ರಷ್ಯಾದ ಜನವಸತಿ ಹಾಗೂ ಸರ್ಕಾರಿ ಕಟ್ಟಡಗಳೇ ಈಗ ರಷ್ಯಾ ಟಾರ್ಗೆಟ್ ಕ್ಷಿಪಣಿ ದಾಳಿಗೆ ಧ್ವಂಸಗೊಂಡ ಸರ್ಕಾರಿ ಕಟ್ಟಡ ವಿಡಿಯೋ ಪೋಸ್ಟ್ ಮಾಡಿದ ಉಕ್ರೇನ್ ವಿದೇಶಾಂಗ ಇಲಾಖೆ

ರಷ್ಯಾ (Russia) ಉಕ್ರೇನ್‌ (Ukraine) ನಡುವಿನ ಬಿಕ್ಕಟ್ಟು ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ. ರಷ್ಯಾ ಈಗ ಉಕ್ರೇನ್‌ನ ಸರ್ಕಾರಿ ಕಟ್ಟಡ ಹಾಗೂ ಜನ ವಾಸ ಇರುವ ಕಟ್ಟಡಗಳ ಮೇಲೂ ದಾಳಿ ಮಾಡುತ್ತಿದೆ. ಕೀವ್‌ (Kyiv) ಹಾಗೂ ಖರ್ಕಿವ್‌ (Kharkiv) ಪ್ರದೇಶದಲ್ಲಿ ಸರ್ಕಾರಿ ಕಟ್ಟಡದ ಮೇಲಾದ ಕ್ಷಿಪಣಿ ದಾಳಿಯ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಉಕ್ರೇನ್‌ನ ವಿದೇಶಾಂಗ ಸಚಿವಾಲಯ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಷ್ಯಾದ ಕ್ಷಿಪಣಿಯೊಂದು ಖರ್ಕಿವ್‌ನಲ್ಲಿರುವ ಆಡಳಿತ ಕಚೇರಿಗೆ ಬಡಿದು ಸ್ಫೋಟಿಸುತ್ತಿರುವ ದೃಶ್ಯ ಸೆರೆಯಾಗಿದೆ.

ರಷ್ಯಾ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿ ಯುದ್ಧ ನಡೆಸುತ್ತಿದೆ. ನಾಗರಿಕರನ್ನು ಕೊಲ್ಲುತ್ತಿದೆ, ನಾಗರಿಕ ಮೂಲಸೌಕರ್ಯಗಳನ್ನು ನಾಶಪಡಿಸುತ್ತಿದೆ. ರಷ್ಯಾದ ಮುಖ್ಯ ಗುರಿ ದೊಡ್ಡ ನಗರಗಳಾಗಿದ್ದು, ಅವುಗಳ ನಾಶಕ್ಕೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಇದು ಖರ್ಕಿವ್ ಆಡಳಿತ ಕಟ್ಟಡ ಎಂದು ಉಕ್ರೇನ್‌ನ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿ ಈ ವೀಡಿಯೊವನ್ನು ಹಂಚಿಕೊಂಡಿದೆ .

Scroll to load tweet…

ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ (Dmytro Kuleba) ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಕ್ಷಸೀಯ ರಷ್ಯನ್‌ ಕ್ಷಿಪಣಿಗಳು ಸೆಂಟ್ರಲ್‌ ಫ್ರಿಡಂ ವೃತ್ತ ಹಾಗೂ ಖರ್ಕಿವ್‌ನ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿವೆ. ಪುಟಿನ್‌ಗೆ ಉಕ್ರೇನ್‌ ಅನ್ನು ನಾಶ ಮಾಡಲು ಸಾಧ್ಯವಿಲ್ಲ. ಪುಟಿನ್‌ ಸಿಟ್ಟಿನಿಂದಲೇ ಅನೇಕ ಯುದ್ಧಾಪರಾಧಗಳನ್ನು ಮಾಡಿದ್ದಾರೆ. ಮುಗ್ಧ ನಾಗರಿಕರ (civilians) ಹತ್ಯೆ ಮಾಡಿದ್ದಾರೆ. ಪ್ರಪಂಚವೂ ರಷ್ಯಾ ಮೇಲೆ ಮತ್ತಷ್ಟು ಒತ್ತಡ ಹೇರಬೇಕು ಹಾಗೂ ರಷ್ಯಾವನ್ನು ಸಂಪೂರ್ಣ ಏಕಾಂಗಿ ಮಾಡಬೇಕು ಎಂದು ಅವರು ಹೇಳಿದ್ದಾರೆ. 

Ukraine Crisis: ಉಕ್ರೇನ್‌ನ ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿ!

ಇತ್ತ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರನೇ ದಿನಕ್ಕೆ ಕಾಲಿಟ್ಟಿದೆ. ಗಮನಾರ್ಹವಾಗಿ, ರಷ್ಯಾದ ಯುದ್ಧ ಟ್ಯಾಂಕರ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳ ಮೈಲುಗಳಷ್ಟು ಉದ್ದದ ಬೆಂಗಾವಲು ವಾಹನಗಳು ಉಕ್ರೇನಿಯನ್ ರಾಜಧಾನಿಗೆ ಹತ್ತಿರದಲ್ಲಿದೆ. ಅಲ್ಲದೇ ನೆಲದ ಮೇಲೂ ತೀವ್ರವಾಗಿ ಹೋರಾಟ ನಡೆಸುತ್ತಿವೆ. ಇಂದು ರಷ್ಯಾ ಖರ್ಕಿವ್‌ ನಗರದ ಮೇಲೆ ಶೆಲ್‌ ದಾಳಿ ಮಾಡಲು ಆರಂಭಿಸಿತ್ತು. ಇದು ಉಕ್ರೇನ್‌ನ ಎರಡನೇ ಅತೀದೊಡ್ಡ ನಗರವಾಗಿದೆ. ಈ ದಾಳಿಯಿಂದಾಗಿ ಅಲ್ಲಿ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಖರ್ಕಿವ್ ಮತ್ತು ರಾಜಧಾನಿ ಕೈವ್ ನಡುವಿನ ನಗರವಾದ ಓಖ್ತಿರ್ಕಾದಲ್ಲಿನ (Okhtyrka) ಮಿಲಿಟರಿ ನೆಲೆಯನ್ನು ಇತ್ತೀಚೆಗೆ ರಷ್ಯಾದ ಫಿರಂಗಿಗಳು ಧ್ವಂಸಗೊಳಿಸಿದ ನಂತರ 70 ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದರು.

ಎಲ್ಲಿರುವೆ ಪ್ರತಿಕ್ರಿಯಿಸಲು ಏಕೆ ತಡ ಎಂದು ಕೇಳಿದ್ದ ಅಮ್ಮ: ಸಾವಿಗೂ ಮುನ್ನ ಕೊನೆ ಸಂದೇಶ ಕಳುಹಿಸಿದ ರಷ್ಯಾ ಯೋಧ

ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಂದು ಭಾರತದ ವಿದ್ಯಾರ್ಥಿಯೊಬ್ಬರು ಬಲಿಯಾಗಿದ್ದಾರೆ. ಮೃತ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ ಚಲಗೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಎಂದು ಗುರುತಿಸಲಾಗಿದೆ. ಇನ್ನು ನವೀನ್ ದಿನಸಿ ಪದಾರ್ಥ ಖರೀದಿಸಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ಕ್ಷಿಪಣಿ ದಾಳಿ ನಡೆದಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ನವೀನ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಮೃತ ವಿದ್ಯಾರ್ಥಿ ನವೀನ್ ಎಂಬುವುದನ್ನು ಆತನ ಸ್ನೇಹಿತರೂ ಖಚಿತಪಡಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.