ವಾಷಿಂಗ್ಟನ್‌(ನ.10): ಹೊಸ ಯುಗದ ನವ ಸಂಚಾರ ತಂತ್ರಜ್ಞಾನ ಎಂದೇ ಖ್ಯಾತಿ ಹೊಂದಿರುವ ಹೈಪರ್‌ಲೂಪ್‌ ಸಂಚಾರ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಮಾನವ ಪ್ರಯಾಣ ಯಶಸ್ವಿಯಾಗಿದೆ. ಇದರೊಂದಿಗೆ ಭವಿಷ್ಯದಲ್ಲಿ ವಿಮಾನ, ಬುಲೆಟ್‌ ರೈಲುಗಳಿಗೆ ಭರ್ಜರಿ ಪೈಪೋಟಿ ಒಡ್ಡಲಿದೆ ಎಂದು ನಿರೀಕ್ಷಿಸಲಾಗಿರುವ ತಂತ್ರಜ್ಞಾನವು ನನಸಾಗುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಅಮೆರಿಕದ ನೆವಾಡಾ ರಾಜ್ಯದ ಲಾಸ್‌ವೇಗಾಸ್‌ ಬಳಿ ಇರುವ 500 ಮೀಟರ್‌ ಉದ್ದದ ಡೆವ್‌ಲೂಪ್‌ ಪ್ರಾಯೋಗಿಕ ಟ್ರ್ಯಾಕ್‌ನಲ್ಲಿ ಭಾನುವಾರ ಈ ಮಾನವ ಸಹಿತ ಸಂಚಾರ ನಡೆಸಲಾಗಿದೆ. ಮಾನವ ಪ್ರಯೋಗಕ್ಕೆಂದೇ ವಿಶೇಷವಾಗಿ ನಿರ್ಮಿಸಲಾಗಿದ್ದ ಪಾಡ್‌ಗಳಲ್ಲಿ ವರ್ಜಿನ್‌ ಹೈಪರ್‌ಲೂಪ್‌ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಸಹ ಸಂಸ್ಥಾಪಕ ಜೋಸ್‌ ಗಿಜೆಲ್‌ ಹಾಗೂ ಪ್ರಯಾಣಿಕ ಅನುಭವ ವಿಭಾಗದ ನಿರ್ದೇಶಕಿ ಸಾರಾ ಲುಚಿಯಾನ್‌ ಅವರು ಸಂಚಾರ ಕೈಗೊಂಡರು. ಈ ವೇಳೆ ನಿರ್ವಾತ ಪ್ರದೇಶದಲ್ಲಿ ಪಾಡ್‌ ಗಂಟೆಗೆ 172 ಕಿ.ಮೀ. ವೇಗದಲ್ಲಿ ಯಾವುದೇ ತೊಂದರೆ ಇಲ್ಲದೆಯೇ ಸಂಚಾರ ನಡೆಸಿದೆ. ತಂತ್ರಜ್ಞಾನದ ಕುರಿತು ಏಳಬಹುದಾದ ಯಾವುದೇ ಅನುಮಾನಗಳನ್ನು ನಿವಾರಿಸಲೆಂದೇ ಸ್ವತಃ ಕಂಪನಿಯ ಇಬ್ಬರು ಹಿರಿಯ ಅಧಿಕಾರಿಗಳು, ತಾವೇ ಮೊದಲ ಸಂಚಾರ ಕೈಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಕಂಪನಿ ಇದುವರೆಗೂ 400ಕ್ಕೂ ಹೆಚ್ಚು ಬಾರಿ ಮಾನವರಹಿತವಾಗಿ ಪ್ರಾಯೋಗಿಕ ಸಂಚಾರ ಕೈಗೊಂಡಿತ್ತಾದರೂ ಇದೇ ಮೊದಲ ಬಾರಿಗೆ ಮಾನವ ಸಹಿತ ಸಂಚಾರ ನಡೆಸಿರುವ ಕಾರಣ ಇದು ಭಾರೀ ಮಹತ್ವ ಪಡೆದುಕೊಂಡಿದೆ. ಮೂಲ ಯೋಜನೆ ಪ್ರಕಾರ ಈ ಹೈಪರ್‌ಲೂಪ್‌ ಪಾಡ್‌ಗಳು ಗಂಟೆಗೆ 1223 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಅಂದರೆ ಸಾಮಾನ್ಯ ವಾಣಿಜ್ಯ ವಿಮಾನಕ್ಕಿಂತ 2 ಪಟ್ಟು ಹೆಚ್ಚು ಮತ್ತು ಹೈಸ್ಪೀಡ್‌ ರೈಲುಗಳಿಗಿಂತ 3ರಿಂದ 4 ಪಟ್ಟು ಹೆಚ್ಚು ವೇಗ. ಆದರೆ ಇದೇ ಮೊದಲ ಮಾನವ ಸಹಿತ ಸಂಚಾರವಾಗಿದ್ದ ಕಾರಣ ಪಾಡ್‌ನ ವೇಗದ ಮಿತಿಯನ್ನು 172 ಕಿ.ಮೀ.ಗೆ ಸೀಮಿತಗೊಳಿಸಲಾಗಿತ್ತು.

ಬೆಂಗಳೂರಿನಲ್ಲೂ ಜಾರಿಗೆ ಚಿಂತನೆ

ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈಪರ್‌ಲೂಪ್‌ ಸೇವೆ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಇತ್ತೀಚೆಗಷ್ಟೇ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಜೊತೆಗೆ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮವು ಕಾರ್ಯಸಾಧು ವರದಿ ತಯಾರಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿವೆ. ಒಂದು ವೇಳೆ ಯೋಜನೆ ಜಾರಿಯಾದರೆ, ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಕೇವಲ 10 ನಿಮಿಷದಲ್ಲಿ ಸಂಚರಿಸಬಹುದು. ಪ್ರಸಕ್ತ ಈ ಎರಡೂ ಸ್ಥಳಗಳ ನಡುವೆ ಸಂಚಾರಕ್ಕೆ 45 ನಿಮಿಷದಿಂದ 1.30 ಗಂಟೆಯ ಅವಶ್ಯಕತೆ ಇದೆ.

ಏನಿದು ಹೈಪರ್‌ಲೂಪ್‌ ತಂತ್ರಜ್ಞಾನ?

ಇದೊಂದು ವಿಶಿಷ್ಟತಂತ್ರಜ್ಞಾನ. ಇಲ್ಲಿ ಪಾಡ್‌ (ಪ್ರಯಾಣಿಕರು ಕುಳಿತುಕೊಳ್ಳುವ ವಾಹನ) ಗಾಳಿಯೇ ಇಲ್ಲದ ಪ್ರದೇಶದಲ್ಲಿ ತೇಲುತ್ತಾ ಹೋಗುತ್ತದೆ. ಇದಕ್ಕಾಗಿ ವಿಶೇಷವಾದ ಕೊಳವೆಯಾಕಾರದ ಜಾಗವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳದವರೆಗೆ ನಿರ್ಮಿಸಲಾಗುತ್ತದೆ. ಪಾಡ್‌ಗಳು ಇದರೊಳಗೆ ತೇಲುತ್ತಾ ಹೋಗುತ್ತವೆ. ಇಂಥ ವ್ಯವಸ್ಥೆಯನ್ನು ಮೆಟ್ರೋ ರೈಲಿನ ರೀತಿ ಕಂಬಗಳನ್ನು ಹಾಕಿ ಇಲ್ಲವೇ ಸುರಂಗದೊಳಗೂ ನಿರ್ಮಿಸಬಹುದು.

ಹೈಪರ್‌ಲೂಪ್‌ ವೇಗ

ಹೈಪರ್‌ಲೂಪ್‌ ಗಂಟೆಗೆ 1223 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದು. ಪ್ರತಿ ಪಾಡ್‌ 28 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುತ್ತದೆ.

ಸಂಚಾರ ಆರಂಭ ಯಾವಾಗ?

2025ರ ವೇಳೆಗೆ ಸಂಚಾರಕ್ಕೆ ಅಗತ್ಯವಾದ ಪ್ರಮಾಣಪತ್ರ ಪಡೆದುಕೊಂಡು, 2030ರ ವೇಳೆಗೆ ವಾಣಿಜ್ಯ ಸೇವೆ ಆರಂಭಿಸುವ ಉದ್ದೇಶವನ್ನು ವರ್ಜಿನ್‌ ಕಂಪನಿ ಹೊಂದಿದೆ.

ತಂತ್ರಜ್ಞಾನದ ಲಾಭ ಏನು?

ಇಲ್ಲಿ ಯಾವುದೇ ಪಳೆಯುಳಿಕೆ ಇಂಧನ ಬಳಕೆ ಆಗುವುದಿಲ್ಲ. ಇದರಿಂದ ಪರಿಸರ ಮಾಲಿನ್ಯ ಕಡಿಮೆ. ಅತಿ ವೇಗವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಸಾಧ್ಯ. ಸಂಚಾರದ ವೇಳೆ ಹೊರಗೂ, ಒಳಗೂ ಯಾವುದೇ ಶಬ್ದದ ಕಿರಿಕಿರಿ ಇರುವುದಿಲ್ಲ. ವಿಮಾನ ಸಂಚಾರಕ್ಕ ಹೋಲಿಸಿದರೆ ಇದರ ಪ್ರಯಾಣ ದರ ಭಾರೀ ಅಗ್ಗ ಇರುತ್ತದೆ.

ಕಳೆದ ಹಲವು ವರ್ಷಗಳಿಂದ ವರ್ಜಿನ್‌ ಹೈಪರ್‌ಲೂಪ್‌ ತಂತ್ರಜ್ಞರ ತಂಡವು ತನ್ನ ಹೊಸ ತಂತ್ರಜ್ಞಾನವನ್ನು ನನಸು ಮಾಡುವುದರಲ್ಲಿ ನಿರತವಾಗಿತ್ತು. ಇಂದಿನ ಯಶಸ್ವಿ ಪರೀಕ್ಷೆಯೊಂದಿಗೆ ಹೊಸತನ ಅನ್ವೇಷಣೆಯ ಸ್ಪೂರ್ತಿಯು ಭವಿಷ್ಯದಲ್ಲಿ ಜನರು ಜೀವಿಸುವ, ಕಾರ್ಯನಿರ್ವಹಿಸುವ ಮತ್ತು ಸಂಚಾರ ಕೈಗೊಳ್ಳುವ ರೀತಿಯನ್ನು ಬದಲಿಸಬಲ್ಲದು ಎಂಬುದನ್ನು ನಾವಿಂದು ತೋರಿಸಿಕೊಟ್ಟಿದ್ದೇವೆ.

- ರಿಚರ್ಡ್‌ ಬ್ರಾನ್ಸನ್‌, ವರ್ಜಿನ್‌ ಗ್ರೂಪ್‌ ಸಂಸ್ಥಾಪಕ