ಆಯಸ್ಸು ಗಟ್ಟಿಯಿದ್ದರೆ, ವಿಧಿ ಎನ್ನುವುದು ಯಾವುದೋ ರೂಪದಲ್ಲಿ ಬಂದು ಜೀವ ಕಾಪಾಡುತ್ತದೆ ಎನ್ನುವುದಕ್ಕೆ ಮೊನ್ನೆ ನಡೆದ ವಿಮಾನ ದುರಂತದಲ್ಲಿ ಲೇಟಾಗಿ ಬಂದು ವಿಮಾನ ತಪ್ಪಿಸಿಕೊಂಡಿರುವ ಭೂಮಿಯೇ ಸಾಕ್ಷಿ. ಅವರು ಹೇಳಿದ್ದೇನು ಕೇಳಿ...
ವಿಧಿಯಾಟದ ಮುಂದೆ ಎಲ್ಲವೂ ಗೌಣವೇ. ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಆಮೇಲೆ ಸಲಹೆ ಕೊಟ್ಟರೂ, ಏನಾಗಬೇಕೋ ಅದು ಆಗಿಯೇ ತೀರುತ್ತದೆ. ಕಾಲನ ಕರೆ ಬಂದರೆ ಯಾವುದಾದರೂ ರೂಪದಲ್ಲಿ ಹೋಗಲೇ ಬೇಕು. ಆಯಸ್ಸು ಗಟ್ಟಿ ಇದ್ದರೆ ಮೊನ್ನೆ ನಡೆದ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಂತೆ ಜೀವ ಉಳಿಯುತ್ತದೆ. ಎಷ್ಟೋ ಬಾರಿ ಯಾವುದೋ ಕೆಲಸ ಮಾಡಲು ಹೋದಾಗ ಅಡ್ಡಿ ಎದುರಾದರೆ ಅದೆಷ್ಟು ಮಂದಿಗೆ ಶಾಪ ಹಾಕುತ್ತೇವೋ ಗೊತ್ತಿಲ್ಲ. ಅದರಲ್ಲಿಯೂ ಬೆಂಗಳೂರಿನಂಥ ಟ್ರಾಫಿಕ್ನಲ್ಲಿ ಸಿಲುಕಿದಾಗ, ಮನೆಯಲ್ಲಿ ಯಾರದ್ದೋ ಕಾರಣದಿಂದ ಎಲ್ಲಿಯೂ ಹೋಗಲು ವಿಳಂಬವಾದಾಗ, ಮನೆ ಬಿಟ್ಟ ತಕ್ಷಣ ಯಾರೋ ಕರೆ ಮಾಡಿ ಹೋಗುವುದನ್ನು ಲೇಟ್ ಮಾಡಿದಾಗ... ಹೀಗೆ ಏನೇನೋ ಕಾರಣಗಳು ಬಂದಾಗ ಬರುವ ಸಿಟ್ಟು ಅಷ್ಟಿಷ್ಟಲ್ಲ.
ಆದರೆ ಹಾಗೆ ಆಗುವುದು ಕೂಡ ನಮ್ಮ ಪ್ರಾಣ ಕಾಪಾಡಲು ಇರಬಹುದೇನೋ, ಏನೋ ಅವಘಡ ತಪ್ಪಿಸಲು ಇರಬಹುದೇನೋ ಎಂದು ಎಂದುಕೊಳ್ಳುವುದೇ ಇಲ್ಲ! ಅದಕ್ಕೆ ಸಾಕ್ಷಿಯಾದದ್ದು ಮೊನ್ನೆ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತವೇ ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ಆಯಸ್ಸು ಗಟ್ಟಿಇದ್ದ ರಮೇಶ್ ಎನ್ನುವ ವ್ಯಕ್ತಿ ಪವಾಡಸದೃಶವಾಗಿ ಬದುಕಿಬಂದರೆ ಟ್ರಾಫಿಕ್ನಿಂದಾಗ 10 ನಿಮಿಷ ವಿಳಂಬವಾದ ಕಾರಣದಿಂದ ಜೀವ ಉಳಿಸಿಕೊಂಡಿರುವ ಭೂಮಿ ಚೌಹಾಣ್ ಒಬ್ಬರು. ಇದೀಗ ಮರುಜನ್ಮ ಪಡೆದಿರುವ ಭೂಮಿ ಅವರು ಬಿಬಿಸಿಗೆ ಸಂದರ್ಶನ ನೀಡಿದ್ದು, ಅಂದು ಆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪತಿಯನ್ನು ಭೇಟಿಯಾಗಲು ಇವರು ಅಂದು ಲಂಡನ್ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ ದಾರಿಮಧ್ಯೆ ಬ್ರೇಕ್ಫಾಸ್ಟ್ಗೆಂದು ಇಳಿದಾಗ ಅಲ್ಲಿ ಸ್ವಲ್ಪ ಟೈಮ್ ಆಗಿದೆ. ಆದರೆ ಟ್ರಾಫಿಕ್ ಜಾಂ ಇಲ್ಲದಿದ್ದರೆ ಸುಲಭದಲ್ಲಿ ವಿಮಾನದ ಸಮಯಕ್ಕೆ ತಲುಪುತ್ತಿದ್ದರು. ಆದರೆ ಟ್ರಾಫಿಕ್ ಜಾಂ ಆಗಿದ್ದರಿಂದ ಹತ್ತು ನಿಮಿಷ ಲೇಟ್ ಆಗಿದೆ. ಅಷ್ಟರಲ್ಲಿಯೇ ವಿಮಾನ ಹಾರಲು ಸಿದ್ಧವಾಗಿದೆ. ಅಲ್ಲಿರುವ ಸಿಬ್ಬಂದಿ ಮನಸ್ಸು ಮಾಡಿದ್ದರೆ, ಇವರನ್ನು ಒಳಗೆ ಬಿಡಬಹುದಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ನಿಯಮ ಇರುವ ಕಾರಣ, ಭೂಮಿ ಅವರನ್ನು ಒಳಗೆ ಬಿಡಲಿಲ್ಲ. ಆ ಲೇಡಿಗೆ ನಾನು ತುಂಬಾ ಕೇಳಿಕೊಂಡೆ. ಟೈಂ ಇದ್ದುದರಿಂದ ಬಿಡಿ ಎಂದು ರಿಕ್ವೆಸ್ಟ್ ಮಾಡಿಕೊಂಡೆ. ಆದರೆ ಆಕೆ ಬಿಡಲಿಲ್ಲ. ವಿಮಾನ ತಪ್ಪಿಹೋದಾಗ ತುಂಬಾ ಸಂಕಟಪಟ್ಟೆ ಎಂದಿದ್ದಾರೆ ಭೂಮಿ.
ಆದರೆ, ಇವರಿನ್ನೂ ಚಡಪಡಿಸುತ್ತಿರುವಷ್ಟರಲ್ಲಿಯೇ ಅಲ್ಲಿ 240 ಮಂದಿ ಅಗ್ನಿಗೆ ಆಹುತಿಯಾಗಿಹೋಗಿದ್ದರು. ನಾನಿನ್ನೂ ವಿಮಾನ ನಿಲ್ದಾಣದಲ್ಲಿಯೇ ಇದ್ದಾಗ ಈ ಸುದ್ದಿ ಬಂತು. ಅರೆಕ್ಷಣ ಬ್ಲ್ಯಾಂಕ್ ಆಗಿಬಿಟ್ಟೆ. ಏನೂ ತಲೆಗೆ ಹೊಳೆಯಲೇ ಇಲ್ಲ. ಕಣ್ಣೆದುರು ನನ್ನಪತಿ ಮತ್ತು ಮಗ ಬಂದರು ಎಂದಿದ್ದಾರೆ ಭೂಮಿ. ಒಂದು ವೇಳೆ ಆ ಏರ್ಪೋರ್ಟ್ ಲೇಡಿ ಸಿಬ್ಬಂದಿ ಮನಸ್ಸು ಮಾಡಿ ಇವರನ್ನು ಒಳಗೆ ಬಿಟ್ಟಿದ್ದರೆ ಅವರೂ ಅಷ್ಟರಲ್ಲಿಯೇ ಸುಟ್ಟು ಕರಕಲಾಗುತ್ತಿದ್ದರು. ಆದರೆ ಆಯಸ್ಸು ಗಟ್ಟಿ ಇದ್ದರೆ ಇಂಥ ನೆಪಗಳಿಂದಲೇ ಜೀವ ಉಳಿಯುತ್ತದೆ ಎನ್ನುವುದಕ್ಕೆ ಭೂಮಿ ಸಾಕ್ಷಿಯಾಗಿದ್ದಾರೆ. ಪತಿಯನ್ನು ಭೇಟಿಯಾಗಲು ಹೋಗಲೇಬೇಕಿದೆ. ಆದರೆ, ಇನ್ನು ಸ್ವಲ್ಪ ಟೈಮ್ ತೆಗೆದುಕೊಳ್ಳುವೆ ಎಂದಿದ್ದಾರೆ ಅವರು.
