ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆಯೊಂದು ಭಸ್ಮವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಕಲಬುರಗಿ (ಜೂ.19): ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ತೋಟದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್‌ನಿಂದ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮನೆ ಭಾಗಶಃ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಮನೆಯ ಯಜಮಾನ ಈರಯ್ಯ ಮಠಪತಿ ತೋಟದ ಕೆಲಸದಲ್ಲಿ ತೊಡಗಿದ್ದರೆ, ಅವರ ಪತ್ನಿ ಗ್ಯಾಸ್‌ನಲ್ಲಿ ಅನ್ನವಿಟ್ಟು ಹೊರಗೆ ಪಾತ್ರೆ ತೊಳೆಯುತ್ತಿದ್ದರು. ಈ ವೇಳೆ ದೊಡ್ಡ ಶಬ್ದದೊಂದಿಗೆ ಸಿಲಿಂಡರ್ ಸ್ಪೋಟಗೊಂಡಿದೆ. ನೋಡನೋಡುತ್ತಿದ್ದಂತೆ ಮನೆಗೆ ಬೆಂಕಿ ಆವರಿಸಿದೆ. ಅದೃಷ್ಟವಶಾತ್ ದುರಂತದ ವೇಳೆ ದಂಪತಿಗಳು ಹೊರಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಾರ ನಷ್ಟ:

ದುರಂತದ ವೇಳೆ ಮನೆಯಲ್ಲಿದ್ದ 12 ಚೀಲ ಜೋಳ, 10 ಚೀಲ ತೊಗರಿ, 25 ಚೀಲ ಗೋದಿ, 19 ಗ್ರಾಮ ಬಂಗಾರದ ಒಡವೆ ಹಾಗೂ 4 ಲಕ್ಷ ರೂಪಾಯಿ ನಗದು ಸಂಪೂರ್ಣ ಭಸ್ಮವಾಗಿದೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರೂ, ಅಷ್ಟರೊಳಗೆ ಮನೆ ತೀವ್ರವಾಗಿ ಹಾನಿಗೊಳಗಾಗಿತ್ತು.

ಈ ಕುರಿತು ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.