ಇಟಲಿಯ ಮೊದಲ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೀವನ ಸಾಮಾನ್ಯವಾದುದಲ್ಲ. ಮುರಿದ ಸಂಸಾರ, ಬಡತನ, ನೈಟ್‌ಕ್ಲಬ್‌ನಲ್ಲಿ ಬಾರ್ಟೆಂಡರ್ ಕೆಲಸದಂತಹ ಕಠಿಣ ಹಾದಿಗಳನ್ನು ದಾಟಿ, ತಮ್ಮ ಛಲ ಮತ್ತು ಪರಿಶ್ರಮದಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಅವರ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ.
ಬೆಂಗಳೂರು (ಮೇ.20): ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರ ಅಧಿಕಾರದ ಪ್ರಗತಿ ಯಾವುದೇ ಸಾಮಾನ್ಯ ರಾಜಕೀಯ ಸುಖಾಂತ್ಯದ ಕಥೆಯಲ್ಲ. ಅವರು ಯಾವುದೇ ಶ್ರೀಮಂತ ಕುಟುಂಬದಲ್ಲಾಗಲಿ ಅಥವಾ ರಾಜಕೀಯ ಹಿನ್ನೆಲೆಯಿರುವ ಪ್ರಭಾವಿ ವಲಯದಲ್ಲಾಗಲಿ ಬೆಳೆದವರಲ್ಲ. ಮುರಿದುಬಿದ್ದ ಸಂಸಾರ, ನೈಟ್‌ಕ್ಲಬ್‌ನ ಬಾರ್ ಕೌಂಟರ್, ಬಾಲ್ಯದ ದುರಂತಗಳು ಹಾಗೂ ವೈಯಕ್ತಿಕ ನೋವುಗಳನ್ನೆಲ್ಲಾ ದಾಟಿಬಂದು ಅವರು ಇಟಲಿಯ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಅವರ ಈ ಯಶೋಗಾಥೆಯ ಹಿಂದೆ ಹಲವು ಆಘಾತಕಾರಿ ಮತ್ತು ಕಠಿಣ ಹಾದಿಗಳು ಅಡಗಿವೆ.

ಹುಟ್ಟುವ ಮುನ್ನವೇ ಎದುರಾಗಿತ್ತು ಗಂಡಾಂತರ!
ಮೆಲೋನಿ ಅವರ ಜೀವನದ ಹೋರಾಟ ಅವರು ಈ ಜಗತ್ತಿಗೆ ಬರುವ ಮುನ್ನವೇ ಆರಂಭವಾಗಿತ್ತು. ತಮ್ಮ ಆತ್ಮಚರಿತ್ರೆ 'ಅಯೋ ಸೋನೋ ಜಾರ್ಜಿಯಾ' (Io Sono Giorgia - ಐ ಆಮ್ ಜಾರ್ಜಿಯಾ) ಪುಸ್ತಕದಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರ ತಾಯಿ ಅನ್ನಾ ಅವರು ಗರ್ಭಿಣಿಯಾಗಿದ್ದಾಗ ಆರ್ಥಿಕ ಸಮಸ್ಯೆಯಿಂದಾಗಿ ಗರ್ಭಪಾತ (Abortion) ಮಾಡಿಸಿಕೊಳ್ಳಲು ನಿರ್ಧರಿಸಿದ್ದರಂತೆ. ಅದರಂತೆ ಕ್ಲಿನಿಕ್‌ಗೆ ತೆರಳಿದ್ದ ಅನ್ನಾ, ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಮರಳಿ ಬಂದಿದ್ದರು. "ನನ್ನ ತಾಯಿಯ ಅಂದಿನ ಧೈರ್ಯದ ನಿರ್ಧಾರವೇ ನನಗೆ ಜೀವ ಭಿಕ್ಷೆ ನೀಡಿತು" ಎಂದು ಮೆಲೋನಿ ಹಲವು ಬಾರಿ ನೆನಪಿಸಿಕೊಂಡಿದ್ದಾರೆ.
ಜಾರ್ಜಿಯಾ ಅವರು 1977ರ ಜನವರಿ 15ರಂದು ರೋಮ್‌ನಲ್ಲಿ ಜನಿಸಿದರು. ತಂದೆ ಫ್ರಾನ್ಸೆಸ್ಕೊ ತೆರಿಗೆ ಸಲಹೆಗಾರರಾಗಿದ್ದರೆ, ತಾಯಿ ಅನ್ನಾ ಕಾದಂಬರಿಗಾರ್ತಿಯಾಗಿದ್ದರು. ಆದರೆ ಈ ಕುಟುಂಬ ಹೆಚ್ಚು ಕಾಲ ಒಂದಾಗಿರಲಿಲ್ಲ. ಜಾರ್ಜಿಯಾಗೆ ಕೇವಲ ಒಂದು ವರ್ಷ ವಯಸ್ಸಾಗಿದ್ದಾಗ ತಂದೆ ಫ್ರಾನ್ಸೆಸ್ಕೊ ಕುಟುಂಬವನ್ನು ತೊರೆದು ಸ್ಪೇನ್‌ನ ಕ್ಯಾನರಿ ದ್ವೀಪಕ್ಕೆ ವಲಸೆ ಹೋಗಿ ಅಲ್ಲಿ ಮತ್ತೊಂದು ಮದುವೆಯಾದರು. ತಾಯಿ ಅನ್ನಾ ಇಬ್ಬರು ಹೆಣ್ಣು ಮಕ್ಕಳನ್ನು ಒಬ್ಬಂಟಿಯಾಗಿ ಸಾಕಬೇಕಾಯಿತು.
ಮನೆ ಸುಟ್ಟು ಬೂದಿ; ನೆಲದ ಮೇಲೆ ಮಲಗುತ್ತಿದ್ದ ದಿನಗಳು
ಜಾರ್ಜಿಯಾಗೆ ಮೂರು ವರ್ಷ ವಯಸ್ಸಾಗಿದ್ದಾಗ ಮತ್ತೊಂದು ಭೀಕರ ಅಪಘಾತ ಇಡೀ ಕುಟುಂಬವನ್ನು ಬೀದಿಗೆ ತಂದಿತು. ಜಾರ್ಜಿಯಾ ಮತ್ತು ಅವರ ಅಕ್ಕ ಅರಿಯಾನಾ ಮನೆಯಲ್ಲಿ ಆಟವಾಡುತ್ತಿದ್ದಾಗ, ಲೈಟ್ ಆನ್ ಮಾಡಲು ಇಷ್ಟಪಡದೆ ಮೇಣದಬತ್ತಿಗಳನ್ನು ಹಚ್ಚಿದ್ದರು. ಬಳಿಕ ಆ ಮೇಣದಬತ್ತಿಗಳ ಮೇಲೆ ಬೆಡ್‌ಶೀಟ್ ಹಾಗೂ ಆಟಿಕೆಗಳನ್ನು ಮುಚ್ಚಿಟ್ಟಿದ್ದರು. ಇದರ ಪರಿಣಾಮವಾಗಿ ಇಡೀ ಕೋಣೆಗೆ ಬೆಂಕಿ ಹೊತ್ತಿಕೊಂಡು, ಅವರ ಒಡೆತನದಲ್ಲಿದ್ದ ಪ್ರತಿಯೊಂದು ವಸ್ತುವೂ ಸುಟ್ಟು ಬೂದಿಯಾಗಿತ್ತು.
ಈ ಅಗ್ನಿ ದುರಂತದ ನಂತರ ಅವರ ಕುಟುಂಬಕ್ಕೆ ನೆಲೆ ಇಲ್ಲದಂತಾಯಿತು. ಕೆಲ ಕಾಲ ಜಾರ್ಜಿಯಾ ಮತ್ತು ಅವರ ಅಕ್ಕ ಗರ್ಬಾಟೆಲ್ಲಾ ಪ್ರದೇಶದಲ್ಲಿದ್ದ ತಮ್ಮ ಅಜ್ಜ-ಅಜ್ಜಿಯ ಮನೆಯ ನೆಲದ ಮೇಲೆ ಹಾಸಿಗೆ ಹಾಸಿಕೊಂಡು ಮಲಗುತ್ತಿದ್ದರು. ಇತ್ತ ಅವರ ತಾಯಿ ಹತ್ತಿರದಲ್ಲೇ ಇದ್ದ ಸ್ನೇಹಿತರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅದು ಅವರ ಜೀವನದ ಅತ್ಯಂತ ಅಸ್ಥಿರ ಹಾಗೂ ಕಷ್ಟದ ದಿನಗಳಾಗಿದ್ದವು.
ಬದುಕಲು ನೈಟ್‌ಕ್ಲಬ್‌ನಲ್ಲಿ ಬಾರ್ ಟೆಂಡರ್ ಕೆಲಸ!
ಹದಿಹರೆಯಕ್ಕೆ ಬರುವಷ್ಟರಲ್ಲಿ ಕಾಲೇಜು ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಭರಿಸಲು ತಮ್ಮ ಕುಟುಂಬದ ಬಳಿ ಹಣವಿಲ್ಲ ಎಂಬ ಕಹಿ ಸತ್ಯ ಜಾರ್ಜಿಯಾಗೆ ಅರ್ಥವಾಗಿತ್ತು. ತಾಯಿ ಕಾದಂಬರಿ ಬರೆದು ಗಳಿಸುತ್ತಿದ್ದ ಅತ್ಯಲ್ಪ ಹಣ ಜೀವನಕ್ಕೇ ಸಾಕಾಗುತ್ತಿರಲಿಲ್ಲ. ಹೀಗಾಗಿ ಜಾರ್ಜಿಯಾ ಸಣ್ಣ ಪ್ರಾಯದಲ್ಲೇ ದುಡಿಯಲು ಆರಂಭಿಸಿದರು. ಅವರು ಸಿಡಿಗಳನ್ನು (CDs) ಮಾರಾಟ ಮಾಡಿದರು, ಬೇಬಿ ಸಿಟ್ಟರ್ (ಮಕ್ಕಳನ್ನು ನೋಡಿಕೊಳ್ಳುವ ಕೆಲಸ) ಆಗಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ, ರೋಮ್‌ನ ಪ್ರಸಿದ್ಧ ನೈಟ್‌ಕ್ಲಬ್ ಆದ 'ಪೈಪರ್ ಕ್ಲಬ್'ನಲ್ಲಿ (Piper Club) ಬಾರ್ ಟೆಂಡರ್ (ಮದ್ಯ ಸರಬರಾಜು ಮಾಡುವ ಕೆಲಸ) ಆಗಿಯೂ ಕೆಲಸ ಮಾಡಿದರು.
ವರ್ಷಗಳ ನಂತರ, ಅಂದರೆ 2013 ರಲ್ಲಿ ಈ ಬಗ್ಗೆ ಮಾತನಾಡಿದ್ದ ಮೆಲೋನಿ, "ನಾನು ಸಂಸತ್ತಿನ ಒಳಗೆ ಕುಳಿತು ಕಲಿತದ್ದಕ್ಕಿಂತ ಹೆಚ್ಚಾಗಿ, ಬಾರ್ ಕೌಂಟರ್ ಹಿಂದೆ ನಿಂತು ಸಾಮಾನ್ಯ ಜನರ ಬದುಕಿನ ಕಷ್ಟಗಳನ್ನು ಕಲಿತಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
15ನೇ ವಯಸ್ಸಿಗೆ ರಾಜಕೀಯ ಪ್ರವೇಶ
ಮೆಲೋನಿ ಅವರು ತಮ್ಮ 15ನೇ ವಯಸ್ಸಿನಲ್ಲೇ 'ಇಟಾಲಿಯನ್ ಸೋಷಿಯಲ್ ಮೂವ್‌ಮೆಂಟ್' (MSI) ಎಂಬ ರಾಜಕೀಯ ಪಕ್ಷವನ್ನು ಸೇರಿದರು. ಈ ಪಕ್ಷವನ್ನು ಇಟಲಿಯ ಮಾಜಿ ಸರ್ವಾಧಿಕಾರಿ ಬೆನಿಟೊ ಮುಸಲೋನಿಯ ಬೆಂಬಲಿಗರು ಸ್ಥಾಪಿಸಿದ್ದರು. 1992 ರಲ್ಲಿ ನಡೆದ 'ವಿಯಾ ಡಿ ಅಮೆಲಿಯೊ' ಹತ್ಯಾಕಾಂಡದಲ್ಲಿ ಮಾಫಿಯಾ ಗುಂಪುಗಳು ನ್ಯಾಯಾಧೀಶರಾದ ಪಾವೊಲೊ ಬೋರ್ಸೆಲಿನೊ ಅವರನ್ನು ಕೊಂದ ಘಟನೆ ಜಾರ್ಜಿಯಾ ಅವರನ್ನು ರಾಜಕೀಯಕ್ಕೆ ಬರುವಂತೆ ಮಾಡಿತು. ದೇಶದ ವ್ಯವಸ್ಥೆಯ ವಿರುದ್ಧ ಇನ್ನು ಮುಂದೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ನಿರ್ಧರಿಸಿದರು.
ದೇಶದ ಅತ್ಯಂತ ಕಿರಿಯ ಸಚಿವೆ ಹಾಗೂ ಸ್ವಂತ ಪಕ್ಷ ಸ್ಥಾಪನೆ
ಕಠಿಣ ಪರಿಶ್ರಮದಿಂದ ರಾಜಕೀಯದಲ್ಲಿ ಬೆಳೆದ ಜಾರ್ಜಿಯಾ, 2004 ರಲ್ಲಿ (27ನೇ ವಯಸ್ಸಿನಲ್ಲಿ) 'ನ್ಯಾಷನಲ್ ಅಲಯನ್ಸ್' ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾದರು. ಈ ಹುದ್ದೆಗೇರಿದ ಮೊದಲ ಮಹಿಳೆ ಇವರಾಗಿದ್ದರು. 2006 ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾದರು. ತದನಂತರ 2008 ರಲ್ಲಿ, ತಮ್ಮ 31ನೇ ವಯಸ್ಸಿನಲ್ಲಿ ಇಟಲಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ಕ್ಯಾಬಿನೆಟ್ ಸಚಿವೆಯಾಗಿ (ಯುವಜನ ಕಲ್ಯಾಣ ಸಚಿವೆ) ಪ್ರಮಾಣವಚನ ಸ್ವೀಕರಿಸಿದರು.
2012 ರಲ್ಲಿ ನಾಯಕತ್ವದ ವಿಚಾರವಾಗಿ ಅಂದಿನ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದಾಗ, ಜಾರ್ಜಿಯಾ ಅವರ ಒಕ್ಕೂಟದಿಂದ ಹೊರಬಂದರು. ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ 'ಫ್ರಾಟೆಲ್ಲಿ ಡಿ'ಇಟಾಲಿಯಾ' (Brothers of Italy - ಬ್ರದರ್ಸ್ ಆಫ್ ಇಟಲಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. ಈ ಹೆಸರು ಇಟಲಿಯ ರಾಷ್ಟ್ರೀಯ ಗೀತೆಯ ಮೊದಲ ಸಾಲಿನಿಂದ ಪ್ರೇರಿತವಾಗಿತ್ತು. ಆರಂಭದಲ್ಲಿ ಈ ಪಕ್ಷ ತೀರಾ ಸಣ್ಣದಾಗಿತ್ತು. 2018 ರ ಚುನಾವಣೆಯಲ್ಲಿ ಈ ಪಕ್ಷಕ್ಕೆ ಸಿಕ್ಕಿದ್ದು ಕೇವಲ ಶೇ. 4.4 ರಷ್ಟು ಮತಗಳು ಮಾತ್ರ. ಆದರೆ ಜಾರ್ಜಿಯಾ ಅವರ ಜನಪ್ರಿಯತೆ ಹೆಚ್ಚಾದಂತೆ, 2022 ರ ಚುನಾವಣೆಯಲ್ಲಿ ಈ ಪಕ್ಷ ಶೇ. 26 ರಷ್ಟು ಮತಗಳನ್ನು ಪಡೆದು ದೇಶದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಪರಿಣಾಮವಾಗಿ, 2022 ರ ಅಕ್ಟೋಬರ್ 22 ರಂದು ಜಾರ್ಜಿಯಾ ಮೆಲೋನಿ ಇಟಲಿಯ 161 ವರ್ಷಗಳ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಕೌಟುಂಬಿಕ ಏರಿಳಿತಗಳು ಮತ್ತು ಅಪರಾಧಿ ಹಿನ್ನೆಲೆಯ ತಂದೆ
ಮೆಲೋನಿ ಅವರ ವೈಯಕ್ತಿಕ ಜೀವನವೂ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಅವರು ಟಿವಿ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗೆ 2015 ರಿಂದ 2023 ರವರೆಗೆ ಸಂಬಂಧದಲ್ಲಿದ್ದರು. ಈ ದಂಪತಿಗೆ 2016 ರಲ್ಲಿ ಜಿನೆವ್ರಾ ಎಂಬ ಪುತ್ರಿ ಜನಿಸಿದಳು. ಆದರೆ 2023 ರ ಅಕ್ಟೋಬರ್‌ನಲ್ಲಿ ಜಾರ್ಜಿಯಾ ಅವರು ಈ ಸಂಬಂಧವನ್ನು ಅಧಿಕೃತವಾಗಿ ಕೊನೆ ಮಾಡಿದರು. ಪ್ರಸ್ತುತ ಅವರ ಅಕ್ಕ ಅರಿಯಾನಾ ಅವರು ಪಕ್ಷದ ರಾಜಕೀಯ ಸಚಿವಾಲಯದ ಮುಖ್ಯಸ್ಥರಾಗಿದ್ದು, ಜಾರ್ಜಿಯಾ ಅವರ ಅತ್ಯಂತ ಆಪ್ತ ಸಲಹೆಗಾರರಾಗಿದ್ದಾರೆ.
ಇನ್ನು ಜಾರ್ಜಿಯಾ ಅವರ ತಂದೆ ಫ್ರಾನ್ಸೆಸ್ಕೊ ಅವರ ಅಂತ್ಯ ತುಂಬಾ ದುರಂತಮಯವಾಗಿತ್ತು. ಜಾರ್ಜಿಯಾಗೆ 12 ವರ್ಷ ತುಂಬುವವರೆಗೆ ಮಾತ್ರ ತಂದೆಯ ಸಂಪರ್ಕವಿತ್ತು, ಆಮೇಲೆ ಅದು ಕಡಿತಗೊಂಡಿತು. ತದನಂತರ 1995 ರಲ್ಲಿ ಫ್ರಾನ್ಸೆಸ್ಕೊ ಅವರಿಗೆ ಮಾದಕವಸ್ತು ಸಾಗಣೆ (Drug Trafficking) ಪ್ರಕರಣದಲ್ಲಿ ಸ್ಪೇನ್ ನ್ಯಾಯಾಲಯವು 9 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 2012 ರಲ್ಲಿ ಅವರು ನಿಧನರಾದರು.
ಅಸ್ಥಿರ ಸರ್ಕಾರಗಳಿಗೆ ಹೆಸರಾಗಿರುವ ಇಟಲಿಯಲ್ಲಿ (1948 ರಿಂದ ಇಟಲಿ ಒಟ್ಟು 68 ಸರ್ಕಾರಗಳನ್ನು ಕಂಡಿದೆ, ಅಂದರೆ ಸರಾಸರಿ ಒಂದು ಸರ್ಕಾರದ ಅವಧಿ ಕೇವಲ 16 ತಿಂಗಳು ಮಾತ್ರ) ಜಾರ್ಜಿಯಾ ಮೆಲೋನಿ ಅವರು ತಮ್ಮ ಒಕ್ಕೂಟವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆ ಮೂಲಕ ಆಧುನಿಕ ಇಟಲಿಯ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ 3ನೇ ನಾಯಕಿಯಾಗಿ ಅವರು ಹೊಸ ದಾಖಲೆ ಬರೆದಿದ್ದಾರೆ.


