ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಒಮಾನಿ ಪೈಲಟ್ ಹಮಾಮ್ ಅಲ್ ಹಮಾಮಿ ಯತ್ನಿಸಿದ್ದಾನೆ. ಸಹ-ಪೈಲಟ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಈತನನ್ನು ಪ್ರಯಾಣಿಕರು ಹಿಡಿದು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ಆದರೆ, ಬಂಧಿತ ಉಗ್ರನನ್ನು ರಕ್ಷಿಸಲು ವಿಮಾನದ ಸಿಬ್ಬಂದಿ ಯತ್ನಿಸಿದ್ದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ರಿಯಾದ್: ‘ಇಸ್ರೇಲ್‌ಗೆ ಹೋಗುತ್ತಿದ್ದ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನ ಮಾಡಲು ಪ್ರಯತ್ನಿಸಿದ್ದೆ, ನಾನು ಸಾವಿಗೆ ಅಂಜುವುದಿಲ್ಲ’ ಎಂದು ಫ್ಲೈದುಬೈನ ಒಮಾನಿ ಪೈಲೆಟ್ ಹಮಾಮ್ ಅಲ್ ಹಮಾಮಿ ಸೌದಿ ಅರೇಬಿಯಾ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಪ್ರಯಾಣಿಕರ ನೆರವಿನಿಂದ ವಿಮಾನವು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಆರೋಪಿ ಹಮಾಮಿಯನ್ನು ವಶಕ್ಕೆ ಪಡೆದಿದ್ದ ಸೌದಿ ಅರೇಬಿಯಾದ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಆಗ ವಿಮಾನವನ್ನು ಪತನಗೊಳಿಸುವ ತನ್ನ ಉದ್ದೇಶ ಬಹಿರಂಗಪಡಿಸಿದ್ದಾನೆ ಎಂದು ವರದಿ ಹೇಳಿದೆ.
ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಪೈಲಟ್ ಆಗಿದ್ದ ಹಮಾಮಿ ಭಾರತೀಯ ಮೂಲದ ಸಹ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಕಿರು ಕೊಡಲಿಯಿಂದ ಹಲ್ಲೆ ನಡೆಸಿದ್ದ. ನಂತರ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿದ್ದ. ಆದರೆ, ಗಂಭೀರ ಗಾಯಗೊಂಡ ಸ್ಥಿತಿಯಲ್ಲೂ ಸ್ಮಿತ್ ತೋರಿದ ಪ್ರತಿರೋಧ ಹಾಗೂ ಪ್ರಯಾಣಿಕರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಭಾರೀ ದುಷ್ಕೃತ್ಯವೊಂದು ತಪ್ಪಿತ್ತು ಹಾಗೂ ವಿಮಾನದಲ್ಲಿದ್ದ 180 ಮಂದಿ ಜೀವ ಉಳಿದಿದೆ. ಈ ಕುರಿತ ತನಿಖೆ ಮುಂದುವರಿದಿದೆ.
ವರದಿಗಳ ಪ್ರಕಾರ ಬಂಧಿತ ಹಮಾಮಿ ಪೈಲಟ್ ಆಗುವ ಕುರಿತು ತೀವ್ರ ಹುಚ್ಚು ಇತ್ತು. 2022ರಲ್ಲಿ ಆತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದ. ಏಕಾಂಗಿಯಾಗಿ ಮೊದಲ ಬಾರಿ ವಿಮಾನ ಹಾರಿಸಿದ ಹಾಗೂ ಪ್ರಯಾಣಿಕರಿದ್ದ ವಿಮಾನವನ್ನು ಮೊದಲ ಬಾರಿ ಲ್ಯಾಂಡ್ ಮಾಡುವ ಅನುಭವವನ್ನು ಆತ ಮರೆಯಲಾಗದ ಅನುಭವ ಎಂದು ಬರೆದುಕೊಂಡಿದ್ದ. ಪೈಲಟ್ ಆಗುವ ಕುರಿತು ತೀವ್ರ ಆಸಕ್ತಿ ಹೊಂದಿದ್ದರೂ ಆತ ಹೇಗೆ ಮೂಲಭೂತವಾದದತ್ತ ತಿರುಗಿದ ಎಂಬ ಕುರಿತು ಇದೀಗ ಕುತೂಹಲ ಮೂಡಿದೆ.
ಉಗ್ರ ಸಹ-ಪೈಲಟ್ ರಕ್ಷಣೆಗೆ ವಿಮಾನದ ಸಿಬ್ಬಂದಿ ಯತ್ನ!
‘ಫ್ಲೈದುಬೈ ವಿಮಾನವನ್ನು ಅಪಹರಿಸಲು ಯತ್ನಿಸಿದ್ದ ಒಮಾನಿ ಸಹ-ಪೈಲಟ್ ಹಮಾಮ್ ಅಲ್ ಹಮಾಮಿಯನ್ನು ಹಿಡಿದು ಆತನ ಕೈಗಳನ್ನು ಹಿಂದಕ್ಕೆ ಕಟ್ಟಿದ್ದೆವು. ಆದರೆ ವಿಮಾನದ ಸಿಬ್ಬಂದಿ ಆತನನ್ನು ಬಿಟ್ಟುಬಿಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದರು’ ಎಂಬ ಆಘಾತಕಾರಿ ಮಾಹಿತಿಯನ್ನು ಘಟನೆ ವೇಳೆ ಹಾಜರಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಇದು ವಿಮಾನದ ಸಿಬ್ಬಂದಿ ಮೇಲೆಯೇ ಸಂಶಯ ಮೂಡುವಂತೆ ಮಾಡಿದೆ. ಶಂಕಿತ ಉಗ್ರ ಸಹ-ಪೈಲಟ್‌ನನ್ನು ಹಿಡಿಯಲು ಸಹಾಯ ಮಾಡಿದ ಇಬ್ಬರು ಪ್ರಯಾಣಿಕರು ಸಂದರ್ಶನವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ.
‘ಅವರು (ಸಿಬ್ಬಂದಿ) ಭಯೋತ್ಪಾದಕನನ್ನು ಬಿಟ್ಟುಬಿಡುವಂತೆ ಹಾಗೂ ಆತನ ಕೈಗೆ ಕಟ್ಟಿದ್ದ ಹಗ್ಗ ಬಿಚ್ಚುವಂತೆ ನಮ್ಮನ್ನು ಕೇಳುತ್ತಿದ್ದರು. ಏಕೆ ಎಂದು ನಮಗೆ ತಿಳಿದಿರಲಿಲ್ಲ, ತಕ್ಷಣವೇ ನಮಗೆ ಅವರ ಮೇಲೆ ಸಂಶಯ ಉಂಟಾಯಿತು. ‘ನೀವು ದೇವರಲ್ಲ. ನೀವು ಅವನನ್ನು ಕೊಲ್ಲಲು ಸಾಧ್ಯವಿಲ್ಲ’ ಎಂದು ನಮಗೆ ಹೇಳುತ್ತಿದ್ದರು. ಆಗ ನಾವು, ‘ನಮಗೆ ಅವನನ್ನು ಕೊಲ್ಲುವ ಉದ್ದೇಶವಿಲ್ಲ. ಆದರೆ ಅವನು ನಮ್ಮನ್ನೆಲ್ಲ ಕೊಲ್ಲದಂತೆ ತಡೆಯುವುದು ಮಾತ್ರ ನಮಗೆ ಬೇಕಿತ್ತು’ ಎಂದೆ’ ಎಂದು ಉಗ್ರನನ್ನು ಹಿಡಿಯಲು ಸಹಾಯ ಮಾಡಿದ ತ್ಜ್ವಿಕಾ ಮಾನೆಸ್ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ತಾವು ಪೈಲಟ್‌ನನ್ನು ಹಸ್ತಾಂತರಿಸಿದೆವು ಎಂದು ಅವರು ಹೇಳಿದ್ದಾರೆ.


