ಅಮೆರಿಕದ ಮಿಚಿಗನ್‌ನಲ್ಲಿ ವ್ಯಕ್ತಿಯೊಬ್ಬರು ಕೇವಲ 2,800 ರೂಪಾಯಿಗೆ ಖರೀದಿಸಿದ ಹಳೆಯ ಪೇಂಟಿಂಗ್ ಒಂದು ಕೋಟ್ಯಂತರ ರೂಪಾಯಿಗೆ ಮಾರಾಟವಾಗಿದೆ. ಪ್ರಸಿದ್ಧ ಕಲಾಕಾರರಾದ ಗೆರ್ಟ್ರೂಡ್ ಅಬೆರ್‌ಕ್ರೋಂಬಿ ರಚಿಸಿದ್ದ ಈ ಅಪರೂಪದ ಕಲಾಕೃತಿಯು ಹರಾಜಿನಲ್ಲಿ ಬರೋಬ್ಬರಿ 13 ಕೋಟಿ ರೂಪಾಯಿ ಗಳಿಸಿದೆ.
ಮಿಚಗನ್: ಅದೃಷ್ಟ ಯಾವ ರೂಪದಲ್ಲಿ ಬರುತ್ತದೆ ಎಂದು ಊಹಿಸುವುದೇ ಕಷ್ಟ. ಇಲ್ಲೊಬ್ಬ ವ್ಯಕ್ತಿ ಕೇವಲ 30 ಡಾಲರ್ ಅರ್ಥಾತ್ ಸುಮಾರು 2,800 ರೂಪಾಯಿಗೆ ಖರೀದಿ ಮಾಡಿದ ಪೇಂಟಿಂಗ್ ಒಂದು ಇದೀಗ 13 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದರೆ ಅದೃಷ್ಟ ಹೇಗಿರಬೇಡ ನೋಡಿ. ಇಂಥದ್ದೊಂದು ವಿಚಿತ್ರ ನಡೆದಿರುವುದು ಅಮೆರಿಕದಲ್ಲಿ. ಎಸ್ಟೇಟ್ ಮಾರಾಟದ ಸಂದರ್ಭದಲ್ಲಿ ಸಿಕ್ಕ ಈ ಪೇಂಟಿಂಗ್ ಅನ್ನು ಕೇವಲ 2,800 ರೂಪಾಯಿಗೆ ಖರೀದಿಸಿದ್ದ ವ್ಯಕ್ತಿ, ಅದರಲ್ಲಿನ ಸಹಿ ನೋಡಿ ಇದು ಖಂಡಿತವಾಗಿಯೂ ದುಬಾರಿಯಾಗಿದೆ ಎಂದು ತಿಳಿದು, ವಸ್ತು ಸಂಗ್ರಹಾಲಯಕ್ಕೆ ಮಾರಾಟ ಮಾಡಿದ್ದಾನೆ. ಅಲ್ಲಿ ಅವನಿಗೆ ಸಿಕ್ಕಿದ್ದು 13 ಕೋಟಿ ರೂಪಾಯಿ!
ಇದು ತೈಲ ವರ್ಣಚಿತ್ರವಾಗಿದ್ದು, ಇದನ್ನು ಪ್ರಸಿದ್ಧ ಸರ್ರಿಯಲಿಸ್ಟ್ ಗೆರ್ಟ್ರೂಡ್ ಅಬೆರ್‌ಕ್ರೋಂಬಿ ಅವರು ರಚಿಸಿದ್ದಾಗಿದೆ. ಈ ಚಿತ್ರಕಲೆ 8X11 ಇಂಚಿನ ಸ್ಟಿಲ್-ಲೈಫ್ ಆಗಿದ್ದು, ಜುಲೈನಲ್ಲಿ ಅಮೆರಿಕದ ಮಿಚಿಗನ್ ಮನೆಯ "ಡಾರ್ಕ್ ಕಾರ್ನರ್" ನಲ್ಲಿ ಪತ್ತೆಯಾಗಿತ್ತು. ಅಷ್ಟಕ್ಕೂ ಇದರ ಸ್ಟೋರಿನೂ ರೋಚಕವಾಗಿದೆ. ಕಲಾಕಾರರಾಗಿರುವ ಗೆರ್ಟ್ರೂಡ್ ಅಬೆರ್‌ಕ್ರೋಂಬಿ ಅವರಿಗೆ 50ರ ದಶಕದಲ್ಲಿ ಸಿಕ್ಕಾಪಟ್ಟೆ ಹೆಸರು ಇತ್ತು. ಅವರ ಕಲಾಕೃತಿಗಳಿಗೆ ಈಗಲೂ ಅಷ್ಟೇಬೆಲೆ ಇದೆ. ಸಮುದ್ರದ ಚಿಪ್ಪಿನಿಂದ ರಚಿಸಿದ್ದ ಈ ಕಲಾಕೃತಿಯನ್ನು ಅವರು ಮಾರಾಟ ಮಾಡಿರಲಿಲ್ಲ. ಬದಲಿಗೆ ಹತ್ತು ಸಮುದ್ರ ಚಿಪ್ಪುಗಳ ಸಂಗ್ರಹದಿಂದ ತಯಾರಿಸಿದ್ದ, 1951 ರಲ್ಲಿ ಪೂರ್ಣಗೊಂಡ ಈ ಕಲಾಕೃತಿಯನ್ನು ತಮಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಹಣದ ಬದಲಾಗಿ ಇದನ್ನು ಗಿಫ್ಟ್ ಕೊಟ್ಟಿದ್ದರು. ಇದಕ್ಕೂ ಮುನ್ನ ಅವರು, ತಮ್ಮ ಆರು ಏಕವ್ಯಕ್ತಿ ಪ್ರದರ್ಶನಗಳಲ್ಲಿ ಇದನ್ನು ಪ್ರದರ್ಶಿಸಿದ್ದರು. ಆ ಸಮಯದಲ್ಲಿ, ಅದರ ಬೆಲೆ $50 ರಿಂದ $150 ರ ನಡುವೆ ಇತ್ತು. ಬಳಿಕ ಅದನ್ನು ವೈದ್ಯರಿಗೆ ಉಡುಗೊರೆಯಾಗಿ ಕೊಟ್ಟರು.
ಅಲ್ಲಿ ಆಗಿದ್ದೇನು?
ವೈದ್ಯರು ಅದನ್ನು ಎಲ್ಲಿಯೂ ಮಾರಾಟ ಮಾಡದೇ ತಮ್ಮ ಬಳಿ ಇಟ್ಟುಕೊಂಡಿದ್ದರು. ಅವರ ಮರಣದ ಬಳಿಕ ಈ ಕಲಾಕೃತಿಯ ಬಗ್ಗೆ ಯಾರಿಗೂ ಅರಿವಿಗೆ ಬಂದಿರಲಿಲ್ಲ. ಅದನ್ನು ಅವರ ಎಸ್ಟೇಟ್ನಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಎಸ್ಟೇಟ್ ಕೊಂಡವರು ಅದನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ, ಅದರ ಬೆಲೆ ಅವರಿಗೆ ತಿಳಿದಿರಲಿಲ್ಲ. ಬಳಿಕ ಅದನ್ನು ಫ್ರೀಮನ್ಸ್ ಎನ್ನುವವರು ಖರೀದಿ ಮಾಡಿದರು. ಆಗ ಅವರಿಗೂ ಇದು ಗೆರ್ಟ್ರೂಡ್ ಅಬೆರ್‌ಕ್ರೋಂಬಿ ಅವರ ಕಲಾಕೃತಿ ಎಂದು ತಿಳಿದಿರಲಿಲ್ಲ. ಏಕೆಂದರೆ, "ಅಬರ್‌ಕ್ರೋಂಬಿ, '51' - ಎಂಬ ಸಹಿ ಕತ್ತಲೆಯ ಹಿನ್ನೆಲೆಯಲ್ಲಿ ಅಷ್ಟೇನೂ ಗೋಚರಿಸಲಿಲ್ಲ.
ಸಹಿ ನೋಡಿದಾಗ ಸುಸ್ತಾದರು
ಮನೆಗೆ ಬಂದು ಸಹಿ ನೋಡಿದಾಗ ಫ್ರೀಮನ್ಸ್ ಸುಸ್ತಾಗಿ ಹೋದರು. ಹಿಂದೆ ಮುಂದೆ ಯೋಚಿಸದೇ ಅವರು, ಅಬರ್‌ಕ್ರೋಂಬಿ ಪ್ರದರ್ಶನವನ್ನು ಪ್ರದರ್ಶಿಸಲಾಗಿದ್ದ ಮಿಲ್ವಾಕೀ ಆರ್ಟ್ ಮ್ಯೂಸಿಯಂಗೆ ಭೇಟಿ ನೀಡಿದರು. ಅಲ್ಲಿ ಅದನ್ನು ಹರಾಜಿಗೆ ಇಡಲಾಯಿತು. ರೂಸ್‌ವೆಲ್ಟ್ ವಿಶ್ವವಿದ್ಯಾಲಯದ ಕಲಾ ಇತಿಹಾಸ ಪ್ರಾಧ್ಯಾಪಕರಾದ ಅಬರ್‌ಕ್ರೋಂಬಿ ತಜ್ಞ ಸುಸಾನ್ ವೀನಿಂಗರ್ ಅವರು ಈ ಕೃತಿಯನ್ನು ನಿಜವಾದದ್ದು ಎಂದು ದೃಢೀಕರಿಸಿದರು. ಕಲಾ ಪುನಃಸ್ಥಾಪಕ ಜೂಲಿಯನ್ ಬಾಮ್‌ಗಾರ್ಟ್ನರ್ ನಂತರ ವರ್ಣಚಿತ್ರವನ್ನು ಸ್ವಚ್ಛಗೊಳಿಸಿದರು. ಅದಕ್ಕೆ ಮರುಸ್ಪರ್ಶ ನೀಡಲಾಯಿತು ಮತ್ತು ಮರುವಾರ್ನಿಷ್ ಮಾಡಲಾಯಿತು. ಕೊನೆಗೆ ಹರಾಜಿನ ಬಳಿಕ 13 ಕೋಟಿಗೆ ಹರಾಜಾಯಿತು.


