ಪ್ರಾಚ್ಯವಸ್ತು ಸಂಗ್ರಹಕ್ಕೆ ಭರ್ಜರಿ ರೆಸ್ಪಾನ್ಸ್, ಒಂದೇ ದಿನ ಲಕ್ಕುಂಡಿಯಲ್ಲಿ 1050 ಪುರಾತನ ವಸ್ತು ಪತ್ತೆ!
ವರದಿ: ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ನೇತೃತ್ವದಲ್ಲಿ ಲಕ್ಕುಂಡಿಯಲ್ಲಿ 1050 ಪ್ರಾಚ್ಯವಸ್ತುಗಳ ಸಂಗ್ರಹ ನಡೆದಿದ್ದು, ಶಿಲಾಯುಗದ ಕಾಲದ ಆಯುಧಗಳು ಸೇರಿದಂತೆ ಅಪರೂಪದ ಶಿಲ್ಪಕಲೆಗಳು, ನಾಣ್ಯಗಳು, ಮುತ್ತು-ರತ್ನಗಳನ್ನು ಜನ ಸ್ವಯಂಪ್ರೇರಿತರಾಗಿ ನೀಡಿದರು. ಡಿಸೆಂಬರ್‌ನಲ್ಲಿ ಉತ್ಖನನ ಆರಂಭವಾಗಲಿದ್ದು, ಲಕ್ಕುಂಡಿಯನ್ನು ಯುನೆಸ್ಕೋ ವಿಶ್ವಪಾರಂಪರಿಕ ತಾಣವಾಗಿ ಘೋಷಿಸಲು ಶಿಫಾರಸು ಮಾಡಲಾಗುವುದು.
ಶಿಲಾಯುಗದ ಕಾಲದ ಆಯುಧ, ಬಂಗಾರ, ಬೆಳ್ಳಿ, ಹಿತ್ತಾಳೆ, ತಾಮ್ರದ ನಾಣ್ಯಗಳು, ಊರ ಬೀದಿಗಳಲ್ಲಿ ಅವುಗಳನ್ನು ಸಂಗ್ರಹಿಸುತ್ತಾ ಸಾಗುವ ಪಲ್ಲಕ್ಕಿಯ ಮೆರವಣಿಗೆ, ಅಗೆದಲ್ಲೆಲ್ಲಾ ಸಿಗುವ ಆಕರ್ಷಕ ಕೆತ್ತನೆ ಕಲ್ಲುಗಳು, ಕೆಲವೊಂದು ಪುರಾತನ ಶಾಸನ, ತಾಳೆಗರಿಗಳು ಇವೆಲ್ಲಾ ಹೇಳುವ ಗತವೈಭವದ ಕತೆಗಳನ್ನು ಮೆಲುಕು ಹಾಕುವ ಊರ ಜನ. ಲಕ್ಕುಂಡಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮರಳಿ ತರುವ ಪುರಾತತ್ವ ಇಲಾಖೆಯ ಪ್ರಯತ್ನಕ್ಕೆ ಭಾನುವಾರ ಲಕ್ಕುಂಡಿ ಸಾಕ್ಷಿಯಾಗಿದ್ದು ಹೀಗೆ...
ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ನೇತೃತ್ವದಲ್ಲಿ ಲಕ್ಕುಂಡಿಯ ಗತವೈಭವವನ್ನು ಮರಳಿಸುವ ವಿಶೇಷ ಪ್ರಯತ್ನಕ್ಕೆ ಭಾನುವಾರ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಒಟ್ಟು 1050 ಪ್ರಾಚ್ಯವಸ್ತುಗಳ ಸಂಗ್ರಹ ನಡೆದಿದ್ದು ಅಪರೂಪದ ಶಿಲ್ಪಕಲೆಗಳು, ನಾಣ್ಯಗಳು, ಮುತ್ತು-ರತ್ನಗಳನ್ನು ಜನ ಸ್ವಯಂಪ್ರೇರಿತರಾಗಿ ನೀಡಿದರು. ಸ್ವತಃ ಸಚಿವ ಎಚ್.ಕೆ ಪಾಟೀಲ್, ಶಾಸಕ ಸಿಸಿ ಪಾಟೀಲ್, ಜಿಲ್ಲಾಧಿಕಾರಿ, ಪುರಾತತ್ವ ಇಲಾಖೆ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಲಕ್ಕುಂಡಿಯ ಬೀದಿ ಬೀದಿಗಳಲ್ಲಿ ಹೆಜ್ಜೆ ಹಾಕಿ ಲಕ್ಕುಂಡಿಯ ಇತಿಹಾಸವನ್ನು ನೆನಪಿಸುವ ಪ್ರಯತ್ನ ಪಟ್ಟರು.
ಇದಕ್ಕೆ ಸಾಥ್ ಕೊಡುವಂತೆ ಲಕ್ಕುಂಡಿಯ ಮನೆಮನೆಗಳಿಂದಲೂ ಜನ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಅನೇಕ ಪ್ರಾಚ್ಯ ವಸ್ತುಗಳನ್ನು ಅಧಿಕಾರಿಗಳ ಕೈಗಿತ್ತರು. ಈ ಮೂಲಕ ತಮ್ಮ ಊರಿನ ಶ್ರೀಮಂತ ಪರಂಪರೆಯನ್ನು ಮರಳಿಸುವ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಾರಿದರು.
ವಾಸ ಸ್ಥಾನಗಳನ್ನೇ ಬಿಟ್ಟು ಕೊಟ್ಟ ಲಕ್ಕುಂಡಿ ಜನ: ಲಕ್ಕುಂಡಿಯಲ್ಲಿ 101 ದೇವಾಲಯ, 101 ಬಾವಿಗಳು ಇವೆ ಎಂಬ ಪ್ರತೀತಿ ಇದ್ದು ಈ ಪೈಕಿ ಈಗಾಗಲೇ 50-60 ಪುರಾತನ ದೇವಸ್ಥಾನ ಹಾಗೂ ಬಾವಿಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಕೆಲವೊಂದು ಪುರಾತನ ದೇವಸ್ಥಾನ ಖಾಸಗಿಯವರ ಸ್ವತ್ತಾಗಿದ್ದು ಅದನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ನಾಗರಿಕರಿಗೆ ಇಲಾಖೆ ಪತ್ರ ಬರೆದಿತ್ತು. ಇದರ ಭಾಗವಾಗಿ ಕಲ್ಮಠಕ್ಕೆ ಸೇರಿದ 18 ಗುಂಟೆ ಜಮೀನು, ವಾಸದ ಮನೆಗಳನ್ನು ಭಾನುವಾರ ಇಲಾಖೆಗೆ ಬಿಟ್ಟು ಕೊಡುವ ಮೂಲಕ ಗ್ರಾಮದ ಜನ ಹಿರಿತನ ಮೆರೆದರು. ಇನ್ನೂ ಐದು ಮನೆಯವರು ಮನೆ ಬಿಟ್ಟು ಕೊಡಲು ಮುಂದೆ ಬಂದಿದ್ದು ಶೀಘ್ರದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಮೂಲಕ ಅವುಗಳನ್ನು ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಡಿಸೆಂಬರ್ ನಲ್ಲಿ ಉತ್ಖನನ ಆರಂಭ: ಭೂಮಿಯ ಮೇಲ್ಭಾಗದಲ್ಲಿ ಕಾಣುವ ಪ್ರಾಚ್ಯ ವಸ್ತುಗಳ ಜೊತೆಗೆ ಭೂಮಿಯಾಳದ ಪ್ರಾಚ್ಯ ವಸ್ತುಗಳ ಕಡೆಗೂ ಇಲಾಖೆ ಒಲವು ತೋರಿದ್ದು ಡಿಸೆಂಬರ್ ನಲ್ಲಿ ಉತ್ಖನನ ಆರಂಭಗೊಳ್ಳುತ್ತದೆ ಎಂದು ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ. ಈಗಾಗಲೇ ಹಲವು ಜಾಗಗಳಲ್ಲಿ ಕೃಷಿ ಹೊಂಡ ಸೇರಿದಂತೆ ಇತರ ಕಾಮಗಾರಿ ನಡೆಸುವಾಗ ಹಲವು ದೇವಸ್ಥಾನಗಳ ಅವಶೇಷ ದೊರೆತಿದ್ದು ಅವೆಲ್ಲವೂ ಭೂಮಿಯಾಳದಲ್ಲಿ ಹುದುಗಿರಬಹುದು ಎಂದು ಊಹಿಸಲಾಗಿದೆ. ಜೊತೆಗೆ ಐತಿಹಾಸಿಕ ನಾಣ್ಯ ಟಂಕಿಸುವ ಟಂಕಸಾಲೆಯೂ ಲಕ್ಕುಂಡಿಯಲ್ಲಿದ್ದು ಈ ಭಾಗದಲ್ಲಿ ಯಥೇಚ್ಛವಾಗಿ ಹಳೆಯ ನಾಣ್ಯಗಳು ದೊರೆಯಲು ಇದೂ ಒಂದು ಕಾರಣವಾಗಿದೆ. ಹಾಗಾಗಿ ಉತ್ಖನನ ನಡೆದರೆ ನಾಣ್ಯ ಟಂಕಿಸುವ ಅಚ್ಚೂ ಸಿಗುವ ಸಾಧ್ಯತೆ ಇದೆ ಎಂದು ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ.
ಪ್ರಾಚ್ಯ ವಸ್ತು ಸಂಗ್ರಹದ ವೇಳೆ ಶಿಲಾಯುಗದ ಕಾಲದ ಆಯುಧ ಪತ್ತೆ!: ಪ್ರಾಚ್ಯ ವಸ್ತುಗಳ ಸಂಗ್ರಹಕ್ಕೆ ತೆರಳಿದ ಪಲ್ಲಕ್ಕಿಯಲ್ಲಿ ಶಿಲಾಯುಗದ ಕಾಲದಲ್ಲಿ ಬಳಸಲಾಗುತ್ತಿದ್ದ ಕಲ್ಲಿನ ಆಯುಧಗಳೂ ಪತ್ತೆಯಾಗಿದೆ. ಇದು ಸುಮಾರು 3,500 ವರ್ಷಗಳ ಹಿಂದಿನ ಶಿಲಾಯುಗದ ಕಾಲದಲ್ಲಿ ಬಳಸಲಾಗುತ್ತಿದ್ದುದು ಎಂದು ಅಂದಾಜಿಸಲಾಗಿದೆ. ಲಕ್ಕುಂಡಿಯಲ್ಲಿ ಶಿಲಾಯುಗದ ಕಾಲದಲ್ಲಿ ವಾಸವಿದ್ದಿರಬಹುದು ಅಥವಾ ಬೇರೆ ಕಡೆಯಿಂದ ವಲಸೆ ಬಂದವರು ಇದನ್ನು ಇಲ್ಲಿಗೆ ತಂದಿರಲೂ ಬಹುದು ಎಂದು ಇತಿಹಾಸ ತಜ್ಞ ದೇವರಕೊಂಡ ರೆಡ್ಡಿ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದರು. ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಕಲಚೂರ್ಯರು, ಹೊಯ್ಸಳರು ಲಕ್ಕುಂಡಿಯನ್ನು ಆಳ್ವಿಕೆ ನಡೆಸಿದ್ದಾರೆ ಎನ್ನಲಾಗಿದೆ. ಇಲ್ಲಿನ ಪುರಾತನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ರಾಮಾಯಣ - ಮಹಾಭಾರತದ ಕಥೆಗಳನ್ನು ಹೇಳುವ ವಾಸ್ತುಶಿಲ್ಪಗಳಿವೆ.
ಲಕ್ಕುಂಡಿಯಲ್ಲಿ ಐತಿಹಾಸಿಕ ವಸ್ತು ಸಂಗ್ರಹಾಲಯ, ಯುನೆಸ್ಕೋ ಮಾನ್ಯತೆಗೆ ಶಿಫಾರಸು: ಈಗಾಗಲೇ ಮನೆಗಳಿಂದ ಸಂಗ್ರಹಿಸಿದ ವಿವಿಧ ಪ್ರಾಚ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಅವುಗಳ ಅಧ್ಯಯನ ನಡೆಸಿ ವಸ್ತು ಸಂಗ್ರಹಾಲಯ ಆರಂಭಿಸಲು ನಿರ್ಧರಿಸಲಾಗಿದೆ. ಪತ್ತೆಯಾಗಿರುವ ಶಾಸನಗಳಲ್ಲಿ ಹಲವು ಅಪ್ರಕಟಿತ ಶಾಸನಗಳಾದ್ದರಿಂದ ಅವುಗಳನ್ನು ಅಧ್ಯಯನವೂ ನಡೆಯಲಿದೆ. ಲಕ್ಕುಂಡಿಯನ್ನು ಯುನೆಸ್ಕೋ ವಿಶ್ವಪಾರಂಪರಿಕ ತಾಣವಾಗಿ ಘೋಷಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಎಲ್ಲವೂ ಅಂದುಕೊಂಡತೆ ನಡೆದರೆ ಮುಂದಿನ ದಿನಗಳಲ್ಲಿ ಲಕ್ಕುಂಡಿಯ ಇತಿಹಾಸ ಮತ್ತೊಂದು ಆಯಾಮದೆಡೆ ತೆರೆದುಕೊಳ್ಳಲಿದೆ.