ಮುಕ್ತ ಮತ್ತು ಆರಾಮದಾಯಕ ಜೀವನಕ್ಕಾಗಿ ಈ ರೀತಿಯ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ ಯಾಂಗ್‌ಜಿಯಾಂಗ್‌ನ ಜಾಂಗ್ ಯುನ್ಲೈ ಎಂಬ ಸಾಫ್ಟ್‌ವೇರ್ ಡೆವಲಪರ್. 

ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರ ಕನಸು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿ ಮನೆ ಕಟ್ಟೋದು. ಸ್ವಂತ ಮನೆ ಅಂತ ಒಂದಿದ್ರೆ ಸಾಕು, ಆರಾಮಾಗಿ ಜೀವನ ನಡೆಸಬಹುದು ಎನ್ನುವ ಜನರ ಮಧ್ಯೆ ಇಲ್ಲೊಬ್ಬ ಭೂಪ ಸ್ವಂತ ಸೂರಿದ್ದರೂ ಕಾರಿನಲ್ಲೇ ವಾಸಿಸುತ್ತಿದ್ದಾರೆ. ಹೇಳಿ ಕೇಳಿ ಆತ ಸಾಫ್ಟ್‌ವೇರ್ ಡೆವಲಪರ್. ನಾಲ್ಕು ಅಂತಸ್ತಿನ ಮನೆ ಕಟ್ಟಿಸಿದ್ದಾರೆ. ಆದರೆ ಇದನ್ನೆಲ್ಲಾ ಬಿಟ್ಟು ಆತ ನಾಲ್ಕು ವರ್ಷಗಳಿಂದ ತನ್ನ ಕಾರಿನೊಳಗೆ ವಾಸಿಸುತ್ತಿದ್ದಾರೆ. ಯಾಕೆ ಹಣ ಉಳಿಸೋಕೆ ಹೀಗೆ ಮಾಡ್ತಿರೋದಾ ಅಂದ್ರೆ, ಅದೂ ಅಲ್ಲ, ಮತ್ಯಾಕೆ ಅಂತೀರಾ?, ಮುಂದೆ ಓದಿ... 

ಕಾರಿನಲ್ಲಿ ಮಲಗುತ್ತಾರೆ, ತಿನ್ನುತ್ತಾರೆ ಮತ್ತು ವಾಸಿಸುತ್ತಾರೆ! 
ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಯಾಂಗ್‌ಜಿಯಾಂಗ್‌ನ ಜಾಂಗ್ ಯುನ್ಲೈ ಆರು ವರ್ಷಗಳ ಹಿಂದೆ ಶೆನ್‌ಜೆನ್‌ಗೆ ತೆರಳಿದರು. ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದು, ತಮ್ಮ ಊರಿನಲ್ಲಿ 4 ಅಂತಸ್ತಿನ ಮನೆ ಹೊಂದಿದ್ದಾರೆ. ಐಷಾರಾಮಿ ಮನೆ ಹೊಂದಿದ್ದರೂ, ಅವರು ಕಳೆದ 4 ವರ್ಷಗಳಿಂದ ತಮ್ಮ ಕಾರಿನಲ್ಲಿ ಮಲಗುತ್ತಾರೆ, ತಿನ್ನುತ್ತಾರೆ ಮತ್ತು ವಾಸಿಸುತ್ತಾರೆ. ಇದರ ಹಿಂದಿನ ಕಾರಣ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ, ಆದರೆ ಅವರಿಗೆ ಈ ರೀತಿ ಬದುಕಲು ಇಷ್ಟ ಎಂಬ ಕಾರಣ ನೀಡಿದ್ದಾರೆ.

ಕಾರಿನಲ್ಲಿ ಮಲಗುವ ಸಂಪ್ರದಾಯ ಪ್ರಾರಂಭವಾಗಿದ್ದು ಹೀಗೆ...
ಕೆಲಸದ ಆರಂಭದ ತಿಂಗಳುಗಳಲ್ಲಿ, ಅವರು ತಮ್ಮ ಫ್ಲಾಟ್‌ನಿಂದ ಪ್ರತಿದಿನ ಕಚೇರಿಗೆ ಪ್ರಯಾಣಿಸುತ್ತಿದ್ದರು. ಅದರ ಬಾಡಿಗೆ 29,225 ರೂ.ಗಳಷ್ಟಿತ್ತು. ಒಮ್ಮೆ ಅವರು ಉದ್ಯಾನವನದಲ್ಲಿ ಕ್ಯಾಂಪ್ ಹಾಕಲು ಹೋದರು. ಆ ಅನುಭವವು ಅವರಿಗೆ ಹೊಸ ಜೀವನ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿತು. ನಾಲ್ಕು ವರ್ಷಗಳ ಹಿಂದೆ ಜಾಂಗ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದರು, ಅದು ಹಿಂದಿನ ಸೀಟಿನಲ್ಲಿ ಹಾಸಿಗೆಯನ್ನು ಸುಲಭವಾಗಿ ಹೊಂದಿಕೊಳ್ಳುತ್ತದೆ. ಅಂದಿನಿಂದ, ಅವರು ಪ್ರತಿ ರಾತ್ರಿ ಕಚೇರಿಯಿಂದ ಹಿಂದಿರುಗಿದ ನಂತರ ಅದರಲ್ಲಿ ಮಲಗಲು ಪ್ರಾರಂಭಿಸಿದರು. 

ಇದು ಜಾಂಗ್ ಅವರ ದಿನಚರಿ.
ಕೆಲಸದ ವೇಳೆ ಅವರು ಕಂಪನಿಯ ಕೆಫೆಟೇರಿಯಾದಲ್ಲಿ ಊಟ ಮಾಡುತ್ತಾರೆ. ಜಿಮ್‌ನಲ್ಲಿ ಸ್ನಾನ ಮಾಡುತ್ತಾರೆ ಮತ್ತು ತನ್ನ ಕಾರನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಷನ್ ಅನ್ನು ಬಳಸುತ್ತಾರೆ. ಇದಾದ ನಂತರ ಒಂದು ಉದ್ಯಾನವನದಲ್ಲಿ ಶಾಂತವಾದ ಸ್ಥಳವನ್ನು ಕಂಡುಕೊಳ್ಳುತ್ತಾರೆ. ವಾಹನದ ಹಿಂದಿನ ಸೀಟುಗಳನ್ನು ಮಡಚಿ, ಅವುಗಳ ಮೇಲೆ ಹಾಸಿಗೆ ಹಾಸಿ ಮಲಗುತ್ತಾರೆ. ಉದ್ಯಾನವನದಲ್ಲಿ ಅವರು ಸ್ನಾನ ಮಾಡಲು ಸಾರ್ವಜನಿಕ ಶೌಚಾಲಯವಿದೆ. ವಾರಾಂತ್ಯದಲ್ಲಿ ತನ್ನ ಬಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಒಗೆಯುತ್ತಾರೆ.

ಬಹಳಷ್ಟು ಕಡಿಮೆಯಾಗಿದೆ ಖರ್ಚುಗಳು 
ಈ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ, ಅವರ ದೈನಂದಿನ ಖರ್ಚು ಸುಮಾರು 1,168 ರೂ.ಗಳಿಗೆ ಇಳಿದಿದೆ ಎಂದು ಜಾಂಗ್ ಹೇಳಿದರು, ಇದರಲ್ಲಿ ಆಹಾರ ಮತ್ತು ಇತರ ವಸ್ತುಗಳು ಸೇರಿವೆ. ಅವರು ಕಚೇರಿಯಲ್ಲಿ ವಾಹನ ನಿಲುಗಡೆಗೆ ಪ್ರತಿ ರಾತ್ರಿಗೆ 70 ರೂ. ಮತ್ತು ದಿನಕ್ಕೆ ಹೆಚ್ಚುವರಿಯಾಗಿ 233 ರೂ.ಪಾವತಿಸಬೇಕಾಗುತ್ತದೆ.
ಈ ಜೀವನಶೈಲಿಯು ತನಗೆ ಸಂತೋಷ ತಂದಿದೆ ಮತ್ತು ತನಗೆ ಮುಕ್ತ ಮತ್ತು ಆರಾಮದಾಯಕ ಭಾವನೆಯನ್ನು ನೀಡುತ್ತದೆ ಎಂಬ ಕಾರಣಕ್ಕಾಗಿಯೇ ತಾನು ಈ ಜೀವನಶೈಲಿಯನ್ನು ಅಳವಡಿಸಿಕೊಂಡೆ ಎಂದು ಜಾಂಗ್ ತಿಳಿಸಿದ್ದಾರೆ. 

ರಜೆಗೆ ಮನೆಗೆ 
ವಾರಾಂತ್ಯದಲ್ಲಿ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಜಾಂಗ್ 300 ಕಿಲೋಮೀಟರ್ ದೂರ ಪ್ರಯಾಣಿಸಿ ತನ್ನ ಮನೆಗೆ ತಲುಪುತ್ತಾರೆ. ಅವರು ವಾರದಲ್ಲಿ ಮೂರು ದಿನ ಮನೆಯಲ್ಲಿಯೇ ಇರುತ್ತಾರೆ ಮತ್ತು ಈ ಸಮಯದಲ್ಲಿ ತನ್ನ ಬಟ್ಟೆ ಇತ್ಯಾದಿಗಳನ್ನು ತೊಳೆಯುತ್ತಾರೆ.