ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಪರ್ತ್ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಪಡೆ ದೊಡ್ಡ ಅಂತರದ ಗೆಲುವು ದಾಖಲಿಸಿದೆ.
ಪರ್ತ್: ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಹಾಗೂ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಸಮಯೋಚಿತ ಶತಕಗಳ ನೆರವಿನಿಂದ ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 285 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಗೆಲ್ಲಲು 534 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 238 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.
ಇಲ್ಲಿನ ಪರ್ತ್ ಸ್ಟೇಡಿಯಂನಲ್ಲಿ ಗೆಲ್ಲಲು ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 12 ರನ್ ಗಳಿಸಷ್ಟೇ ಶಕ್ತವಾಯಿತು. ಇನ್ನು ನಾಲ್ಕನೇ ದಿನದಾಟದಲ್ಲಿ ಕಾಂಗರೂ ಪಡೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಆದರೆ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಅವರನ್ನು ಸಿರಾಜ್ ಆರಂಭದಲ್ಲೇ ಪೆವಿಲಿಯನ್ನಿಗಟ್ಟುವ ಮೂಲಕ ಮೊದಲ ಶಾಕ್ ನೀಡಿದರು. ಇನ್ನು ಸ್ಮಿತ್ ಕೇವಲ 17 ರನ್ ಗಳಿಸಿ ಸಿರಾಜ್‌ಗೆ ಮೂರನೇ ಬಲಿಯಾದರು.
ಮತ್ತೆ ಕನ್ನಡಿಗರ ಕಡೆಗಣನೆ: ನಿಯತ್ತು ಅನ್ನೋದು ಹೆಸರಿಗಷ್ಟೇ ಆರ್‌ಸಿಬಿ ಮೇಲೆ ಫ್ರಾನ್ಸ್ ಕಿಡಿ!
ಇನ್ನು ಮಧ್ಯಮ ಕ್ರಮಾಂಕದಲ್ಲಿ ಟ್ರ್ಯಾವಿಸ್ ಹೆಡ್(89), ಮಿಚೆಲ್ ಮಾರ್ಷ್ 47 ಹಾಗೂ ಅಲೆಕ್ಸ್ ಕ್ಯಾರಿ(36) ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಎರಡು ಹಾಗೂ ವಾಷಿಂಗ್ಟನ್ ಸುಂದರ್ ಮತ್ತು ನಿತಿಶ್ ರೆಡ್ಡಿ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ವಿರಾಟ್ ಕೊಹ್ಲಿ ಭರ್ಜರಿ ಶತಕ; ಪರ್ತ್ ಟೆಸ್ಟ್ ಗೆಲ್ಲಲು ಕಠಿಣ ಗುರಿ ನೀಡಿದ ಟೀಂ ಇಂಡಿಯಾ
ಆಸೀಸ್ ಎದುರು ಅತಿ ದೊಡ್ಡ ಅಂತರದ ಗೆಲುವು: ಟೀಂ ಇಂಡಿಯಾ ಇದೀಗ ಪರ್ತ್ ಟೆಸ್ಟ್‌ನಲ್ಲಿ 285 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ಎದುರು ಅವರದ್ದೇ ನೆಲದಲ್ಲಿ ಅತಿದೊಡ್ಡ ಅಂತರದ ಗೆಲುವು ಎನಿಸಿಕೊಂಡಿತು. ಇದಕ್ಕೂ ಮೊದಲು ಭಾರತ ತಂಡವು ಆಸ್ಟ್ರೇಲಿಯಾ ನೆಲದಲ್ಲಿ 1977ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 222 ರನ್ ಅಂತರದ ಗೆಲುವು ದಾಖಲಿಸಿತ್ತು.
