ಇಸ್ರೇಲ್‌-ಇರಾನ್‌ ನಡುವಿನ ಕಾಳಗ 8ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಎರಡೂ ರಾಷ್ಟ್ರಗಳು ಪರಸ್ಪರ ಆಕ್ರಮಣಕಾರಿಯಾಗಿ ಹಗಲು-ರಾತ್ರಿಯೆನ್ನದೇ ದಾಳಿ ಮುಂದುವರೆಸಿವೆ.

ಟೆಲ್‌ ಅವಿವ್‌/ಟೆಹ್ರಾನ್‌: ಇಸ್ರೇಲ್‌-ಇರಾನ್‌ ನಡುವಿನ ಕಾಳಗ 8ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಎರಡೂ ರಾಷ್ಟ್ರಗಳು ಪರಸ್ಪರ ಆಕ್ರಮಣಕಾರಿಯಾಗಿ ಹಗಲು-ರಾತ್ರಿಯೆನ್ನದೇ ದಾಳಿ ಮುಂದುವರೆಸಿವೆ. ತನ್ನ ಶತ್ರುರಾಷ್ಟ್ರದ ಮೇಲೆ ಇರಾನ್‌, ಇದೇ ಮೊದಲ ಬಾರಿಗೆ ‘ಕ್ಲಸ್ಟರ್‌ ಬಾಂಬ್‌’ ಪ್ರಯೋಗಿಸಿದ್ದು, ಇಸ್ರೇಲ್‌ನಾದ್ಯಂತ ಸೈರಲ್‌ ಮೊಳಗಿಸಿ ಕಟ್ಟೆಚ್ಚರ ಸಾರಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ ಭಾರೀ ದಾಳಿ ನಡೆಸಿದೆ.

ಯುದ್ಧದಲ್ಲಿ ಸದ್ಯ ಮಧ್ಯಪ್ರವೇಶಿಸದೇ 2 ವಾರ ಕಾದು ನೋಡುವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅತ್ತ ಇರಾನ್ ಕೂಡ ಅಮೆರಿಕ ಸಂಧಾನ ಮಾತುಕತೆಗೆ ನಿರಾಕರಿಸಿದ್ದರೂ, ಯುದ್ಧಕ್ಕೆ ಸಂಬಂಧಿಸಿ ಯುರೋಪ್‌ ದೇಶಗಳ ಜತೆ ಮಾತುಕತೆ ನಡೆಸುತ್ತಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು, ‘ಟ್ರಂಪ್‌ ಸಾಥ್ ನೀಡದಿದ್ದರೂ ನಾವು ಇರಾನ್‌ನ ಎಲ್ಲ ಅಣ್ವಸ್ತ್ರ ನೆಲೆ ನಾಶ ಮಾಡುತ್ತೇವೆ’ ಎಂದಿದ್ದಾರೆ.

ಇರಾನ್‌ ಕ್ಲಸ್ಟರ್‌ ಬಾಂಬ್‌:ಇರಾನ್‌ ಕ್ಲಸ್ಟರ್‌ ಬಾಂಬ್‌ಗಳ ಗುಚ್ಛವೇ ಒಂದು ಕ್ಷಿಪಣಿಯನ್ನು ಇಸ್ರೇಲ್‌ನ ಜನವಸತಿ ಪ್ರದೇಶದತ್ತ ಹಾರಿಸಿದ್ದು, ಇದು 20 ತುಂಡುಗಳಾಗಿ ಚದುರಿ ತನ್ನ ಸುತ್ತಲಿನ 8 ಕಿ.ಮೀ. ಪ್ರದೇಶಕ್ಕೆ ಹಾನಿ ಮಾಡಿದೆ. ‘ಆದರೆ ಈ ದಾಳಿಯಲ್ಲಿ ಯಾವುದೇ ಸಾವು ವರದಿಯಾಗಿಲ್ಲ ಎಂದಿರುವ ಇಸ್ರೇಲ್‌, ಸ್ಫೋಟಗೊಳ್ಳದ ಬಾಂಬ್‌ಗಳು ಕೂಡ ನೆಲದ ಮೇಲಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಜನರಿಗೆ ಸೂಚಿಸಿದೆ.

ಇದೇ ವೇಳೆ ಇಸ್ರೇಲ್‌ನ ಬೀರ್‌ಶೇವಾ ಟೆಕ್‌ ಪಾರ್ಕ್‌ ಸನಿಹ ಇರಾನ್ ಕ್ಷಿಪಣಿ ಹಾರಿಸಿದೆ. ಇದರಿಂದ ಅಲ್ಲಿರುವ ಮೈಕ್ರೋಸಾಫ್ಟ್‌ ಕಚೇರಿ ಸಿಬ್ಬಂದಿಗೆ ಆತಂಕ ಉಂಟಾಗಿತ್ತು. ಪ್ರಮುಖ ಸೇನಾನೆಲೆ ಇರುವ ಈ ನಗರದ ಹಲವು ಕಟ್ಟಡಗಳು ಕ್ಷಿಪಣಿ ದಾಳಿಯಿಂದ ಧಗಧಗಿಸಿವೆ. ಟೆಲ್‌ ಅವಿವ್ ಅಲ್ಲದೆ ಜೆರುಸಲೇಂ ಸನಿಹವೂ ಕ್ಷಿಪಣಿ ದಾಳಿ ಸಂಭವಿಸಿದೆ.

ಶುಕ್ರವಾರ ರಾತ್ರಿಯೂ ಇಸ್ರೇಲ್‌ ಭಾರಿ ಕ್ಷಿಪಣಿ ದಾಳಿ ಮಾಡಿದ ಕಾರಣ ಇಸ್ರೇಲ್‌ ದೇಶಾದ್ಯಂತ ಎಚ್ಚರಿಕೆ ಸೈರನ್ ಮೊಳಗಿಸಲಾಗಿದೆ. ಇಸ್ರೇಲ್‌ನ ಹೈಫಾ ಎಂಬಲ್ಲಿ 35 ಕ್ಷಿಪಣಿ ಬಳಸಿ ಇರಾನ್‌ ದಾಳಿ ಮಾಡಿದೆ. 17 ಜನರಿಗೆ ಗಾಯಗಳಾಗಿವೆ.

ಇಸ್ರೇಲ್‌ ತೀವ್ರ ಪ್ರತಿದಾಳಿ:

ಇರಾನ್‌ನಿಂದ ಕ್ಲಸ್ಟರ್‌ ಬಾಂಬ್‌ ದಾಳಿಯಾದ ಬೆನ್ನಲ್ಲೇ ಇಸ್ರೇಲ್‌ ಕೂಡ ವೈರಿರಾಷ್ಟ್ರದ ರಶ್ತ್‌ ನಗರದ ಮೇಲೆ ಮುಗಿಬಿದ್ದಿದೆ. ನಗರದೆಲ್ಲೆಡೆ ಭಾರೀ ಸ್ಫೋಟಗಳು ಸಂಭವಿಸುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. ಈ ದಾಳಿಗೂ ಮುನ್ನ, ರಶ್ತ್‌ನ ಕೈಗಾರಿಕಾ ಪ್ರದೇಶದಿಂದ ಜಾಗ ಖಾಲಿ ಮಾಡುವಂತೆ ಇಸ್ರೇಲ್‌ ನಾಗರಿಕರಿಗೆ ಸೂಚಿಸಿತ್ತು. ಆದರೆ ಇರಾನ್‌ನಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತವಾಗಿರುವ ಕಾರಣ, ಜನರಿಗೆ ಈ ಸಂದೇಶ ಎಷ್ಟರಮಟ್ಟಿಗೆ ತಲುಪಿತು ಎಂಬುದು ಸ್ಪಷ್ಟವಿಲ್ಲ. ಹೀಗಾಗಿ ದಾಳಿಯ ಪರಿಣಾಮ ತೀವ್ರವಾಗಿರುವ ಸಾಧ್ಯತೆ ಇದೆ.

ಏನಿದು ಕ್ಲಸ್ಟರ್‌ ಬಾಂಬ್‌?

ಕ್ಲಸ್ಟರ್‌ ಬಾಂಬ್‌ ಎಂಬುದು ಹಲವು ಸಣ್ಣಸಣ್ಣ ಬಾಂಬ್‌ಗಳ ಗುಚ್ಛ. ಅನ್ಯ ಸ್ಫೋಟಕಗಳಂತೆ ಇದು ನಿಖರವಾಗಿ ಒಂದೇ ಗುರಿಯನ್ನು ನಾಶಮಾಡುವುದಿಲ್ಲ. ಇದರ ಬದಲಾಗಿ, ಹಾರಿಸಿದ ಕೆಲ ಹೊತ್ತಿಗೆ ಆಕಾಶದಲ್ಲಿ ಸಣ್ಣಸಣ್ಣ ತುಂಡುಗಳಾಗಿ ವಿಭಜನೆಯಾಗಿ, ಬಾಂಬ್‌ನ ಆ ತುಂಡುಗಳು ವಿವಿಧ ಪ್ರದೇಶಗಳ ಮೇಲೆ ಬೀಳುತ್ತವೆ. ಇದರಿಂದ ಏಕಕಾಲಕ್ಕೆ ಹಲವು ಸ್ಥಳಗಳಿಗೆ ಹಾನಿ ಉಂಟಾಗುತ್ತದೆ. ಈ ಸಣ್ಣ ಸ್ಫೋಟಕಗಳನ್ನು ತಡೆಯುವುದು ಸುಲಭವಲ್ಲ. ಕ್ಲಸ್ಟರ್‌ ಬಾಂಬ್‌ಗಳ ಉತ್ಪಾದನೆ, ದಾಸ್ತಾನು, ಬಳಕೆ, ಮಾರಾಟವನ್ನು 2008ರ ಅಂತಾರಾಷ್ಟ್ರೀಯ ಒಪ್ಪಂದದ ಅಡಿಯಲ್ಲಿ ನಿಷೇಧಿಸಲಾಗಿದೆ. ಇದಕ್ಕೆ 11 ದೇಶಗಳು ಮತ್ತು 12 ಸಂಸ್ಥೆಗಳು ಸಹಿ ಮಾಡಿವೆ. ಆದರೆ ಇರಾನ್‌, ಇಸ್ರೇಲ್‌ ಮತ್ತು ಅಮೆರಿಕ ಈ ಒಪ್ಪಂದದ ಭಾಗವಾಗಿಲ್ಲ.

--ರಣರಂಗಕ್ಕೆ ಅಮೆರಿಕಪ್ರವೇಶ ಸದ್ಯಕ್ಕೆ ಇಲ್ಲ?ವಾಷಿಂಗ್ಟನ್‌: ‘ಇರಾನ್‌ ಮೇಲೆ ಇಸ್ರೇಲ್‌ ನಡೆಸಿರುವ ದಾಳಿಯಲ್ಲಿ ಅಮೆರಿಕ ಭಾಗವಹಿಸಬೇಕೇ ಬೇಡವೇ ಎಂಬ ಬಗ್ಗೆ ಇನ್ನು 2 ವಾರಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಏಕೆಂದರೆ ಇನ್ನೂ ಮಾತುಕತೆಗೆ ಅವಕಾಶವಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದರೊಂದಿಗೆ ಅಮೆರಿಕವು ತಕ್ಷಣಕ್ಕೇ ಯುದ್ಧರಂಗಕ್ಕೆ ಧುಮುಕುವ ಸಾಧ್ಯತೆ ದೂರವಾಗಿದೆ.

--ಟ್ರಂಪ್‌ ಬರಲಿ, ಬಿಡಲಿ, ನಮ್ಮ ದೇಶ ಮುಖ್ಯ

ನಮಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸಾಥ್‌ ನೀಡಲಿ, ನೀಡದೇ ಇರಲಿ. ಇರಾನ್‌ನ ಎಲ್ಲ ಅಣ್ವಸ್ತ್ರ ನೆಲೆಗಳನ್ನು ಧ್ವಂಸ ಮಾಡುತ್ತೇವೆ. ಟ್ರಂಪ್‌ಗೆ ಅವರ ದೇಶ ರಕ್ಷಣೆ ಹೇಗೆ ಮುಖ್ಯವೋ ಹಾಗೆ ನಮಗೆ ನಮ್ಮ ದೇಶ.

- ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ

ಮಾತುಕತೆಗೆ ಬರಲುನಾವು ಈಗ ಸಿದ್ಧ ಇಲ್ಲ

ಅಮೆರಿಕವು ಇಸ್ರೇಲ್‌ ಜೊತೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುವಂತೆ ಕೇಳಿಕೊಂಡಿತು. ಆದರೆ ಇಸ್ರೇಲ್‌ ದಾಳಿ ಮುಂದುವರಿಸುತ್ತಲೇ ಇದೆ. ಹೀಗಾಗಿ ನಾವು ಮಾತುಕತೆಗೆ ಸಿದ್ಧವಿಲ್ಲ.

- ಅಬ್ಬಾಸ್‌ ಅರಘ್ಚಿ, ಇರಾನ್‌ ವಿದೇಶಾಂಗ ಸಚಿವ

- ವಿಶೇಷ ವಿಮಾನದಲ್ಲಿ ತವರಿಗೆ ಭಾರತೀಯರು

ನವದೆಹಲಿ: ಭಾರತದ ಮೇಲಿನ ಸ್ನೇಹದ ದ್ಯೋತಕವಾಗಿ ತನ್ನ ವಾಯುವಲಯದ ಮೇಲಿನ ನಿರ್ಬಂಧವನ್ನು ಇರಾನ್‌ ಸಡಿಲಿಸಿದೆ. ಇದರಿಂದಾಗಿ ಭಾರತದ ‘ಆಪರೇಷನ್‌ ಸಿಂಧು’ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಇರಾನ್‌ನಲ್ಲಿ ಸಿಲುಕಿರುವ 10 ಸಾವಿರ ಭಾರತೀಯರ ಪೈಕಿ ಇನ್ನೂ 1000 ಭಾರತೀಯರನ್ನು ಹೊತ್ತ ವಿಮಾನಗಳು ಇರಾನ್‌ನಿಂದ ಭಾರತಕ್ಕೆ ನೇರವಾಗಿ ಹೊರಡಲು ಸಜ್ಜಾಗಿವೆ. ಭಾರತೀಯರ ಹೊತ್ತ ಮೊದಲ ವಿಮಾನ ಶುಕ್ರವಾರ ತಡರಾತ್ರಿ ದಿಲ್ಲಿಗೆ ಆಗಮಿಸಿದೆ. ಇನ್ನೂ 2 ವಿಮಾನಗಳು ಶನಿವಾರ ಆಗಮಿಸುವ ನಿರೀಕ್ಷೆಯಿದೆ.