ಬಂದರೆ ಯಾವುದಾದರೂ ರೂಪದಲ್ಲಿ ಹೋಗಲೇ ಬೇಕು. ಆಯಸ್ಸು ಗಟ್ಟಿ ಇದ್ದರೆ ಮೊನ್ನೆ ನಡೆದ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಂತೆ ಜೀವ ಉಳಿಯುತ್ತದೆ. ಎಷ್ಟೋ ಬಾರಿ ಯಾವುದೋ ಕೆಲಸ ಮಾಡಲು ಹೋದಾಗ ಅಡ್ಡಿ ಎದುರಾದರೆ ಅದೆಷ್ಟು ಮಂದಿಗೆ ಶಾಪ ಹಾಕುತ್ತೇವೋ ಗೊತ್ತಿಲ್ಲ. ಆದರೆ ಎಷ್ಟೋ ವೇಳೆ ಇದೇ ನಮ್ಮನ್ನು ಕಾಪಾಡಿರುತ್ತದೆ ಎನ್ನುವ ಅರಿವೂ ನಮಗೆ ಇರುವುದಿಲ್ಲ. ಇದೀಗ ಅಹಮದಾಬಾದ್​ನಲ್ಲಿ ನಡೆದ ಘಟನೆಯ ಬಳಿಕ ರಮೇಶ್​ ಎನ್ನುವವರು ಬದುಕುಳಿದ ಏಕೈಕ ವ್ಯಕ್ತಿಯಾಗಿರುವುದರಿಂದ, ಅವರು ಬದುಕಿದ್ದೇ ಪವಾಡವಾಗಿದೆ. ತಾವು ಬದುಕಿರುವುದು ಖುದ್ದು ಅವರಿಗೂ ಅಚ್ಚರಿ ಎನ್ನಿಸುವಷ್ಟರ ಮಟ್ಟಿಗೆ ಇಲ್ಲಿ ಪವಾಡ ನಡೆದಿದೆ.

ಆದರೆ, ಇನ್ನೂ ಕುತೂಹಲದ ವಿಷಯ ಏನೆಂದರೆ, ಇಲ್ಲೊಬ್ಬ ವ್ಯಕ್ತಿ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಇದೇ ರೀತಿಯ ಭೀಕರ ಅಪಘಾತದಲ್ಲಿ ಅವರು ಒಂದಲ್ಲ, ಎರಡಲ್ಲ ಏಳು ಬಾರಿ ಬದುಕಿ ಬಂದಿದ್ದಾರೆ. ಅದೂ ಬದುಕಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಬಸ್ಸು, ರೈಲು, ಕಾರು, ವಿಮಾನ ಅಪಘಾತಗಳಲ್ಲಿ ಏಕೈಕ ಬದುಕುಳಿದ ವ್ಯಕ್ತಿಯಾಗಿ ಬಂದಿದ್ದಾರೆ ಇವರು.ಸಾವೇ ಇಲ್ಲದ ಸರದಾರ ಎನ್ನುವ ಬಿರುದು ಕೂಡ ಇವರಿಗೆ ಬಂದಿದೆ. ಆ ವ್ಯಕ್ತಿಯ ರೋಚಕ ಸ್ಟೋರಿ ಇಲ್ಲಿದೆ. ಈ ವ್ಯಕ್ತಿಯ ಹೆಸರು ಫ್ರಾನ್ ಸಲಕ್! ಏಳು ಬಾರಿ ಸಾವಿನ ಸಮೀಪ ಹೋಗಿ ಬದುಕಿ ಬಂದಿದ್ದಾರೆ ಇವರು. ಅವರು ತಮ್ಮ ಜೀವನದ ಮೊದಲ ಅಪಘಾತವನ್ನು ಎದುರಿಸಿದ್ದು 1957 ರಲ್ಲಿ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿತು. ಇದರ ಪರಿಣಾಮವಾಗಿ ಬಸ್ಸ್​ನಲ್ಲಿದ್ದ ಎಲ್ಲರೂ ಸತ್ತರು, ಆದರೆ ಫ್ರಾನ್​ ಮಾತ್ರ ಬದುಕುಳಿದರು. ಬದುಕಿರುವ ಏಕೈಕ ವ್ಯಕ್ತಿ ಇವರು. ಅದಾದ ಬಳಿಕ ರೈಲು ನದಿಯ ಮೇಲೆ ಪ್ರಯಾಣಿಸುತ್ತಿದ್ದಾಗ, ಅದು ಹಳಿಗಳಿಂದ ಜಾರಿ ನದಿಗೆ ಬಿದ್ದಿತು. ಆ ಸಮಯದಲ್ಲಿ ಅನೇಕರು ಸಾವನ್ನಪ್ಪಿದರು. ಆದರೆ, ಇವರ ಬೋಗಿಯಲ್ಲಿದ್ದವರ ಪೈಕಿ ಬದುಕಿಳಿದವರು ಇವರು ಮಾತ್ರ!

1963ರಲ್ಲಿ, ಅವರು ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷದಿಂದ ಸ್ಫೋಟಗೊಂಡಿತು. ವಿಚಿತ್ರ ಎಂದರೆ, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪದರೆ, ಫ್ರಾನ್ ಒಬ್ಬರೇ ಬದುಕುಳಿದರು. ಅವರು ವಿಮಾನದಿಂದ ಹೊರಬಿದ್ದು ಒಂದು ಒಣಗಿದ ಹುಲ್ಲಿನ ಕೃಷಿಭೂಮಿಯಲ್ಲಿ ಬಿದ್ದ ಕಾರಣ ಜೀವ ಉಳಿಯಿತು ಎನ್ನಲಾಗುತ್ತಿದೆ. ಇಷ್ಟೇ ಅಲ್ಲ. ಇವರು ಚಲಿಸುತ್ತಿದ್ದ ವೇಳೆ ಎರಡು ಬಾರಿ ಕಾರು ಸ್ಫೋಟಗೊಂಡಿದೆ. ಆ ಸಮಯದಲ್ಲಿಯೂ ಇವರು ಹೇಗೋ ಜೀವ ಉಳಿಸಿಕೊಂಡಿದ್ದಾರೆ. ಒಮ್ಮೆ, ಕಾರಿನ ಎಂಜಿನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಆದರೆ ಅವರು ಹೊರಬರುವಲ್ಲಿ ಯಶಸ್ವಿಯಾದರು. ಇನ್ನೊಂದು ಬಾರಿ, ಅವರ ಕಾರಿನ ಇಂಧನ ಟ್ಯಾಂಕ್ ಸಿಡಿಯಿತು. ಮತ್ತು ಕಾರು ಸಂಪೂರ್ಣವಾಗಿ ಸುಟ್ಟುಹೋಯಿತು, ಆದರೆ ಅವರಿಗೆ ಏನೂ ಆಗಲಿಲ್ಲ.

ಇವರ ಸ್ಟೋರಿ ಇಲ್ಲಿಗೇ ನಿಲ್ಲುವುದಿಲ್ಲ. ಇವರಿಗೆ ಒಮ್ಮೆ ಕೋಟಿ ರೂಪಾಯಿ ಲಾಟರಿ ಕೂಡ ಬಂದಿದೆ. 2003ರಲ್ಲಿ ಅವರು ಒಮ್ಮೆ ಅವನು ಲಾಟರಿ ಆಡಲು ಹೋಗಿ 1 ಮಿಲಿಯನ್ ಡಾಲರ್ ಅಂದರೆ ಅಂದಾಜು 8.3 ಕೋಟಿ ರೂಪಾಯಿಗಳನ್ನು ಗೆದ್ದರು. ಆದರೆ ಅವನು ಎಲ್ಲಾ ಹಣವನ್ನು ಬಡವರಿಗೆ ದಾನ ಮಾಡಿದರು.