ಪ್ರವಾಸಿ ಹಾಟ್‌ ಏರ್‌ ಬಲೂನ್‌ ಸ್ಫೋಟಗೊಂಡು ಅದರಲ್ಲಿದ್ದ 21 ಜನರ ಪೈಕಿ 8 ಜನರು ಅಸುನೀಗಿದ ಘಟನೆ ಬ್ರೆಜಿಲ್‌ನಲ್ಲಿ ಶನಿವಾರ ಸಂಭವಿಸಿದೆ.

ಬ್ರೆಜಿಲಿಯಾ: ಪ್ರವಾಸಿ ಹಾಟ್‌ ಏರ್‌ ಬಲೂನ್‌ ಸ್ಫೋಟಗೊಂಡು ಅದರಲ್ಲಿದ್ದ 21 ಜನರ ಪೈಕಿ 8 ಜನರು ಅಸುನೀಗಿದ ಘಟನೆ ಬ್ರೆಜಿಲ್‌ನಲ್ಲಿ ಶನಿವಾರ ಸಂಭವಿಸಿದೆ.

ಬ್ರೆಜಿಲ್‌ನ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪ್ರೈಯಾ ಗ್ರ್ಯಾಂಡೇ ಎಂಬಲ್ಲಿ ದುರ್ಘಟನೆ ನಡೆದಿದೆ. ಬೆಳಗ್ಗೆ ಬಲೂನ್‌ ಆಗಸದಲ್ಲಿ ಹಾರಾಟ ನಡೆಸುವಾಗ ಇದ್ದಕ್ಕಿದ್ದಂತೆ ಬೆಂಕಿ ತಾಗಿದೆ. ಬೆಂಕಿಯ ತೀವ್ರತೆಗೆ 8 ಮಂದಿ ಮೃತಪಟ್ಟು 13 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಅತ್ಯಂತ ದುಬಾರಿ ‘ಜೆಸಿಬಿ ಸಾಹಿತ್ಯ ಪ್ರಶಸ್ತಿ’ ಸ್ಥಗಿತ

ನವದೆಹಲಿ: 25 ಲಕ್ಷ ರು. ಬಹುಮಾನ ಹೊಂದಿರುವ, ಸಾಹಿತ್ಯ ಕ್ಷೇತ್ರಕ್ಕೆ ಕೊಡಲ್ಪಡುವ ದೇಶದ ಅತ್ಯಂತ ದುಬಾರಿ ಪ್ರಶಸ್ತಿಯಾದ ‘ಜೆಸಿಬಿ ಸಾಹಿತ್ಯ ಪ್ರಶಸ್ತಿ’ಯನ್ನು ಈ ವರ್ಷದಿಂದ ಸ್ಥಗಿತಗೊಳಿಸಲಾಗಿದೆ ಎಂದು ಜೆಸಿಬಿ ಲಿಟರೇಚರ್ ಫೌಂಡೇಶನ್ ಘೋಷಿಸಿದೆ.

‘ಈ ವರ್ಷದಿಂದ ಜೆಸಿಬಿ ಪ್ರಶಸ್ತಿಯನ್ನು ನಿಲ್ಲಿಸಲಾಗಿದೆ. ನಿಖರವಾದ ವಿಷಯಗಳನ್ನು ನಾನು ನಿರಾಕರಿಸುವುದಿಲ್ಲ. ಆದರೆ ಉಳಿದ ವಿಷಯಗಳ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದು ಜೆಸಿಬಿ ಪ್ರಶಸ್ತಿಯ ಸಾಹಿತ್ಯ ನಿರ್ದೇಶಕಿ ಮಿತಾ ಕಪೂರ್ ತಿಳಿಸಿದ್ದಾರೆ. ಆದರೆ ಪ್ರಶಸ್ತಿ ಸ್ಥಗಿತಗೊಳಿಸಲು ನಿರ್ದಿಷ್ಟ ಕಾರಣಗಳನ್ನು ತಿಳಿಸಲು ನಿರಾಕರಿಸಿದ್ದಾರೆ.

ಮಾರ್ಚ್‌ನಲ್ಲಿ ಜೆಸಿಬಿ ಲಿಟರೇಚರ್ ಫೌಂಡೇಶನ್‌ಗೆ ನೀಡಲಾಗಿದ್ದ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಪರವಾನಗಿಯನ್ನು ಮರಳಿ ನೀಡಬೇಕಾದರೆ ಕಂಪನಿಯು ‘ಫೌಂಡೇಶನ್’ ಬದಲಿಗೆ ‘ಪ್ರೈವೇಟ್ ಲಿಮಿಟೆಡ್’ ಎಂಬ ಪದವನ್ನು ತನ್ನ ಹೆಸರಿನೊಂದಿಗೆ ಸೇರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಟಿಸಿಎಸ್‌ ಬಳಿಕ ಕಾಗ್ನಿಝೆಂಟ್‌ಗೆ ಆಂಧ್ರ 99 ಪೈಸೆಗೆ ಭೂಮಿ

ಅಮರಾವತಿ: ಬೆಂಗಳೂರಿನಲ್ಲಿ ಐಟಿ ಕಂಪನಿಗಳನ್ನು ಸೆಳೆಯುವ ಆಂಧ್ರ ಪ್ರದೇಶ ಸರ್ಕಾರ ಮತ್ತೊಂದು ಯಶ ಕಂಡಿದೆ. ಎಕರೆಗೆ ಕೇವಲ 99 ಪೈಸೆಯಂತೆ 21 ಎಕರೆ ಸ್ಥಳ ನೀಡಿ .ಕಾಗ್ನಿಝೆಂಟ್‌ ಕಂಪನಿಯನ್ನು ಸೆಳೆಯುವಲ್ಲಿ ಯಶ ಕಂಡಿದೆ, ವಿಶಾಖಪಟ್ಟಣದಲ್ಲಿ ಕಾಗ್ನಿಝೆಂಟ್‌ 1583 ಕೋಟಿ ರು.ಗಳನ್ನು ಹೂಡಿಕೆ ಮಾಡಿ ಕಚೇರಿ ಆರಂಭಿಸಲಿದೆ.ಇತ್ತೀಚೆಗೆ ಟಾಟಾ ಒಡೆತನದ ಟಿಸಿಎಸ್‌ ಕಂಪನಿಗೂ 99 ಪೈಸೆಗೆ 21 ಎಕರೆ ಭೂಮಿ ನೀಡಿತ್ತು.ಈಗ ಕಾಗ್ನಿಝೆಂಟ್‌ ಕಂಪನಿಗೆ ವಿಶಾಖಪಟ್ಟಣ ಸಮೀಪ ಕಪುಲುಪ್ಪದ ಎಂಬಲ್ಲಿ 21.31 ಎಕರೆ ಭೂಮಿಯನ್ನು ಆಂಧ್ರ ಸರ್ಕಾರ ನೀಡಿದೆ. ಇಲ್ಲಿ 1583 ಕೋಟಿ ರು.ಗಳನ್ನು ಕಂಪನಿ ಹೂಡಿಕೆ ಮಾಡಲಿದ್ದು, 2029ರಲ್ಲಿ ಕೆಲಸ ಆರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ. ಇಲ್ಲಿ 8000 ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಆಂಧ್ರ ಸಕಾರ ತಿಳಿಸಿದೆ.

ಇತ್ತೀಚೆಗೆ ಟಿಸಿಎಸ್‌ ಕಂಪನಿಗೂ ಸಹ ನಾಯ್ಡು ಸರ್ಕಾರ ಎಕರೆಗೆ 99 ಪೈಸೆ ಹಾಗೆ 21.6 ಎಕರೆ ಸ್ಥಳವನ್ನು ನೀಡಿತ್ತು. ಟಿಸಿಎಸ್‌ 1370 ಕೋಟಿ ರು. ಹೂಡಿಕೆ ಮಾಡಿತ್ತು.

ಬಿಹಾರದಲ್ಲಿ ವೃದ್ಧಾಪ್ಯ, ವಿಧವೆಯರ ಪಿಂಚಣಿ 1100 ರು.ಗೆ ಏರಿಕೆ

ಪಟನಾ: ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನೇನೂ ಕೆಲವೇ ತಿಂಗಳುಗಳು ಬಾಕಿ ಬೆನ್ನಲ್ಲೇ ನಿತೀಶ್‌ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಬಂಪರ್‌ ಗಿಫ್ಟ್‌ ನೀಡಿದೆ. ಮಾಸಿಕ 400 ರು. ಇದ್ದ ವೃದ್ಧಾಪ್ಯ, ಅಂಗವಿಕಲರು ಮತ್ತು ವಿಧವೆಯರ ಪಿಂಚಣಿಯನ್ನು 1100 ರು.ಗೆ ಹೆಚ್ಚಿಸಿ ಸಿಹಿ ಸುದ್ದಿ ನೀಡಿದೆ.ಜೆಡಿಯು ಆಡಳಿತದ ಬಿಹಾರದಲ್ಲಿ ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಮಾಸಿಕ 400 ರು. ಸಹಾಯಧನವನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಸದ್ಯ ಅದರಲ್ಲಿ 700 ರು. ಏರಿಕೆ ಮಾಡಿ ಜುಲೈನಿಂದ 1100 ರು.ಗೆ ನೀಡಲು ಮುಂದಾಗಿದೆ. ಈ ಬಗ್ಗೆ ಬಿಹಾರ ಸಿಎಂ ನಿತೇಶ್‌ ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ‘ಸರ್ಕಾರ ವೃದ್ಧಾಪ್ಯ , ಅಂಗವಿಕಲರು ಮತ್ತು ವಿದವೆಯರ ಪಿಂಚಣಿಯನ್ನು 700 ರು.ನಷ್ಟು ಹೆಚ್ಚಿಸಲಿದೆ. ಪ್ರತಿ ತಿಂಗಳ 10 ರಂದು ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ’ ಎಂದಿದ್ದಾರೆ.

ದಿಲ್ಲಿ: 15 ವರ್ಷಕ್ಕಿಂತ ಹಳೇ ವಾಹನಗಳಿಗೆ ಜು.1ರಿಂದ ಇಂಧನವಿಲ್ಲ

ನವದೆಹಲಿ: ದೆಹಲಿಯಲ್ಲಿ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್‌ ಹಾಗೂ 10 ವರ್ಷಕ್ಕಿಂತ ಹಳೆಯ ಡೀಸೆಲ್‌ ವಾಹನಗಳಿಗೆ ಜು.1ರಿಂದ ಇಂಧನ ನೀಡುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಹೇಳಿದೆ.ಜೀವಿತಾವಧಿ ಮುಗಿದ (ಇಒಎಲ್‌) ಎಲ್ಲ ವಾಹನಗಳಿಗೆ ಇದು ಅನ್ವಯಿಸುತ್ತದೆ ಎಂದು ಆಯೋಗ ಎಲ್ಲ ಇಂಧನ ಸ್ಟೇಷನ್‌ಗಳಿಗೆ ಏಪ್ರಿಲ್‌ನಲ್ಲಿ ನಿರ್ದೇಶನ ನೀಡಿದೆ.

ದೆಹಲಿಯಲ್ಲಿನ 520 ಇಂಧನ ಸ್ಟೇಷನ್‌ಗಳಲ್ಲಿ 500ರಲ್ಲಿ ಸ್ವಯಂಚಾಲಿತ ಸಂಖ್ಯಾ ಫಲಕ ಪತ್ತೆ (ಎಎನ್‌ಪಿಆರ್‌) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಳೆಯ ವಾಹನಗಳು ಇಂಧನ ಸ್ಟೇಷನ್‌ಗಳಿಗೆ ಬಂದ ವೇಳೆ ಈ ಕ್ಯಾಮೆರಾಗಳು ನಿಯಂತ್ರಣ ಕೊಠಡಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಆಗ ಸಾರಿಗೆ ಇಲಾಖೆ ಅಧಿಕಾರಿಗಳು ಆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ.